Breaking: ಬೆಂಗಳೂರಿಗೆ ಸೆ.9 ರವರೆಗೆ ಭಾರಿ ಮಳೆ, ಮಳೆ ಪ್ರಮಾಣ ದಾಖಲೆ!
ಬೆಂಗಳೂರು ಸೆಪ್ಟಂಬರ್ 05: ಸಿಲಿಕಾನ್ ಸಿಟಿ ಬೆಂಗಳೂರಿಗೆ ಕೆಲವು ದಿನಗಳಿಂದ ಸುರಿಯುತ್ತಿರುವ ಭಾರಿ ಮಳೆ ಸೆಪ್ಟಂಬರ್ 9 ರವರೆಗೂ ಮುಂದುವರೆಯುವ ನಿರೀಕ್ಷೆ ಇದೆ ಎಂದು ಭಾರತೀಯ ಹವಾಮಾನ ಇಲಾಖೆ ಬೆಂಗಳೂರು ಕೇಂದ್ರದ ಅಧಿಕಾರಿಗಳು ಮುನ್ಸೂಚನೆ ನೀಡಿದ್ದಾರೆ.
ಬೆಂಗಳೂರಿನಲ್ಲಿ ಕಳೆದ ಎರಡು ವಾರದಿಂದ ಭಾರಿ ಮಳೆ ಆಗುತ್ತಿದೆ. ಇದರಿಂದ ಬೆಂಗಳೂರಿನ ಬಡಾವಣೆ, ರಸ್ತೆ, ರಾಜಕಾಲುವೆಗಳು ತುಂಬಿದ್ದು, ಸಾವಿರಾರು ಮಂದಿ ಸಂಕಷ್ಟ ಅನುಭವಿಸುತ್ತಿದ್ದಾರೆ. ಮನೆಯಿಂದ ಹೊರ ಬರುವುದು, ಹೊರ ಬಂದರೆ ಮರಳಿ ಮನೆ ಸೇರುವುದು ಕಷ್ಟ ಎಂಬಂತಹ ಸ್ಥಿತಿ ನಿರ್ಮಾಣವಾಗಿದೆ.
ಸೋಮವಾರದ ಹವಾಮಾನ ಮುನ್ಸೂಚನೆ ವರದಿ ಪ್ರಕಾರ ಸೆಪ್ಟಂಬರ್ 9 ರವರೆಗೂ ನಗರಾದ್ಯಂತ ಗುಡುಗು, ಮಿಂಚು ಸಹಿತಿ ಭಾರಿ ಮಳೆ ಸುರಿಯಲಿದೆ. ಈ ಕಾರಣಕ್ಕೆ ಸೆ.8ರ ಹೊರತು ಪಡಿಸಿ ಉಳಿದ ಎಲ್ಲ ದಿನ 'ಯೆಲ್ಲೋ ಅಲರ್ಟ್' ಎಚ್ಚರಿಕೆ ನೀಡಲಾಗಿದೆ. ಈ ಅವಧಿಯಲ್ಲಿ ಬೆಂಗಳೂರಿನಲ್ಲಿ ಸಾಧಾರಣದಿಂದ ಭಾರಿ ಮಳೆ ಅಂದರೆ ಸುಮಾರು 6 ಸೆಂ.ಮೀ.ನಿಂದ 12 ಸೆಂ.ಮೀ.ವರೆಗೆ ಮಳೆ ಬೀಳುವ ಸಾಧ್ಯತೆ ಇದೆ.

ಈ ಸಮಯದಲ್ಲಿ ನಗರದಲ್ಲಿ ಗರಿಷ್ಠ 27 ಡಿಗ್ರಿ ಸೆಲ್ಸಿಯಸ್ ಹಾಗೂ ಕನಿಷ್ಠ 20 ಡಿಗ್ರಿ ಸೆಲ್ಸಿಯಸ್ ತಾಪಮಾನ ದಾಖಲಾಗಬಹುದು ಎಂದು ಅಧಿಕಾರಿಗಳು ಅಂದಾಜಿಸಿದ್ದಾರೆ.
ಸೋಮವಾರ ಎಲ್ಲೆಲ್ಲಿ ಎಷ್ಟ ಮಳೆ ದಾಖಲಾಗಿದೆ
ಇನ್ನೂ ಸೋಮವಾರ ರಾತ್ರಿ 8.30 ರವರೆಗೆ ಬೆಂಗಳೂರು ನಗರ ಹಾಗೂ ಸುತ್ತಮುತ್ತಲಿನ ಪ್ರದೇಶದಲ್ಲಿ ಧಾರಾಕಾರವಾಗಿ ಮಳೆ ಸುರಿದಿದೆ. ಈ ಪೈಕಿ ಮದಹಾದೇವಪುರ ವಲಯ ವ್ಯಾಪ್ತಿಯ ದೊಡ್ಡಾನೆಕುಂದಿಯಲ್ಲಿ 85 ಮಿ.ಮೀ. ಮಳೆ ಬಿದ್ದಿದೆ. ಉಳಿದಂತೆ ಸಿಂಗಸಂದ್ರ 59 ಮಿ.ಮೀ, ಗರುಡಾಚಾರ್‌ಪಾಳ್ಯ 50 ಮಿ.ಮೀ, ಹೂಡಿ 46.5 ಮಿ.ಮೀ, ಎಚ್‌ಎಎಲ್ ಏರ್‌ಪೋರ್ಟ್ 42 ಮಿ.ಮೀ, ಹಗದೂರು 40 ಮಿ.ಮೀ, ಯಲಹಂಕ 38.5 ಮಿ.ಮೀ, ವರ್ತೂರು 37 ಮಿ.ಮೀ, ಎಚ್‌ಎಂಟಿ ವಾರ್ಡ್ 35.5 ಮಿ.ಮೀ, ಕೆ.ಆರ್.ಪುರಂ 34.5 ಮಿ.ಮೀ, ರಾಮಮೂರ್ತಿ ನಗರ 32.534.5 ಮಿ.ಮೀ, ಬಸವನಗುಡಿ 32 ಮಿ.ಮೀ, ಬೆಳ್ಳಂದೂರು 30 ಮಿ.ಮೀ, ವಿದ್ಯಾಪೀಠ 28 ಮಿ.ಮೀ, ಹೊರಮಾವು 27.5 ಮಿ.ಮೀ, ಕೆಂಗೇರಿ ಮತ್ತು ಪೀಣ್ಯ ಕೈಗಾರಿಕೆ ಪ್ರದೇಶ ತಲಾ 26 ಮಿ.ಮೀ. ಮಳೆ ಬಿದ್ದಿದೆ.
ಉಳಿದ ಪ್ರದೇಶಗಳಲ್ಲಿ ಹಗುರದಿಂದ ಸಾಧಾರಣವಾಗಿ ಮಳೆ ಬಿದ್ದಿದೆ. ಇದರಿಂದ ಸಂಚಾರ, ವ್ಯಾಪಾರ ವಹೀವಾಟು ಹಾಗೂ ಜನಜೀವನ ಅಸ್ತವೆಸ್ತಗೊಂಡಿದೆ. ಅಲ್ಲದೇ ಕಳೆದ ಒಂದುವಾರಕ್ಕೂ ಹೆಚ್ಚು ದಿನಗಳಿಂದ ಬೆಂಗಳೂರಿನಾದ್ಯಂತ ತಂಪು ಹಾಗೂ ಚಳಿಯ ವಾತಾವರಣ ಕಂಡು ಬಂದಿದೆ ಎಂದು ಕರ್ನಾಟಕ ರಾಜ್ಯ ನೈಸರ್ಗಿಕ ವಿಕೋಪ ಉಸ್ತುವಾರಿ ಕೇಂದ್ರ (ಕೆಎಸ್‌ಎನ್‌ಡಿಎಂಸಿ) ವರದಿ ಮಾಹಿತಿ ನೀಡಿದೆ.












Click it and Unblock the Notifications