IPL 2026: ಚಿನ್ನಸ್ವಾಮಿಯಲ್ಲಿ ಆರ್‌ಸಿಬಿ ಪಂದ್ಯ, ಮಾರ್ಚ್ 28ಕ್ಕೆ ಬೆಂಗಳೂರಿನ ಯಾವ ರಸ್ತೆಗಳೆಲ್ಲ ಬಂದ್ ಆಗಲಿದೆ? ಇಲ್ಲಿದೆ ಮಾಹಿತಿ
ಬೆಂಗಳೂರು: ಬಹುನಿರೀಕ್ಷಿತ ಇಂಡಿಯನ್ ಪ್ರೀಮಿಯರ್ ಲೀಗ್ (IPL 2026) ಕ್ರಿಕೆಟ್ ಹಬ್ಬಕ್ಕೆ ಕ್ಷಣಗಣನೆ ಆರಂಭವಾಗಿದೆ. ಮಾರ್ಚ್ 28 ರಂದು ಸಿಲಿಕಾನ್ ಸಿಟಿ ಬೆಂಗಳೂರಿನ ಹೃದಯ ಭಾಗದಲ್ಲಿರುವ ಎಂ. ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ತವರಿನ ನೆಚ್ಚಿನ ತಂಡ ರಾಯಲ್ ಚಾಲೆಂಜರ್ಸ್ ಬೆಂಗಳೂರು ಹಾಗೂ ಸನ್ ರೈಸರ್ಸ್ ಹೈದರಾಬಾದ್ ತಂಡಗಳ ನಡುವೆ ಹೈವೋಲ್ಟೇಜ್ ಪಂದ್ಯ ನಡೆಯಲಿದೆ. ಈ ಪಂದ್ಯವನ್ನು ಕಣ್ತುಂಬಿಕೊಳ್ಳಲು ಸಾವಿರಾರು ಸಂಖ್ಯೆಯಲ್ಲಿ ಅಭಿಮಾನಿಗಳು ಕ್ರೀಡಾಂಗಣದತ್ತ ಹರಿದುಬರುವ ನಿರೀಕ್ಷೆಯಿದೆ. ಈ ಹಿನ್ನೆಲೆಯಲ್ಲಿ ಯಾವುದೇ ಅಹಿತಕರ ಘಟನೆಗಳು ನಡೆಯದಂತೆ ಹಾಗೂ ಸುಗಮ ಸಂಚಾರಕ್ಕಾಗಿ ಬೆಂಗಳೂರು ನಗರ ಸಂಚಾರ ಪೊಲೀಸರು ಭಾರಿ ಭದ್ರತೆ ಒದಗಿಸಿದ್ದು, ವಿಶೇಷ ಟ್ರಾಫಿಕ್ ಅಡ್ವೈಸರಿ ಪ್ರಕಟಿಸಿದ್ದಾರೆ.
ಮಧ್ಯಾಹ್ನದಿಂದಲೇ ಟ್ರಾಫಿಕ್ ನಿರ್ಬಂಧ
ಪಂದ್ಯದ ದಿನದಂದು ಮಧ್ಯಾಹ್ನ 3 ಗಂಟೆಯಿಂದ ರಾತ್ರಿ 12 ಗಂಟೆಯವರೆಗೆ (ಅಥವಾ ಪಂದ್ಯ ಮುಗಿಯುವವರೆಗೆ) ಕ್ರೀಡಾಂಗಣದ ಸುತ್ತಮುತ್ತಲಿನ ಪ್ರಮುಖ ರಸ್ತೆಗಳಲ್ಲಿ ವಾಹನಗಳ ಸಂಚಾರ ಮತ್ತು ನಿಲುಗಡೆಯನ್ನು ಸಂಪೂರ್ಣವಾಗಿ ನಿರ್ಬಂಧಿಸಲಾಗಿದೆ. ಸಂಜೆಯ ವೇಳೆ ಉಂಟಾಗುವ ವಿಪರೀತ ಟ್ರಾಫಿಕ್ ಜಾಮ್ ತಪ್ಪಿಸಲು ಹಾಗೂ ಸಾರ್ವಜನಿಕರಿಗೆ ತೊಂದರೆಯಾಗದಿರಲು ಪೊಲೀಸರು ಈ ಮುನ್ನೆಚ್ಚರಿಕಾ ಕ್ರಮಗಳನ್ನು ಕೈಗೊಂಡಿದ್ದಾರೆ.

ವಾಹನ ನಿಲುಗಡೆ ನಿಷೇಧಿತ ರಸ್ತೆಗಳು
1.ಚಿನ್ನಸ್ವಾಮಿ ಕ್ರೀಡಾಂಗಣದ ಸುತ್ತಲಿನ ಈ ಕೆಳಕಂಡ ರಸ್ತೆಗಳಲ್ಲಿ ವಾಹನ ನಿಲುಗಡೆಯನ್ನು ಕಟ್ಟುನಿಟ್ಟಾಗಿ ನಿಷೇಧಿಸಲಾಗಿದೆ:
2.ಕ್ವೀನ್ಸ್ ರಸ್ತೆ (Queens Road) - ಬಾಳೇಕುಂದ್ರಿ ವೃತ್ತದಿಂದ ಕ್ವೀನ್ಸ್ ವೃತ್ತದವರೆಗೆ ಎರಡೂ ಬದಿಗಳಲ್ಲಿ.
3.ಎಂ.ಜಿ. ರಸ್ತೆ (MG Road) - ಅನಿಲ್ ಕುಂಬ್ಳೆ ವೃತ್ತದಿಂದ ಕ್ವೀನ್ಸ್ ವೃತ್ತದವರೆಗೆ.
4.ಕಬ್ಬನ್ ರಸ್ತೆ (Cubbon Road) - ಸಿ.ಟಿ.ಓ. ವೃತ್ತದಿಂದ ಡಿಕೆನ್ಸನ್ ರಸ್ತೆ ಜಂಕ್ಷನ್ ವರೆಗೆ.
5.ರಾಜಭವನ ರಸ್ತೆ, ಸೆಂಟ್ರಲ್ ಸ್ಟ್ರೀಟ್ ರಸ್ತೆ.
6.ಸೆಂಟ್ ಮಾರ್ಕ್ಸ್ ರಸ್ತೆ, ಮ್ಯೂಸಿಯಂ ರಸ್ತೆ, ಕಸ್ತೂರಬಾ ರಸ್ತೆ.
7.ವಿಠಲ್ ಮಲ್ಯ ರಸ್ತೆ ಮತ್ತು ಲ್ಯಾವೆಲ್ಲೆ ರಸ್ತೆಗಳಲ್ಲಿಯೂ (Lavelle Road) ವಾಹನ ಪಾರ್ಕಿಂಗ್ ಮಾಡುವಂತಿಲ್ಲ.
ಪರ್ಯಾಯ ಪಾರ್ಕಿಂಗ್ ವ್ಯವಸ್ಥೆ
ಪಂದ್ಯ ವೀಕ್ಷಿಸಲು ಬರುವ ಕ್ರಿಕೆಟ್ ಅಭಿಮಾನಿಗಳ ಅನುಕೂಲಕ್ಕಾಗಿ ಸಂಚಾರ ಪೊಲೀಸರು ಕೆಲವೆಡೆ ಪರ್ಯಾಯ ವಾಹನ ನಿಲುಗಡೆಗೆ ಅವಕಾಶ ಕಲ್ಪಿಸಿದ್ದಾರೆ. ಸೆಂಟ್ ಜೋಸೆಫ್ ಇಂಡಿಯನ್ ಸ್ಕೂಲ್ ಮೈದಾನ, ಯುಬಿ ಸಿಟಿ (UB City) ಪಾರ್ಕಿಂಗ್ ಲಾಟ್, ಶಿವಾಜಿನಗರ ಬಿಎಂಟಿಸಿ ಟಿಟಿಎಂಸಿ ಮೊದಲ ಮಹಡಿ ಮತ್ತು ಕಬ್ಬನ್ ಪಾರ್ಕ್ ಒಳಗಿನ ಕಿಂಗ್ಸ್ ರಸ್ತೆಯಲ್ಲಿ ವಾಹನ ನಿಲ್ಲಿಸಬಹುದು. ಈ ನಿಗದಿತ ಸ್ಥಳಗಳಲ್ಲಿ ಮಾತ್ರ ಅಭಿಮಾನಿಗಳು ತಮ್ಮ ದ್ವಿಚಕ್ರ ಹಾಗೂ ನಾಲ್ಕು ಚಕ್ರದ ವಾಹನಗಳನ್ನು ನಿಲ್ಲಿಸಬಹುದಾಗಿದೆ.
ಸಾರ್ವಜನಿಕ ಸಾರಿಗೆ ಬಳಸಲು ಮನವಿ
ವಾಹನ ನಿಲುಗಡೆಗೆ ಸ್ಥಳಾವಕಾಶದ ಕೊರತೆ ಇರುವುದರಿಂದ, ಪಂದ್ಯ ವೀಕ್ಷಿಸಲು ಬರುವ ಅಭಿಮಾನಿಗಳು ತಮ್ಮ ಸ್ವಂತ ವಾಹನಗಳ ಬದಲಿಗೆ 'ನಮ್ಮ ಮೆಟ್ರೋ' ಅಥವಾ ಬಿಎಂಟಿಸಿ ಬಸ್‌ಗಳನ್ನು ಬಳಸುವಂತೆ ಸಂಚಾರ ಪೊಲೀಸರು ಕಳಕಳಿಯ ಮನವಿ ಮಾಡಿದ್ದಾರೆ. ಕ್ರಿಕೆಟ್ ಅಭಿಮಾನಿಗಳ ಅನುಕೂಲಕ್ಕಾಗಿ ಬಿಎಂಆರ್‌ಸಿಎಲ್ ಮೆಟ್ರೋ ರೈಲುಗಳ ಕಾರ್ಯಾಚರಣೆಯ ಸಮಯವನ್ನು ರಾತ್ರಿ 11:30 ರವರೆಗೆ ವಿಸ್ತರಿಸುವ ನಿರೀಕ್ಷೆ ಇದೆ. ಮೆಟ್ರೋ ನಿಲ್ದಾಣಗಳಲ್ಲಿ ಕಾಗದದ ಟಿಕೆಟ್ (Paper Tickets) ವ್ಯವಸ್ಥೆ ಮಾಡಲಾಗುತ್ತದೆ. ಓಲಾ, ಉಬರ್ ಅಥವಾ ಆಟೋ ರಿಕ್ಷಾಗಳಲ್ಲಿ ಬರುವವರಿಗೆ ಕಬ್ಬನ್ ರಸ್ತೆಯ ಬಿಆರ್‌ವಿ ಜಂಕ್ಷನ್‌ನಿಂದ ಚಾಲುಕ್ಯ ವೃತ್ತದವರೆಗೆ ಪಿಕ್-ಅಪ್ ಮತ್ತು ಡ್ರಾಪ್ ಮಾಡಲು ಮಾತ್ರವೇ ಅವಕಾಶ ಕಲ್ಪಿಸಲಾಗಿದೆ.
ಭದ್ರತಾ ವ್ಯವಸ್ಥೆ ಮತ್ತು ಕಟ್ಟುನಿಟ್ಟಿನ ನಿಯಮಗಳು
ಟ್ರಾಫಿಕ್ ನಿರ್ವಹಣೆ ಮಾತ್ರವಲ್ಲದೆ, ಕ್ರೀಡಾಂಗಣದ ಒಳಗೆ ಮತ್ತು ಹೊರಗೆ ಬಿಗಿ ಭದ್ರತೆಯನ್ನು ಏರ್ಪಡಿಸಲಾಗಿದೆ. ಸಾವಿರಾರು ಪೊಲೀಸ್ ಸಿಬ್ಬಂದಿಗಳನ್ನು ಭದ್ರತಾ ಕಾರ್ಯಕ್ಕಾಗಿ ನಿಯೋಜಿಸಲಾಗಿದ್ದು, ಸಿಸಿಟಿವಿ ಕ್ಯಾಮೆರಾಗಳ ಮೂಲಕ ನಿರಂತರ ಕಣ್ಗಾವಲು ಇರಿಸಲಾಗುವುದು. ಭದ್ರತಾ ಕಾರಣಗಳಿಗಾಗಿ, ಕ್ರೀಡಾಂಗಣದ ಒಳಗೆ ನೀರಿನ ಬಾಟಲಿಗಳು, ಹೆಲ್ಮೆಟ್, ಬ್ಯಾಗ್ ಹಾಗೂ ಇನ್ನಿತರ ನಿಷೇಧಿತ ವಸ್ತುಗಳನ್ನು ತರುವುದನ್ನು ಸಂಪೂರ್ಣವಾಗಿ ನಿರ್ಬಂಧಿಸಲಾಗಿದೆ. ಟ್ರಾಫಿಕ್ ನಿಯಮಗಳನ್ನು ಉಲ್ಲಂಘಿಸಿ, ನೋ ಪಾರ್ಕಿಂಗ್ ಜಾಗಗಳಲ್ಲಿ ವಾಹನಗಳನ್ನು ನಿಲ್ಲಿಸಿದರೆ, ಕೂಡಲೇ ಆ ವಾಹನಗಳನ್ನು ಟೋಯಿಂಗ್ (Towing) ಮಾಡಲಾಗುವುದು ಮತ್ತು ದುಬಾರಿ ದಂಡ ವಿಧಿಸಲಾಗುವುದು ಎಂದು ಪೊಲೀಸರು ಎಚ್ಚರಿಕೆ ನೀಡಿದ್ದಾರೆ.
ಪೊಲೀಸರು ನೀಡಿರುವ ಈ ಮಾರ್ಗಸೂಚಿಗಳನ್ನು ಪಾಲಿಸುವ ಮೂಲಕ ಅಭಿಮಾನಿಗಳು ಸಂಚಾರ ದಟ್ಟಣೆಯನ್ನು ತಪ್ಪಿಸಿ, ಪಂದ್ಯದ ಸಂಪೂರ್ಣ ಆನಂದವನ್ನು ಪಡೆಯಬಹುದು.












Click it and Unblock the Notifications