ಬೆಂಗಳೂರಿನಿಂದ ತವರಿಗೆ ಮರಳಿದ 160 ವಿದೇಶಿಯರು
ಬೆಂಗಳೂರು, ಏಪ್ರಿಲ್ 22 : ಬೆಂಗಳೂರಿನಿಂದ ಒಟ್ಟು 160 ವಿದೇಶಿಯರು ತಮ್ಮ ದೇಶಗಳಿಗೆ ವಿಶೇಷ ವಿಮಾನದಲ್ಲಿ ವಾಪಸ್ ಆಗಿದ್ದಾರೆ. ಲಾಕ್ ಡೌನ್ ಹಿನ್ನಲೆಯಲ್ಲಿ ವಿಮಾನ ಸಂಚಾರ ರದ್ದಾಗಿರುವ ಕಾರಣ ಬೆಂಗಳೂರು ಸೇರಿದಂತೆ ವಿವಿಧ ಕಡೆ ವಿದೇಶಿಯರು ಸಿಲುಕಿದ್ದರು.
ಮಂಗಳವಾರ ರಾತ್ರಿ ಬೋಯಿಂಗ್ 777-300 ಇಆರ್ ವಿಮಾನದಲ್ಲಿ 80 ಇಟಲಿ ಮತ್ತು 86 ಇತರ ದೇಶದ ಪ್ರಜೆಗಳು ರೋಮ್‌ಗೆ ಪ್ರಯಾಣ ಬೆಳೆಸಿದರು. ಭಾರತದಲ್ಲಿನ ರಾಯಭಾರ ಕಚೇರಿ ವಿಶೇಷ ವಿಮಾನಗಳ ವ್ಯವಸ್ಥೆ ಮಾಡಿತ್ತು.
80 ಜನರು ಇಟಲಿ ಪ್ರಜೆಗಳಾಗಿದ್ದಾರೆ. ಉಳಿದವರು ಜರ್ಮನಿ, ಫ್ರಾನ್ಸ್, ಐರ್ಲೆಂಡ್, ಪೋರ್ಚುಗಲ್ ದೇಶದ ಪ್ರಜೆಗಳಾಗಿದ್ದು, ಎಲ್ಲರೂ ರೋಮ್‌ಗೆ ತೆರಳಿದ್ದಾರೆ. ಅಲ್ಲಿಂದ ತಮ್ಮ ದೇಶಗಳಿಗೆ ತೆರಳಲಿದ್ದಾರೆ.

ಏರ್ ಇಂಡಿಯಾ ರೋಮ್‌ಗೆ ವಿಮಾನ ಸಂಪರ್ಕ ಕಲ್ಪಿಸುತ್ತದೆ. ಆದರೆ, ತಿಂಗಳ ಮಧ್ಯದಲ್ಲಿ ಲಾಕ್ ಡೌನ್ ಪರಿಣಾಮ ವಿಮಾನ ಸೇವೆಯನ್ನು ಬಂದ್ ಮಾಡಲಾಗಿತ್ತು. ಇದರಿಂದಾಗಿ ವಿದೇಶಿ ಪ್ರಜೆಗಳು ರಾಜ್ಯದಲ್ಲಿ ಸಿಲುಕಿದ್ದರು.
ಕೇರಳದಿಂದ ಕೊರೊನಾ ಸೋಂಕಿನಿಂದಾಗಿ ಆಸ್ಪತ್ರೆಗೆ ದಾಖಲಾಗಿ ಗುಣಮುಖರಾದ ಪ್ರಜೆ, ಉತ್ತರ ಕನ್ನಡ ಜಿಲ್ಲೆಯ ಗೋಕರ್ಣದಲ್ಲಿ ಒಂದು ತಿಂಗಳಿನಿಂದ ಸಿಲುಕಿದ್ದ ಇಟಲಿ ಪ್ರಜೆಗಳು ಸೇರಿ 160 ಜನರು ವಿಶೇಷ ವಿಮಾನದಲ್ಲಿ ವಾಪಸ್ ಆದರು.
ಇಟಲಿಯ ರಾಯಭಾರ ಕಚೇರಿ ಬೆಂಗಳೂರು-ರೋಮ್ ನಡುವೆ ವಿಶೇಷ ವಿಮಾನದ ವ್ಯವಸ್ಥೆ ಮಾಡಿತ್ತು. ಭಾರತದಲ್ಲಿ ಸಿಲುಕಿರುವ ಇಟಲಿ ಪ್ರಜೆಗಳನ್ನು ಏರ್ ಲಿಫ್ಟ್ ಮಾಡಲು ಅಲ್ಲಿಂದ ವಿಮಾನ ಕಳಿಸಲಾಗಿದೆ.
ಇದುವರೆಗೂ ನವದೆಹಲಿ, ಗೋವಾದಿಂದ ಎರಡು ವಿಮಾನ, ಬೆಂಗಳೂರಿನಿಂದ 2 ವಿಮಾನ ಇಟಲಿಗೆ ಸಂಚಾರ ನಡೆಸಿದೆ. ಏಪ್ರಿಲ್ 23ರಂದು ಮತ್ತೊಂದು ವಿಮಾನ ಅಹಮದಾಬಾದ್-ಲಂಡನ್ ನಡುವೆ ಸಂಚಾರ ನಡೆಸಲಿದೆ.












Click it and Unblock the Notifications