ಹುಕ್ಕಾ ಸೇವನೆಗೆ ಸ್ಮೋಕಿಂಗ್ ಪ್ರದೇಶ ಗುರುತಿಸಬೇಕೆಂದು ಹೈಕೋರ್ಟ್ ಆದೇಶ
ಬೆಂಗಳೂರು ಏ.15. ಸಾರ್ವಜನಿಕ ಸ್ಥಳಗಳಲ್ಲಿ ಧೂಮಪಾನ ನಿಷೇಧಿಸಿರುವುದರಿಂದ ಹುಕ್ಕಾ ಸೇವನೆ ಇತರೆ ಗ್ರಾಹಕರಿಗೆ ತೊಂದರೆ ಉಂಟು ಮಾಡಬಾರದು, ಹುಕ್ಕಾ ಸೇವನೆಗೆ ರೆಸ್ಟೋರೆಂಟ್ ನಲ್ಲಿಯೇ ಪ್ರತ್ಯೇಕ ಜಾಗವನ್ನು ಮೀಸಲಿಡಬೇಕಾಗುತ್ತದೆ ಎಂದು ಹೈಕೋರ್ಟ್ ಆದೇಶ ನೀಡಿದೆ. ಇದರಿಂದಾಗಿ ಧೂಮಪಾನ ಪ್ರದೇಶ ರಚನೆ ಕುರಿತ ಗೊಂದಲ ಸ್ವಲ್ಪ ಮಟ್ಟಿಗೆ ನಿವಾರಣೆಯಾದಂತಾಗಿದೆ.
ರೆಸ್ಟೋರೆಂಟ್ ಮಾಲೀಕರು ಸಕ್ಷಮ ಪ್ರಾಧಿಕಾರದಿಂದ ಅಗತ್ಯ ಅನುಮತಿ ಪಡೆದು ಹುಕ್ಕಾ ಸೇವನೆಗೆ ನಿರ್ದಿಷ್ಟ ಸ್ಮೋಕಿಂಗ್ ಜೋನ್ ರಚನೆ ಮಾಡಬೇಕು ಎಂದು ನ್ಯಾಯಾಲಯ ಹೇಳಿದೆ.
ಬೆಂಗಳೂರಿನ ಸೋಹೋ ಪಬ್ ಮತ್ತು ಗ್ರಿಲ್ ಸಲ್ಲಿಸಿದ್ದ ಅರ್ಜಿಯನ್ನು ಆಲಿಸಿದ ನ್ಯಾ. ಎಸ್.ಜಿ.ಪಂಡಿತ್ ಅವರಿದ್ದ ಏಕಸದಸ್ಯಪೀಠ ಈ ಆದೇಶ ನೀಡಿದೆ.

ಕೋರ್ಟ್ ಆದೇಶವೇನು?: ನ್ಯಾಯಬದ್ಧವಾಗಿ ನಾವು ನಡೆಸುತ್ತಿರುವ ಚಟುವಟಿಕೆಗಳಲ್ಲಿ ಪ್ರತಿವಾದಿ ಪೊಲೀಸರು ಹಸ್ತಕ್ಷೇಪ ಮಾಡದಂತೆ ನಿರ್ಬಂಧ ವಿಧಿಸಬೇಕೆಂದು ಕೋರಿ ಸಲ್ಲಿಸಿದ್ದ ಅರ್ಜಿಯನ್ನು ನ್ಯಾಯಪೀಠ ಇತ್ಯರ್ಥಗೊಳಿಸಿದೆ.
ಅಲ್ಲದೆ, ಇದೇ ವಿಚಾರದ ಸಂಬಂಧ 2015 ಮತ್ತು 2017ರಲ್ಲಿ ಹೈಕೋರ್ಟ್ ನೀಡಿರುವ ತೀರ್ಪುಗಳನ್ನು ನ್ಯಾಯಾಲಯ ಉಲ್ಲೇಖಿಸಿದೆ. ಅವುಗಳಲ್ಲಿ ಹುಕ್ಕಾ ಮೂಲಕ ತಂಬಾಕು ಸೇವನೆಗೆ ಅವಕಾಶ ಇರುವುದರಿಂದ ಹುಕ್ಕಾ ಯಂತ್ರಗಳನ್ನು ನಿಷೇಧಿಸಲು ಸಾಧ್ಯವಿಲ್ಲ. ಆದರೆ ಹುಕ್ಕಾವನ್ನು ಬೇರೆ ಅಕ್ರಮ ಉದ್ದೇಶಕ್ಕೆ ಬಳಸಿದರೆ ಖಂಡಿತಾ ಆಗ ಪೊಲೀಸರು ಮಧ್ಯೆಪ್ರವೇಶ ಮಾಡಬಹುದಾಗಿದೆ ಎಂದು ತೀರ್ಪುಗಳಲ್ಲಿ ಸ್ಪಷ್ಟಪಡಿಸಲಾಗಿದೆ ಎಂದು ನ್ಯಾಯಪೀಠ ಹೇಳಿದೆ.
ಷರತ್ತುಗಳೇನು?: ಅಲ್ಲದೆ, ಅರ್ಜಿದಾರರಿಗೆ ನ್ಯಾಯಾಲಯ ಹಲವು ಷರತ್ತುಗಳನ್ನು ವಿಧಿಸಿದೆ.
* ಅರ್ಜಿದಾರರು, ತಮ್ಮ ರೆಸ್ಟೊರೆಂಟ್ ಆವರಣದಲ್ಲಿ ಹುಕ್ಕಾ ಸೇವನೆಗೆ ಅವಕಾಶ ನೀಡಲು ಪರವಾನಗಿಯನ್ನು ಪಡೆದುಕೊಳ್ಳಬೇಕು
* ಒಂದು ವೇಳೆ ಅಕ್ರಮ ಚಟುವಟಿಕೆ ನಡೆಯುತ್ತಿರುವ ಬಗ್ಗೆ ಅಥವಾ ಹುಕ್ಕಾ ಜೊತೆಗೆ ನಿಷೇಧಿತ ವಸ್ತು ಸೇವನೆ ಮಾಡುತ್ತಿದ್ದರೆ ಆಗ ಪೊಲೀಸರು ಕಾನೂನು ಪ್ರಕಾರ ಕ್ರಮ ಕೈಗೊಳ್ಳಬಹುದು.
* ಅರ್ಜಿದಾರರು ರೆಸ್ಟೋರೆಂಟ್ ಸೂಕ್ತ ಜಾಗದಲ್ಲಿ ಪ್ರತ್ಯೇಕವಾಗಿ ಹುಕ್ಕಾ ಸೇವನೆಗೆ ಜಾಗವನ್ನು ನಿರ್ದಿಷ್ಟಪಡಿಸಬೇಕು. ಅದಕ್ಕೆ ಕಾನೂನು ಪ್ರಕಾರ ಸಕ್ಷಮ ಪ್ರಕಾರದಿಂದ ಪರವಾನಗಿ ಪಡೆದುಕೊಳ್ಳಬೇಕು.
* ತಪಾಸಣೆ ಹೆಸರಿನಲ್ಲಿ ಪೊಲೀಸರು ಅರ್ಜಿದಾರರಿಗೆ ಕಿರುಕುಳ ನೀಡುವಂತಿಲ್ಲ. ಆದರೆ ಅಗತ್ಯಬಿದ್ದರೆ ಪೊಲೀಸರು ಅಗ್ಗಾಗ್ಗೆ ರೆಸ್ಟೋರೆಂಟ್ ಆವರಣಕ್ಕೆ ಭೇಟಿ ನೀಡಿ ಪರಿಶೀಲಿಸಬಹುದು.

ಅಕ್ರಮ ಚಟುವಟಿಕೆ ಸಾಧ್ಯತೆ:
ಈ ಅರ್ಜಿಯಲ್ಲೂ ಅರ್ಜಿದಾರರ ಮನವಿಯನ್ನು ಪುರಸ್ಕರಿಸಿರುವ ನ್ಯಾಯಾಲಯ, ಪ್ರತಿವಾದಿ ಪೊಲೀಸರು ಕಾನೂನು ಚೌಕಟ್ಟಿನಲ್ಲಿ ನಡೆಯುತ್ತಿರುವ ಪಬ್‌ನ ಚಟುವಟಿಕೆಗಳಲ್ಲಿ ಹಸ್ತಕ್ಷೇಪ ಮಾಡಬಾರದು ಎಂದು ಆದೇಶಿಸಿದೆ.
ಸರಕಾರಿ ವಕೀಲರು, ಅರ್ಜಿದಾರರ ರೆಸ್ಟೋರೆಂಟ್‌ನಲ್ಲಿ ಹುಕ್ಕಾ ಸೇವನೆ ಹೆಸರಿನಲ್ಲಿ ಗ್ರಾಹಕರು ಅಕ್ರಮ ಚಟುವಟಿಕೆಗಳಲ್ಲಿ ತೊಡಗುವ ಸಾಧ್ಯತೆಗಳಿವೆ. ಹಾಗಾಗಿ ಪೊಲೀಸರಿಗೆ ರೆಸ್ಟೋರೆಂಟ್ ಪರಿಶೀಲನೆಗೆ ಅವಕಾಶ ಮಾಡಿಕೊಡಬೇಕು. ಅಲ್ಲದೆ, ಸಾರ್ವಜನಿಕ ಸ್ಥಳಗಳಲ್ಲಿ ಧೂಮಪಾನ ನಿಷೇಸಲಾಗಿದೆ, ರೆಸ್ಟೋರೆಂಟ್‌ಗಳಲ್ಲಿ ಧೂಮಪಾನ ಅಥವಾ ಹುಕ್ಕಾ ಸೇವನೆಗೆ ಅವಕಾಶ ನೀಡುವುದಾದರೆ ಅದಕ್ಕೆ ಪ್ರತ್ಯೇಕ ಸ್ಥಳವನ್ನು ಮೀಸಲಿಟ್ಟು, ಸ್ಮೋಕಿಂಗ್ ಜೋನ್ ಸೃಷ್ಟಿಸಬೇಕು ಎಂದು ನ್ಯಾಯಪೀಠಕ್ಕೆ ವಿವರಿಸಿದರು.












Click it and Unblock the Notifications