2.3 ಕೋಟಿ ಅಕ್ರಮ ಹಣ ಪತ್ತೆ: ಮಾಜಿ ಶಾಸಕ ಅಪ್ಪಾಜಿಗೌಡರಿಗೆ ನೊಟೀಸ್
ಬೆಂಗಳೂರು, ಏಪ್ರಿಲ್ 23: ಕಾರಿನ ಟೈರಿನಲ್ಲಿ ಅಕ್ರಮವಾಗಿ ಸಾಗಿಸುತ್ತಿದ್ದ ದಾಖಲೆರಹಿತ 2.3 ಕೋಟಿ ಹಣ ಪತ್ತೆ ಪ್ರಕರಣದಲ್ಲಿ ಜೆಡಿಎಸ್ ಮಾಜಿ ಶಾಸಕ ಅಪ್ಪಾಜಿಗೌಡ ಅವರಿಗೆ ಐಟಿ ಇಲಾಖೆ ನೊಟೀಸ್ ಜಾರಿ ಮಾಡಿದೆ.
ಕೆಲವು ದಿನಗಳ ಹಿಂದಷ್ಟೆ ಬೆಂಗಳೂರಿನಿಂದ ಶಿವಮೊಗ್ಗಕ್ಕೆ ಹೋಗುತ್ತಿದ್ದ ಕಾರಿನಲ್ಲಿದ್ದ ಸ್ಟೆಪ್ನಿ ಟೈರಿನಲ್ಲಿ 2.3 ಕೋಟಿ ಅಕ್ರಮ ಹಣವನ್ನು ಐಟಿ ಅಧಿಕಾರಿಗಳು ವಶಪಡಿಸಿಕೊಂಡಿದ್ದರು. ಖಚಿತ ಮಾಹಿತಿ ಮೇರೆಗೆ ಅಧಿಕಾರಿಗಳು ದಾಳಿ ನಡೆಸಿ ಹಣ ವಶಪಡಿಸಿಕೊಂಡಿದ್ದರು.
ಪ್ರಾಥಮಿಕ ತನಿಖೆ ಹಾಗೂ ವಿಚಾರಣೆ ಇಂದಾಗಿ ಈ ಹಣವು ಜೆಡಿಎಸ್ ಮಾಜಿ ಶಾಸಕ ಅಪ್ಪಾಜಿಗೌಡ ಅವರಿಗೆ ಸೇರಿದ್ದು ಎಂದು ತಿಳಿದು ಬಂದಿದ್ದು, ಹೆಚ್ಚಿನ ವಿಚಾರಣೆಗೆ ಐಟಿ ಇಲಾಖೆಯು ಅಪ್ಪಾಜಿಗೌಡ ಅವರಿಗೆ ನೊಟೀಸ್ ನೀಡಿದ್ದು, ಬುಧವಾರ ಬೆಂಗಳೂರಿಗೆ ಬಂದು ವಿಚಾರಣೆಗೆ ಒಳಪಡುವಂತೆ ಸೂಚಿಸಿದೆ. ಇಂದು ಶಿವಮೊಗ್ಗದಲ್ಲಿ ಮತದಾನ ಇರುವ ಕಾರಣ ನಾಳೆಗೆ ವಿಚಾರಣೆಗೆ ಬರುವಂತೆ ಹೇಳಲಾಗಿದೆ.

ಹಣ ಪತ್ತೆ ಪ್ರಕರಣದ ಬಗ್ಗೆ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ್ದ ಅಪ್ಪಾಜಿಗೌಡ ಅವರು, ನಾನು ಸೈಟೊಂದು ಮಾರಾಟ ಮಾಡಿದ್ದೆ ಅದರ ಹಣವನ್ನು ತರೆಸಿಕೊಳ್ಳುತ್ತಿದ್ದೆ. ಹಣದ ಅವಶ್ಯಕತೆ ತುರ್ತಾಗಿತ್ತು, ಚುನಾವಣಾ ನೀತಿ ಸಂಹಿತೆ ಇದ್ದ ಕಾರಣ ಟೈರಿನಲ್ಲಿ ಸಾಗಿಸಿಕೊಂಡು ಬಂದಿರಬೇಕು ಎಂದು ಹೇಳಿದ್ದಾರೆ.
ಈಗಾಗಲೇ ಅಪ್ಪಾಜಿಗೌಡ ಅವರನ್ನು ಶಿವಮೊಗ್ಗದ ಐಟಿ ಕಚೇರಿಯಲ್ಲಿ ಸುಮಾರು ಮೂರು ತಾಸು ವಿಚಾರಣೆ ನಡೆಸಲಾಗಿದೆ. ಈಗ ಮತ್ತೊಮ್ಮೆ ವಿಚಾರಣೆ ನಡೆಸಲಾಗುತ್ತದೆ. ವಿಚಾರಣೆ ನಂತರ ಅಪ್ಪಾಜಿಗೌಡ ವಿರುದ್ಧ ಎಫ್‌ಐಆರ್ ದಾಖಲಾಗುವ ಸಂಭವವಿದೆ.












Click it and Unblock the Notifications