ಹೊಸಕೋಟೆ ಫೇಮಸ್ 4 A.M ಬಿರಿಯಾನಿ ಇನ್ಮುಂದೆ ಸಿಗಲ್ಲ; ಇಲ್ಲಿದೆ ಶಾಕಿಂಗ್ ಕಾರಣ!
ಬೆಂಗಳೂರಿಗರ ನೆಚ್ಚಿನ ಫುಡ್ ಸ್ಪಾಟ್ ಅಂದ್ರೆ ಹೊಸಕೋಟೆ ಕೂಡ ಒಂದು. ಇದಕ್ಕೆ ಕಾರಣ ಅಲ್ಲಿ ಸಿಗೋ ಬಿರಿಯಾನಿ. ಅಂದು ಅಂತಿತಾ ಬಿರಿಯಾನಿ ಅಲ್ಲ! 4 am ಬಿರಿಯಾನಿ ಎಂದೇ ಸಿಕ್ಕಾಪಟ್ಟೆ ಫೇಮಸ್. ಬೆಳಗೆದ್ದು ಕಾಫಿ ಕುಡೀತಿದ್ದ ಬೆಂಗಳೂರು ಮಂದಿ, ಬೆಳ್ಳಂಬೆಳಿಗ್ಗೆ ಬಿರಿಯಾನಿ ತಿನ್ನೋಕೆ ಓಡೋಡಿ ಬರೋ ಟ್ರೆಂಡ್ ಸೆಟ್ ಮಾಡಿದ್ದರು. ಸೂರ್ಯ ಹುಟ್ಟುವ ಮುನ್ನ ಮಟನ್, ಚಿಕನ್ ಬಿರಿಯಾನಿ ಬಾರಿಸಿ ಗುಡ್ ಮಾರ್ನಿಂಗ್ ಹೇಳುತ್ತಿದ್ದವರಿಗೆ ಶಾಕಿಂಗ್ ವಿಚಾರವೊಂದು ಹೊರಬಿದ್ದಿದೆ. ಅದೇನು ಅಂದ್ರೆ ಇನ್ಮುಂದೆ ನಿಮ್ಮ ನೆಚ್ಚಿನ 4 am ಬಿರಿಯಾನಿ ಸಿಗಲ್ಲ. ದಿಢೀರ್ ಈ ನಿರ್ಧಾರಕ್ಕೆ ಕಾರಣವೇನು ಎಂಬ ಮಾಹಿತಿ ಇಲ್ಲಿದೆ.
ಬೆಂಗಳೂರಿನಿಂದ ಸುಮಾರು 30 ಕಿ.ಮೀ ಇರುವ ಹೊಸಕೋಟೆ ಕೆಲ ವರ್ಷಗಳಿಂದ ಸಖತ್ ಫೇಮಸ್ ಆಗಿದ್ದು ಬಿರಿಯಾನಿ ವಿಚಾರದಿಂದ ಅಂತಾನೇ ಹೇಳಬಹುದು. ಸಾಮಾನ್ಯವಾಗಿ ಬೆಂಗಳೂರಿನಲ್ಲೇ ಬಿರಿಯಾನಿ ಹೋಟೆಲ್‌ಗಳಿಗೆ ಕೊರತೆ ಏನಿರಲಿಲ್ಲ. ಆದರೆ ಹೊಸಕೋಟೆ ಮಂದಿ 4 am ಅನ್ನೋ ಐಡಿಯಾ ಉಪಯೋಗಿಸಿ, ನಸುಕಿನ ಜಾವವೇ ಬಿರಿಯಾನಿ ಬಡಿಸೋದನ್ನ ಶುರು ಮಾಡಿದ್ರು. ಇದು ಬೆಂಗಳೂರಿಗೆ ಒಂತರಾ ಇಷ್ಟ ಆಗೋಯ್ತು, ಬೆಳಿಗ್ಗೆ ಜಾಲಿ ರೈಡ್ ಹೋಗಿ ಬಿರಿಯಾನಿ ತಿಂದು ಬರೋದನ್ನ ರೂಢಿ ಮಾಡಿಕೊಂಡ್ರು.

ಹೊಸಕೋಟೆಯಲ್ಲಿ ಆನಂದ್ ಬಿರಿಯಾನಿ, ಅಕ್ಷಯ್ ಧಮ್ ಬಿರಿಯಾನಿ, ಮಣಿ ಬಿರಿಯಾನಿ ಅಂದ್ರೆ ಬೆಂಗಳೂರಿಗರಿಗೆ ಗೊತ್ತಿಲ್ಲದ ಜಾಗಗಳೇನಲ್ಲ. ಅಲ್ಲಿ ಎಷ್ಟು ಸಲ ಬಿರಿಯಾನಿ ತಿಂದಿಲ್ಲ? ಅಂತಿದ್ರು. ಕಿಲೋಮೀಟರ್‌ಗಟ್ಟಲೆ ಬಿರಿಯಾನಿಗಾಗಿ ಕ್ಯೂನಲ್ಲಿ ನಿಂತು ತಿನ್ನುತ್ತಿದ್ದ ವಿಡಿಯೋಗಳು ಸೋಷಿಯಲ್ ಮೀಡಿಯಾದಲ್ಲಿ ಅಬ್ಬರಿಸಿದ್ದವು. ಬಳಿಕ ಹೊಸಕೋಟೆ ಬಿರಿಯಾನಿ ಎಂದೇ ಇಂದು ರಾಜ್ಯದಾದ್ಯಂತ ಇದರ ಜಾಲ ಹಬ್ಬಿದೆ. ಆದರೆ, ಇನ್ನು ಮುಂದೆ 4 am ಬಿರಿಯಾನಿ ಸಿಗೋದಿಲ್ಲ!
ಹೌದು ಹೊಸಕೋಟೆ ಧಮ್ ಬಿರಿಯಾನಿ ಪ್ರಿಯರಿಗೆ ಪೊಲೀಸರು ಶಾಕ್ ಕೊಟ್ಟಿದ್ದಾರೆ. ಬಿರಿಯಾನಿ ಸೆಂಟರ್‌ಗಳಿಗೆ ತೆರಳಿ ಖಡಕ್ ಸೂಚನೆ ನೀಡಲಾಗಿದ್ದು, ಇನ್ನು ಮುಂದೆ ಬೆಳಗಿನ ಜಾವ 4 ಗಂಟೆಗೆ ಬಿರಿಯಾನಿ ಮಾರಾಟ ಮಾಡಬಾರದು ಎಂದು ಎಚ್ಚರಿಕೆ ಕೊಡಲಾಗಿದೆ. ಇದರಿಂದ ಬೆಂಗಳೂರಿಗರಿಗೆ, ಲಾಂಗ್ ಡ್ರೈವ್ ಪ್ರಿಯರಿಗೆ ದೊಡ್ಡ ಶಾಕ್ ನೀಡಿದಂತಾಗಿದೆ.

ದಿಢೀರ್ ಈ ಕ್ರಮಕ್ಕೆ ಕಾರಣವೇನು?
ಬಿರಿಯಾನಿ ತಿನ್ನುವ ಆಸೆಯಿಂದ ಜನ ಮಧ್ಯರಾತ್ರಿಯಿಂದಲೇ ಪ್ರಯಾಣ ಮಾಡುತ್ತಿದ್ದಾರೆ. ಕೆಲವರು ಲಾಂಗ್ ಡ್ರೈವ್, ಜಾಲಿ ರೈಡ್ ಹೆಸರಲ್ಲಿ ಅತಿವೇಗವಾಗಿ ವಾಹನ ಚಾಲನೆ ಮಾಡುತ್ತಿರುವುದು ಪೊಲೀಸರ ಗಮನಕ್ಕೆ ಬಂದಿದೆ. ಇದರಿಂದ ಅಪಘಾತಗಳು ಕೂಡ ಹೆಚ್ಚಾಗಿ ಸಂಭವಿಸುತ್ತಿದ್ದು, ಮುಂಜಾನೆಯೇ ಜನದಟ್ಟಣೆ ಕೂಡ ಕಂಡುಬರುತ್ತಿದೆ. ಈ ಎಲ್ಲದಕ್ಕೂ ಕಡಿವಾಣ ಹಾಕುವ ಉದ್ದೇಶದಿಂದ 4 ಗಂಟೆಗೆ ಬಿರಿಯಾನಿ ಮಾರಾಟ ಮಾಡದಂತೆ ಹೋಟೆಲ್‌ಗಳಿಗೆ ಎಚ್ಚರಿಕೆ ನೀಡಿದ್ದಾರೆ.
4 ಗಂಟೆ ಬದಲು ಬೆಳಿಗ್ಗೆ 6 ಗಂಟೆ ಬಿರಿಯಾನಿ ಮಾರಾಟ ಶುರು ಮಾಡುವಂತೆ ಸೂಚನೆ ಕೊಟ್ಟಿದ್ದಾರೆ. ಹಾಗಾಗಿ ಇನ್ನು ಮುಂದೆ ಆರು ಗಂಟೆಯ ನಂತರವಷ್ಟೇ ಬಿರಿಯಾನಿ ಸಿಗಲಿದೆ. ಈಗಾಗಲೇ ಈ ಬಗ್ಗೆ ಬಿರಿಯಾನಿ ಹೋಟೆಲ್‌ಗಳ ಮುಂಭಾಗ ಸೂಚನಾ ಫಲಕಗಳನ್ನು ಹಾಕಲಾಗಿದ್ದು, ನಸುಕಿನ ಜಾವವೇ ಬಿರಿಯಾನಿ ಅಡ್ಡಾದಲ್ಲಿ ಸೇರುತ್ತಿದ್ದವರಿಗೆ ಭಾರೀ ನಿರಾಸೆಯಾಗಿದೆ.
ಹೊಸಕೋಟೆಯಲ್ಲಿ ಮೊದಲಿಗೆ ಮಟನ್ ಬಿರಿಯಾನಿ ಸಖತ್ ಪೇಮಸ್ ಆಯ್ತು. ಬಳಿಕ ಚಿಕನ್ ಬಿರಿಯಾನಿ, ಕಬಾಬ್, ಕಾಲು ಸೂಪ್ ಕೂಡ ಆರಂಭವಾಗಿದೆ. ಪ್ರಮುಖವಾಗಿ ಭಾನುವಾರವಂತೂ ಬೆಂಗಳೂರಿನ ಬಹುತೇಕ ಐಟಿ ಮಂದಿ ಬೈಕ್‌ಗಳಲ್ಲಿ ರೈಡ್ ಹೋಗಿ ಬಿರಿಯಾನಿ ತಿಂದು ಬರುವ ಟ್ರೆಂಡ್ ಹುಟ್ಟಾಕಿದರು. ಇದು ದಿನದಿಂದ ದಿನಕ್ಕೆ ಜನಪ್ರಿಯತೆ ಪಡೆದು, 4 am ಬಿರಿಯಾನಿ ಎಂದೇ ಫೇಮಸ್ ಆಯ್ತು. ಬೆಳ್ಳಂಬೆಳಿಗ್ಗೆಯೇ ಹೆಚ್ಚಿನ ಗ್ರಾಹಕರು ಬಿರಿಯಾನಿ ತಿನ್ನಲು ಬರುವುದನ್ನು ಕಂಡು ಇಂದು ಹೊಸಕೋಟೆ ಏರಿಯಾದಲ್ಲಿ ಹಲವು ಧಮ್ ಬಿರಿಯಾನಿ ಅಂಗಡಿಗಳು ತಲೆ ಎತ್ತಿವೆ. ರುಚಿ, ಬೆಲೆ, ಗುಣಮಟ್ಟದಲ್ಲಿ ಒಂದಕ್ಕಿಂತ ಒಂದು ಪೈಪೋಟಿಯಲ್ಲಿದೆ.












Click it and Unblock the Notifications