ಬಿಡದಿಯಲ್ಲಿ ಗಗನಚುಂಬಿ ಕಟ್ಟಡ ನಿರ್ಮಿಸುವ ಪ್ಲ್ಯಾನ್: ಡಿ.ಕೆ.ಸುರೇಶ್‌ಗೆ ಜೆಡಿಎಸ್ ತಿರುಗೇಟು
ಬಿಡದಿ ಟೌನ್‌ಶಿಪ್‌ಗೆ ರೈತರಿಂದ ಭಾರಿ ವಿರೋಧ ವ್ಯಕ್ತವಾಗಿದ್ದು, ಜೆಡಿಎಸ್-ಕಾಂಗ್ರೆಸ್ ನಡುವೆ ಇದೇ ವಿಚಾರವಾಗಿ ಟಾಕ್ ವಾರ್ ಜೋರಾಗಿದೆ. ಬಿಡದಿ ವ್ಯಾಪ್ತಿಯಲ್ಲಿ ನೂರಾರು ಎಕರೆ ಜಮೀನುಗಳನ್ನು ಅಕ್ರಮವಾಗಿ ನೋಂದಣಿ ಮಾಡಿಕೊಂಡು ಕಾಂಗ್ರೆಸ್ ನಾಯಕರು ಹಾಗೂ ಅಧಿಕಾರಿಗಳು ರಿಯಲ್ ಎಸ್ಟೇಟ್ ದಂಧೆಯಲ್ಲಿ ತೊಡಗಿದ್ದಾರೆ ಎಂದು ಜೆಡಿಎಸ್ ಆರೋಪಿಸಿದೆ. ಅಲ್ಲದೆ ಕಾಂಗ್ರೆಸ್ ನಾಯಕ ಡಿಕೆ.ಸುರೇಶ್ ಅವರ ಮಾತಿಗೆ ತಿರುಗೇಟು ನೀಡಿದೆ.
ಡಿಕೆ ಸುರೇಶ್ ಅವರೇ, ಪದೇ ಪದೆ ಸುಳ್ಳು ಹೇಳುವ ಚಾಳಿ ಏಕೆ ನಿಮಗೆ? ಬಡ ರೈತರ ಜಮೀನು ಕೊಳ್ಳೆ ಹೊಡೆದು ಕೋಟೆ ಕಟ್ಟಿಕೊಳ್ಳಲು ಇಷ್ಟೆಲ್ಲ ಸುಳ್ಳಿನ ಕಥೆ ಕಟ್ಟಬೇಕೆ? ನಿಮಗೆ ಮಾಹಿತಿ ಕೊರತೆ ಇದ್ದರೆ ಇನ್ನೊಬ್ಬರನ್ನ ಕೇಳಿ ತಿಳಿದುಕೊಳ್ಳಿ. ಬಿಡದಿ ಟೌನ್‌ಶಿಪ್ ಬಗ್ಗೆ ಹೆಚ್.ಡಿ.ಕುಮಾರಸ್ವಾಮಿ ಅವರು ಯಾವುದೇ ವಿಷಯವನ್ನೂ ಮುಚ್ಚಿಟ್ಟಿಲ್ಲ ಎಂಬುದನ್ನು ಮೊದಲು ತಿಳಿಯಿರಿ. ನಿಮ್ಮ ಹಾಗೆ ದುಂಡಾವರ್ತನೆ ತೋರುವ ಜಾಯಮಾನ ಅವರದಲ್ಲ ಎಂದು ತಿರುಗೇಟು ನೀಡಿದೆ.

ನಿಮ್ಮ ಯೋಗ್ಯತೆಗೆ ಈವರೆಗೆ ರೈತರನ್ನ ಕರೆದು ಒಂದು ಸಭೆಯನ್ನಾದರೂ ಮಾಡಿದ್ದೀರಾ? ಅದೇ ಕುಮಾರಸ್ವಾಮಿ ಅವರು ಸಿಎಂ ಆಗಿದ್ದಾಗಲೇ ರೈತರನ್ನು 3-4 ಸಲ ಕೃಷ್ಣ ಕಚೇರಿಗೇ ಕರೆಸಿ ಸಭೆ ನಡೆಸಿದ್ದರು ಎಂಬುದು ನಿಮಗೆ ಗೊತ್ತೇ? ಈ ಯೋಜನೆ ವಿರುದ್ಧ ನಿಮ್ಮದೇ ಕಾಂಗ್ರೆಸ್ ಪಕ್ಷದ ಹೆಚ್.ಕೆ.ಪಾಟೀಲ್, ವಿ.ಎಸ್. ಉಗ್ರಪ್ಪ ನೇತೃತ್ವದಲ್ಲಿ ರಚನೆ ಮಾಡಿದ್ದ ಸಮಿತಿ ಅಗೆದು ಬಗೆದೂ ಹೊರತೆಗೆದ ಸತ್ಯಶೋಧನಾ ವರದಿ ಏನಾಯಿತು? ಅಂದು ರಾಮನಗರ ಜಿಲ್ಲೆಯ ಕಾಂಗ್ರೆಸ್ ನಾಯಕರೇ ವಿರೋಧ ಮಾಡಿದರಲ್ಲಾ? ಅವರೆಲ್ಲ ಈಗ ಎಲ್ಲಿ ಹೋಗಿ ಅವಿತಿದ್ದಾರೆ? ಎಂದು ಕೇಳಿದೆ.
ನಿಮ್ಮದು ರಿಯಲ್ ಎಸ್ಟೇಟ್ ಪಾಲುದಾರಿಕೆ
ಕುಮಾರಸ್ವಾಮಿ ಅವರ ಯೋಜನೆಯ ಸ್ವರೂಪ ಜನಪಾಲುದಾರಿಕೆಯಲ್ಲಿತ್ತು. ನಿಮ್ಮದು ರಿಯಲ್ ಎಸ್ಟೇಟ್ ಪಾಲುದಾರಿಕೆ ಮತ್ತು ನಿಮ್ಮ ಸಂಪತ್ತು ಹೆಚ್ಚಿಸಿಕೊಳ್ಳುವ ಹಪಾಹಪಿ. ನಿಮ್ಮ ಪ್ರತೀ ಹೆಜ್ಜೆಯೂ ಅನುಮಾನಾಸ್ಪದ. ಬೆಂಗಳೂರಿನಲ್ಲಿ ಗುಂಡಿ ಮುಚ್ಚಲಿಕ್ಕೆ ಬಿಡಿಗಾಸಿಲ್ಲ. ಆದರೆ ಬಿಡದಿಯಲ್ಲಿ ಸ್ಮಾರ್ಟ್ ಸಿಟಿ. ಮೊದಲು ರಸ್ತೆಗುಂಡಿಗೆ ಒಂದು ಸನಿಕೆ ಮಣ್ಣು ಹಾಕಿ, ಆ ಮೇಲೆ ಮಿಕ್ಕಿದ್ದು. ಮೊದಲು ಹೊಟ್ಟೆಗೆ ಹಿಟ್ಟು ಆ ಮೇಲೆ ಜುಟ್ಟಿಗೆ ಮಲ್ಲಿಗೆ ಎಂದು ವ್ಯಂಗ್ಯ ಮಾಡಿದೆ.
ನಿಮ್ಮ ಸ್ಮಾರ್ಟ್ ಸಿಟಿ ಗೋಲ್‌ಮಾಲ್ ಏನೆಂದು ಗೊತ್ತಿದೆ. ಹೊಸಕೆರೆಹಳ್ಳಿ ಬಳಿ ನೈಸ್ ಯೋಜನೆ ಭೂಮಿಯನ್ನು ನೈಸಾಗಿ ಡಿನೋಟಿಫೈ ಮಾಡಿಸಿಕೊಂಡು ಕಬ್ಜ ಮಾಡಿ, ಗಗನಚುಂಬಿ ಕಟ್ಟಡ ಕಟ್ಟುತ್ತಿರುವಿರಲ್ಲ? ಅದೇ ರೀತಿ ಬಿಡದಿಯಲ್ಲಿಯೂ ಗಗನಚುಂಬಿ ಕಟ್ಟಡಗಳನ್ನು ಎಬ್ಬಿಸಲು ಹೊರಟಿದ್ದೀರಿ, ಅಷ್ಟೇ ಅಲ್ಲವೇ? ಎಂದು ಟೀಕಿಸಿದೆ.
ಟೌನ್‌ಶಿಪ್‌ಗೆ ಜೆಡಿಎಸ್ ವಿರೋಧ, ಕುಮಾರಸ್ವಾಮಿ ವಿರೋಧ, ನಿಖಿಲ್ ಕುಮಾರಸ್ವಾಮಿ ವಿರೋಧ ಎಂದು ಸುಳ್ಳಿನ ಮೇಲೆ ಸುಳ್ಳಿನ ಕಥೆ ಸೃಷ್ಟಿ ಮಾಡುತ್ತಿದ್ದೀರಿ. ಆದರೆ ಜೆಡಿಎಸ್ ಸತ್ಯದ ಪರ ಇದೆ. ರೈತರ ಪರ ನಿಂತಿದೆ. ನೀವು ಹೋಗಬೇಕಿರುವುದು ಆ ಮಾರ್ಗದಲ್ಲಿ ಎಂದು ಸಲಹೆ ನೀಡಿದೆ.












Click it and Unblock the Notifications