ಬೆಂಗಳೂರು-ಥೈಲ್ಯಾಂಡ್ ಪ್ರವಾಸಿಗರಿಗೆ ಸಿಹಿಸುದ್ದಿ: ನೇರ ವಿಮಾನ, ವೇಳಾಪಟ್ಟಿ
ಬೆಂಗಳೂರು, ಮಾರ್ಚ್ 12: ಉದ್ಯಾನ ನಗರಿ ಬೆಂಗಳೂರಿನಿಂದ ಥೈಲ್ಯಾಂಡ್ ಪ್ರವಾಸ ಕೈಗೊಳ್ಳುವ ಪ್ರವಾಸಿಗರಿಗೆ ಮಹತ್ವದ ಮಾಹಿತಿಯೊಂದಿದೆ. ಥೈಲ್ಯಾಂಡ್‌ನ ಕಾರ್ಬಿ ಮತ್ತು ಬೆಂಗಳೂರು ನಡುವೆ ನೇರ ವಿಮಾನ ಸೇವೆ ಆರಂಭವಾಗಲಿದೆ. ಪ್ರಯಾಣಿಕರ ಬೇಡಿಕೆ ಹಿನ್ನಲೆಯಲ್ಲಿ ಇಂಡಿಗೋ ವಿಮಾನಯಾನ ಸಂಸ್ಥೆ ಈ ಸೇವೆಯನ್ನು ಆರಂಭಿಸಲಿದೆ. ವೇಳಾಪಟ್ಟಿಯನ್ನು ಬಿಡುಗಡೆ ಮಾಡಲಾಗಿದೆ.
ಬಹುತೇಕ ಪ್ರವಾಸಿಗರ ಕನಸಿನ ದೇಶ ಥೈಲ್ಯಾಂಡ್. ಪ್ರತಿ ವರ್ಷ ಲಕ್ಷಾಂತರ ಪ್ರವಾಸಿಗರು ಇಲ್ಲಿಗೆ ಭೇಟಿ ನೀಡುತ್ತಾರೆ. ಥೈಲ್ಯಾಂಡ್ ಪ್ರವಾಸ ಪ್ಯಾಕೇಜ್ ಆಯೋಜಿಸುವ ವಿವಿಧ ಕಂಪನಿಗಳೇ ಇವೆ. ಈಗ ಬೆಂಗಳೂರು ನಗರದಿಂದ ಥೈಲ್ಯಾಂಡ್ ಪ್ರವಾಸ ಇನ್ನಷ್ಟು ಸುಲಭವಾಗಲಿದೆ.

ಬುಧವಾರ ಇಂಡಿಗೋ ವಿಮಾನಯಾನ ಸಂಸ್ಥೆ ಬೆಂಗಳೂರು ಮತ್ತು ಥೈಲ್ಯಾಂಡ್‌ನ ಕಾರ್ಬಿ ನಡುವೆ ಮಾರ್ಚ್ 30ರಿಂದ ನೇರ ವಿಮಾನ ಸೇವೆ ಆರಂಭಿಸಲಾಗುತ್ತದೆ ಎಂದು ಘೋಷಣೆ ಮಾಡಿದೆ. ಈ ಮೂಲಕ ಬೆಂಗಳೂರು ನಗರದಿಂದ ಮತ್ತೊಂದು ಅಂತರರಾಷ್ಟ್ರೀಯ ವಿಮಾನ ಸೇವೆಯನ್ನು ಇಂಡಿಗೋ ಆರಂಭಿಸುತ್ತಿದೆ.
ವಿಮಾನದ ವೇಳಾಪಟ್ಟಿ: ಸದ್ಯ ಭಾರತ ಮುಂಬೈ ನಗರದಿಂದ ಮಾತ್ರ ಥೈಲ್ಯಾಂಡ್‌ನ ಕಾರ್ಬಿಗೆ ನೇರ ವಿಮಾನ ಸೇವೆ ಇದೆ. ಬೆಂಗಳೂರು-ಕಾರ್ಬಿ ವಿಮಾನ ಸೇವೆ ಆರಂಭವಾದರೆ ಬೆಂಗಳೂರು ಥೈಲ್ಯಾಂಡ್‌ನ ಕಾರ್ಬಿ ಜೊತೆ ನೇರ ಸಂಪರ್ಕ ಹೊಂದುವ ಎರಡನೇ ನಗರವಾಗಲಿದೆ.
ಇಂಡಿಗೋ ಕೆಲವು ದಿನಗಳ ಹಿಂದೆ ಮುಂಬೈ-ಕಾರ್ಬಿ ನೇರ ವಿಮಾನ ಸೇವೆಯನ್ನು ಆರಂಭಿಸಿತ್ತು. ಈ ಸೇವೆಗೆ ಉತ್ತಮ ಪ್ರತಿಕ್ರಿಯೆ ಬಂದ ಹಿನ್ನಲೆಯಲ್ಲಿ ಬೆಂಗಳೂರು-ಕಾರ್ಬಿ ವಿಮಾನ ಹಾರಾಟವನ್ನು ಆರಂಭಿಸಲಿದೆ.
ವಿಶಾಲವಾದ ಕಡಲ ತೀರ, ದ್ವೀಪಗಳನ್ನು ಹೊಂದಿರುವ ಕಾರ್ಬಿಗೆ ಹೆಚ್ಚಿನ ಪ್ರವಾಸಿಗರು ಭೇಟಿ ನೀಡುತ್ತಾರೆ. ಆದ್ದರಿಂದ ಈ ವಿಮಾನ ಸೇವೆ ಅವರಿಗೆ ಅನುಕೂಲ ಮಾಡಿಕೊಡಲಿದೆ ಎಂದು ಇಂಡಿಗೋ ವಿಮಾನಯಾನ ಸಂಸ್ಥೆ ಹೇಳಿದೆ. ಈ ಮೂಲಕ ಅಂತರರಾಷ್ಟ್ರೀಯ ಜಾಲವನ್ನು ಮತ್ತಷ್ಟು ವಿಸ್ತರಣೆ ಮಾಡಲಾಗುತ್ತಿದೆ ಎಂದು ಹೇಳಿದೆ.
ಬೆಂಗಳೂರು-ಕಾರ್ಬಿ (6ಇ 1083) ವಿಮಾನ 3.30ಕ್ಕೆ ಬೆಂಗಳೂರಿನಿಂದ ಹೊರಟು ಥೈಲ್ಯಾಂಡ್‌ನ ಕಾರ್ಬಿಗೆ 8.45ಕ್ಕೆ ತಲುಪಲಿದೆ. ಕಾರ್ಬಿ ಇಂದ (6ಇ 1084) ಸಂಖ್ಯೆಯ ವಿಮಾನ ಬೆಳಗ್ಗೆ 11.35ಕ್ಕೆ ಹೊರಟು ಬೆಂಗಳೂರು ನಗರಕ್ಕೆ ಮಧ್ಯಾಹ್ನ 1.40ಕ್ಕೆ ಆಗಮಿಸಲಿದೆ.
ಇದು ಇಂಡಿಗೋದ 12ನೇ ಅಂತರರಾಷ್ಟ್ರೀಯ ಮತ್ತು ಬೆಂಗಳೂರಿನಿಂದ ಹಾರಾಟ ನಡೆಸುವ 81ನೇ ವಿಮಾನವಾಗಿದೆ. ಇದು ಥೈಲ್ಯಾಂಡ್‌ನ ಕಾರ್ಬಿಗೆ ಸಂಪರ್ಕಿಸುವ ಜೊತೆಗೆ ಇಂಟರ್ ನ್ಯಾಷನಲ್ ಹಬ್ ಆಗಿರುವ ಬೆಂಗಳೂರಿಗೆ ಜನರು ಆಗಮಿಸಲು ಸಹಕಾರಿಯಾಗಿದೆ ಎಂದು ಇಂಡಿಗೋ ಹೇಳಿದೆ.
ಭಾರತ ಮತ್ತು ಥೈಲ್ಯಾಂಡ್‌ನ ನಡುವೆ ಇಂಡಿಗೋ ವಾರಕ್ಕೆ 95 ವಿಮಾನಗಳನ್ನು ಓಡಿಸುತ್ತಿದೆ. ನಾವು ಬೆಂಗಳೂರು ಥೈಲ್ಯಾಂಡ್‌ನ ಕಾರ್ಬಿ ನಡುವೆ ವಿಮಾನ ಸೇವೆ ಆರಂಭಿಸಲು ಉತ್ಸುಕರಾಗಿದ್ದೇವೆ ಎಂದು ಇಂಡಿಗೋ ಜಾಗತಿಕ ಮಾರಾಟ ವಿಭಾಗ ಮುಖ್ಯಸ್ಥ ವಿನಯ್ ಮಲ್ಹೋತ್ರಾ ಹೇಳಿದ್ದಾರೆ.
ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣ, ಬೆಂಗಳೂರು ಇಂಡಿಗೋ ಪಾಲಿಗೆ ದೇಶದ 2ನೇ ಹಬ್ ಆಗಿದೆ. ಪ್ರತಿದಿನ 200 ಇಂಡಿಗೋ ವಿಮಾನಗಳು ಇಲ್ಲಿಂದ ಹಾರಾಟ ನಡೆಸುತ್ತವೆ. ಇವುಗಳಲ್ಲಿ 65 ದೇಶಿಯ ವಿಮಾನಗಳು, 10ಕ್ಕೂ ಹೆಚ್ಚು ಅಂತರಾಷ್ಟ್ರೀಯ ವಿಮಾನಗಳು ಸೇರಿವೆ.












Click it and Unblock the Notifications