Rain Alert: ರಾಜಧಾನಿಗೆ ಭಾರೀ ಮಳೆ ಎಚ್ಚರಿಕೆ! ಜುಲೈ 21ರಂದು 'ಯೆಲ್ಲೋ ಅಲರ್ಟ್', ಹವಾಮಾನ ವರದಿ
ಬೆಂಗಳೂರು, ಜುಲೈ 19: ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ ಮುಂಗಾರು ಮಳೆ ಚುರುಕಾಗಿದೆ. ಹವಾಮಾನ ತಂಪಿನಿಂದ ಕೂಡಿದ್ದು, ಜೋರು ಗಾಳಿ ಸಹಿತಿ ವ್ಯಾಪಕ ಮಳೆ ಆಗಿದೆ. ಶುಕ್ರವಾರ ನಗರದ ಹಲವೆಡೆ ಜೋರು ಮಳೆ ಆಗಿದೆ. ಇಂದು ಶನಿವಾರ ಮಧ್ಯಾಹ್ನವೇ ನಗರದಲ್ಲಿ ಜಿಟಿ ಜಿಟಿ ಮಳೆ ಆಗಿದ್ದು, ತಡರಾತ್ರಿವರೆಗೂ ಮುಂದುವರಿಯುವ ನಿರೀಕ್ಷೆ ಇದೆ. ಮುಂದಿನ ಒಂದು ವಾರ ಇದೇ ರೀತಿ ಮಳೆ, ಚಳಿ ವಾತಾವರಣ ಇರಲಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.
ಕುಮಾರಸ್ವಾಮಿ ಬಡಾವಣೆ (22 ಮಿ.ಮೀ.), ವಿದ್ಯಾಪೀಠ (22ಮಿ.ಮೀ.), ಬಸವನಗುಡಿ (22ಮಿ.ಮೀ.), ರಾಜರಾಜೇಶ್ವರಿ ನಗರ (13 ಮಿ.ಮೀ.), ಜ್ಞಾನಭಾರತಿ (13 ಮಿ.ಮೀ.), ಬೊಮ್ಮನಹಳ್ಳಿ (11.5 ಮಿ.ಮೀ.) ಮತ್ತು ಬಿಟಿಎಂ ಬಡಾವಣೆಯಲ್ಲಿ (10 ಮಿ.ಮೀ.) ಜೋರು ಮಳೆ ದಾಖಲಾಗಿದೆ. ಉಳಿದಂತೆ ಕೋರಮಂಗಲ, ಎಚ್‌ಎಸ್‌ಆರ್ ಡೈರಿ ವೃತ್ತ, ಲಾಲ್ ಬಾಗ್, ಚಾಮರಾಜಪೇಟೆ, ಹೆಬ್ಬಾಳ, ಯಲಹಂಕ ಹಾಗೂ ಇತರ ಕಡೆಗಳಲ್ಲಿ ತುಂತುರು ಮಳೆ ಆಗಿದೆ. ಇಡೀ ದಿನ ಮಬ್ಬು ವಾತಾವರಣ ದಾಖಲಾಗಿತ್ತು.

ಮುಂದಿನ ಜುಲೈ 25ರವರೆಗೆ ಇದೇ ರೀತಿ ಮಳೆ ಹಾಗೂ ಗಾಳಿಯ ವಾತಾವರಣ ಮುಂದುವರಿಯಲಿದೆ. ನಗರದಲ್ಲಿ ಆಗಾಗ ಜಿಟಿ ಜಿಟಿ ಮಳೆ ಸುರಿಯಲಿದೆ. ಒಂದು ವೇಳೆ ಸಮುದ್ರ ಭಾಗದಲ್ಲಿ ಉಂಟಾಗಿರುವ ಹವಾಮಾನ ವೈಪರೀತ್ಯಗಳ ಪ್ರಭಾವ ತೀವ್ರಗೊಂಡರೆ ಬೆಂಗಳೂರಿನಲ್ಲಿ ಮತ್ತಷ್ಟು ಬಿರುಸಿನ ಮಳೆ ಆಗಬಹುದು. ನಗರದಲ್ಲಿ ತಾಪಮಾನ ಕನಿಷ್ಠ 20 ಡಿಗ್ರಿ ಸೆಲ್ಸಿಯಸ್‌ಗೆ ಕುಸಿದಿದೆ. ಗರಿಷ್ಠ 30-31ರಿಂದ 29 ಡಿಗ್ರಿ ಸೆಲ್ಸಿಯಸ್‌ಗೆ ಇಳಿಕೆ ಆಗಿದೆ. ಹೀಗಾಗಿ ಸಂಜೆ ಆಗುತ್ತಿದ್ದಂತೆ ಚಳಿ ಅನುಭವವಾಗುತ್ತಿದೆ.
ಭಾರೀ ಮಳೆ ಯೆಲ್ಲೋ ಅಲರ್ಟ್ ಎಚ್ಚರಿಕೆ
ಇಂದು ಶನಿವಾರ ಮಧ್ಯಾಹ್ನ ನಗರದ ಹಲವು ಬಡಾವಣೆಗಳಲ್ಲಿ ನೋಡ ನೋಡುತ್ತಲೇ ದಿಢೀರ್ ಮಳೆ ಆಯಿತು. ದೊಮ್ಮಲೂರು, ಮಡಿವಾಳ, ಹೆಬ್ಬಾಳ, ಬೆಂಗಳೂರು ಏರ್‌ಪೋರ್ಟ್, ಮಾದಾವರ, ಲಾಲ್‌ಬಾಗ್, ಕೆಂಗೇರಿ, ಹೊರಮಾವು, ರಾಜಮಹಲ್ ಗುಟ್ಟಹಳ್ಳಿ ಸೇರಿದಂತೆ ವಿವಿಧೆಡೆ ಹಗುರ ಮಳೆ ಆಯಿತು. ನಾಳೆ ಭಾನುವಾರ ಸಹ ಇದೇ ರೀತಿ ಲಘು ಮಳೆ ನಿರೀಕ್ಷೆ ಇದೆ. ಜುಲೈ 21ರಂದು ಬೆಂಗಳೂರಿಗೆ ಹಗುರದಿಂದ ಭಾರೀ ಮಳೆ ನಿರೀಕ್ಷೆ ಇದ್ದು, ಅಂದು 'ಯೆಲ್ಲೋ ಅಲರ್ಟ್' ಕೊಡಲಾಗಿದೆ ಎಂದು ಬೆಂಗಳೂರು ಹವಾಮಾನ ಕೇಂದ್ರ ಶನಿವಾರದ ಮುನ್ಸೂಚನೆಯಲ್ಲಿ ತಿಳಿಸಿದೆ.
ಮುಂಗಾರು ಮಳೆ ಆರಂಭವಾದಾಗಿನಿಂದ ಎರಡು ಭಾರಿ ಭರ್ಜರಿ ಮಳೆ ಹಿಡಿದುಕೊಂಡಿತ್ತು. ಅದಾದ ನಂತರ ಬೆಂಗಳೂರಿನಲ್ಲಿ ಅಷ್ಟಾಗಿ ಮಳೆ ಆಗಲಿಲ್ಲ. ಪ್ರತಿ ವರ್ಷ ಮೇ ತಿಂಗಳಲ್ಲೇ ಆರಂಭವಾಗುತ್ತಿದ್ದ ಮಳೆ ಈ ಬಾರಿಯು ಮೇ ಕೊನೆಗೆ ವ್ಯಾಪಕವಾಗಿ ಸುರಿಯಿತು. ನಂತರ ಬಂದ ಮುಂಗಾರು ಚುರುಕಾಗಿರಲಿಲ್ಲ.












Click it and Unblock the Notifications