ಬೆಂಗಳೂರಲ್ಲಿ ಬಿಸಿಲಝಳದ ಜೊತೆ ಏರುತ್ತಿದೆ ಮನೆ ಬಾಡಿಗೆ!
ಬೆಂಗಳೂರು, ಮೇ 06: ಉದ್ಯಾನ ನಗರಿ ಬೆಂಗಳೂರು ಈ ವರ್ಷ ದಾಖಲೆಯ ತಾಪಮಾನಕ್ಕೆ ಸಾಕ್ಷಿಯಾಗಿದೆ. ಕೂಲ್ ಸಿಟಿ ಖ್ಯಾತಿಯ ನಗರದಲ್ಲಿ ಈ ಬಾರಿಯ ಬಿಸಿಲು ಜನರನ್ನು ಕಂಗೆಡಿಸಿದೆ. ಇದರ ನಡುವೆಯೇ ಜನರ ಜೇಬಿಗೆ ಕತ್ತರಿ ಬೀಳುವ ಮಾಹಿತಿಯೊಂದು ಹೊರಬಿದ್ದಿದೆ.
ದೇಶ, ವಿದೇಶದ ಹಲವು ಜನರಿಗೆ ಉದ್ಯೋಗ, ಶಿಕ್ಷಣಕ್ಕೆ ನೆಲೆಯಾಗಿರುವ ಬೆಂಗಳೂರು ನಗರದಲ್ಲಿ ಮನೆ ಬಾಡಿಗೆ ಹೆಚ್ಚಳವಾಗಿದೆ. ದೇಶದ ಇತರ ನಗರಗಳಿಗೆ ಹೋಲಿಕೆ ಮಾಡಿದರೆ ಮನೆ ಬಾಡಿಗೆ ಹೆಚ್ಚಳದಲ್ಲಿ ನಗರ 2ನೇ ಸ್ಥಾನದಲ್ಲಿದೆ.

ಕಳೆದ ಮೂರು ತಿಂಗಳಿನಲ್ಲಿಯೇ ನಗರಲ್ಲಿ ಮನೆಗಳ ಬಾಡಿಗೆ ಶೇ 8ರಷ್ಟು ಏರಿಕೆಯಾಗಿದೆ. ಇದು ಮಧ್ಯಮ ವರ್ಗದ ಜನರಿಗೆ ಆರ್ಥಿಕ ಹೊರೆಯಾಗಿದೆ. ಮನೆಗಳಿಗೆ ಭಾರೀ ಬೇಡಿಕೆ ಬರುತ್ತಿದ್ದು, ಮಾಲೀಕರು ಸಹಜವಾಗಿಯೇ ಮನೆ ಬಾಡಿಗೆ ಹೆಚ್ಚಳ ಮಾಡಿದ್ದಾರೆ.
ಯಾವ ಪ್ರದೇಶದಲ್ಲಿ ಎಷ್ಟು?; ಮಾಹಿತಿಗಳ ಪ್ರಕಾರ ಬೆಂಗಳೂರು ನಗರದಲ್ಲಿ 2022ರ ಅಂತ್ಯಕ್ಕೆ 2 ಬಿಹೆಚ್‌ಕೆಗೆ ವೈಟ್‌ಫೀಲ್ಡ್ ಪ್ರದೇಶದಲ್ಲಿ 22,500, ಸರ್ಜಾಪುರದಲ್ಲಿ 24,000 ರೂ. ಬಾಡಿಗೆ ಇತ್ತು. 2023ರ ಅಂತ್ಯಕ್ಕೆ ವೈಟ್‌ಫೀಲ್ಡ್ ಪ್ರದೇಶದಲ್ಲಿ 30,200, ಸರ್ಜಾಪುರದಲ್ಲಿ 31,600 ರೂ.ಗಳಿಗೆ ಏರಿಕೆಯಾಗಿತ್ತು. 2024ರಲ್ಲಿ ಸರ್ಜಾಪುರದಲ್ಲಿ 34,000 ಮತ್ತು ವೈಟ್‌ಫೀಲ್ಡ್‌ನಲ್ಲಿ 32,500 ರೂ.ಗಳಿಗೆ ಏರಿಕೆ ಕಂಡಿದೆ.
Anarock research ಸಂಸ್ಥೆಯ ವರದಿ ಪ್ರಕಾರ ದೇಶದಲ್ಲಿ ನೋಯ್ಡಾ ಹೊರತುಪಡಿಸಿದರೆ ಬೆಂಗಳೂರು ನಗರದಲ್ಲಿಯೇ ಈ ಮೂರು ತಿಂಗಳಿನಲ್ಲಿ ಮನೆಗಳ ಬಾಡಿಗೆ ದರ ಹೆಚ್ಚಳವಾಗಿದೆ. ಈ ಅವಧಿಯಲ್ಲಿ ಚೆನ್ನೈನಲ್ಲಿ 4, ಹೈದರಾಬಾದ್‌ನಲ್ಲಿ ಶೇ 5ರಷ್ಟು ಹೆಚ್ಚಳ ಕಂಡುಬಂದಿದೆ. ಆದರೆ ಬೆಂಗಳೂರು ನಗರದಲ್ಲಿ ಶೇ 8ರಷ್ಟು ಏರಿಕೆಯಾಗಿದೆ.
ಬೆಂಗಳೂರು ನಗರ ಐಟಿ ಹಬ್ ಆಗಿದ್ದು, ಮನೆ ಬಾಡಿಗೆ ಹೆಚ್ಚಳದಲ್ಲಿ ಪ್ರಮುಖ ಪಾತ್ರ ವಹಿಸುತ್ತಿದೆ. ಐಟಿಯಿಂದಾಗಿಯೇ ನಗರದಲ್ಲಿ ಮನೆ ಬಾಡಿಗೆ ಶೇ 4.45ರಷ್ಟು ಹೆಚ್ಚಳವಾಗುತ್ತಿದೆ ಎಂದು ವರದಿ ಅಂದಾಜಿಸಿದೆ. ಐಟಿ ಕಂಪನಿಗಳು ಮನೆಯಿಂದ ಕೆಲಸ ಮಾಡುವ ಸೌಲಭ್ಯ ತೆಗೆದು ಹಾಕುತ್ತಿದ್ದು, ವಾರಕ್ಕೆ 2 ದಿನ, 3 ದಿನ ಕಛೇರಿಗೆ ಬರುವುದು ಕಡ್ಡಾಯ ಮಾಡುತ್ತಿದೆ. ಇದರಿಂದಾಗಿ ಬೆಂಗಳೂರಿಗೆ ಜನರ ಆಗಮನ ಹೆಚ್ಚಾಗುತ್ತಿದ್ದು, ಮನೆ ಬಾಡಿಗೆಯನ್ನು ಹೆಚ್ಚಳ ಮಾಡಲಾಗುತ್ತಿದೆ.
ಕೋವಿಡ್ ಪರಿಸ್ಥಿತಿಯ ಬಳಿಕ ಮಹಾನಗರಗಳಲ್ಲಿ ಮನೆ ಬಾಡಿಗೆಯಲ್ಲಿ ಹೆಚ್ಚಳ ಕಂಡುಬಂದಿದೆ ಎಂದು ವರದಿ ಹೇಳಿದೆ. ಅದರಲ್ಲೂ ಪ್ರಮುಖವಾಗಿ ಐಟಿ ಕಂಪನಿಗಳು ಹೆಚ್ಚಿರುವ ಬೆಂಗಳೂರು, ಗುರುಗ್ರಾಮ, ಪುಣೆ, ನೋಯ್ಡಾ, ಮುಂಬೈ ಮುಂತಾದ ನಗರಗಳಲ್ಲಿ ಮನೆಗಳಿಗೆ ಬೇಡಿಕೆ, ಬಾಡಿಗೆ ಎರಡೂ ಹೆಚ್ಚಳವಾಗುತ್ತಿದೆ.
2023ಕ್ಕೆ ಹೋಲಿಕೆ ಮಾಡಿದರೆ 2024ರ ಮೊದಲ ಮೂರು ತಿಂಗಳಿನಲ್ಲಿ ಬೆಂಗಳೂರು ನಗರದಲ್ಲಿ ಮನೆಗಳ ಬಾಡಿಗೆ ಏರಿಕೆ ಕಂಡಿದೆ. ಕಳೆದ ವರ್ಷ ಮುಂಗಾರು ಕೈಕೊಟ್ಟ ಪರಿಣಾಮ ಬೆಂಗಳೂರು ನಗರದಲ್ಲಿ ಈ ಬಾರಿ ನೀರಿನ ಕೊರತೆ ಉಂಟಾಗಿದೆ. ಆದರೆ ಮನೆಗಳ ಬಾಡಿಗೆ ಏರಿಕೆ ಮೇಲೆ ಇದು ಯಾವುದೇ ಪರಿಣಾಮ ಬೀರಿಲ್ಲ ಎಂದು ವಿಶ್ಲೇಷಿಸಲಾಗಿದೆ.
ಬೆಂಗಳೂರು ಮಾತ್ರವಲ್ಲ ಈ ಮೂರು ತಿಂಗಳ ಅವಧಿಯಲ್ಲಿ ನೋಯ್ಡಾ, ದೆಹಲಿ, ಕೋಲ್ಕತ್ತಾ, ಚೆನ್ನೈ ಮತ್ತು ಹೈದರಾಬಾದ್ ನಗರದಲ್ಲಿಯೂ ಮನೆಗಳ ಬಾಡಿಗೆಯಲ್ಲಿ ಹೆಚ್ಚಳ ಕಂಡಬಂದಿದೆ. ಜೂನ್ ತಿಂಗಳ ಬಳಿಕ ಮನೆಗಳ ಬೇಡಿಕೆ, ಬಾಡಿಗೆ ಮತ್ತೆ ಸಹಜ ಸ್ಥಿತಿಗೆ ಬರಲಿದೆ ಎಂದು ವರದಿ ಅಂದಾಜಿಸಿದೆ.
ಈಗ ಶಾಲೆಗಳಿಗೆ ಬೇಸಿಗೆ ರಜೆಯ ಅವಧಿ ಪೋಷಕರು ಮಕ್ಕಳನ್ನು ಬೇರೆ ಬೇರೆ ಶಾಲೆಗಳಿಗೆ ಸೇರಿಸುವಾಗ ಸಹಜವಾಗಿಯೇ ಮನೆ ಬದಲಾವಣೆ ಮಾಡುತ್ತಾರೆ. ಐಟಿ ಕಂಪನಿಗಳು ಉದ್ಯೋಗಿಗಳನ್ನು ಕಛೇರಿಗೆ ಕರೆದಿದ್ದು, ಸಹಜವಾಗಿ ಮನೆಗಳಿಗೆ ಬೇಡಿಕೆ ಬಂದಿದೆ. ಆದರೆ ಹಲವು ಬಡಾವಣೆಗಳಲ್ಲಿ ಇನ್ನೂ ಮನೆ ಖಾಲಿ ಇದೆ ಎಂಬ ಬೋರ್ಡ್‌ಗಳು ಗೇಟುಗಳಿಗೆ ನೇತು ಬಿದ್ದಿವೆ.












Click it and Unblock the Notifications