ಚೀನಾ ಮೇಡ್ ಪಟಾಕಿಗಳನ್ನು ಬಳಸಬೇಡಿ, ಹಿಂದೂ ಸಂಘಟನೆ ಆಗ್ರಹ
ಬೆಂಗಳೂರು, ನವೆಂಬರ್ 7: ಹಿಂದು ದೇವತೆಗಳ ಹಾಗೂ ರಾಷ್ಟ್ರನಾಯಕರ ಭಾವಚಿತ್ರಗಳಿರುವ ಚೀನಾದ ಅಕ್ರಮ ಮಾರಾಟದ ಪಟಾಕಿಗಳನ್ನು ಸಿಡಿಸಬಾರದು ಎಂದು ಹಿಂದೂ ಜನಜಾಗೃತಿ ಸಮಿತಿ ಮನವಿ ಮಾಡಿದೆ.
ಈ ರೀತಿ ಪಟಾಕಿಗಳನ್ನು ಸುಟ್ಟು ಅರೆಬರೆ ಬೆಂದ ದೇವರುಗಳು ಹಾಗೂ ರಾಷ್ಟ್ರನಾಯಕರ ಚಿತ್ರಗಳಿರುವ ಛಿದ್ರಗೊಂಡ ಹಾಳೆಗಳ ತುಂಡುಗಳು ರಸ್ತೆಯಲ್ಲಿ ಎಲ್ಲೆಂದರಲ್ಲಿ ಬಿದ್ದಿರುತ್ತವೆ. ಕಸದ ರಾಶಿ, ಚರಂಡಿ ಎಲ್ಲಿ ನೋಡಿದರೂ ಅದೇ ಕಾಣಸಿಗುತ್ತದೆ, ಇದರಿಂದ ಜನರ ಧಾರ್ಮಿಕ ಭಾವನೆಗಳಿಗೆ ಧಕ್ಕೆ ಉಂಟಾಗುತ್ತದೆ ಹಾಗೂ ದೇಶಪ್ರೇಮಕ್ಕೂ ಧಕ್ಕೆ ಉಂಟಾಗುತ್ತದೆ ಎಂದು ಹೇಳಿದ್ದಾರೆ.

ಹೀಗಾಗಿ ಇಂತಹ ಪಟಾಕಿಗಳನ್ನು ಸುಡ ಬೇಡಿ, ಮುಂದಿನ ವರ್ಷ ಇಂತಹ ಪಟಾಕಿಗಳನ್ನು ಸಿದ್ಧಪಡಿಸುವವರು ಈ ರೀತಿಯ ಚಿತ್ರಗಳನ್ನು ಬಳಸದಂತೆ ತಡೆಯಲಾಗುತ್ತದೆ. ಈ ಕುರಿತು ಈಗಾಗಲೇ ಶಿವಕಾಶಿಯ ಪಟಾಕಿ ತಯಾರಕರ ಮತ್ತು ವಿತರಕರ ಸಂಘಕ್ಕೆ ಪತ್ರ ಬರೆಯಲಾಗಿದೆ ಎಂದು ಸಮಿತಿ ರಾಜ್ಯ ವಕ್ತಾರ ಮೋಹನ್ ಗೌಡ ಹೇಳಿದರು.
ಬೆಂಗಳೂರಲ್ಲಿ ಕೇವಲ ಬಿಬಿಎಂಪಿ ಮೈದಾನಗಳಲ್ಲಿ ಪಟಾಕಿ ಮಾರಾಟ ಮಾಡಬೇಕು ಎಂದು ಬಿಬಿಎಂಪಿ ಕಟ್ಟು ನಿಟ್ಟಿನ ಸೂಚನೆಯನ್ನು ನೀಡಿದೆ, ಅದರಂತೆಯೇ ಮಾರಾಟವನ್ನೂ ಕೂಡ ಮಾಡಲಾಗುತ್ತಿದೆ. ಆದರೆ ಕೆಲವು ಚೀನಾದಿಂದ ಬಂದಿರುವ ಪಟಾಕಿಯನ್ನು ಬಳಕೆ ಮಾಡಬೇಡಿ ಎಂದು ಮನವಿ ಮಾಡಿದ್ದಾರೆ.












Click it and Unblock the Notifications