ಜಾಹೀರಾತು ನೀತಿ: ಬಿಬಿಎಂಪಿಗೆ ಮತ್ತೆ ಕ್ಲಾಸ್ ತೆಗೆದುಕೊಂಡ ಹೈಕೋರ್ಟ್
ಬೆಂಗಳೂರು, ಆಗಸ್ಟ್ 8: ನಗರದಲ್ಲಿರುವ ಅನಧಿಕೃತ ಫ್ಲೆಕ್ಸ್, ಬ್ಯಾನರ್, ಹೋರ್ಡಿಂಗ್ಸ್‌ಗಳ ತೆರವಿಗೆ ಸಂಬಂಧಿಸಿದ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು ಹೈಕೋರ್ಟ್ ಬುಧವಾರ ವಿಚಾರಣೆ ನಡೆಸಿದೆ.
ಬಿಬಿಎಂಪಿ ಹಾಗೂ ನಗರಾಭಿವೃದ್ಧಿ ಇಲಾಖೆ ರೂಪಿಸಿರುವ ಜಾಹೀರಾತು ನೀತಿಗೆ ಸಂಬಂಧಿಸಿದಂತೆ ಇನ್ನೂ ಏಕೆ ಅಂತಿಮ ತೀರ್ಮಾನ ಕೈಗೊಂಡಿಲ್ಲ ಎಂದು ಹೈಕೋರ್ಟ್ ಕಿಡಿಖಾರಿದೆ. 2016 ರಲ್ಲೇ ನೀತಿ ರೂಪಿಸಿರುವುದಾಗಿ ಹೇಳುತ್ತಿದ್ದೀರಿ. ಆದರೆ ಇಷ್ಟು ದಿನ ಕಳೆದರೂ ಕಡತವನ್ನು ಅಡಿಗೆ ಹಾಕಿಕೊಂಡು ಕುಳಿತಿದ್ದೀರಿ ಏಕೆ ಎಂದು ಮುಖ್ಯ ನ್ಯಾಯಮೂರ್ತಿಗಳು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಇದು ನಿರ್ಲಕ್ಷ್ಯದ ಪರಮಾವಧಿ. ವ್ಯವಸ್ಥೆಗೆ ಅಧಿಕಾರಿಗಳು ಮಾಡುತ್ತಿರುವ ಅವಮಾನ ಇದಾಗಿದೆ. ಇಂಥ ನಿರ್ಲಕ್ಷ್ಯಕ್ಕೆ ಅಧೀನ ಅಧಿಕಾರಿಗಳನ್ನು ಹೊಣೆಗಾರಿಕೆಯನ್ನಾಗಿ ಮಾಡುವ ಬದಲು ಸರ್ಕಾರದ ಮುಖ್ಯ ಕಾರ್ಯದರ್ಶಿಯನ್ನೇ ಹೊಣೆ ಮಾಡುತ್ತೇನೆ ಎಂದು ಎಚ್ಚರಿಕೆ ನೀಡಿದರು.

ಫ್ಲೆಕ್ಸ್ ಗಳ ತೆರವು ಕಾರ್ಯಾಚರಣೆ ವಿಷಯಕ್ಕೆ ಸಂಬಂಧಿಸಿದಂತೆ ಅಧಿಕಾರಿಗಳಿಗೆ ಕಿಂಚಿತ್ತೂ ದಾಕ್ಷಿಣ್ಯ ತೋರುವ ಪ್ರಮೇಮಯವೇ ಇಲ್ಲ. ಜಾಹೀರಾತು ನೀತಿ ಕುರಿತಂತೆ ಸಮಗ್ರ ಮತ್ತು ಸ್ಪಷ್ಟವಾದ ರೂಪುರೇಷೆಯೊಂದಿಗೆ ಕೋರ್ಟ್ ಗೆ ಹಾಜರುಪಡಿಸಬೇಕು. ನೀವೇನು ಮಾಡುತ್ತೀರಿ ಎನ್ನುವುದು ನಿಮ್ಮ ವಿವೇಚನೆಗೆ ಬಿಟ್ಟದ್ದು. ಸಮಸ್ಯೆ ಬಗೆಹರಿಯಬೇಕು.
ಬೆಂಗಳೂರನ್ನು ಫ್ಲೆಕ್ಸಗಳಲ್ಲಿ ನೋಡುವುದು ಬೇಡ. ಸ್ವಾಭಾವಿಕ ಸೌಂದರ್ಯದಲ್ಲೇ ನೋಡುವಂತಾಗಬೇಕು. ಈ ಅರ್ಜಿಗಳನ್ನು ಪ್ರತಿನಿತ್ಯ ವಿಚಾರಣೆ ನಡೆಸಲು ತಯಾರಿರುವುದಾಗಿ ತಿಳಿಸಿದ ನ್ಯಾಯಪೀಠ ವಿಚಾರಣೆಯನ್ನು ಆ. 10 ಕ್ಕೆ ಮುಂದೂಡಿತು.












Click it and Unblock the Notifications