ಉತ್ತರ ಕರ್ನಾಟಕದ ಈ ಜಿಲ್ಲೆಯಲ್ಲಿ ರೈಲು ಕೋಚ್ ಡಿಪೋ ಸ್ಥಾಪನೆ? ಕೇಂದ್ರ ರೈಲ್ವೆ ಸಚಿವರಿಗೆ ಪತ್ರ
ಬೆಂಗಳೂರು: ಕರ್ನಾಟಕದ ಮಟ್ಟಿಗೆ ಹಲವು ರೈಲ್ವೆ ಯೋಜನೆಗಳು ಪ್ರಗತಿಯಲ್ಲಿವೆ. ಇದೀಗ ಉತ್ತರ ಕರ್ನಾಟಕದ ಭಾಗದಲ್ಲಿ ರೈಲ್ವೆ ಸಂಪರ್ಕ ಸೇವೆ ಸುಧಾರಣೆ, ನಿರ್ವಹಣೆಗಾಗಿ ಮಹತ್ವದ ಮನವಿಯೊಂದನ್ನು ಕೇಂದ್ರ ರೈಲ್ವೆ ಇಲಾಖೆಗೆ ಸಲ್ಲಿಸಲಾಗಿದೆ. ಕೈಗಾರಿಕೆ ಸಚಿವ ಎಂಬಿ ಪಾಟೀಲ್ ಅವರು ರಾಜ್ಯದ ಈ ಜಿಲ್ಲೆಯಲ್ಲಿ ರೈಲ್ವೆ ಕೋಚ್ ಡಿಪೋ ಸ್ಥಾಪಿಸುವಂತೆ ಪತ್ರ ಬರೆದು ಕೋರಿದ್ದಾರೆ.
ಉತ್ತರ ಕರ್ನಾಟಕದ ಪ್ರಮುಖ ಕೈಗಾರಿಕೆ ಕೇಂದ್ರವಾಗಲಿರುವ ವಿಜಯಪುರ ಜಿಲ್ಲೆಯಲ್ಲಿ ರೈಲ್ವೆ ಸಂಪರ್ಕ ಬಲವರ್ಧನೆಗಾಗಿ ಕೋಚ್ ಡಿಪೋ ಸ್ಥಾಪಿಸಬೇಕು. ರೈಲು ನಿಲ್ದಾಣದಲ್ಲಿ ಇನ್ನೊಂದು ಆಗಮನ ಮತ್ತು ನಿರ್ಗಮನ ದ್ವಾರವನ್ನು ಅಭಿವೃದ್ಧಿ ಪಡಿಸಬೇಕೆಂದು ಕೇಂದ್ರ ರೈಲ್ವೆ ಸಹಾಯಕ ಸಚಿವ ವಿ.ಸೋಮಣ್ಣನವರ ಜತೆ ಚರ್ಚಿಸಲಾಗಿದೆ. ಜೊತೆಗೆ ಸೋಮಣ್ಣ ಅವರೊಂದಿಗೆ ರೈಲ್ವೇ ಸಚಿವ ಅಶ್ವಿನಿ ವೈಷ್ಣವ್ ಅವರಿಗೂ ಪತ್ರ ಬರೆಯದಿದ್ದೇನೆ ಎಂದರು.

ವಿಜಯಪುರದಿಂದ ಗೂಡ್ಸ್ ಶೆಡ್ ಸ್ಥಳಾಂತರ
ಈ ಹಿಂದೆ ವಿಜಯಪುರ ರೈಲು ನಿಲ್ದಾಣದ ಆವರಣದಲ್ಲೇ ಇದ್ದ ಗೂಡ್ಸ್ ಶೆಡ್ ಅನ್ನು ಈಗ ಅಲಿಯಾಬಾದಿಗೆ ಸ್ಥಳಾಂತರಿಸಲಾಗಿದೆ. ಹೀಗಾಗಿ ಕೋಚ್ ಡಿಪೋ ಸ್ಥಾಪನೆಗೆ ಜಾಗದ ಕೊರತೆಯೇನೂ ಇಲ್ಲ. ಇಲ್ಲಿ ಕೋಚ್ ಡಿಪೋ ಬಂದರೆ ಇದನ್ನು ನಿರ್ವಹಣಾ ಹಬ್ ಆಗಿ ಬೆಳೆಸಬಹುದು. ಜತೆಗೆ ವಿಜಯಪುರ ಮತ್ತು ಉತ್ತರ ಕರ್ನಾಟಕದ ಪ್ರದೇಶಗಳಿಗೆ ಮತ್ತಷ್ಟು ಪರಿಣಾಮಕಾರಿಯಾಗಿ ರೈಲು ಸಂಪರ್ಕ ಒದಗಿಸಬಹುದು ಎಂದು ಅವರು ವಿವರಿಸಿದ್ದಾರೆ. ಉತ್ತರ ಕರ್ನಾಟಕ ಭಾಗಕ್ಕೂ ವಂದೇ ಭಾರತ್ ರೈಲು ಸಂಪರ್ಕಿಸುವುದರಿಂದ ಅದರ ಸೇವೆ, ನಿರ್ವಹಣೆಗೆ ಡಿಪೋ ನೆರವಾಗಲಿದೆ.
ಚಾರಿತ್ರಿಕವಾಗಿಯೂ ಮಹತ್ವದ ಸ್ಥಳವಾದ ವಿಜಯಪುರವು ವರ್ಷವಿಡೀ ಲಕ್ಷಾಂತರ ಪ್ರವಾಸಿಗರನ್ನು ಸೆಳೆಯುವ ಪ್ರವಾಸೋದ್ಯಮ ತಾಣವಾಗಿದೆ. ಅದರಲ್ಲೂ ವಾರಾಂತ್ಯ, ಹಬ್ಬ ಹರಿದಿನಗಳು ಮತ್ತು ರಜೆ ದಿನಗಳಲ್ಲಿ ಜನದಟ್ಟಣೆ ಸೃಷ್ಟಿಯಾಗುತ್ತದೆ. ಆದ್ದರಿಂದ ವಿಜಯಪುರ ರೈಲು ನಿಲ್ದಾಣದಲ್ಲಿ ಹೆಚ್ಚುವರಿಯಾಗಿ ಇನ್ನೊಂದು ಆಗಮನ-ನಿರ್ಗಮನ ದ್ವಾರವನ್ನು ಸ್ಥಾಪಿಸಬೇಕು ಎಂದು ಅವರು ಪತ್ರದಲ್ಲಿ ಒತ್ತಾಯಿಸಿದ್ದಾರೆ.

ಬೆಂಗಳೂರು-ವಿಜಯಪುರ ವಂದೇ ಭಾರತ್ ಸೇವೆಗೂ ನೆರವು
ಕಳೆದ ಸೋಮವಾರ ನಡೆದ ರೈಲ್ವೆ ಇಲಾಖೆಯ ಕಾರ್ಯಕ್ರಮದ ರೈಲ್ವೆ ಯೋಜನೆಗಳಿಗೆ ಸಂಬಂದಿಸಿದಂತೆ ಕೆಲವು ವಿಚಾರಗಳನ್ನು ಸಚಿವ ವಿ.ಸೋಮಣ್ಣ ಅವರೊಂದಿಗೆ ಚರ್ಚಿಸಲಾಗಿದೆ. ಅವರಿಂದ ಸಕಾರಾತ್ಮಕ ಸ್ಪಂದನೆ ಸಿಕ್ಕಿದೆ. ಈ ಬೇಡಿಕೆಗಳು ಈಡೇರಿದರೆ, ಇನ್ನು ಕೆಲವೇ ತಿಂಗಳಲ್ಲಿ ಆರಂಭವಾಗಲಿರುವ ಬೆಂಗಳೂರು-ವಿಜಯಪುರ ವಂದೇ ಭಾರತ್ ಎಕ್ಸ್‌ಪ್ರೆಸ್ ಸೇವೆಯ ನಿರ್ವಹಣೆಗೂ ಅನುಕೂಲವಾಗಲಿದೆ ಎಂದಿದ್ದಾರೆ.
ವಿಜಯಪುರಕ್ಕೆ ವಂದೇ ಭಾರತ್ ಸ್ಲೀಪರ್ ರೈಲು ಶೀಘ್ರ
ಇನ್ನೂ ಬೆಂಗಳೂರಿನಿಂದ ವಿಜಯಪುರಕ್ಕೆ ವಂದೇ ಭಾರತ್ ಸ್ಲೀಪರ್ ರೈಲು ಸೇವೆ ಆರಂಭಿಸಬೇಕೆಂಬ ಒತ್ತಾಯವಿದೆ. ಮುಂದಿನ ಕೆಲವೇ ತಿಂಗಳಲ್ಲಿ (4 ತಿಂಗಳಲ್ಲಿ) ದಕ್ಷಿಣ ಕರ್ನಾಟಕದಿಂದ ಉತ್ತರ ಕರ್ನಾಟಕಕ್ಕೆ ಸ್ಲೀಪರ್ ವಂದೇ ಭಾರತ್ ಸೇವೆ ಆರಂಭವಾಗಲಿದೆ. ಈ ಬಗ್ಗೆ ಅಂತಿಮ ತೀರ್ಮಾನ ಕೈಗೊಂಡು ಅಧಿಕೃತ ಘೋಷಣೆ ಮಾಡುವುದಾಗಿ ಇತ್ತೀಚಿನ ಕಾರ್ಯಕ್ರಮದಲ್ಲಿ ಸಚಿವ ವಿ.ಸೋಮಣ್ಣ ತಿಳಿಸಿದ್ದರು.
ಇನ್ನು ಬೆಂಗಳೂರು-ವಿಜಯಪುರ ಮಾರ್ಗದಲ್ಲಿ ವಾರದಲ್ಲಿ ಎರಡು ದಿನ ಸಂಚರಿಸುವ ವಿಶೇಷ ರೈಲನ್ನು ಕಾಯಂಗೊಳಿಸಲಾಗುವುದು. ಐಟಿ ಕೇಂದ್ರ ಬೆಂಗಳೂರು ಮತ್ತು ಆರ್ಥಿಕ ರಾಜಧಾನಿ ಮುಂಬಯಿಯನ್ನು ಬೆಸೆಯುವ ಬೆಂಗಳೂರು-ಪುಣೆ ಮಧ್ಯೆ ಹೈಸ್ಪೀಡ್ ರೈಲು ಸೇವೆಯ ಬೇಡಿಕೆ ಸೂಕ್ತವಾಗಿದೆ. ಎಲ್ಲ ಬೇಡಿಕೆ ಈಡೇರಿಗೆ ಪ್ರಾಮಾಣಿಕ ಪ್ರಯತ್ನ ಮಾಡಲಾಗುವುದು ಎಂದು ಅವರು ಹೇಳಿದರು.













Click it and Unblock the Notifications