Bengalauru rain: ಜುಲೈ 8ರ ತನಕ ಮಳೆ-ತಂಪು ವಾತಾವರಣ, ತಾಪಮಾನ ಎಷ್ಟಿರಲಿದೆ?
ಬೆಂಗಳೂರು, ಜಲೈ 04: ರಾಜ್ಯಾದ್ಯಂತ ಚುರುಕುಗೊಂಡಿರುವ ಮುಂಗಾರು ಮಳೆ ಉದ್ಯಾನ ನಗರಿ ಬೆಂಗಳೂರಿನಲ್ಲಿ ತುಸು ಬಿಡುವು ನೀಡಿದಂತೆ ಕಾಣುತ್ತಿದೆ. ಕಾರಣ ಪ್ರತಿ ವರ್ಷ ಮೇ ತಿಂಗಳ ಮಧ್ಯ ಭಾಗದಲ್ಲಿಯೇ ವ್ಯಾಪಕವಾಗಿ ಸುರಿಯುತ್ತಿದ್ದ ಮಳೆ ಜೂನ್ ಮೊದಲ ವಾರದಲ್ಲೂ ಸಹಿತ ಅಷ್ಟಾಗಿ ಅಬ್ಬರಿಸದೇ ದಿನ ಬಿಟ್ಟು ದಿನ ಹಗುರದಿಂದ ಸಾಧಾರಣವಾಗಿ ಸುರಿಯುತ್ತಿದೆ. ಇದೇ ವಾತಾವರಣ ಜುಲೈ 08 ರವರೆಗೂ ಮುಂದುವರಿಯುವ ನಿರೀಕ್ಷೆ ಇದೆ ಎಂದು ಹವಾಮಾನ ಇಲಾಖೆ ತಿಳಿಸಿದೆ.
ಮಂಗಳವಾರ ದೊರೆತ ಮುನ್ಸೂಚನೆ ಪ್ರಕಾರ, ಬೆಂಗಳೂರಿನಲ್ಲಿ ಕಳೆದೊಂದು ವಾರದಿಂದ ಸಂಜೆ ನಂತರ ಆಗಾಗ ತುಂತುರು ಇಲ್ಲವೇ ಸಾಧಾರಣವಾಗಿ ಮಳೆ ದಾಖಲಾಗಿದೆ. ಬಿಸಿಲು ಅಷ್ಟಾಗಿ ಬಾರದೆ ದಿನವಿಡೀ ತಂಪು ಮತ್ತು ಚಳಿಯ ವಾತಾವರಣದ ಅನುಭವ ಆಗುತ್ತಿದೆ.

ಮುಂದಿನ ಐದು ದಿನ ನಗರದ ಕೆಲವು ಪ್ರದೇಶಗಳಲ್ಲಿ ತುಂತುರು ಮಳೆ ಸುರಿದರೆ, ಹಲವು ಕಡೆಗಳಲ್ಲಿ ಹಗುರದಿಂದ ಸಾಧಾರಣವಾಗಿ ಮಳೆ ಆಗಲಿದೆ. ಒಂದರೆಡು ಕಡೆ ವ್ಯಾಪಕ ಮಳೆ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.
ಮುಂದಿನ ಐದು ದಿನ ತಾಪಮಾನ ಎಷ್ಟಿರುತ್ತದೆ?
ನಗರದಲ್ಲಿ ಸಂಪೂರ್ಣವಾಗಿ ಮಳೆಗಾಲ ಆವರಿಸಿದೆ. ಎಲ್ಲಿ ನೋಡಿದರೂ ತಂಪು ಗಾಳಿ ಬೀಸುತ್ತಿದೆ. ಆಗಾಗ ಮಳೆ ಜಿನಗುತ್ತಿದೆ. ತಾಪಮಾನದಲ್ಲಿ ಇಳಿಕೆಯಾಗಿದೆ. ಮಳೆ ನಿರೀಕ್ಷಿತ ಮುಂದಿನ ಐದು ದಿನದದಲ್ಲಿ ಗರಿಷ್ಠ ತಾಪಮಾನ 29-28 ಡಿಗ್ರಿ ಸೆಲ್ಸಿಯಸ್ ಮತ್ತು ಕನಿಷ್ಠ ತಾಪಮಾನ 20 ಡಿಗ್ರಿ ಸೆಲ್ಸಿಯಸ್ ಕಂಡು ಬರಲಿದೆ.

ನಿತ್ಯ ಮಧ್ಯಾಹ್ನ ನಂತರ ಕೋಮಂಗಳ, ವೈಟ್‌ಫಿಲ್ಡ್, ಲಾಲ್‌ಬಾಗ್, ಚಾಮರಾಜಪೇಟೆ, ರಾಜಾಜಿನಗರ, ಆರ್‌ಆರ್ ನಗರ, ಕೆಂಗೇರಿ, ಹೊರಮಾವು, ಹೆಬ್ಬಾಳ, ಯಲಹಂಕ, ವಿದ್ಯಾರಣ್ಯಪುರ, ಬೆಂಗಳೂರು ವಿಮಾನ ನಿಲ್ದಾಣ ರಸ್ತೆ, ಬೊಮ್ಮನಹಳ್ಳಿ, ಮಹಾದೇವಪುರ ಹೀಗೆ ಒಂದಲ್ಲ ಒಂದು ಕಡೆಗಳಲ್ಲಿ ಜಿಟಿ ಮಳೆ ಆಗುತ್ತಲೇ ಇದೆ. ಎಲ್ಲಿಯೂ ಸಹ ಅಬ್ಬರದ ಮಳೆ ಕಂಡು ಬಂದಿಲ್ಲ. ಕಳೆದ ಭಾನುವಾರ ಮಾತ್ರ ಮಧ್ಯಾಹ್ನ ಸುಮಾರು ಅರ್ಧ ಗಂಟೆ ಕಾಲ ವ್ಯಾಪಕ ಮಳೆ ದಾಖಲಾಗಿತ್ತು.
ಕರ್ನಾಟಕ ಕರಾವಳಿ ಇನ್ನಿತರ ಕಡೆ ಮಳೆ ಅಬ್ಬರ
ದೇಶದ ಶೇಕಡಾ 100ರಷ್ಟು ಭಾಗದಲ್ಲಿ ಮಳೆ ಆವರಿಸಿದೆ. ಒಳನಾಡಿನ ಕೆಲವು ಜಿಲ್ಲೆಗಳು ಹಾಗೂ ಕರಾವಳಿ ಭಾಗದ ಜಿಲ್ಲೆಗಳು ಸೇರಿದಂತೆ ಕರ್ನಾಟಕದ ಹಲವೆಡೆ ಮಳೆ ಸಕ್ರಿಯವಾಗಿದೆ.
ಕರಾವಳಿಯ ಉಡುಪಿ, ಉತ್ತರ ಕನ್ನಡ ಮತ್ತು ದಕ್ಷಿಣ ಕನ್ನಡ ಜಿಲ್ಲೆಗಳಲ್ಲಿ ಎಡೆಬಿಡದೇ ಮಳೆ ಅಬ್ಬರಿಸುತ್ತಿದೆ. ಮಕ್ಕಳ ಹಿತದೃಷ್ಟಿಯಿಂದ ಶಾಲೆಗಳಿಗೆ ರಜೆ ಘೊಷಿಸಲಾಗಿದೆ. ಕೇವಲ 24 ಗಂಟೆಯಲ್ಲಿ ಮಂಗಳೂರಿನಲ್ಲಿ ಅತ್ಯಧಿಕ ಮಳೆ ದಾಖಲಾಗಿತ್ತು. ದಕ್ಷಿಣ ಕನ್ನಡ, ಉಡುಪಿ ಸೇರಿದಂತೆ ಮಲೆನಾಡಿನ ಚಿಕ್ಕಮಗಳೂರು, ಕೊಡಗು, ಹಾಸನ, ಶಿವಮೊಗ್ಗ, ಸಕಲೇಶ್ವರ, ಹಾಸನ ಮುಂದಾದ ಕಡೆಗಳಲ್ಲಿ ಸಹ ಭರ್ಜರಿ ಮಳೆ ಬೀಳುತ್ತಿದೆ. ಇನ್ನೂ ಕೆಲವು ದಿನ ರಾಜ್ಯದ ವಿವಿಧ ಜಿಲ್ಲೆಗಳಿಗೆ ಧಾರಾಕಾರ ಮಳೆ ಕಂಡು ಬರಲಿದೆ ಎಂದು ಹೇಳಲಾಗುತ್ತಿದೆ.












Click it and Unblock the Notifications