ಜಯಾಗೆ 4 ವರ್ಷ ಜೈಲು, 100 ಕೋಟಿ ದಂಡ
ಬೆಂಗಳೂರು, ಸೆ. 27 : ತಮಿಳುನಾಡು ಮುಖ್ಯಮಂತ್ರಿ ಜಯಲಲಿತಾ ಅವರ ವಿರುದ್ಧದ ಅಕ್ರಮ ಆಸ್ತಿ ಪ್ರಕರಣದ ತೀರ್ಪು ಶನಿವಾರ ಹೊರಬಿದ್ದಿದ್ದು, ಅವರಿಗೆ ನಾಲ್ಕು ವರ್ಷಗಳ ಜೈಲು ಶಿಕ್ಷೆ ವಿಧಿಸಲಾಗಿದೆ. ಪ್ರಕರಣದಲ್ಲಿನ ಎಲ್ಲಾ ಆರೋಪಿಗಳಿಗೆ ನಾಲ್ಕು ವರ್ಷಗಳ ಜೈಲು ಶಿಕ್ಷೆಯನ್ನು ವಿಧಿಸಿ ಕೋರ್ಟ್ ಆದೇಶ ನೀಡಿದೆ. ಹೈಕೋರ್ಟ್‌ಗೆ ಜಯಲಲಿತಾ ತೀರ್ಪಿನ ವಿರುದ್ಧ ಮೇಲ್ಮನವಿ ಸಲ್ಲಿಸಬಹುದಾಗಿದೆ.
ಶನಿವಾರ ಮಧ್ಯಾಹ್ನ 12.30ರ ಸುಮಾರಿಗೆ ಸಿಬಿಐ ವಿಶೇಷ ಕೋರ್ಟ್ ಜಯಲಲಿತಾ ಸೇರಿದಂತೆ ನಾಲ್ವರು ಅಪರಾಧಿಗಳು ಎಂದು ತೀರ್ಪು ನೀಡಿತ್ತು. ಸಂಜೆ 4.45ಕ್ಕೆ 4 ವರ್ಷಗಳ ಜೈಲು ಶಿಕ್ಷೆ ವಿಧಿಸಿ ಆದೇಶ ನೀಡಿದೆ. ಆದ್ದರಿಂದ ಜಯಲಲಿತಾ ಸೇರಿದಂತೆ 4 ಆರೋಪಿಗಳಿಗೆ ತಕ್ಷಣಕ್ಕೆ ಜಾಮೀನು ದೊರೆಯುವುದಿಲ್ಲ. [ಜಯಲಲಿತಾ ತೀರ್ಪಿನ ಕ್ಷಣ-ಕ್ಷಣದ ಮಾಹಿತಿ]

ವಿಶೇಷ ನ್ಯಾಯಾಲಯದ ಆದೇಶವನ್ನು ಪ್ರಶ್ನಿಸಿ ಜಯಲಲಿತಾ ಕರ್ನಾಟಕ ಹೈಕೋರ್ಟ್‌ಗೆ ಮೇಲ್ಮನವಿ ಸಲ್ಲಿಸಬಹುದಾಗಿದೆ. ಜಯಲಲಿತಾ ಅವರನ್ನು ಪರಪ್ಪನ ಅಗ್ರಹಾರ ಜೈಲಿಗೆ ಕಳುಹಿಸಲಾಗಿದೆ. ತೀರ್ಪಿನಿಂದಾಗಿ ಜಯಲಲಿತಾ ಅವರು 6 ವರ್ಷ ಚುನಾವಣೆಗೆ ಸ್ಪರ್ಧಿಸುವಂತಿಲ್ಲ. ಮುಖ್ಯಮಂತ್ರಿ ಸ್ಥಾನಕ್ಕೂ ರಾಜೀನಾಮೆ ನೀಡಬೇಕಾಗಿದೆ.[ಅರವತ್ತಾರರ ಜಯಲಲಿತಾಗೆ ಮಾರಕವಾದ 6 ಸಂಖ್ಯೆ]
ಜಯಲಲಿತಾ ಅವರಿಗೆ ಕೋರ್ಟ್ ಜೈಲು ಶಿಕ್ಷೆಯ ಜೊತೆಗೆ 100 ಕೋಟಿ ದಂಡ ವಿಧಿಸಿ ಆದೇಶ ನೀಡಿದೆ. ಪ್ರಕರಣದಲ್ಲಿನ ಇತರ ಮೂವರು ಅಪರಾಧಿಗಳಿಗೆ ತಲಾ 10 ಕೋಟಿ ದಂಡ ವಿಧಿಸಲಾಗಿದ್ದು ಎಲ್ಲರನ್ನೂ ಪರಪ್ಪನ ಅಗ್ರಹಾರಕ್ಕೆ ಕಳುಹಿಸಲಾಗಿದೆ. ಇದರಿಂದಾಗಿ 18 ವರ್ಷಗಳ ಸುದೀರ್ಘ ಕಾನೂನು ಹೋರಾಟ ಅಂತ್ಯಗೊಂಡಿದೆ.












Click it and Unblock the Notifications