Breaking: ಪೀಣ್ಯ ಇಂಡಸ್ಟ್ರಿ ಮೆಟ್ರೋ ನಿಲ್ದಾಣದಲ್ಲಿ ಪ್ರಯಾಣಿಕರ ದಟ್ಟಣೆ
ಬೆಂಗಳೂರು, ಆಗಸ್ಟ್ 20: ಉದ್ಯಾನ ನಗರಿ ಬೆಂಗಳೂರಿನಲ್ಲಿ ಆಗಸ್ಟ್ 20ರಿಂದ ನಮ್ಮ ಮೆಟ್ರೋ ಹಸಿರು ಮಾರ್ಗದ ರೈಲು ಸಂಚಾರದಲ್ಲಿ ಕೆಲವು ಬದಲಾವಣೆಯಾಗಿದೆ. ಆದ್ದರಿಂದ ಪ್ರಯಾಣಿಕರಿಗೆ ತೊಂದರೆ ಉಂಟಾಗುತ್ತಿದೆ. ಮಂಗಳವಾರ ಪೀಣ್ಯ ಇಂಡಸ್ಟ್ರಿ ನಿಲ್ದಾಣದಲ್ಲಿ ಪ್ರಯಾಣಿಕರ ದಟ್ಟಣೆ ಉಂಟಾಗಿದೆ. ಬಿಎಂಆರ್‌ಸಿಎಲ್ ಪೀಣ್ಯ ಇಂಡಸ್ಟ್ರಿ- ನಾಗಸಂದ್ರ ನಿಲ್ದಾಣಗಳ ನಡುವಿನ ನಮ್ಮ ಮೆಟ್ರೋ ರೈಲು ಸಂಚಾರ ಸ್ಥಗಿತಗೊಳಿಸಿದ್ದು, ಪ್ರಯಾಣಿಕರ ದಟ್ಟಣೆ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಹಾಕಲಾಗುತ್ತಿದೆ.
ಮಂಗಳವಾರ ಬೆಳಗ್ಗೆ ಜನದಟ್ಟಣೆಯ ಸಮಯದಲ್ಲಿಯೇ ಹಸಿರು ಮಾರ್ಗದ ಪೀಣ್ಯ ಇಂಡಸ್ಟ್ರಿ ನಿಲ್ದಾಣದಲ್ಲಿ ಪ್ರಯಾಣಿಕರ ದಟ್ಟಣೆ ಅಧಿಕವಾಗಿದೆ. ಬಿಎಂಆರ್‌ಸಿಎಲ್ ಪ್ರಯಾಣಿಕರ ದಟ್ಟಣೆ ಕಡಿಮೆ ಮಾಡಲು ಸರಿಯಾದ ಕ್ರಮ ಕೈಗೊಂಡಿಲ್ಲ ಎಂದು ಜನರು ಆರೋಪ ಮಾಡುತ್ತಿದ್ದಾರೆ.

ಬಿಎಂಆರ್‌ಸಿಎಲ್ ರೀಚ್-3ರ ಎತ್ತರಿಸಿದ ಮಾರ್ಗದಲ್ಲಿ ನಾಗಸಂದ್ರ-ಮಾದವರದ ನಡುವಿನ 3.14 ಕಿ. ಮೀ. ನಡುವೆ ನಮ್ಮ ಮೆಟ್ರೋ ರೈಲು ಪ್ರಾಯೋಗಿಕ ಸಂಚಾರವನ್ನು ನಡೆಸುತ್ತಿದೆ. ಆಗಸ್ಟ್ 20ರ ಮಂಗಳವಾರ ಸಿಗ್ನಲಿಂಗ್ ಸಂಬಂಧಿತ ಪರೀಕ್ಷೆಗಳನ್ನು ನಡೆಸಲು ಪೀಣ್ಯ ಇಂಡಸ್ಟ್ರಿ-ನಾಗಸಂದ್ರ ನಡುವೆ ಮೆಟ್ರೋ ರೈಲು ಸಂಚಾರ ಸ್ಥಗಿತಗೊಳಿಸಿದೆ.
ಒಂದು ದಿನ ಮಾತ್ರವಲ್ಲ: ನಮ್ಮ ಮೆಟ್ರೋ ಹಸಿರು ಮಾರ್ಗದ ನಾಗಸಂದ್ರ-ಮಾದವರ ನಡುವೆ ಸಿಗ್ನಲಿಂಗ್ ಸಂಬಂಧಿತ ಪರೀಕ್ಷೆಯನ್ನು ಮುಂದುವರಿಸಲು, ಕೆಲವು ದಿನಗಳಂದು ರೈಲು ಸೇವೆಯ ಸಮಯ ಮತ್ತು ಕಾರ್ಯಾಚರಣೆಗಳಲ್ಲಿ ಬದಲಾವಣೆ ಮಾಡಲಾಗುತ್ತದೆ ಎಂದು ಬಿಎಂಆರ್‌ಸಿಎಲ್ ಈಗಾಗಲೇ ಪ್ರಕಟಣೆ ಮೂಲಕ ಮಾಹಿತಿ ನೀಡಿದೆ.
ಪೀಣ ಇಂಡಸ್ಟ್ರಿ-ನಾಗಸಂದ್ರ ಮೆಟ್ರೋ ನಿಲ್ದಾಣಗಳ ನಡುವೆ ದಿನಾಂಕ 20, 23, 30ನೇ ಆಗಸ್ಟ್ ಹಾಗೂ 6 ಮತ್ತು 11ನೇ ಸೆಪ್ಟೆಂಬರ್ ರಂದು ಪೂರ್ಣ ದಿನ ರೈಲು ಸೇವೆ ಸ್ಥಗಿತಗೊಳಿಸಲಾಗುತ್ತದೆ ಎಂದು ಬಿಎಂಆರ್‌ಸಿಎಲ್ ಹೇಳಿದೆ.
ನಾಗಸಂದ್ರ ಮೆಟ್ರೋ ನಿಲ್ದಾಣದಿಂದ ಪೀಣ ಇಂಡಸ್ಟ್ರಿ ಕಡೆಗೆ 24ನೇ ಆಗಸ್ಟ್ 2024ರಂದು ಕೊನೆಯ ರೈಲು ಸೇವೆಯು ರಾತ್ರಿ 11.05ಕ್ಕೆ ಬದಲಾಗಿ 10 ಗಂಟೆಗೆ ಪ್ರಾರಂಭವಾಗಲಿದೆ. 25ನೇ ಆಗಸ್ಟ್ ರಂದು ಮೊದಲ ರೈಲು ಸೇವೆಯು ಬೆಳಗ್ಗೆ 5ಕ್ಕೆ ಬದಲಾಗಿ 6ಕ್ಕೆ ಪ್ರಾರಂಭವಾಗಲಿದೆ ಎಂದು ತಿಳಿಸಿದೆ.
ಪೀಣ್ಯ ಇಂಡಸ್ಟ್ರಿ-ರೇಷ್ಮೆ ಸಂಸ್ಥೆ ಮೆಟ್ರೋ ನಿಲ್ದಾಣದ ಕಡೆಗೆ. ದಿನಾಂಕ 24ನೇ ಆಗಸ್ಟ್ ರಂದು ಕೊನೆಯ ರೈಲು ಸೇವೆಯು ರಾತ್ರಿ 11.12ಕ್ಕೆ ಪ್ರಾರಂಭವಾಗಲಿದೆ. 25ನೇ ಆಗಸ್ಟ್ 2024 ರಂದು ಮೊದಲ ರೈಲು ಸೇವೆಯು ಬೆಳಗ್ಗೆ 5ಕ್ಕೆ ಪ್ರಾರಂಭವಾಗಲಿದೆ.
ಆದ್ದರಿಂದ ಪ್ರಯಾಣಿಕರು ಕೆಲವು ದಿನಗಳ ಕಾಲ ಹಸಿರು ಮಾರ್ಗದಲ್ಲಿ ಪ್ರಯಾಣಿಕರ ದಟ್ಟಣೆ, ರೈಲು ಸಂಚಾರದ ವ್ಯತ್ಯಯ ಎದುರಿಸುವುದು ಅನಿವಾರ್ಯವಾಗಿದೆ. ಎಲ್ಲಾ ಪರೀಕ್ಷೆಗಳು ಮುಗಿದ ಬಳಿಕ ಹಸಿರು ಮಾರ್ಗದಲ್ಲಿ ನಾಗಸಂದ್ರ-ಮಾದವರ ನಡುವೆ ನಮ್ಮ ಮೆಟ್ರೋ ರೈಲು ಸಂಚಾರ ಆರಂಭಗೊಂಡು ಪ್ರಯಾಣಿಕರಿಗೆ ಸಹ ಅನುಕೂಲವಾಗಲಿದೆ.
ಆದರೆ ನೇರಳೆ ಮಾರ್ಗದ ನಮ್ಮ ಮೆಟ್ರೋ ಸೇವೆಗಳಲ್ಲಿ ಯಾವುದೇ ಬದಲಾವಣೆ ಇರುವುದಿಲ್ಲ ಎಂದು ಬಿಎಂಆರ್‌ಸಿಎಲ್ ಸ್ಪಷ್ಟಪಡಿಸಿದೆ.












Click it and Unblock the Notifications