ಬೆಂಗಳೂರು ದಕ್ಷಿಣ ಜಿಲ್ಲೆಯ ಜನರಿಗೆ ಮತ್ತೊಂದು ಗುಡ್‌ನ್ಯೂಸ್ ಕೊಟ್ಟ ಡಿ.ಕೆ ಶಿವಕುಮಾರ್
ಬೆಂಗಳೂರು ದಕ್ಷಿಣ ಜಿಲ್ಲೆಯ ಜನರಿಗೆ ಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಅವರು ಇದೀಗ ಮತ್ತೊಂದು ಗುಡ್‌ನ್ಯೂಸ್ ಕೊಟ್ಟಿದ್ದಾರೆ. ರಾಮನಗರದ ನಗರ ಪ್ರದೇಶ ಮಾತ್ರವಲ್ಲ, ಇಡೀ ಬೆಂಗಳೂರು ದಕ್ಷಿಣ ಜಿಲ್ಲೆಗೆ ಹೊಸ ರೂಪ ನೀಡಬೇಕು ಎಂಬುದು ನನ್ನ ಸಂಕಲ್ಪ. ಈಗ ಮಾಡದಿದ್ದರೆ, ಮತ್ತ್ಯಾವ ಸಮಯದಲ್ಲೂ ಮಾಡಲು ಸಾಧ್ಯವಿಲ್ಲ ಎಂಬ ಅರಿವಿದೆ. ಇದನ್ನು ಹಂತ ಹಂತವಾಗಿ ಮಾಡುತ್ತೇವೆ ಎಂದು ಹೇಳಿದ್ದಾರೆ. ರಾಮನಗರದ ನಗರಸಭೆ ಅಧ್ಯಕ್ಷರಾದ ಕೆ.ಶೇಷಾದ್ರಿ ಅವರ ನೇತೃತ್ವದಲ್ಲಿ ರಾಮನಗರದ ರೈತ ಮುಖಂಡರು ಹಾಗೂ ನಾಗರಿಕರು ಬುಧವಾರ ಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಅವರನ್ನು ಗೃಹ ಕಚೇರಿ ಕೃಷ್ಣಾದಲ್ಲಿ ಭೇಟಿ ಮಾಡಿ ಮನವಿ ಸಲ್ಲಿಸಿದರು.
ಬಡವರಿಗೆ ಯಾವ ರೀತಿ ನಿವೇಶನ ಹಂಚಿಕೆ ಮಾಡಬೇಕು ಎಂದು ಈಗಾಗಲೇ ನಿಮ್ಮ ಶಾಸಕರಾದ ಇಕ್ಬಾಲ್ ಹುಸೇನ್ ಅವರಿಗೆ ಮಾರ್ಗದರ್ಶನ ನೀಡಿದ್ದೇನೆ. ಮೊದಲ ಹಂತದಲ್ಲೇ ನಿವೇಶನ ಹಂಚಿಕೆಗೆ ಶೀಘ್ರದಲ್ಲೇ ಹಣ ಬಿಡುಗಡೆ ಮಾಡಲಾಗುವುದು. ಚನ್ನಪಟ್ಟಣ, ಮಾಗಡಿ, ರಾಮನಗರ, ಕನಕಪುರ ಎಲ್ಲವೂ ನನ್ನ ಕ್ಷೇತ್ರವೇ. ರಾಮನಗರ ಜಿಲ್ಲೆಯ ಕೇಂದ್ರ ಕಚೇರಿಯಾಗಿದ್ದು, ಅದಕ್ಕೆ ಎಷ್ಟು ಗೌರವ ನೀಡಬೇಕೋ ನೀಡುತ್ತೇವೆ ಎಂದಿದ್ದಾರೆ.

ರಾಮನಗರದ ಸಿಎಂಸಿ ಕಚೇರಿ ಬಳಿ ವಾಣಿಜ್ಯ ಸಂಕೀರ್ಣ, ಅಂಬೇಡ್ಕರ್ ಭವನದ ನವೀಕರಣ, ರಾಮನಗರ ರೈಲ್ವೇ ನಿಲ್ದಾಣದಿಂದ ಸಿಎಂಸಿ ವ್ಯಾಪ್ತಿಯ ರಸ್ತೆ ಅಗಲೀಕರಣ, ವಿವಿಧ ವಾರ್ಡ್ ಗಳ ವಿಸ್ತರಣೆ ಅಭಿವೃದ್ಧಿ ಕಾರ್ಯ ಸೇರಿದಂತೆ ತಾಲ್ಲೂಕಿನಲ್ಲಿ 772.70 ಕೋಟಿ ಮೊತ್ತದ 18 ವಿವಿಧ ಕಾಮಗಾರಿಗಳಿಗೆ ಅನುದಾನ ಬಿಡುಗಡೆ ಮಾಡುವ ಬಗ್ಗೆ ಮನವಿ ಮಾಡಿದರು. ರೈತರು ಹಾಗೂ ನಾಗರಿಕರ ಅಹವಾಲು ಸ್ವೀಕರಿಸಿದ ಶಿವಕುಮಾರ್ ಅವರು, ಅವರ ಭರವಸೆಗಳನ್ನು ಈಡೇರಿಸಲಾಗುವುದು ಎಂದು ಭರವಸೆ ನೀಡಿದರು.
ರಾಮನಗರ ಜಿಲ್ಲೆಯನ್ನು ಬೆಂಗಳೂರು ದಕ್ಷಿಣ ಎಂದು ಮರುನಾಮಕರಣ ಮಾಡಿದ ನಂತರ ಹೇಗೆ ಗೌರವ ಬಂದಿದೆ ಎಂದು ನೀವು ಗಮನಿಸಿದ್ದೀರಿ. ಜನ ನಿಮ್ಮನ್ನು ಹೇಗೆ ನೋಡುತ್ತಿದ್ದಾರೆ. ನಿಮ್ಮ ಆಸ್ತಿ ಮೌಲ್ಯ ಎಷ್ಟಾಗಿದೆ ನಿಮಗೆ ಗೊತ್ತಿದೆ. ನೀವುಗಳು ಎಲ್ಲಾ ಜನರನ್ನು ವಿಶ್ವಾಸಕ್ಕೆ ಪಡೆದು ಕೆಲಸ ಮಾಡಿ. ಬೇರೆ ಪಕ್ಷದವರು ಸಂಪರ್ಕ ಮಾಡಲು ಇಚ್ಛಿಸುತ್ತಿದ್ದಾರೆ. ಅವರನ್ನು ಸೇರಿಸಿಕೊಂಡು ಮುಂದಿನ ಚುನಾವಣೆ ಸುಗಮವಾಗಿ ನಡೆಯುವಂತೆ ಮಾಡಿ. ನಾವು ಅಧಿಕಾರಕ್ಕೆ ಬಂದಿರುವುದನ್ನು ವಿರೋಧ ಪಕ್ಷದವರಿಂದ ಸಹಿಸಲು ಆಗುತ್ತಿಲ್ಲ. ನಿಮಗೆ ಒಳ್ಳೆಯದಾಗುವಂತೆ ನೋಡಿಕೊಳ್ಳುವುದು ನಮ್ಮ ಕರ್ತವ್ಯ. ನೀವು ನನ್ನ ಮೇಲೆ ಇಟ್ಟಿರುವ ವಿಶ್ವಾಸ ಉಳಿಸಿಕೊಳ್ಳುವ ಕೆಲಸ ಮಾಡುತ್ತೇವೆ ಎಂದರು.
ವಿವಿಧ ವಿಷಯಗಳ ಬಗ್ಗೆ ಮಾತನಾಡಿರುವ ಡಿ.ಕೆ ಶಿವಕುಮಾರ್ ಅವರು, ಈಗಾಗಲೇ ವೈದ್ಯಕೀಯ ವಿಶ್ವವಿದ್ಯಾಲಯ ನಿರ್ಮಾಣ ಕಾರ್ಯ ನಡೆಯುತ್ತಿದೆ. ಈ ಕ್ಷೇತ್ರ ಹಾಗೂ ಜಿಲ್ಲೆ ಈ ಹಿಂದೆ ಹೇಗಿತ್ತು ಎಂದು ನಾನು ಈಗ ಚರ್ಚೆ ಮಾಡುವುದಿಲ್ಲ, ಹೇಳಿದರೆ ಅದು ರಾಜಕೀಯವಾಗುತ್ತದೆ. ಈಗ ನಮ್ಮ ಮೇಲೆ ಜವಾಬ್ದಾರಿ ಇದೆ. ಈ ಭಾಗದ ಅನುಕೂಲಕ್ಕೆ ಏನು ಮಾಡಬೇಕೋ ಅದನ್ನು ಮಾಡುತ್ತೇವೆ. ನನ್ನ ಹೆಸರು ಹೇಳಿಕೊಂಡು ಕೆಲವರು ಏಜೆಂಟರಂತೆ ಬರುತ್ತಾರೆ.
ಅಂತಹವರಿಂದ ಹುಷಾರಾಗಿರಿ. ನಿಮ್ಮ ಊರಿನ ಅಭಿವೃದ್ಧಿ ವಿಚಾರ ಹೊರತುಪಡಿಸಿ, ಅಧಿಕಾರಿಗಳು, ಗುತ್ತಿಗೆದಾರರ ವಿಚಾರಕ್ಕೆ ತಲೆಕೆಡಿಸಿಕೊಳ್ಳಬೇಡಿ. ಸಿಎಂ ಜಿಲ್ಲೆ ಎಂದರೆ ಯಾವತ್ತೂ ಇಲ್ಲದ ನೆಂಟರು ಕೂಡಲೇ ಹುಟ್ಟಿಕೊಳ್ಳುತ್ತಾರೆ. ಅಂತಹವರನ್ನು ಹತ್ತಿರಕ್ಕೆ ಬಿಟ್ಟುಕೊಳ್ಳಬೇಡಿ. ಅಂತಹವರು ಬಂದು ಏನಾದರೂ ಕೇಳಿದರೆ, ನೀವುಂಟು, ಅವರುಂಟು ಎಂದು ಹೇಳಿ ಎಂದು ಸಲಹೆ ನೀಡಿದ್ದಾರೆ.
Big Boost for Bengaluru South: ಈಗ ವಿರೋಧ ಮಾಡುತ್ತಿದ್ದಾರೆ
ಇನ್ನು ಕ್ಷೇತ್ರವನ್ನೇ ಬಿಟ್ಟು ಹೋದವರು ಈಗ ಮತ್ತೆ ಬಂದು ವಿರೋಧ ಮಾಡುತ್ತಿದ್ದಾರೆ. ನಮ್ಮ ಕೈಲಾದಷ್ಟು ಒಳ್ಳೆಯ ಕೆಲಸ ನಾವು ಮಾಡುತ್ತೇವೆ. ನಾನು ಯಾವ ಊರನ್ನು ಒಕ್ಕಲೆಬ್ಬಿಸುವುದಿಲ್ಲ. ಎಲ್ಲಾ ಊರುಗಳು ಅಲ್ಲೇ ಇರುತ್ತವೆ. ಆ ಊರುಗಳು ಅಭಿವೃದ್ಧಿಯಾಗುತ್ತವೆ. ಆ ಭಾಗದ ಜನರಿಗೆ ಪರಿಹಾರ ನೀಡಲಾಗುವುದು. ಎರಡು ಮೂರು ಹಳ್ಳಿಗಳನ್ನು ಸೇರಿ ಅಧಿಸೂಚನೆ ಹೊರಡಿಸುತ್ತಿದ್ದೇವೆ.
ಕೆಲವರು ರಾಜಕಾರಣ ಮಾಡುತ್ತಿದ್ದಾರೆ. ಹಾಸನದ ರೈತರು ಬಂದು ಅವರ ಕಷ್ಟ ಹೇಳಿಕೊಂಡರು. ಹಾಸನ ಪಟ್ಟಣ ಪಕ್ಕ ಭೂಸ್ವಾಧೀನಪಡಿಸಿಕೊಂಡಿದ್ದು ಯಾಕೆ, ತಮ್ಮ ಕಾರ್ಯಕರ್ತನ 11 ಎಕರೆ ಬಿಟ್ಟು ಉಳಿದವುಗಳನ್ನು ಸ್ವಾಧೀನಪಡಿಸಿಕೊಂಡಿದ್ದಾರೆ. ಈ ಬಗ್ಗೆ ಈಗ ಚರ್ಚೆ ಬೇಡ. ನಿಮ್ಮೆಲ್ಲರಿಗೂ ಒಳ್ಳೆಯದಾಗಲಿ ಎಂದು ಈ ಹಿಂದೆ ದಳ ಹಾಗೂ ಬಿಜೆಪಿ ಕಾಲದಲ್ಲಿದ್ದ ಈ ಯೋಜನೆ ನಾನು ಮುಂದುವರಿಸುತ್ತಿದ್ದೇನೆ ಎಂದು ವಿವರಿಸಿದ್ದಾರೆ.












Click it and Unblock the Notifications