1952-2018ರವರೆಗೆ ಕರ್ನಾಟಕ ವಿಧಾನಸಭೆ ಗೆಲುವಿನ ಇತಿಹಾಸ

ಬೆಂಗಳೂರು: ಸ್ವತಂತ್ರ ಭಾರತದಲ್ಲಿ ಕನ್ನಡ ನಾಡು ರೂಪುಗೊಂಡು ಅಮೃತ ಮಹೋತ್ಸವ ಮುಗಿದಿದೆ. ಇನ್ನೇನು ಶತಮಾನೋತ್ಸವಕ್ಕೆ ಸಜ್ಜಾಗುತ್ತಿರುವ ಕರ್ನಾಟಕದಲ್ಲಿ ವಿಧಾಸಭಾ ಚುನಾವಣೆಗೆ 70 ವರ್ಷಕ್ಕೂ ಹೆಚ್ಚಿನ ಇತಿಹಾಸ ಇದೆ. 1952ರಲ್ಲಿ ನಡೆದ ಮೊದಲ ವಿಧಾನಸಭೆಯಿಂದ ಹಿಡಿದು, 2018ರ ವಿಧಾಸಭಾ ಚುನಾವಣೆ ತನಕ ಸೋಲು-ಗೆಲುವಿನ ಸಂಪೂರ್ಣ ಮಾಹಿತಿ ನಿಮಗಾಗಿ ಇಲ್ಲಿದೆ.

1952ರಲ್ಲಿ ಕರ್ನಾಟಕ ವಿಧಾನಸಭೆಗೆ ಮೊದಲ ಚುನಾವಣೆ ನಡೆಯಿತು. ಆಗ ಕರ್ನಾಟಕದಲ್ಲಿ ಇದ್ದಿದ್ದು ಕೇವಲ 99 ಕ್ಷೇತ್ರ. ಕರ್ನಾಟಕ ಎಂದು ಇನ್ನೂ ನಾಮಕರಣ ಆಗದ ನಮ್ಮ ರಾಜ್ಯಕ್ಕೆ ಮೈಸೂರು ವಿಧಾನಸಭೆ ಎಂಬ ಹೆಸರು ಇತ್ತು.

ಹೀಗೆ ಮೊದಲ ಚುನಾವಣೆ ಇಡೀ ದೇಶದ ಗಮನ ಸೆಳೆದಿತ್ತು. ಹಾಗಾದರೆ 1952ರಲ್ಲಿ ರಾಜ್ಯದಲ್ಲಿ ಅತಿಹೆಚ್ಚು ಸ್ಥಾನ ಗೆದ್ದು ಅಧಿಕಾರ ಹಿಡಿದ ಪಕ್ಷ ಯಾವುದು? ಎಂಬುದರ ಸಂಪೂರ್ಣ ಮಾಹಿತಿ ಮುಂದೆ ತಿಳಿಯೋಣ. ಹಾಗೇ 1952ರ ನಂತರ ನಡೆದ ಪ್ರತಿಯೊಂದು ವಿಧಾನಸಭೆ ಚುನಾವಣೆಯ ಸಂಪೂರ್ಣ ಮಾಹಿತಿ ಇಲ್ಲಿ ತಿಳಿಯೋಣ.

History of Karnataka Legislative Assembly election results

99 ಕ್ಷೇತ್ರ ಪೈಕಿ ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ ಪಕ್ಷ 74 ಸ್ಥಾನಗಳಲ್ಲಿ ಭರ್ಜರಿ ಜಯ ಸಾಧಿಸಿತ್ತು. ಹಾಗೇ 8 ಸ್ಥಾನ ಗೆದ್ದಿದ್ದ ಕಿಸಾನ್ ಮಜ್ದೂರ್ ಪ್ರಜಾ ಪಾರ್ಟಿ 2ನೇ ಸ್ಥಾನ ಪಡೆದಿತ್ತು. ಸಮಾಜವಾದಿ ಪಕ್ಷ 3 ಸ್ಥಾನ ಮತ್ತು ಪರಿಶಿಷ್ಟ ಜಾತಿ ಒಕ್ಕೂಟ 2 ಸ್ಥಾನ ಹಾಗೂ ಕಮ್ಯುನಿಸ್ಟ್ ಪಾರ್ಟಿ ಆಫ್ ಇಂಡಿಯಾ 1 ಸ್ಥಾನದಲ್ಲಿ ಗೆದ್ದಿದ್ದರೆ ಸ್ವತಂತ್ರ ಅಭ್ಯರ್ಥಿಗಳೇ 11 ಸ್ಥಾನದಲ್ಲಿ ಗೆದ್ದಿದ್ದರು. ಈ ಮೂಲಕ ಕರ್ನಾಟಕ ರಾಜ್ಯ ಅಥವಾ ಮೈಸೂರು ರಾಜ್ಯದ ಮೊದಲ ಚುನಾವಣೆಯಲ್ಲಿಯೇ ಕಾಂಗ್ರೆಸ್ ಭರ್ಜರಿ ಗೆಲುವು ಸಾಧಿಸಿತ್ತು. ಆ ಮೂಲಕ ಮೊದಲ ಸರ್ಕಾರ ರಚನೆ ಮಾಡಿತ್ತು.

1957ರ ಚುನಾವಣೆಯಲ್ಲಿ 208 ಸ್ಥಾನ!

1952ರಲ್ಲಿ ಕರ್ನಾಟಕ ವಿಧಾನಸಭೆಯಲ್ಲಿ ಕೇವಲ 99 ಸ್ಥಾನಗಳು ಇದ್ದವು. ಆದರೆ 1957ರ ಚುನಾವಣೆಯಲ್ಲಿ ಆ ಸಂಖ್ಯೆ ದಿಢೀರ್ 208ಕ್ಕೆ ಜಿಗಿದಿತ್ತು. ಹೀಗೆ 208 ಕ್ಷೇತ್ರಗಳ ಪೈಕಿ ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ ಪಕ್ಷ 150 ಸ್ಥಾನಗಳಲ್ಲಿ ಜಯ ಸಾಧಿಸಿತ್ತು.

ಇನ್ನು 18 ಸೀಟ್ ಗೆದ್ದಿದ್ದ ಪ್ರಜಾ ಸಮಾಜವಾದಿ ಪಕ್ಷ 2ನೇ ಸ್ಥಾನ ಪಡೆದಿತ್ತು. ಕಮ್ಯುನಿಸ್ಟ್ ಪಾರ್ಟಿ ಆಫ್ ಇಂಡಿಯಾ 1 ಸ್ಥಾನ ಮತ್ತು ಪರಿಶಿಷ್ಟ ಜಾತಿ ಒಕ್ಕೂಟ 2 ಸ್ಥಾನ ಹಾಗೂ ಭಾರತೀಯ ರೈತರು ಮತ್ತು ಕಾರ್ಮಿಕರ ಪಕ್ಷ 2 ಸ್ಥಾನದಲ್ಲಿ ಜಯ ಗಳಿಸಿತ್ತು. ಜೊತೆಗೆ ಸ್ವತಂತ್ರ ಅಭ್ಯರ್ಥಿಗಳೇ 35 ಸ್ಥಾನದಲ್ಲಿ ಗೆಲುವು ಸಾಧಿಸಿದ್ದರು.

1962ರ ಎಲೆಕ್ಷನ್ ರಿಸಲ್ಟ್ ಹೇಗಿತ್ತು?

ಕರ್ನಾಟಕ ವಿಧಾನಸಭೆ ಚುನಾವಣೆಗೆ ನಡೆದ 3ನೇ ಚುನಾವಣೆಯಲ್ಲಿ ಮತ್ತೆ ಕಾಂಗ್ರೆಸ್ ಗೆದ್ದಿತ್ತು. 1962ರ ಎಲೆಕ್ಷನ್ ರಿಸಲ್ಟ್ ನೋಡುವುದಾದರೆ, ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ ಪಕ್ಷ 138 ಸ್ಥಾನಗಳಲ್ಲಿ ಜಯ ಸಾಧಿಸಿತ್ತು. ಇನ್ನು 20 ಸೀಟ್ ಗೆದ್ದಿದ್ದ ಪ್ರಜಾ ಸಮಾಜವಾದಿ ಪಕ್ಷ 2ನೇ ಸ್ಥಾನ ಪಡೆದಿತ್ತು. ಸ್ವತಂತ್ರ ಪಕ್ಷ 9 ಸ್ಥಾನ, ಮಹಾರಾಷ್ಟ್ರ ಏಕೀಕರಣ ಸಮಿತಿ 6, ಲೋಕ ಸೇವಕ ಸಂಘ 4, ಕಮ್ಯುನಿಸ್ಟ್ ಪಾರ್ಟಿ ಆಫ್ ಇಂಡಿಯಾ 3, ಸಮಾಜವಾದಿ ಪಕ್ಷ 1, ಹಾಗೇ ಸ್ವತಂತ್ರ ಅಭ್ಯರ್ಥಿಗಳೇ 27 ಸ್ಥಾನದಲ್ಲಿ ಗೆಲುವು ಸಾಧಿಸಿದ್ದರು.

1967ರ ಚುನಾವಣೆ ಫಲಿತಾಂಶದ ವಿವರ

ಕರ್ನಾಟಕ ವಿಧಾನಸಭೆಗೆ 1967ರ ಚುನಾವಣೆ ಮತ್ತಷ್ಟು ವಿಶೇಷತೆ ತಂದಿತ್ತು. 1952ರಲ್ಲಿ ಕರ್ನಾಟಕ ವಿಧಾನಸಭೆಯಲ್ಲಿ ಕೇವಲ 99 ಸ್ಥಾನಗಳು ಇದ್ದವು. ಆದರೆ 1957ರ ಚುನಾವಣೆಯಲ್ಲಿ ಆ ಸಂಖ್ಯೆ ದಿಢೀರ್ 208ಕ್ಕೆ ಜಿಗಿದಿತ್ತು. 1967ರ ಚುನಾವಣೆಯಲ್ಲಿ ಈ ಸಂಖ್ಯೆ 216ಕ್ಕೆ ಏರಿಕೆ ಕಂಡಿತ್ತು.

216 ಕ್ಷೇತ್ರಗಳಲ್ಲಿ ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ ಪಕ್ಷ 126 ಸ್ಥಾನ ಗೆದ್ದರೆ, 20 ಸೀಟ್ ಗೆದ್ದಿದ್ದ ಪ್ರಜಾ ಸಮಾಜವಾದಿ ಪಕ್ಷ ಮತ್ತೆ 2ನೇ ಸ್ಥಾನ ಪಡೆದಿತ್ತು. ಸ್ವತಂತ್ರ ಪಕ್ಷ 16 ಸ್ಥಾನ, ಸಂಯುಕ್ತ ಸಮಾಜವಾದಿ ಪಕ್ಷ 6 ಸ್ಥಾನ, ಭಾರತೀಯ ಜನ ಸಂಘ 4 ಸ್ಥಾನ ಪಡೆದರೆ ಇತರರು 44 ಸ್ಥಾನ ಪಡೆದಿದ್ದರು.

History of Karnataka Legislative Assembly election results

1972ರ ಎಲೆಕ್ಷನ್ ರಿಸಲ್ಟ್ ಹೇಗಿತ್ತು?

ಕರ್ನಾಟಕ ಚುನಾವಣೆ ಇತಿಹಾಸದಲ್ಲಿ 1972ರ ಅಸೆಂಬ್ಲಿ ಎಲೆಕ್ಷನ್ ದೊಡ್ಡ ತಿರುವು. ಇಲ್ಲಿ ಕಾಂಗ್ರೆಸ್-R 165 ಸ್ಥಾನ ಗೆದ್ದರೆ, ಕಾಂಗ್ರೆಸ್-O ಒಟ್ಟು 24 ಸ್ಥಾನದಲ್ಲಿ ಗೆಲುವು ಸಾಧಿಸಿತ್ತು. ಕಮ್ಯುನಿಸ್ಟ್ ಪಾರ್ಟಿ ಆಫ್ ಇಂಡಿಯಾ 3 ಸ್ಥಾನ ಮತ್ತು ಸಂಯುಕ್ತ ಸಮಾಜವಾದಿ ಪಕ್ಷ 3 ಸ್ಥಾನ ಗೆದ್ದಿತ್ತು. ಇತರರು 21 ಸ್ಥಾನದಲ್ಲಿ ಗೆಲುವು ಸಾಧಿಸಿದ್ದರು. ಒಟ್ಟು 216 ಸ್ಥಾನಗಳಿಗೆ 1972ರ ಕರ್ನಾಟಕ ವಿಧಾನಸಭೆ ಚುನಾವಣೆಯಲ್ಲಿ ಮತದಾನ ನಡೆದಿತ್ತು. ಕಾಂಗ್ರೆಸ್-R 165 ಸ್ಥಾನ ಗೆದ್ದು ಅತಿದೊಡ್ಡ ಪಕ್ಷವಾಗಿ ಸರ್ಕಾರ ರಚನೆ ಮಾಡಿತ್ತು.

1978ರಿಂದ ಶುರುವಾಗಿದ್ದು 224 ಸ್ಥಾನ!

ಕರ್ನಾಟಕದ ಬಹುತೇಕ ಈಗಿನ ವಿಧಾನಸಭೆ ರಚನೆಯಾಗಿದ್ದು 1978ರಲ್ಲೇ. ಈಗಿರುವ 224 ಕ್ಷೇತ್ರಗಳ ಚುನಾವಣೆ ಶೈಲಿ 1978ರಿಂದ ಆರಂಭವಾಗಿತ್ತು. ಮೊದಲ ಬಾರಿಗೆ 224 ಸ್ಥಾನಗಳಿಗೆ ನಡೆದ ಚುನಾವಣೆಯಲ್ಲಿ ಇಂದಿರಾ ಗಾಂಧಿ ನೇತೃತ್ವದ ಕಾಂಗ್ರೆಸ್-I 149 ಸ್ಥಾನ ಗಳಿಸಿತ್ತು. ಇನ್ನೊಂದ್ಕಡೆ 59 ಸ್ಥಾನದಲ್ಲಿ ಗೆಲುವು ಸಾಧಿಸಿದ ಜನತಾ ಪಾರ್ಟಿ 2ನೇ ಸ್ಥಾನ ಪಡೆದಿತ್ತು. ಕಮ್ಯುನಿಸ್ಟ್ ಪಾರ್ಟಿ ಆಫ್ ಇಂಡಿಯಾ 3 ಸ್ಥಾನ ಮತ್ತು ಕಾಂಗ್ರೆಸ್-O 2 ಸ್ಥಾನದಲ್ಲಿ ಗೆದ್ದಿತ್ತು. ಇತರರು 1978ರ ಚುನಾವಣೆಯಲ್ಲಿ 11 ಸ್ಥಾನ ಪಡೆದಿದ್ದರು.

1983ರಲ್ಲಿ ಹೊಸ ಇತಿಹಾಸ ಸೃಷ್ಟಿ

ಸ್ವತಂತ್ರ ಭಾರತದ ನಂತರ 1952ರಿಂದಲೂ ಕರ್ನಾಟಕದಲ್ಲಿ ಕಾಂಗ್ರೆಸ್ ನೇತೃತ್ವದ ಸರ್ಕಾರವೇ ರಚನೆ ಆಗುತ್ತಿತ್ತು. ಆದರೆ 1983ರಲ್ಲಿ ಮೊದಲ ಬಾರಿಗೆ ಕಾಂಗ್ರೆಸ್ ಹೊರತು ಬೇರೆ ಪಕ್ಷವೊಂದು ಸರ್ಕಾರ ರಚಿಸಿತ್ತು. ಜನತಾ ಪಕ್ಷ ಈ ಚುನಾವಣೆಯಲ್ಲಿ 95 ಸ್ಥಾನ ಗಳಿಸಿ ಅತಿದೊಡ್ಡ ಪಕ್ಷವಾಗಿ ಹೊರಹೊಮ್ಮಿತ್ತು. ಕಾಂಗ್ರೆಸ್ 82 ಸ್ಥಾನ ಪಡೆದು 2ನೇ ಸ್ಥಾನಕ್ಕೆ ಕುಸಿದಿತ್ತು. ಹೀಗಾಗಿ ಮೊಟ್ಟಮೊದಲ ಬಾರಿಗೆ ಜನತಾ ಪಕ್ಷ ರಾಮಕೃಷ್ಣ ಹೆಗಡೆ ನೇತೃತ್ವದಲ್ಲಿ 18 ಸ್ಥಾನ ಪಡೆದಿದ್ದ ಬಿಜೆಪಿ ಜೊತೆ ಸೇರಿ ಸಮ್ಮಿಶ್ರ ಸರ್ಕಾರ ರಚಿಸಿತ್ತು. ಇತರರು 29 ಸ್ಥಾನ ಪಡೆದಿದ್ದರು.

1985ರಲ್ಲಿ ಜನತಾ ಪಕ್ಷದ ದಿಗ್ವಿಜಯ

ಕೇವಲ 2 ವರ್ಷದ ಬಳಿಕ 1985ರಲ್ಲಿ ಮತ್ತೆ ಕರ್ನಾಟಕ ವಿಧಾನಸಭೆ ಚುನಾವಣೆ ಎದುರಾಗಿತ್ತು. ರಾಮಕೃಷ್ಣ ಹೆಗಡೆ ಅವರ ಸರ್ಕಾರ 139 ಸ್ಥಾನಗಳ ಬಹುಮತದ ಮೂಲಕ ರಚನೆಯಾಯಿತು. ಕಾಂಗ್ರೆಸ್ 65 ಸ್ಥಾನಕ್ಕೆ ಕುಸಿತ ಕಂಡರೆ, 1983ರಲ್ಲಿ 18 ಸ್ಥಾನ ಗೆದ್ದಿದ್ದ ಬಿಜೆಪಿ 1985ರಲ್ಲಿ ಕೇವಲ 2 ಸ್ಥಾನ ಗಳಿಸಿತ್ತು. ಇತರರು 18 ಸ್ಥಾನಗಳಲ್ಲಿ ಗೆಲುವು ಸಾಧಿಸಿದ್ದರು. ಈ ಮೂಲಕ ಮತ್ತೊಮ್ಮೆ ರಾಮಕೃಷ್ಣ ಹೆಗಡೆ ನೃತೃತ್ವದಲ್ಲಿ ಕರ್ನಾಟಕದಲ್ಲಿ ಸರ್ಕಾರ ರಚನೆ ಮಾಡಲಾಗಿತ್ತು.

1989ರಲ್ಲಿ ಮತ್ತೆ ಕಾಂಗ್ರೆಸ್‌ಗೆ ಗೆಲುವು

ಸತತ 2 ಬಾರಿ ಅಧಿಕಾರ ಕಳೆದುಕೊಂಡಿದ್ದ ಕಾಂಗ್ರೆಸ್ ಪಕ್ಷ, 1989ರ ಚುನಾವಣೆಯಲ್ಲಿ 178 ಸ್ಥಾನಗಳಲ್ಲಿ ಭರ್ಜರಿ ಗೆಲುವು ಕಂಡಿತ್ತು. ಜನತಾ ದಳ 24 ಸ್ಥಾನ ಪಡೆದರೆ, ಬಿಜೆಪಿ 4 ಸ್ಥಾನದಲ್ಲಿ ಗೆದ್ದಿತ್ತು. ನಂತರದ ಸ್ಥಾನದಲ್ಲಿ ಜನತಾ ಪಕ್ಷ 2 ಸ್ಥಾನ ಹಾಗೂ ಕರ್ನಾಟಕ ರಾಜ್ಯ ರೈತ ಸಂಘ 2 ಸ್ಥಾನದಲ್ಲಿ ಗೆಲುವು ಸಾಧಿಸಿತ್ತು. ಅಂತಿಮವಾಗಿ ಇತರರು 14 ಸ್ಥಾನದಲ್ಲಿ ಗೆಲುವು ಸಾಧಿಸಿದ್ದರು. ಈ ಚುನಾವಣೆ ಬಳಿಕ ಮತ್ತೆ ಕಾಂಗ್ರೆಸ್ ಕರ್ನಾಟಕದಲ್ಲಿ ಭರ್ಜರಿ ಪ್ರದರ್ಶನ ಕಾಣುವಲ್ಲಿ ವಿಫಲವಾಗಿತ್ತು.

1994ರ ಚುನಾವಣೆಯಲ್ಲಿ ಮಹತ್ತರ ಬದಲಾವಣೆ

ಕಾಂಗ್ರೆಸ್ ಮತ್ತೆ ಅಧಿಕಾರ ಕಳೆದುಕೊಂಡ ವರ್ಷ 1994. ಚುನಾವಣೆಯಲ್ಲಿ ಜನತಾ ದಳ 115 ಸ್ಥಾನ ಪಡೆದಿತ್ತು. ಮತ್ತೊಂದ್ಕಡೆ ಬಿ.ಎಸ್. ಯಡಿಯೂರಪ್ಪ ನೇರತ್ವದಲ್ಲಿ ಬಿಜೆಪಿ 40 ಸ್ಥಾನ ಪಡೆದಿತ್ತು. ಆಗ ಕಾಂಗ್ರೆಸ್ 34 ಸ್ಥಾನದ ಮೂಲಕ 3ನೇ ಸ್ಥಾನ ಪಡೆದಿತ್ತು. ಕರ್ನಾಟಕ ಕಾಂಗ್ರೆಸ್ ಪಾರ್ಟಿ 10 ಸ್ಥಾನ ಗಳಿಸಿತ್ತು. ಉಳಿದವರು 25 ಸ್ಥಾನದಲ್ಲಿ ಗೆದ್ದಿದ್ದರು. ಈ ಮೂಲಕ 1994ರ ಚುನಾವಣೆಯಲ್ಲಿ ಮಹತ್ವದ ಬದಲಾವಣೆಯನ್ನ ಕರ್ನಾಟಕ ಕಂಡಿತ್ತು. ಇದು ಬಿಜೆಪಿ ಪಾಲಿಗೆ ಕರ್ನಾಟಕದಲ್ಲಿ ಮೊದಲ ಅತಿದೊಡ್ಡ ಗೆಲುವು.

1999ರಲ್ಲಿ ಎಸ್.ಎಂ.ಕೃಷ್ಣ ಸರ್ಕಾರ ಅಧಿಕಾರಕ್ಕೆ

ಅಧಿಕಾರ ಕಳೆದುಕೊಂಡಿದ್ದ ಕಾಂಗ್ರೆಸ್ ಮತ್ತೆ 1999ರ ಕರ್ನಾಟಕ ವಿಧಾನಸಭೆ ಚುನಾವಣೆಯಲ್ಲಿ ಭರ್ಜರಿ ಗೆಲುವು ಸಾಧಿಸಿತ್ತು. 224 ಸ್ಥಾನಗಳ ಪೈಕಿ 132 ಸ್ಥಾನ ಗೆಲ್ಲುವ ಮೂಲಕ ಕಾಂಗ್ರೆಸ್ ಕರ್ನಾಟಕದಲ್ಲಿ ಅಧಿಕಾರ ಸ್ಥಾಪಿಸಿತ್ತು. ಎಸ್.ಎಂ. ಕೃಷ್ಣ ಮುಖ್ಯಮಂತ್ರಿ ಆದರು. ಮತ್ತೊಂದು ಕಡೆ ಬಿ.ಎಸ್. ಯಡಿಯೂರಪ್ಪ ಅವರ ನೇತೃತ್ವದಲ್ಲಿ ಬಿಜೆಪಿ ಇನ್ನೂ 4 ಸ್ಥಾನ ಹೆಚ್ಚು ಗೆದ್ದು, 44 ಸ್ಥಾನಗಳ ಮೂಲಕ 2ನೇ ಅತಿದೊಡ್ಡ ಪಕ್ಷವಾಗಿತ್ತು. ಜನತಾ ದಳ-U 18 ಸ್ಥಾನ ಗೆದ್ದರೆ, ಜನತಾ ದಳ-S 10 ಸ್ಥಾನಕ್ಕೆ ತೃಪ್ತಿಪಟ್ಟಿತ್ತು. ಇತರರು 20 ಸ್ಥಾನದಲ್ಲಿ ಗೆಲುವು ಸಾಧಿಸಿದ್ದರು.

2004ರಲ್ಲಿ ಯಡಿಯೂರಪ್ಪ ನೇತೃತ್ವದಲ್ಲಿ ದಿಗ್ವಿಜಯ

ಸ್ವತಂತ್ರ ಭಾರತದಲ್ಲಿ ಕರ್ನಾಟಕ ವಿಧಾಸಭೆ ಚುನಾವಣೆಯಲ್ಲಿ ಬಿಜೆಪಿ ಮೊಟ್ಟಮೊದಲ ಬಾರಿಗೆ ಅತಿದೊಡ್ಡ ಪಕ್ಷ ಎನಿಸಿಕೊಂಡಿದ್ದು 2004ರಲ್ಲಿ. ಇದೇ ಮೊದಲ ಬಾರಿಗೆ ದಕ್ಷಿಣ ಭಾರತದ ರಾಜ್ಯದಲ್ಲಿ ಬಿಜೆಪಿ ಇಂತಹ ಗೆಲುವನ್ನ ಸಾಧಿಸಿತ್ತು. ಬಿ.ಎಸ್. ಯಡಿಯೂರಪ್ಪ ನೃತ್ವದಲ್ಲಿ ಬಿಜೆಪಿ 79 ಸ್ಥಾನ ಗಳಿಸಿತ್ತು, ಆಗ ಕಾಂಗ್ರೆಸ್ 65 ಸ್ಥಾನ ಮತ್ತು ಜನತಾ ದಳ-S 58 ಸ್ಥಾನಗಳಲ್ಲಿ ಗೆದ್ದಿತ್ತು. ಉಳಿದವರು 22 ಸ್ಥಾನಕ್ಕೆ ತೃಪ್ತಿಪಟ್ಟುಕೊಂಡರು. ಆದರೂ ಕಾಂಗ್ರೆಸ್ ಮತ್ತು ಜೆಡಿಎಸ್ ಸಮ್ಮಿಶ್ರ ಸರ್ಕಾರ ಅಸ್ತಿತ್ವಕ್ಕೆ ಬಂದಿತ್ತು.

2008ರಲ್ಲಿ ಮೊಟ್ಟಮೊದಲ ಬಿಜೆಪಿ ಸರ್ಕಾರ

2004ರ ಕರ್ನಾಟಕ ವಿಧಾನಸಭಾ ಚುನಾವಣೆಯಲ್ಲಿ 79 ಸ್ಥಾನ ಗಳಿಸಿದ್ದ ಬಿಜೆಪಿ, 2008ರಲ್ಲಿ ಬರೋಬ್ಬರಿ 110ಕ್ಕೆ ತನ್ನ ಸ್ಥಾನ ಹಿಗ್ಗಿಸಿಕೊಂಡಿತ್ತು. ಬಿ.ಎಸ್. ಯಡಿಯೂರಪ್ಪ ನೇತೃತ್ವದಲ್ಲಿ ಭರ್ಜರಿ ಗೆಲುವು ಸಾಧಿಸಿದ ಬಿಜೆಪಿ ಆ ಮೂಲಕ ಕರ್ನಾಟಕದಲ್ಲಿ ಸರ್ಕಾರ ರಚಿಸಿತ್ತು. 80 ಸ್ಥಾನ ಪಡೆದರೂ ಕಾಂಗ್ರೆಸ್ 2 ಸ್ಥಾನಕ್ಕೆ ಕುಸಿದಿತ್ತು. 28 ಸ್ಥಾನ ಪಡೆದು ಜನತಾ ದಳ-S 3ನೇ ಸ್ಥಾನ ಪಡೆದಿತ್ತು. ಈ ಚುನಾವಣೆಯಲ್ಲಿ ಸ್ವತಂತ್ರ ಅಭ್ಯರ್ಥಿಗಳ ಸಂಖ್ಯೆ ಕೇವಲ 6 ಸ್ಥಾನಕ್ಕೆ ಕುಸಿದಿದ್ದು ವಿಶೇಷ.

2013ರಲ್ಲಿ ಬಿಜೆಪಿ ಭಾರಿ ಮುಖಭಂಗ

ಬಿ.ಎಸ್. ಯಡಿಯೂರಪ್ಪ ಬಿಜೆಪಿ ತೊರೆದ ನಂತರ 2013ರಲ್ಲಿ ಬಿಜೆಪಿಗೆ ದೊಡ್ಡ ಸೋಲು ಎದುರಾಗಿತ್ತು. ಇದೇ ಚುನಾವಣೆಯಲ್ಲಿ ಯಡಿಯೂರಪ್ಪ ಕೆಜಿಪಿ ಪಕ್ಷ ಕಟ್ಟಿದ್ದರು. ಆಗ ಕಾಂಗ್ರೆಸ್ 122 ಸ್ಥಾನ ಗಳಿಸಿ ಸರ್ಕಾರ ರಚಿಸಿತು. ಜನತಾ ದಳ-S 40 ಸ್ಥಾನ, ಬಿಜೆಪಿ 40 ಸ್ಥಾನ ಪಡೆದರೆ ಶೇಕಡಾ 9.8ರಷ್ಟು ವೋಟ್ ಪಡೆದಿದ್ದ ಕೆಜಿಪಿ 4ನೇ ಸ್ಥಾನ ಪಡೆದಿತ್ತು. ಬಿಎಸ್‌ಆರ್ 4 ಸ್ಥಾನ ಪಡೆದಿತ್ತು. ಇತರರು 12 ಸ್ಥಾನದಲ್ಲಿ ಗೆಲುವು ಸಾಧಿಸಿದ್ದರು.

2018ರಲ್ಲಿ ಬಿಜೆಪಿ ಮತ್ತೊಮ್ಮೆ ದೊಡ್ಡ ಪಕ್ಷ

ಬದಲಾದ ಕಾಲಘಟ್ಟದಲ್ಲಿ ಮತ್ತೆ ಬಿ.ಎಸ್.ಯಡಿಯೂರಪ್ಪ ಬಿಜೆಪಿಗೆ ಬಂದರು. ಆಗ ಬಿಜೆಪಿ 104 ಸ್ಥಾನ ಗಳಿಸಿ ಅತಿದೊಡ್ಡ ಪಕ್ಷವಾಗಿ ಹೊರಹೊಮ್ಮಿತ್ತು. ಆದರೂ ಕಾಂಗ್ರೆಸ್ ಮತ್ತು ಜೆಡಿಎಸ್ ನೃತೃತ್ವದಲ್ಲಿ ಸರ್ಕಾರ ರಚನೆ ಆಗಿತ್ತು.

ಮುಂದೆ ಒಂದೇ ವರ್ಷದಲ್ಲಿ ಬಿಜೆಪಿ ಸರ್ಕಾರ ರಚನೆಯಾಗಿ, ಬಿ.ಎಸ್. ಯಡಿಯೂರಪ್ಪ ಮುಖ್ಯಮಂತ್ರಿ ಆದರು. ಈ ಮೂಲಕ 2023ರ ಚುನಾವಣೆಗೆ ಕರ್ನಾಟಕ ಈಗ ಸಜ್ಜಾಗಿದ್ದು, ಗೆಲುವಿನ ಬುತ್ತಿ ಯಾರ ಬಾಯಿಗೆ ಎಂಬುದನ್ನ ಕಾದು ನೋಡಬೇಕು.

ಇದಿಷ್ಟೂ ಕರ್ನಾಟಕ ವಿಧಾನಸಭೆ ಚುನಾವಣೆ ಇತಿಹಾಸ. ಒಟ್ಟು 15 ವಿಧಾನಸಭಾ ಚುನಾವಣೆಗಳನ್ನ ಕರ್ನಾಟಕ ಕಂಡಿದೆ. ಇದೀಗ 16 ಕರ್ನಾಟಕ ವಿಧಾನಸಭೆ ಚುನಾವಣೆಯ ಮತದಾನಕ್ಕೆ ಕೌಂಟ್‌ಡೌನ್ ಶುರುವಾಗಿದೆ. ಸಕಲ ಸಿದ್ಧತೆ ನಡುವೆ, ಬಿಗಿ ಭದ್ರತೆ ಮಧ್ಯೆ ಚುನಾವಣೆಗೆ ಕೌಂಟ್‌ಡೌನ್ ಕೂಡ ಶುರುವಾಗಿದೆ. ರಾಜಕೀಯ ಪಕ್ಷಗಳ ಈ ಸಂದರ್ಭವನ್ನ ತಮ್ಮ ಮತ ಓಲೈಕೆಗೆ ಬಳಿಸಿಕೊಳ್ಳುತ್ತಿದ್ದು, ಚುನಾವಣಾ ಸಂಭ್ರಮಕ್ಕೆ ಶೀಘ್ರದಲ್ಲೇ ತೆರೆ ಬೀಳಲಿದೆ.

ಒಟ್ನಲ್ಲಿ ರಾಜಕೀಯ ಲೆಕ್ಕಾಚಾರದ ಅಂತಿಮ ಆಟ ಶುರುವಾಗಿದೆ. ಇನ್ನೇನು ಕೆಲವೇ ಗಂಟೆಗಳಲ್ಲಿ ಚುನಾವಣಾ ಪ್ರಚಾರಕ್ಕೂ ತೆರೆ ಬೀಳಲಿದೆ. ಈ ಮೂಲಕ ಮತದಾರರ ಮನವೊಲಿಕೆಗೆ ರಾಜಕೀಯ ಪಕ್ಷಗಳು ನಡಸಿರುವ ತಂತ್ರ, ರಣತಂತ್ರದ ಉತ್ತರ ಮತಪೆಟ್ಟಿಗೆಯಲ್ಲಿ ದಾಖಲಾಗಲಿದೆ.

ಅಭ್ಯರ್ಥಿಗಳ ಹಣೆಬರಹವನ್ನ ಮತದಾರು ಪ್ರಭುಗಳು ನಿರ್ಧಾರ ಮಾಡಲಿದ್ದಾರೆ. ಮೇ 10ರಂದು ಚುನಾವಣೆ ನಡೆಯಲಿದ್ದು, ಮೇ 13ರಂದು ಚುನಾವಣಾ ಫಲಿತಾಂಶ ಪ್ರಕಟವಾಗಲಿದೆ. ಅಂದೇ ಸೋಲು-ಗೆಲುವಿನ ಲೆಕ್ಕಾಚಾರಕ್ಕೆ ಉತ್ತರ ಸಿಗಲಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+