ಈ ಪ್ರದೇಶ ಬೆಂಗಳೂರಿನ ಹೊಸ ಸ್ಟಾರ್ಟ್ ಅಪ್ ಹಬ್, ಆಸ್ತಿ ಮೌಲ್ಯ ಏರಿಕೆ
ಬೆಂಗಳೂರು, ಜನವರಿ, 01 : ಉದ್ಯಾನ ನಗರಿ ಬೆಂಗಳೂರಿನ ಆಗ್ನೇಯಕ್ಕಿರುವ ಪ್ರದೇಶ ಶಾಂತ ವಾತಾವರಣ ಹೊಂದಿದೆ. ಈ ಪ್ರದೇಶ ನಿವಾಸಿಗಳಿಗೆ ನೆಚ್ಚಿನ ತಾಣವಾಗಿದೆ. ಆದರೆ ಈ ಪ್ರದೇಶ ಈಗ ಐಟಿ ಮಂದಿಯ ಗಮನ ಸೆಳೆದಿದೆ. ನಗರದ ಹೊಸ ಸ್ಟಾರ್ಟ್ ಅಪ್ ಹಬ್ ಆಗಿ ಪ್ರದೇಶ ಅಭಿವೃದ್ಧಿಯಾಗುತ್ತಿದ್ದು, ಆಸ್ತಿ ಮೌಲ್ಯದಲ್ಲೂ ಏರಿಕೆಯಾಗಿದೆ. 2 ಬಿಹೆಚ್‌ಕೆ ಮನೆಯನ್ನು 35 ಸಾವಿರ ರೂ. ದರಕ್ಕೆ ಬಾಡಿಗೆಗೆ ಪಡೆದ ಮುಂಬೈ ಮೂಲದ ವ್ಯಕ್ತಿ ಆಸ್ತಿ ಮೌಲ್ಯ ಹೆಚ್ಚಳದ ಕುರಿತು ಹುಬ್ಬೇರಿಸಿದ್ದಾರೆ.
ಹೆಚ್ಎಸ್ಆರ್ ಲೇಔಟ್ ಬೆಂಗಳೂರು ನಗರದ ಹೊಸ ಸ್ಟಾರ್ಟ್ ಅಪ್ ಹಬ್ ಆಗಿ ಬದಲಾಗುತ್ತಿದೆ. ರಜನೀಶ್ ಸಿಂಗ್ ಈ ಪ್ರದೇಶದಲ್ಲಿ 2 ಬಿಹೆಚ್‌ಕೆ ಮನೆಯನ್ನು 35 ಸಾವಿರ ರೂ.ಗಳಿಗೆ ಬಾಡಿಗೆಗೆ ಪಡೆದರು. ಮನೆ ಬಾಡಿಗೆ ವಿಚಾರದಲ್ಲಿ ಮುಂಬೈ ದುಬಾರಿ ಎಂದುಕೊಂಡಿದ್ದೆ. ಬೆಂಗಳೂರು ಅದನ್ನು ಮೀರಿಸುತ್ತಿದೆ ಎಂದು ಹೇಳಿದ್ದಾರೆ.

ಪ್ರಶಾಂತವಾದ ಪರಿಸರ, ಸುತ್ತಲೂ ಹಸಿರು ವಾತಾವರಣ ಹೆಚ್ಎಸ್ಆರ್ ಲೇಔಟ್ ನೆಚ್ಚಿನ ತಾಣವಾಗಿ ಬದಲಾಗುತ್ತಿದೆ. ಐಟಿ ಮಂದಿಯ ಕಣ್ಣು ಈ ಪ್ರದೇಶದ ಮೇಲೆ ಬಿದ್ದಿದ್ದು, ಈಗ ಸ್ಟಾರ್ಟ್ ಅಪ್ ಹಬ್ ಆಗಿ ಬದಲಾಗುತ್ತಿದೆ. ಆದ್ದರಿಂದ ಮನೆ ಬಾಡಿಗೆ, ಆಸ್ತಿ ಮೌಲ್ಯದಲ್ಲಿ ಶೇ 30ರಷ್ಟು ಹೆಚ್ಚಳವಾಗಿದೆ ಎಂದು ವರದಿಗಳು ಹೇಳುತ್ತಿವೆ.
ಉತ್ತಮವಾಗಿ ಬೆಳವಣಿಗೆ: ವಸತಿ ಬಡಾವಣೆಯಾಗಿ 1985ರಲ್ಲಿ ಮೊದಲು ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರ (ಬಿಡಿಎ) ಹೆಚ್ಎಸ್ಆರ್ ಲೇಔಟ್ ನಿರ್ಮಾಣ ಆರಂಭಿಸಿತು. ವಿಶಾಲವಾದ ರಸ್ತೆಗಳು, ಹಸಿರು ವಾತಾವರಣ, ಉತ್ತಮ ಸಾರಿಗೆ ಸಂಪರ್ಕ ಜನರನ್ನು ಸೆಳೆಯಿತು. ಈಗ ಲೇಔಟ್ ಇನ್ನಷ್ಟು ಅಭಿವೃದ್ಧಿಯಾಗಿ ಐಟಿ ಉದ್ಯೋಗಿಗಳನ್ನು ಸೆಳೆಯುತ್ತಿದೆ.
ಎಲೆಕ್ಟ್ರಾನಿಕ್ ಸಿಟಿ, ಸರ್ಜಾಪುರ ರಸ್ತೆ, ಹೊರ ವರ್ತುಲ ರಸ್ತೆಗಳಲ್ಲಿ ವಿಶೇಷ ಆರ್ಥಿಕ ವಲಯವಿದ್ದು, ಐಟಿ ಹಬ್ ಆಗಿದೆ. ಕಳೆದ ಐದು ವರ್ಷಗಳಿಂದ ಹೆಚ್ಎಚ್‌ಆರ್ ಲೇಔಟ್ ಕೇವಲ ವಸತಿ ಪ್ರದೇಶವಾಗಿ ಉಳಿದಿಲ್ಲ. ಇದು ವಾಣಿಜ್ಯ ಉದ್ದೇಶಕ್ಕೆ ಹೆಚ್ಚಾಗಿ ಬಳಕೆಯಾಗುತ್ತಿದೆ.
ಹಲವಾರು ಉದ್ಯಮಿಗಳು ಸ್ಟಾರ್ಟ್ ಅಪ್ ಆರಂಭಿಸಲು ಇಂದಿರಾ ನಗರ, ಹೆಚ್ಎಚ್‌ಆರ್ ಲೇಔಟ್‌ಗಳಲ್ಲಿ ಮನೆಗಳನ್ನು ಬಾಡಿಗೆಗೆ ಪಡೆಯುತ್ತಿದ್ದಾರೆ. ಕೋರಮಂಗಲ, ಇಂದಿರಾ ನಗರದಲ್ಲಿ ಆಸ್ತಿ ಮೌಲ್ಯದಲ್ಲಿ ಭಾರೀ ಏರಿಕೆಯಾದ ಬಳಿಕ ಈಗ ಜನರು ಹೆಚ್ಎಚ್‌ಆರ್ ಲೇಔಟ್ ಕಡೆ ಮುಖ ಮಾಡಿದ್ದಾರೆ ಎನ್ನುತ್ತಾರೆ ಸ್ಥಳೀಯ ರಿಯಲ್ ಎಸ್ಟೇಟ್ ಉದ್ಯಮಿ.
ಕೋರಮಂಗಲಕ್ಕೆ ಹೋಲಿಕೆ ಮಾಡಿದರೆ ಹೆಚ್ಎಚ್‌ಆರ್ ಲೇಔಟ್‌ನಲ್ಲಿ ಜನಸಂದಣಿ, ಜನರ ಒತ್ತಡ ಕಡಿಮೆ ಇದೆ. ಆದ್ದರಿಂದ ಸ್ಟಾಟ್ ಅಪ್‌ಗಳು ಇಲ್ಲಿ ಬಾಡಿಗೆಗೆ ಮನೆಗಳನ್ನು ಪಡೆಯುತ್ತಿದ್ದು, ಆಸ್ತಿ ಮೌಲ್ಯ ಹೆಚ್ಚಳಕ್ಕೆ ಕಾರಣವಾಗಿದೆ ಎಂದು ಅವರು ವಿವರಣೆ ನೀಡಿದ್ದಾರೆ.
ಈಗಾಗಲೇ ಝೋಲೋ ಸೇರಿದಂತೆ ವಿವಿಧ ಉದ್ಯಮಗಳು ಹೆಚ್ಎಚ್‌ಆರ್ ಲೇಔಟ್ ಅನ್ನು ಕೇಂದ್ರ ಸ್ಥಾನವಾಗಿ ಮಾಡಿಕೊಂಡಿವೆ. ಉತ್ತಮವಾದ ಕಟ್ಟಡಗಳು, ಸಾರಿಗೆ ಸಂಪರ್ಕ ಮುಂತಾದ ಕಾರಣಕ್ಕೆ ಈ ಕಡೆ ಜನರು ಹೆಚ್ಚಿನ ಗಮನ ಹರಿಸುತ್ತಿದ್ದಾರೆ. ಕಳೆದ ಎರಡು ವರ್ಷಗಳಿಂದ ಲೇಔಟ್ ವಸತಿ ಮತ್ತು ವಾಣಿಜ್ಯ ಚಟುವಟಿಕೆಯ ನೆಚ್ಚಿನ ತಾಣವಾಗಿದೆ ಎಂದು ರಿಯಲ್ ಎಸ್ಟೇಟ್ ಉದ್ಯಮಿಗಳು ಹೇಳುತ್ತಾರೆ.
ಇಂದಿರಾ ನಗರದಲ್ಲಿ ವಾಣಿಜ್ಯ ಸಂಕೀರ್ಣಗಳು ಚದರ ಅಡಿಗೆ ₹300 ಇದ್ದರೆ, ಹೆಚ್ಎಸ್‌ಆರ್ ಲೇಔಟ್‌ನಲ್ಲಿ ₹200 ಇದೆ ಎಂದು ಹೇಳುತ್ತಾರೆ. ಕಳೆದ ಕೆಲವು ತಿಂಗಳುಗಳಿಂದ ಈ ಭಾಗದಲ್ಲಿ ಮನೆಗಳ ಬಾಡಿಗೆ ಶೇ 8ರಷ್ಟು ಹೆಚ್ಚಾಗಿದೆ. ಕೋರಮಂಗಲ ಹೊರತುಪಡಿಸಿದರೆ ಈ ಪ್ರದೇಶ ವೇಗವಾಗಿ ಬೆಳೆಯುತ್ತಿದೆ.












Click it and Unblock the Notifications