ಏಯ್, ಕರಿ ಟೋಪಿ ಎಂಎಲ್‌ಎ, ಬಾ ಇಲ್ಲಿ: ಮುನಿರತ್ನಗೆ ಕರೆದ ಡಿ.ಕೆ.ಶಿವಕುಮಾರ್
ಬೆಂಗಳೂರಿನ ಜೆ.ಪಿ.ಪಾರ್ಕ್‌ನಲ್ಲಿ ಡಿಸಿಎಂ ಡಿಕೆ ಶಿವಕುಮಾರ್ ಹಮ್ಮಿಕೊಂಡಿದ್ದ "ಬೆಂಗಳೂರು ನಡಿಗೆ" ಕಾರ್ಯಕ್ರಮದಲ್ಲಿ ದೊಡ್ಡ ಹೈಡ್ರಾಮಾ ನಡೆದಿದೆ. ಬಿಜೆಪಿ ಶಾಸಕ ಮುನಿರತ್ನ ಅವರು ಈ ಕಾರ್ಯಕ್ರಮದಲ್ಲಿ ಕಾಣಿಸಿಕೊಂಡಿದ್ದಾರೆ. ಈ ವೇಳೆ ಡಿಸಿಎಂ ಹಾಗೂ ಮುನಿರತ್ನ ನಡುವೆ ಮಾತಿನ ಚಕಮಕಿ ನಡೆದಿದೆ. ಆರ್‌ಎಸ್‌ಎಸ್ ವಸ್ತ್ರದಲ್ಲಿ ಮುನಿರತ್ನ ಈ ಕಾರ್ಯಕ್ರಮಕ್ಕೆ ಆಗಮಿಸಿದ್ದು, ಆಗ ಏಯ್, ಕರಿ ಟೋಪಿ ಎಂಎಲ್‌ಎ ಬಾ ಇಲ್ಲಿ ಎಂದು ಡಿಕೆ ಶಿವಕುಮಾರ್ ವೇದಿಕೆಗೆ ಕರೆದಿದ್ದಾರೆ.
ವೇದಿಕೆಗೆ ಬಂದ ಮುನಿರತ್ನ ನನಗೆ ಈ ಕಾರ್ಯಕ್ರಮಕ್ಕೆ ಆಹ್ವಾನವಿಲ್ಲ, ಜನರೊಡನೆ ಇರುತ್ತೇನೆ ಎಂದಿದ್ದಾರೆ. ಪರವಾಗಿಲ್ಲ ಇಲ್ಲಿ ಕುಳಿತುಕೋ ಎಂದು ಡಿಸಿಎಂ ಹೇಳಿದ್ದು, ಈ ಮಧ್ಯೆ ಅವರ ಮೈಕ್ ಕಸಿದು ಮುನಿರತ್ನ ಹೈಡ್ರಾಮ ಮಾಡಿದ್ದಾರೆ. ಈ ವೇಳೆ ಅಲ್ಲಿ ಗದ್ದಲ ಸೃಷ್ಟಿಯಾಗಿದ್ದು, ರಾಜಕೀಯ ಕಿತ್ತಾಟದ ವೇದಿಕೆಯಾಗಿ ಈ ಕಾರ್ಯಕ್ರಮ ಬದಲಾಯ್ತು.

ಬೆಂಗಳೂರು ನಡಿಗೆ ಅನ್ನೋದು ಸರ್ಕಾರದ ಕಾರ್ಯಕ್ರಮ. ಆದರೂ ಶಾಸಕನಾದ ನನಗೆ ಆಹ್ವಾನ ನೀಡದೆ ಅಗೌರವ ತೋರಿಸಿದ್ದೀರಿ. ಶಾಸಕನ ಒಂದು ಫೋಟೋ ಕೂಡ ಹಾಕಿಲ್ಲ, ನನಗೆ ಆಹ್ವಾನವೂ ಕೊಟ್ಟಿಲ್ಲ ಎಂದು ಮುನಿರತ್ನ ಗರಂ ಆಗಿದ್ದಾರೆ. ಆಗ ಕಾಂಗ್ರೆಸ್ ಹಾಗೂ ಬಿಜೆಪಿ ಕಾರ್ಯಕರ್ತರ ನಡುವೆ ಗಲಾಟೆ ನಡೆದಿದ್ದು, ಕಾರ್ಯಕರ್ತರು ಪರಸ್ಪರ ಧಿಕ್ಕಾರ ಕೂಗಿದ್ದಾರೆ. ಗಲಾಟೆ ಹೆಚ್ಚಾದ ಕಾರಣ ಮುನಿರತ್ನ ಅವರನ್ನು ಪೊಲೀಸರು ಜೆಪಿ ಪಾರ್ಕ್ನಿಂದ ಕರೆದೊಯ್ದಿರುವ ಘಟನೆ ನಡೆದಿದೆ.
ಕಾಂಗ್ರೆಸ್ ಕಾರ್ಯಕರ್ತರು ನನಗೆ ಒದ್ದು, ಹಲ್ಲೆ ನಡೆಸಿದ್ದಾರೆ ಎಂದು ಮುನಿರತ್ನ ಆರೋಪ ಮಾಡಿದ್ದು, ಜೆಪಿ ಪಾರ್ಕ್ ಕಾರ್ಯಕ್ರಮದಲ್ಲಿ ಶಾಸಕರನ್ನು ಹೊಡೆಯಲು ಕನಕಪುರದಿಂದ ರೌಡಿಗಳು ಬಂದಿದ್ದಾರೆ ಎಂದು ದೂರಿದ್ದಾರೆ.
ಪ್ರಜಾಪ್ರಭುತ್ವದ ವ್ಯವಸ್ಥೆಯಲ್ಲಿ ಪಾಳೇಗಾರಿಕೆ ಸಂಸ್ಕೃತಿಗೆ ಜಾಗವಿಲ್ಲ. ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್ ಅವರು ಜನಪ್ರತಿನಿಧಿಯನ್ನು ಅಪಮಾನಿಸಿ ಸಂವಿಧಾನ ಹಾಗೂ ಪ್ರಜಾಪ್ರಭುತ್ವಕ್ಕೆ ಅಗೌರವ ತೋರಿಸಿದ್ದಾರೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿವೈ ವಿಜಯೇಂದ್ರ ಕಿಡಿಕಾರಿದ್ದಾರೆ. ಶಾಸಕ ಮುನಿರತ್ನ ಅವರ ರಾಜರಾಜೇಶ್ವರಿ ನಗರ ವಿಧಾನಸಭಾ ಕ್ಷೇತ್ರದ ವ್ಯಾಪ್ತಿಯಲ್ಲಿ ಆಯೋಜಿಸಿದ್ದ ಜನಸಂಪರ್ಕ ಸಭೆಯಲ್ಲಿ ಸ್ಥಳೀಯ ಶಾಸಕ ಮುನಿರತ್ನರನ್ನೇ ಆಹ್ವಾನಿಸದೆ, ಶಾಸಕರೊಂದಿಗೆ ಉಡಾಫೆಯಿಂದ ವರ್ತಿಸಿರುವುದು, ಅವರು ಧರಿಸಿದ್ದಆರ್‌ಎಸ್‌ಎಸ್ ಗಣವೇಶವನ್ನು ಅಪಮಾನಿಸಿರುವುದು ಉದ್ಧಟತನದ ಪರಮಾವಧಿ ಎಂದು ಆಕ್ರೋಶ ಹೊರಹಾಕಿದ್ದಾರೆ.
ಡಿ.ಕೆ.ಶಿವಕುಮಾರ್ ಅವರ ಈ ನಡೆ ಸರ್ವಾಧಿಕಾರಿತನವನ್ನು ಪ್ರತಿಬಿಂಬಿಸಿದೆ. ಅಧಿಕಾರ ಶಾಶ್ವತವಲ್ಲ, ಅದು ಪ್ರಜಾತಂತ್ರ ವ್ಯವಸ್ಥೆಯಲ್ಲಿ ಜನರು ನೀಡುವ ಭಿಕ್ಷೆ ಎಂಬ ಪರಿಜ್ಞಾನವಿಲ್ಲದೆ ನಡೆದುಕೊಳ್ಳುತ್ತಿರುವ ಅವರ ವರ್ತನೆ ಅತ್ಯಂತ ಖಂಡನೀಯ. ನಿಮ್ಮ ನಡೆ, ನುಡಿ, ವರ್ತನೆಯನ್ನು ಜನರು ಗಮನಿಸುತ್ತಿದ್ದಾರೆ, ತಕ್ಕ ಉತ್ತರದ ಪಾಠವನ್ನು ಇಷ್ಟರಲ್ಲೇ ನಿಮಗೆ ಕಲಿಸಲಿದ್ದಾರೆ ಎಂದು ಎಚ್ಚರಿಸಿದ್ದಾರೆ.











Click it and Unblock the Notifications