525 ಕೋಟಿ ರೂಪಾಯಿ ವೆಚ್ಚದಲ್ಲಿ ಬೆಂಗಳೂರು ಕಂಟೋನ್ಮೆಂಟ್ ರೈಲ್ವೆ ನಿಲ್ದಾಣಕ್ಕೆ ಮರುವಿನ್ಯಾಸ
ಬೆಂಗಳೂರು, ಡಿಸೆಂಬರ್, 19: ಬೆಂಗಳೂರು ಕಂಟೋನ್ಮೆಂಟ್ ರೈಲ್ವೆ ನಿಲ್ದಾಣವನ್ನು ವಿಶ್ವ ದರ್ಜೆಯ ಟರ್ಮಿನಲ್ ಆಗಿ ಪರಿವರ್ತಿಸಲು ಭಾರತೀಯ ರೈಲ್ವೆ ಇಲಾಖೆ ಯೋಜನೆಯನ್ನು ಹಾಕಿಕೊಂಡಿದೆ. ಕಂಟೋನ್ಮೆಂಟ್ ರೈಲ್ವೆ ನಿಲ್ದಾಣಕ್ಕೆ 525 ಕೋಟಿ ರೂಪಾಯಿ ವೆಚ್ಚದಲ್ಲಿ ಹೈಟೆಕ್ ಸ್ಪರ್ಶ ಡಲು ಇಲಾಖೆ ಮುಂದಾಗಿದೆ.
ಮೊದಲ ಹಂತದಲ್ಲಿ ಬೆಂಗಳೂರು ಕಂಟೋನ್ಮೆಂಟ್ ರೈಲು ನಿಲ್ದಾಣದ ಯಾರ್ಡ್ ಅನ್ನು 45 ಕೋಟಿ ರೂಪಾಯಿ ವೆಚ್ಚದಲ್ಲಿ ಮರು ವಿನ್ಯಾಸಗೊಳಿಸಲಾಗುವುದು. ಈ ಮೂಲಕ ನಾಲ್ಕು ಹೆಚ್ಚುವರಿ ಪ್ಲಾಟ್ಫಾರ್ಮ್, ಎರಡು ಹೆಚ್ಚುವರಿ ಹಳಿಗಳನ್ನು ನಿರ್ಮಿಸಲಾಗುತ್ತದೆ. ಈ ಯೋಜನೆಯಿದ ಹೆಚ್ಚಿನ ರೈಲುಗಳು ಈ ನಿಲ್ದಾಣದ ಮೂಲಕ ಕಾರ್ಯನಿರ್ವಹಿಸಲಿವೆ. ಯಾರ್ಡ್ ಬೆಂಗಳೂರು ಉಪನಗರ ರೈಲು ಜಾಲದ ಜೊತೆ ಸಂಯೋಜಿಸಲ್ಪಡುತ್ತದೆ. ಪ್ರಯಾಣಿಕರಿಗೆ ಯಾವುದೇ ತೊಂದರೆ ಆಗಬಾರದು ಎನ್ನುವ ಉದ್ದೇಶದಿಂದ ಬೋರ್ ಬ್ಯಾಂಕ್ ರಸ್ತೆಯನ್ನು ಮುಂದಾಗಿದೆ. ಅಲ್ಲದೇ ನೇತಾಜಿ ರಸ್ತೆ ಮಧ್ಯೆ ಪಾದಚಾರಿ ಮೇಲ್ಸೇತುವೆಯನ್ನೂ ಕೂಡ ನಿರ್ಮಿಸಲು ನಿರ್ಧರಿಸಿದೆ. ಈ ಮರುವಿನ್ಯಾಸ ಕಾಮಗಾರಿ 2023ರ ಫೆಬ್ರವರಿ ಒಳಗೆ ಪೂರ್ಣಗೊಳ್ಳಲಿದೆ ಎನ್ನವ ಮಾಹಿತಿ ಲಭ್ಯವಾಗಿದೆ.

ಕಂಟೋನ್ಮೆಂಟ್ ರೈಲ್ವೆ ನಿಲ್ದಾಣಕ್ಕೆ ಹೈಟೆಕ್ ಸ್ಪರ್ಶ
ಇನ್ನು ಎರಡನೇ ಹಂತದಲ್ಲಿ ಈ ರೈಲ್ವೆ ನಿಲ್ದಾಣವನ್ನು ಹೈಟೆಕ್ ವಿಮಾನ ನಿಲ್ದಾಣದ ವಿನ್ಯಾಸ ಮಾದರಿಯಲ್ಲಿ ಅಭಿವೃದ್ಧಿಗೊಳಿಸುವ ಪ್ಲಾನ್ ರೂಪಿಸಿದೆ. 480 ಕೋಟಿ ರೂಪಾಯಿ ವೆಚ್ಚದಲ್ಲಿ ಇದನ್ನು ಅಭಿವೃದ್ಧಿ ಪಡಿಸಲಾಗುವುದು ಎನ್ನುವ ಮಾಹಿತಿ ಲಭ್ಯವಾಗಿದೆ. ನೂತನ ನಿಲ್ದಾಣದಲ್ಲಿ ಸಂಪೂರ್ಣ ಹವಾನಿಯಂತ್ರಿತ 216 ಮೀಟರ್ ಅಗಲದ ಸಭಾಂಗಣ, ಪ್ರವೇಶ ಹಾಗೂ ನಿರ್ಗಮನ ದ್ವಾರಗಳನ್ನು ಮಾಡಲಾಗುತ್ತದೆ.

ನಿಲ್ದಾಣದ ಒಳಗಡೆ ಯಾವೆಲ್ಲ ಸೌಲಭ್ಯಗಳಿವೆ?
ಅಲ್ಲದೇ ಬಹುಮಹಡಿ ಪಾರ್ಕಿಂಗ್, ವಾಣಿಜ್ಯ ಚಟುವಟಿಕೆಗಳಿಗೆ ಸ್ಥಳಾವಕಾಶವನ್ನು ಕಲ್ಪಿಸಿಕೊಡಲಾಗುವುದು. ಹಾಗೂ ಪ್ಲಾಟ್ ಫಾರ್ಮ್ ಮೇಲೆ ವಿಶಿಷ್ಟವಾಗಿ ರೂಫ್ ಪ್ಲಾಜಾ ನಿರ್ಮಾಣ ಮಾಡಲಾಗುವುದು. ಇದರೊಂದಿಗೆ ಮಳೆ ನೀರು ಕೊಯ್ಲು ವ್ಯವಸ್ಥೆ, ಹಸಿರು ಕಟ್ಟಡ, ಎಲ್ಇಡಿ ಲೈಟಿಂಗ್ ವ್ಯವಸ್ಥೆ, ತ್ಯಾಜ್ಯ ನೀರು ಸಂಸ್ಕರಣಾ ಘಟಕಗಳನ್ನು ಕೂಡ ನಿರ್ಮಾಣ ಮಾಡಲಾಗುವುದು. ಇದರ ಹೊರತಾಗಿಯೂ ಪ್ರಯಾಣಿಕರಿಗೆ ವೈ-ಫೈ ವ್ಯವಸ್ಥೆ, ರ‍್ಯಾಂಪ್, ಲಿಫ್ಟ್, ಸಬ್ ವೇ ಗಳ ನಿರ್ಮಾಣ, ಸಾರ್ವಜನಿಕ ಸಾರಿಗೆ ವ್ಯವಸ್ಥೆಯೂ ಕೂಡ ಇರಲಿದೆ.

ಬೆಂಗಳೂರಿನ ವಿಶೇಷತೆಯನ್ನು ಮತ್ತಷ್ಟು ಹೆಚ್ಚಿಸಲಿದೆ
ಹೊಸ ವಿನ್ಯಾಸದ ರೈಲು ನಿಲ್ದಾಣ ಕಟ್ಟಡ ಪ್ರಸಕ್ತ ಇರುವ ಪಾರಂಪರಿಕ ಕಟ್ಟಡಗಳನ್ನು ಹೋಲುವಂತೆ ಇರುತ್ತದೆ. ಅಲ್ಲದೇ ಪಾರಂಪರಿಕತೆಯನ್ನು ನೆನಪಿಸುವ ಮೂಲಕ ಬೆಂಗಳೂರಿಗೆ ಒಂದು ರೀತಿಯ ಕಳೆ ನೀಡಲಿದೆ. ಕಟ್ಟಡದ ಮೃಲ್ಛಾವಣಿ ಅಲೆಗಳ ರಚನೆಯಲ್ಲಿ ಇರಲಿದ್ದು, ಸಿಲಿಕಾನ್ ಸಿಟಿ ಬೆಂಗಳೂರಿನ ಅಭಿವೃದ್ಧಿಯ ಪರಿಕಲ್ಪನೆಯನ್ನು ಸಹ ಇಲ್ಲಿ ಕಾಣಬಹುದಾಗಿರುತ್ತದೆ.

ಕೊಳಲಿನ ವಿನ್ಯಾಸದಲ್ಲಿ ಇರಲಿವೆ ಬೀಮ್ಗಳು
ಮೇಲ್ಛಾವಣಿಯ ಪಿಲ್ಲರ್ಗಳನ್ನು ಹೂವಿನ ಆಕೃತಿಯಲ್ಲಿ ಜೋಡಿಸಲಾಗುವುತ್ತದೆ. ಇದರಿಂದ ಬೆಂಗಳೂರಿನ ವಿಶೇಷತೆ ಮತ್ತಷ್ಟು ಹೆಚ್ಚಿದಂತಾಗುತ್ತದೆ. ಪಿಲ್ಲರ್ಗಳಿಗೆ ಅಡ್ಡಲಾಗಿ ಸಂಪರ್ಕಿಸುವ ಬೀಮ್ಗಳು ಕೊಳಲಿನ ವಿನ್ಯಾಸದಲ್ಲಿ ಇರಲಿದ್ದು, ಇದು ಪ್ರಯಾಣಿಕರನ್ನು ಮತ್ತಷ್ಟು ತನ್ನತ್ತ ಸೆಳೆಯುತ್ತಲೇ ಇರುತ್ತದೆ. ಹೀಗೆ ರೈಲು ನಿಲ್ದಾಣದ ಕಟ್ಟಡವನ್ನು ಮರುವಿನ್ಯಾಸ ಮಾಡಲು ಇಲಾಖೆ ಮುಂದಾಗಿದೆ. ಈ ಕಾಮಗಾರಿಯನ್ನು 36 ತಿಂಗಳಲ್ಲಿ ಪೂರ್ಣಗೊಳಿಸುವ ಗುರಿ ಹೊಂದಲಾಗಿದೆ. ನವದೆಹಲಿ ಮೂಲದವರಿಗೆ ಕಟ್ಟಡ ನಿರ್ಮಾಣ ಖಾಸಗಿ ಸಂಸ್ಥೆಗೆ ಕಾಮಗಾರಿ ಟೆಂಡರ್ ನೀಡಲಾಗಿದೆ. ಕಂಟೋನ್ಮೆಂಟ್ ರೈಲು ನಿಲ್ದಾಣದ ಎದುರಿನ ರಸ್ತೆಯನ್ನು ಸ್ಥಳಾಂತರಿಸಿ, ಅಗಲೀಕರಣ ಮಾಡಲಾಗುವುದು. ಇದರಿಂದ ಇನ್ನಿತರ ವಾಹನಗಳ ಒಳಬರುವಿಕೆಗೂ ತುಂಬಾ ಸಹಾಕಾರಿ ಆಗಲಿದೆ.












Click it and Unblock the Notifications