Bengaluru Property: ಬೆಂಗಳೂರು ಗ್ರಾಮಾಂತರದಲ್ಲಿ ಆಸ್ತಿ ಖರೀದಿ ಹೆಚ್ಚಳ: ಇಲ್ಲಿದೆ ಕಾರಣ
ಬೆಂಗಳೂರು ನಗರ ಪ್ರದೇಶದಲ್ಲಿ ದಿನದಿಂದ ದಿನಕ್ಕೆ ಆಸ್ತಿ ಬೆಲೆ ಗಗನಕ್ಕೇರುತ್ತಿದ್ದು, ಖರೀದಿದಾರರು ಪರ್ಯಾಯ ಆಯ್ಕೆಗಳತ್ತ ಹೋಗುವಂತೆ ಮಾಡಿದೆ. ನಗರದ ಹೊರವಲಯದಲ್ಲಿ ಗ್ರಾಮೀಣ ಭಾಗಗಳಲ್ಲಿ ಆಸ್ತಿ ಖರೀದಿ ಹೆಚ್ಚಾಗುತ್ತಿದೆ.
ಮೂಲ ಸೌಕರ್ಯ ಇಲ್ಲದೇ ಇದ್ದರೂ ಗ್ರಾಮೀಣ ಭಾಗದಲ್ಲಿ ಆಸ್ತಿ ಖರೀದಿಗೆ ಹೆಚ್ಚಿನ ಆಸಕ್ತಿ ತೋರುತ್ತಿದ್ದು, ಮುಂದಿನ ದಿನಗಳಲ್ಲಿ ಬೇಡಿಕೆ ಮತ್ತಷ್ಟು ಹೆಚ್ಚುವ ನಿರೀಕ್ಷೆ ಮಾಡಲಾಗಿದೆ.

ಬೆಂಗಳೂರು ಗ್ರಾಮಾಂತರ ವ್ಯಾಪ್ತಿಯ ದೇವನಹಳ್ಳಿ ಮತ್ತು ಹೊಸಕೋಟೆ ಪ್ರದೇಶದಲ್ಲಿ ದರಗಳು ಕೈಗೆಟುಕುವಂತಿದ್ದು ಹೆಚ್ಚಿನ ಜನ ಆಸ್ತಿ ಖರೀದಿ ಮಾಡುತ್ತಿದ್ದಾರೆ. ಕೋವಿಡ್ 19 ಸಂದರ್ಭದಲ್ಲಿ ಆದ ಅಡ್ಡ ಪರಿಣಾಮ, ನಗರ ಪ್ರದೇಶದಿಂದ ದೂರ ಇರುವ ಹಂಬಲ ಕೂಡ ಇದಕ್ಕೆ ಕಾರಣವಾಗಿದೆ.
ಆಸ್ತಿ ನೋಂದಣಿ ಹೆಚ್ಚಳ
ಡಿಹೆಚ್ ವರದಿ ಮಾಡಿರುವ ಪ್ರಕಾರ, ಬೆಂಗಳೂರು ಗ್ರಾಮಾಂತರ ಜಿಲ್ಲೆಯಲ್ಲಿ 2019-20 ರಿಂದ 2022-23 ರವರೆಗೆ ಆಸ್ತಿ ನೋಂದಣಿ ಮೂಲಕ ಸಂಗ್ರಹಿಸಲಾದ ಆದಾಯವು ಸುಮಾರು 128 ಪ್ರತಿಶತದಷ್ಟು ಹೆಚ್ಚಾಗಿದೆ, ಇದು ಈ ಭಾಗದಲ್ಲಿ ಆಸ್ತಿ ಮಾರಾಟವು ಹೆಚ್ಚಾಗುತ್ತಿರುವುದಕ್ಕೆ ಸೂಚನೆಯಾಗಿದೆ.
2019-20ರಲ್ಲಿ ಸ್ಟಾಂಪ್ ಡ್ಯೂಟಿ ಮತ್ತು ನೋಂದಣಿ ಶುಲ್ಕದ ರೂಪದಲ್ಲಿ 439.15 ಕೋಟಿ ರೂ. ಸಂಗ್ರಹವಾಗಿದ್ದರೆ, 2022-23ರಲ್ಲಿ 1003.89 ಕೋಟಿ ರೂ.ಗೆ ಏರಿಕೆಯಾಗಿದೆ, 2023-24ರಲ್ಲಿ ಮೊದಲ ಆರು ತಿಂಗಳ ಅವಧಿಯಲ್ಲೇ 385.13 ಕೋಟಿ ರೂಪಾಯಿ ಶುಲ್ಕ ಸಂಗ್ರಹಿಸಲಾಗಿದೆ.
ದೊಡ್ಡಬಳ್ಳಾಪುರ, ನೆಲಮಂಗಲದಲ್ಲಿ ಕೂಡ ಆಸ್ತಿ ಹೆಚ್ಚಳ
"ಬೆಂಗಳೂರು ಗ್ರಾಮಾಂತರದಲ್ಲಿ ಹೂಡಿಕೆಗೆ ಗಮನಾರ್ಹ ಒಲವು ಇದೆ. ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣ ಹತ್ತಿರ ಇರುವ ಕಾರಣ ದೇವನಹಳ್ಳಿಯ ಮತ್ತು ಸುತ್ತಮುತ್ತಲಿನ ಪ್ರದೇಶಗಳಲ್ಲಿ ಆಸ್ತಿಗೆ ಬೇಡಿಕೆ ಹೆಚ್ಚಾಗಿದೆ. ಚೆನ್ನೈ ಎಕ್ಸ್‌ಪ್ರೆಸ್‌ವೇ ನಿರ್ಮಾಣವಾಗುತ್ತಿರುವ ಕಾರಣ ಹೊಸಕೋಟೆ ಭಾಗದಲ್ಲಿ ಕೂಡ ಆಸ್ತಿ ಖರೀದಿಗೆ ಹೆಚ್ಚಿನ ಆಸಕ್ತಿ ತೋರಿಸುತ್ತಿದ್ದಾರೆ ಎಂದು ಮುದ್ರಾಂಕ ಮತ್ತು ನೋಂದಣಿ ಇಲಾಖೆಯ ಹಿರಿಯ ಅಧಿಕಾರಿಯೊಬ್ಬರು ಹೇಳಿದರು.
ದೊಡ್ಡಬಳ್ಳಾಪುರ ಮತ್ತು ನೆಲಮಂಗಲದಲ್ಲೂ ಆಸ್ತಿ ಖರೀದಿಗೆ ಆಸಕ್ತಿ ಹೆಚ್ಚುತ್ತಿದೆ ಎಂದು ಡೆವಲಪರ್‌ಗಳು ಮತ್ತು ಇಲಾಖೆಯ ಮೂಲಗಳು ತಿಳಿಸಿವೆ.
ಅನೇಕ ಪ್ರಸಿದ್ಧ ಡೆವಲಪರ್‌ಗಳು ಬೃಹತ್ ಅಪಾರ್ಟ್ಮೆಂಟ್ ಸಂಕೀರ್ಣಗಳು, ಗೇಟೆಡ್ ಸಮುದಾಯಗಳು ಮತ್ತು ಟೌನ್‌ಶಿಪ್‌ಗಳು ಸೇರಿದಂತೆ ದೊಡ್ಡ ಯೋಜನೆಗಳನ್ನು ಗ್ರಾಮೀಣ ಭಾಗದಲ್ಲಿ ಆರಂಭಿಸಲು ನೋಡುತ್ತಿದ್ದಾರೆ.
ವರ್ಕ್ ಫ್ರಂ ಹೋಮ್ ಉಪಯೋಗ
ಬೆಂಗಳೂರು ನಗರ ವ್ಯಾಪ್ತಿಯಲ್ಲಿ ಆಸ್ತಿ ದರಗಳು ಭಾರಿ ದುಬಾರಿಯಾಗಿದೆ, ಬೆಂಗಳೂರು ನಗರದಲ್ಲಿ ಆಸ್ತಿ ಕೊಳ್ಳುವ ಮೊತ್ತದಲ್ಲಿ ನಗರದ ಹೊರವಲಯದಲ್ಲಿ ಇನ್ನಷ್ಟು ಉತ್ತಮ ಆಸ್ತಿ ಕೊಳ್ಳಬಹುದು ಎಂದು ದೇವನಹಳ್ಳಿಯಲ್ಲಿ ಫ್ಲ್ಯಾಟ್ ಖರೀದಿ ಮಾಡಿರುವ ಸುಮಂತ್ ಎನ್ನುವವರು ಡಿಹೆಚ್‌ಗೆ ತಿಳಿಸಿದ್ದಾರೆ.
ಈ ಪ್ರದೇಶಗಳು ಕೂಡ ವೇಗವಾಗಿ ಅಭಿವೃದ್ಧಿ ಹೊಂದುತ್ತಿವೆ, ನನಗೆ ಮತ್ತು ಹೆಂಡತಿಗೆ ಹೆಚ್ಚಿನ ದಿನಗಳು ಮನೆಯಿಂದಲೇ ಕೆಲಸ ಇರುವ ಕಾರಣ, ಈ ಭಾಗದಲ್ಲಿ ಆಸ್ತಿ ಖರೀದಿ ಮಾಡುವುದು ಉತ್ತಮ ನಿರ್ಧಾರ ಎಂದು ಅಭಿಪ್ರಾಯಪಟ್ಟಿದ್ದಾರೆ.
ಮೂರು ವರ್ಷಗಳಲ್ಲಿ ದುಪ್ಪಟ್ಟಾದ ಬೆಲೆ
ದೇವನಹಳ್ಳಿ ತಾಲೂಕು ಸುತ್ತಮುತ್ತಲಿನ ಪ್ರದೇಶಗಳಲ್ಲಿ ಆಸ್ತಿ ಬೆಲೆಗಳಲ್ಲಿ ಭಾರಿ ಏರಿಕೆಯಾಗುತ್ತಿದೆ. ಕಳೆದ ಮೂರು ವರ್ಷಗಳಲ್ಲಿ ಇಲ್ಲಿನ ಆಸ್ತಿ ಬೆಲೆಗಳು ದ್ವಿಗುಣವಾಗಿವೆ.
ನಾಲ್ಕು ವರ್ಷಗಳಿಂದ ರಿಯಲ್ ಎಸ್ಟೇಟ್ ವೇಗವಾಗಿ ಅಭಿವೃದ್ದಿ ಹೊಂದುತ್ತಿದೆ. ಕೋವಿಡ್ ಸಮಯದಲ್ಲಿ ಖರೀದಿಗಳು ತೀವ್ರವಾಗಿ ಹೆಚ್ಚಾದವು. ಅಂದಿನಿಂದ ಆಸ್ತಿ ದರಗಳು ತೀವ್ರವಾಗಿ ಹೆಚ್ಚಿವೆ. ಪ್ರಮುಖ ಪ್ರದೇಶಗಳಲ್ಲಿ, ಒಂದು ಕಾಲದಲ್ಲಿ ಚದರ ಅಡಿ ಬೆಲೆಯ ಆಸ್ತಿಗಳು 4,000 ರೂಪಾಯಿ ಇದ್ದರೆ ಈಗ 7,500 ರೂಪಾಯಿಗೆ ಹೆಚ್ಚಳವಾಗಿದೆ.












Click it and Unblock the Notifications