Iblur Junction Flyover: ಇಬ್ಲೂರು ಜಂಕ್ಷನ್‌ನಲ್ಲಿ 800 ಮೀಟರ್ ಉದ್ದದ ಮೇಲ್ಸೇತುವೆ ನಿರ್ಮಾಣ: ಜಿಬಿಎ
ಬೆಂಗಳೂರು: ನಗರದ ಸಂಚಾರ ದಟ್ಟಣೆ ಹಾಗೂ ಪಾದಚಾರಿ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳುವ ಉದ್ದೇಶದಿಂದ ಗ್ರೇಟರ್ ಬೆಂಗಳೂರು ಪ್ರಾಧಿಕಾರದ (ಜಿಬಿಎ) ಮುಖ್ಯ ಆಯುಕ್ತ ಮಹೇಶ್ವರ್ ರಾವ್ ಅವರು ಮಂಗಳವಾರ ಬೆಳಿಗ್ಗೆ ಹೊರ ವರ್ತುಲ ರಸ್ತೆಯ (ಒಆರ್‌ಆರ್) ಸಿಲ್ಕ್ ಬೋರ್ಡ್ ಜಂಕ್ಷನ್‌ನಿಂದ ಕೆ.ಆರ್.ಪುರದವರೆಗೆ ಸ್ಥಳ ಪರಿಶೀಲನೆ ನಡೆಸಿದರು. ಪರಿಶೀಲನೆಯ ವೇಳೆ ಸಂಚಾರ ಸುಧಾರಣೆ, ಮೂಲಸೌಕರ್ಯ ಅಭಿವೃದ್ಧಿ ಹಾಗೂ ಪಾದಚಾರಿ ಸುರಕ್ಷತೆಗೆ ಸಂಬಂಧಿಸಿದಂತೆ ಸಂಬಂಧಪಟ್ಟ ಅಧಿಕಾರಿಗಳಿಗೆ ಹಲವು ಮಹತ್ವದ ನಿರ್ದೇಶನಗಳನ್ನು ನೀಡಿದರು.
ಇಬ್ಲೂರು ಜಂಕ್ಷನ್‌ನಲ್ಲಿ ಹೆಚ್ಚುತ್ತಿರುವ ವಾಹನ ಸಂಚಾರ ದಟ್ಟಣೆಯನ್ನು ಕಡಿಮೆ ಮಾಡುವ ಸಲುವಾಗಿ ಸುಮಾರು 800 ಮೀಟರ್ ಉದ್ದದ ಮೇಲ್ಸೇತುವೆ ನಿರ್ಮಾಣಕ್ಕೆ ಯೋಜನೆ ರೂಪಿಸುವಂತೆ ಅಧಿಕಾರಿಗಳಿಗೆ ಸೂಚಿಸಿದರು. ಈ ಯೋಜನೆಗೆ ಸಂಬಂಧಿಸಿದಂತೆ ಅಂದಾಜು ವೆಚ್ಚ, ಕಾಮಗಾರಿ ಅವಧಿ ಹಾಗೂ ನಿರ್ಮಾಣ ಮಾದರಿ ಕುರಿತು ಸಮಗ್ರ ವರದಿ ಸಿದ್ಧಪಡಿಸುವಂತೆ ನಿರ್ದೇಶನ ನೀಡಲಾಗಿದೆ. ಜೊತೆಗೆ ಸಿಲ್ಕ್ ಬೋರ್ಡ್ ಜಂಕ್ಷನ್‌ನ ಸಮಗ್ರ ಅಭಿವೃದ್ಧಿಗಾಗಿ ದಕ್ಷಿಣ ಪಾಲಿಕೆ ಮತ್ತು ಮೆಟ್ರೋ ಇಲಾಖೆಯೊಂದಿಗೆ ಸಮನ್ವಯ ಸಾಧಿಸಿ ಕಾರ್ಯನಿರ್ವಹಿಸುವಂತೆ ಸೂಚನೆ ನೀಡಿದರು.

ಮೆಟ್ರೋ ನಿಲ್ದಾಣಗಳ ಬಳಿ ಪೈಲ್ ಕ್ಯಾಪ್ ಕಾಮಗಾರಿಯಿಂದ ರಸ್ತೆ ಅಗಲ ಕುಗ್ಗಿರುವ ಸಮಸ್ಯೆಯನ್ನು ತಕ್ಷಣ ಸರಿಪಡಿಸಿ, ಸಂಚಾರಕ್ಕೆ ಅನುಕೂಲವಾಗುವಂತೆ ರಸ್ತೆ ಸಮತಟ್ಟಾಗಿಸಲು ಮಹೇಶ್ವರ್ ರಾವ್ ಆದೇಶಿಸಿದ್ದಾರೆ. ಇದರಿಂದ ವಾಹನ ಸವಾರರಿಗೆ ಮತ್ತು ಸಾರ್ವಜನಿಕರಿಗೆ ಉಂಟಾಗುತ್ತಿರುವ ಅಸೌಕರ್ಯ ಕಡಿಮೆಯಾಗಲಿದೆ ಎಂದು ತಿಳಿಸಿದರು.
ಪಾದಚಾರಿ ಮಾರ್ಗ ಶೀಘ್ರವೇ ಪೂರ್ಣ
ಪಾದಚಾರಿಗಳ ಸುರಕ್ಷತೆ ಹಾಗೂ ಸುಗಮ ಸಂಚಾರಕ್ಕೆ ಹೆಚ್ಚಿನ ಆದ್ಯತೆ ನೀಡಲಾಗಿದ್ದು, ಇಬ್ಲೂರು ಮೆಟ್ರೋ ನಿಲ್ದಾಣದ ಬಳಿ ಸುಮಾರು 2 ಕಿಲೋಮೀಟರ್ ಉದ್ದದ ಪಾದಚಾರಿ ಮಾರ್ಗವನ್ನು ಶೀಘ್ರ ಪೂರ್ಣಗೊಳಿಸುವಂತೆ ಸೂಚಿಸಿದರು. ಅಗತ್ಯವಿರುವ ಸ್ಥಳಗಳಲ್ಲಿ ಸ್ಕೈವಾಕ್ ನಿರ್ಮಾಣಕ್ಕೆ ಸಂಬಂಧಿಸಿದ ಪಟ್ಟಿ ಸಲ್ಲಿಸುವಂತೆ ಅಧಿಕಾರಿಗಳಿಗೆ ಸೂಚನೆ ನೀಡಲಾಗಿದ್ದು, ಕಾಡುಬೀಸನಹಳ್ಳಿ ಬಳಿ ರಾಜಕಾಲುವೆ ಅಗಲೀಕರಣ ಮಾಡಿ ಪಾದಚಾರಿ ಮಾರ್ಗ ನಿರ್ಮಾಣಕ್ಕೂ ಆದೇಶಿಸಿದರು.
ಇನ್ನು ಫೆಬ್ರವರಿ ಅಂತ್ಯದೊಳಗೆ ಡಬಲ್ ಡೆಕ್ಕರ್ ರಸ್ತೆ ಕಾಮಗಾರಿ ಪೂರ್ಣಗೊಳಿಸುವುದು, ಎಚ್.ಎಸ್.ಆರ್.ಜಂಕ್ಷನ್ ಸರ್ವೀಸ್ ರಸ್ತೆಗೆ ಡಾಂಬರೀಕರಣ, ಕಾರ್ತಿಕ್ ನಗರ ಮೆಟ್ರೋ ನಿಲ್ದಾಣದ ಬಳಿ ಪಾದಚಾರಿ ಮಾರ್ಗ ಸ್ವಚ್ಛತೆ ಹಾಗೂ ಸೇಲಂ ಬ್ರಿಡ್ಜ್ ಬಳಿ ಪೇ ಪಾರ್ಕಿಂಗ್ ವ್ಯವಸ್ಥೆ ಜಾರಿಗೊಳಿಸುವಂತೆ ಮುಖ್ಯ ಆಯುಕ್ತರು ನಿರ್ದೇಶನ ನೀಡಿದ್ದಾರೆ. ಈ ಕ್ರಮಗಳಿಂದ ಹೊರ ವರ್ತುಲ ರಸ್ತೆ ವ್ಯಾಪ್ತಿಯಲ್ಲಿ ಸಂಚಾರ ಸುಧಾರಣೆ ಹಾಗೂ ಸಾರ್ವಜನಿಕರಿಗೆ ಉತ್ತಮ ಮೂಲಸೌಕರ್ಯ ಒದಗಿಸುವ ನಿರೀಕ್ಷೆಯಿದೆ.
ಇಬ್ಲೂರು ಜಂಕ್ಷನ್‌ನಲ್ಲಿ 800 ಮೀಟರ್ ಮೇಲ್ಸೇತುವೆ ನಿರ್ಮಾಣವಾದರೆ ಈಗಿರುವ ಸಂಚಾರ ಕುತ್ತಿಗೆ ಬಹುತೇಕ ನಿವಾರಣೆಯಾಗಲಿದೆ. ಸಿಲ್ಕ್ ಬೋರ್ಡ್-ಕೆ.ಆರ್.ಪುರಂ ನಡುವಿನ ಪ್ರಮುಖ ಮಾರ್ಗದಲ್ಲಿ ವಾಹನಗಳು ನಿಂತು-ನಿಂತು ಸಾಗುವ ಪರಿಸ್ಥಿತಿ ಕಡಿಮೆಯಾಗಿ, ಪ್ರಯಾಣ ಸಮಯವು ಗಮನಾರ್ಹವಾಗಿ ಇಳಿಯಲಿದೆ. ಐಟಿ ಕಾರಿಡಾರ್‌ಗೆ ಹೋಗುವ ಉದ್ಯೋಗಿಗಳು ಹಾಗೂ ವಿಮಾನ ನಿಲ್ದಾಣ ಸಂಪರ್ಕ ಮಾರ್ಗ ಬಳಸುವವರಿಗೆ ಇದು ದೊಡ್ಡ ಅನುಕೂಲವಾಗಲಿದೆ.
ಸಿಲ್ಕ್ ಬೋರ್ಡ್ ಜಂಕ್ಷನ್ ಸಮಗ್ರ ಅಭಿವೃದ್ಧಿ ಮೂಲಕ ವಿವಿಧ ಇಲಾಖೆಗಳ ಕಾಮಗಾರಿಗಳು ಸಮನ್ವಯದಲ್ಲಿ ನಡೆಯುವುದರಿಂದ, ರಸ್ತೆ ಕಿತ್ತು ಹಾಕಿ ಮತ್ತೆ ಹಾಕುವಂತಹ ಸಮಸ್ಯೆಗಳು ತಪ್ಪುತ್ತವೆ. ಇದರಿಂದ ಹಣದ ವ್ಯರ್ಥ ಮತ್ತು ಸಾರ್ವಜನಿಕರಿಗೆ ಆಗುವ ಅನಗತ್ಯ ತೊಂದರೆ ಕಡಿಮೆಯಾಗುತ್ತದೆ.ಇದು ಅಪಘಾತಗಳ ಸಾಧ್ಯತೆಯನ್ನು ಕಡಿಮೆ ಮಾಡಿ, ದ್ವಿಚಕ್ರ ವಾಹನ ಸವಾರರು ಹಾಗೂ ಸಾರ್ವಜನಿಕ ಬಸ್‌ಗಳಿಗೆ ಹೆಚ್ಚು ಸುರಕ್ಷಿತ ಸಂಚಾರ ಒದಗಿಸುತ್ತದೆ.












Click it and Unblock the Notifications