ಬೆಂಗಳೂರಿನ ಅಪಾರ್ಟ್‌ಮೆಂಟ್‌ಗಳಲ್ಲಿ ಆರೋಗ್ಯ ಪರೀಕ್ಷೆಗೆ "hPad" ವ್ಯವಸ್ಥೆ!?
ಬೆಂಗಳೂರು, ಅಕ್ಟೋಬರ್ 09: ಸಿಲಿಕಾನ್ ಸಿಟಿಯ ಅಪಾರ್ಟ್‌ಮೆಂಟ್ ನಿವಾಸಿಗಳು ವೈದ್ಯಕೀಯ ವ್ಯವಸ್ಥೆಯುಳ್ಳ ಆಸ್ಪತ್ರೆಗಳನ್ನು ಹುಡುಕಿ ತಲುಪುವುದು ಕಷ್ಟ. ಕೊರೊನಾವೈರಸ್ ಸಾಂಕ್ರಾಮಿಕ ಪಿಡುಗಿನ ಸಂದರ್ಭದಲ್ಲಿ ಬಹುಪಾಲು ಅಪಾರ್ಟ್‌ಮೆಂಟ್‌ನ ನಿವಾಸಿಗಳು ಈ ರೀತಿ ಸಮಸ್ಯೆಗಳನ್ನು ಎದುರಿಸಿದ್ದಾರೆ.
ವೈದ್ಯಕೀಯ ಪರೀಕ್ಷೆಗಳಾದ ಇಸಿಜಿ, ಬಿಪಿ, ಬಿಎಂಐ ಸೇರಿದಂತೆ ಯಾವುದೇ ರೀತಿ ತಪಾಸಣೆಗೂ ಅಪಾರ್ಟ್‌ಮೆಂಟ್ ನಿನಾಸಿಗಳು ಪರಿತಪಿಸುವಂತಾಗಿತ್ತು. ಪ್ರತಿಬಾರಿ ಆಸ್ಪತ್ರೆ ಅಥವಾ ಕ್ಲಿನಿಕ್ ಹುಡುಕಾಟದ ಸಮಸ್ಯೆ ನಿವಾರಿಸುವ ದೃಷ್ಟಿಯಿಂದ ಐಎಚ್‌ಎಲ್ ಕೇರ್, ಇಂಡಿಯಾ ಹೆಲ್ತ್ ಲಿಂಕ್‌ನ ಸ್ಮಾರ್ಟ್ ಡಿವೈಸ್ ಎಟಿಎಂ ಗಾತ್ರದ ಆರೋಗ್ಯ ಕೇಂದ್ರ ಹೆಚ್‌ಪಾಡ್ (hPod) ಅನ್ನು ಅಳವಡಿಸಲು ನಗರದ ಪೂರ್ವ ಹೈಲ್ಯಾಂಡ್ ಅಪಾರ್ಟ್‌ಮೆಂಟ್ ನಿರ್ಧರಿಸಿದೆ.
"ನಗರದ ಹೊರವಲಯದಲ್ಲಿರುವ ನಮ್ಮ ಅಪಾರ್ಟ್‌ಮೆಂಟ್‌ನಿಂದ ಹತ್ತಿರದ ವೈದ್ಯಕೀಯ ಪರೀಕ್ಷಾ ಕೇಂದ್ರಕ್ಕೆ ಹೋಗುವುದು ದೊಡ್ಡ ಸವಾಲಾಗಿತ್ತು. ಈ ಹೆಚ್‌ಪಾಡ್ ಮೂಲಕ ನಾವು ಪ್ರತಿಬಾರಿ ಆರೋಗ್ಯ ತಪಾಸಣೆಯ ಪ್ರಮುಖ ಪರೀಕ್ಷೆಗಳನ್ನು ಇಲ್ಲಿಯೇ ಮುಗಿಸಿಕೊಳ್ಳಬಹುದು," ಎಂದು ಪೂರ್ವ ಅಪಾರ್ಪ್‌ಮೆಂಟ್ ಮಾಲೀಕರ ಸಂಘದ ಕಾರ್ಯದರ್ಶಿ ವಿಕ್ರಮ್ ತಿಳಿಸಿದರು. ಹೆಚ್‌ಪಾಡ್ ಯಂತ್ರಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.

ಹೆಚ್‌ಪಾಡ್ ಮುಖೇನ ವೈದ್ಯರನ್ನು ಸಂಪರ್ಕಿಸುವುದು
ಹೆಚ್‌ಪಾಡ್ ಯಂತ್ರದ ಮೂಲಕ ವೈದ್ಯಕೀಯ ಪರೀಕ್ಷೆಗಳನ್ನು ಮಾಡಿಸಿಕೊಳ್ಳುವುದು. ಆ ನಂತರ ಅಗತ್ಯವಿದ್ದಲ್ಲಿ ಟೆಲಿಮೆಡಿಸನ್ ಮೂಲಕ ವೈದ್ಯರನ್ನು ಸಂಪರ್ಕಿಸಬಹುದು. ವೈದ್ಯರು ನೀಡಿದ ಔಷಧಗಳನ್ನು ಆನ್‌ಲೈನ್ ಮೂಲಕ ತರಿಸಿಕೊಳ್ಳುವುದು. ಹಾಗೆಯೇ ಅಗತ್ಯವಿದ್ದರೆ ತುರ್ತು ಪರಿಸ್ಥಿತಿಯಲ್ಲಿ ಆಂಬ್ಯುಲೆನ್ಸ್ ಅನ್ನು ಕೂಡಾ ಕರೆಸಿಕೊಳ್ಳಬಹುದು. ಇಂತಹ ವ್ಯವಸ್ಥೆ ಅಳವಡಿಕೆಯಿಂದ ನಮ್ಮ ಅಪಾರ್ಟ್‌ಮೆಂಟ್‌ನಲ್ಲಿರುವ ಸುಮಾರು 4 ಸಾವಿರಕ್ಕೂ ಹೆಚ್ಚು ಜನರು ಸುಲಭವಾಗಿ ಆರೋಗ್ಯ ಪರೀಕ್ಷೆಯನ್ನು ಪಡೆದುಕೊಳ್ಳಬಹುದಾಗಿದೆ ಎಂದು ವಿಕ್ರಮ್ ಹೇಳಿದ್ದಾರೆ.

ಅಪಾರ್ಟ್‌ಮೆಂಟ್‌ನ ನಿವಾಸಿಗಳ ಪರೀಕ್ಷೆಗೆ ಅನುಕೂಲ
"ಅರ್ಥಪೂರ್ಣವಾದ ಆರೈಕೆಗೆ ಸೂಕ್ತವಾದ ಪರಿಸರ ವ್ಯವಸ್ಥೆ ಕಲ್ಪಿಸುವುದು. ಅಪಾರ್ಟ್‌ಮೆಂಟ್‌ನ ನಿವಾಸಿಗಳಿಗೆ ಯಾವುದೇ ತೊಂದರೆಯಿಲ್ಲದೆ ನಿಯಮಿತವಾಗಿ ಆರೋಗ್ಯ ತಪಾಸಣೆಗೆ ಅನುಕೂಲವಾಗಿದೆ. ಇದರ ಜೊತೆಗೆ ಭಾರತದಲ್ಲಿ ಆರೈಕೆ, ಕ್ಷೇಮ ಸಂಸ್ಕೃತಿ ಹರಡಲು ಸಹಾಯ ಮಾಡುತ್ತದೆ. ಎನ್‌ಸಿಡಿಗಳ ಹೊರೆ, ತಡವಾದ ರೋಗನಿರ್ಣಯ ಮತ್ತು ಚಿಕಿತ್ಸೆ ಕೈಬಿಡುವಿಕೆ ಕಡಿಮೆ ಮಾಡಲು ಇದು ಪೂರಕವಾಗಿದೆ," ಎಂದು ಇಂಡಿಯಾ ಹೆಲ್ತ್ ಲಿಂಕ್ ನ ಸಿಇಓ ಡಾ. ಸತ್ಯೇಂದರ್ ಗೋಯೆಲ್ ಹೇಳಿದ್ದಾರೆ.

ಹೆಚ್‌ಪಾಡ್ ಯಂತ್ರದ ಕುರಿತು ಮಾಹಿತಿ
ಐಎಚ್ಎಲ್ ಕೇರ್ ಸಂಸ್ಥೆಯು ಎಟಿಎಂ ಗಾತ್ರದ ಒಂದು ಆರೋಗ್ಯ ಕೇಂದ್ರವನ್ನು ಹೊಂದಿದ್ದು, ಅದನ್ನು "hPod" (ಎಚ್‌ಪಾಡ್) ಎಂದು ಕರೆಯಲಾಗುತ್ತದೆ. ಮನುಷ್ಯನ ರಕ್ತದೊತ್ತಡ, ದೇಹದ ತಾಪಮಾನ, ದೇಹದ ದ್ರವ್ಯರಾಶಿ ಸಂಯೋಜನೆ, ಪಲ್ಸ್, ಎಸ್‌ಪಿಒ2 (SPO2), ಮತ್ತು ಇಸಿಜಿ (ECG) ಯಂತಹ 20 ಪ್ರಮುಖ ನಿಯತಾಂಕಗಳನ್ನು ಪರೀಕ್ಷಿಸುವ ಸಾಮರ್ಥ್ಯವು ಈ ಯಂತ್ರಕ್ಕೆ ಇರುತ್ತದೆ.
ಸಾಫ್ಟ್ ವೇರ್ ಪ್ಲಾಟ್‌ಫಾರ್ಮ್ ಕಿಯೋಸ್ಕ್ ಮೂಲಕ ರೋಗಿಗಳನ್ನು ನೆರೆಹೊರೆಯ ಪ್ರಮುಖ ಆಸ್ಪತ್ರೆಗಳು, ಔಷಧಾಲಯಗಳು ಮತ್ತು ಪ್ರಯೋಗಾಲಯಗಳಿಗೆ ತಕ್ಷಣ ಸಂಪರ್ಕಿಸುವ ಸೌಲಭ್ಯ ಒಳಗೊಂಡಿದೆ. ಐಎಚ್ಎವ್ ಕೇರ್ ಪ್ಲಾಟ್‌ಫಾರ್ಮ್ ಗೃಹ ಆರೋಗ್ಯ ಸೇವೆಗಳನ್ನು ನಿವಾಸಿಗಳ ಮನೆಬಾಗಿಲಿಗೆ ತರುತ್ತದೆ. ಇಂಡಿಯಾ ಹೆಲ್ತ್ ಲಿಂಕ್‌ನಿಂದ ರೂಪುಗೊಂಡಿರುವ ಇದು ಸುಲಭ ಪ್ರವೇಶದ ಹಾರ್ಡ್‌ವೇರ್ (ಎಚ್‌ಡಬ್ಲ್ಯೂ) ಮತ್ತು ಎಪಿಐ ಮೊದಲ ಇಂಟಿಗ್ರೇಟೆಡ್ ಸಾಫ್ಟ್ ವೇರ್ (ಎಸ್‌ಡಬ್ಲ್ಯೂ) ಸಂಯೋಜನೆಯನ್ನು ಹೊಂದಿರುವ ಮೊದಲ ಆರೋಗ್ಯ ಪರಿಹಾರವಾಗಿದೆ ಎಂದು ಇಂಡಿಯಾ ಹೆಲ್ತ್ ಲಿಂಕ್ ನ ಸಿಇಓ ಡಾ. ಸತ್ಯೇಂದರ್ ಗೋಯೆಲ್ ತಿಳಿಸಿದ್ದಾರೆ.

ನಿಮ್ಮದೇ ಮನೆ ಬಾಗಿಲಿಗೆ ಆರೋಗ್ಯ ಸೇವೆ
ವೈದ್ಯರು, ಫಿಟ್ನೆಸ್ ಕನ್ಸಲ್ಟೆಂಟ್‌ಗಳು ಮತ್ತು ನೆರೆಹೊರೆಯ 'ಆರೋಗ್ಯ' ಪಾಲುದಾರರ ಸಹಯೋಗದಲ್ಲಿ ಮನೆ ಬಾಗಿಲಲ್ಲಿ ಪ್ರಯೋಗಾಲಯ ಮತ್ತು ಫಾರ್ಮಾಸಿ ಸೇವೆಗಳೊಂದಿಗೆ ತ್ವರಿತ ಸಮಾಲೋಚನೆಗೆ ಇದು ಉತ್ತಮ ವೇದಿಕೆಯನ್ನು ಕಲ್ಪಿಸುತ್ತದೆ ಎಂದು ಇಂಡಿಯಾ ಹೆಲ್ತ್ ಲಿಂಕ್‌ನ ಸೇಲ್ಸ್ ಮ್ಯಾನೇಜರ್ ಉಮೇಶ್ ದೊಡ್ಡವಾಡ ಹೇಳಿದ್ದಾರೆ. "ಯೋಗ, ಜುಂಬಾ, ಧ್ಯಾನ ಮತ್ತು ಪ್ರಕೃತಿ ಚಿಕಿತ್ಸೆಗಳಂತಹ ಆಧುನಿಕ ಚಿಕಿತ್ಸೆಗಳು ಹಾಗೂ ಆಧುನಿಕ ಆರೋಗ್ಯ ಔಷಧಿಗಳೊಂದಿಗೆ ನಿವಾಸಿಗಳಿಗೆ ಸಮಗ್ರ ಆರೋಗ್ಯ ರಕ್ಷಣೆ ಆಯ್ಕೆ ಒದಗಿಸುತ್ತದೆ. ಸಮುದಾಯದ ಆರೋಗ್ಯ ಮತ್ತು ಫಿಟ್ ಆಗಿಡಲು ಆರೋಗ್ಯ ಪಾಲುದಾರರಿಗೆ ಬೆಂಬಲವಾಗಿ ಆರೋಗ್ಯ ಕಾರ್ಯಕ್ರಮನ್ನು ಸಕ್ರಿಯಗೊಳಿಸಲು ಸಮುದಾಯ ಆರೋಗ್ಯದ ಒಳನೋಟ ನೀಡುತ್ತದೆ," ಎಂದರು
ತನ್ನ ನೆರೆಹೊರೆಯ ಸೇವಾ ಪಾಲುದಾರರಾದ ಅಸ್ಟ್ರಾ ಹಾಸ್ಪಿಟಲ್, ಐ ನರ್ಸ್ ಹೋಮ್ ಹೆಲ್ತ್ ಕೇರ್ ಮತ್ತು ಲೈಫ್‌ಕೇರ್ ಮೆಡಿಕಲ್ ಸಪ್ಲೈಸ್ ಜತೆಗೆ ಐಎಚ್ಎಲ್ ತನ್ನ ಪ್ರಶಸ್ತಿ ವಿಜೇತ ಸೇವೆಗಳನ್ನು ಕನಕಪುರ ರಸ್ತೆಯಲ್ಲಿರುವ ಪೂರ್ವ ಹೈಲ್ಯಾಂಡ್ ಅಪಾರ್ಟ್‌ಮೆಂಟ್‌ನಲ್ಲಿ ಆರಂಭಿಸಿದೆ. ಮುಂದಿನ ತ್ರೈಮಾಸಿಕದಲ್ಲಿ ಬೆಂಗಳೂರು ನಗರದಾದ್ಯಂತ 50ಕ್ಕೂ ಹೆಚ್ಚು ಅಪಾರ್ಟ್‌ಮೆಂಟ್‌ಗಳಲ್ಲಿ ಐಎಚ್‌ಎಲ್ ಕೇರ್ ಪರಿಹಾರಗಳನ್ನು ನಿಯೋಜಿಸಲು ಕಂಪನಿಯು ಯೋಜಿಸುತ್ತಿದೆ. 2022ರ ಅಂತ್ಯದ ವೇಳೆಗೆ ಎಲ್ಲ ಮೆಟ್ರೋ ನಗರಗಳನ್ನು ಒಳಗೊಳ್ಳಲು ತ್ವರಿತ ವಿಸ್ತರಣೆ ಯೋಜನೆಯನ್ನು ಹೊಂದಿದೆ.












Click it and Unblock the Notifications