GST: ಕ್ಯಾಬ್ ಚಾಲಕರಿಗೆ ಸಂಕಷ್ಟ, ಗ್ರಾಹಕರಿಗೆ ಮಾತ್ರ ಲಾಭ
ಬೆಂಗಳೂರು, ಜೂನ್ 29: ಜಿಎಸ್ಟಿ ಜಾರಿಯಿಂದ ಆ್ಯಪ್ ಆಧಾರಿತ ಟಾಕ್ಸಿ ಸೇವೆಗಳಲ್ಲಿ ಒಂದಷ್ಟು ಬದಲಾವಣೆ ಬರಲಿದೆ. ಕಡಿಮೆ ತೆರಿಗೆಯಿಂದಾಗಿ ಗ್ರಾಹಕರ ಜೇಬಿಗೆ ಲಾಭವಾಗಲಿದೆ. ಆದರೆ ಚಾಲಕರಿಗೆ ಮಾತ್ರ ಒಂದಷ್ಟು ನಷ್ಟವಾಗಲಿದೆ.
ಕಾರುಗಳನ್ನು ಲೀಸಿಗೆ ಪಡೆದವರ ಮೇಲೆ ಸದ್ಯ ಚಾಲ್ತಿಯಲ್ಲಿರುವ ತೆರಿಗೆಗಿಂತ ದುಪ್ಪಟ್ಟು ತೆರಿಗೆ ನಿಗದಿ ಪಡಿಸಲಾಗಿದೆ ಎಂದು ಓಲಾ ಫ್ಲೀಟ್ ಟೆಕ್ನಾಲಜೀಸ್ ಲಿಮಿಟೆಡ್ ಹೇಳಿದೆ. ಹೀಗಾಗಿ ಸ್ವಂತ ಕಾರು ಇಲ್ಲದೇ ಇರುವ ಚಾಲಕರಿಗೆ ಇದರಿಂದ ನಷ್ಟವಾಗಲಿದೆ.

ಹೀಗಾಗಿ ಜಿಎಸ್ಟಿ ಬಗ್ಗೆ ಪ್ರತಿಕ್ರಿಯೆ ನೀಡಿರುವ ಓಲಾ, ಜಿಎಸ್ಟಿಯಿಂದ ಲೀಸ್ ಗೆ ಹೊಡೆತ ಬೀಳಲಿದೆ ಎಂದು ಹೇಳಿದೆ.
"ಸ್ವಂತ ಕಾರು ಖರೀದಿಸಲು ಸಾಧ್ಯವಿಲ್ಲದ ಚಾಲಕರಿಗಾಗಿ ನಾವು ಲೀಸ್ ವ್ಯವಸ್ಥೆ ಜಾರಿಗೆ ತಂದಿದ್ದೇವೆ. ಈ ವ್ಯವಸ್ಥೆಯಲ್ಲಿ ನೂರಾರು, ಸಾವಿರಾರು ಚಾಲಕರು ಕೆಲಸ ಮಾಡುತ್ತಾರೆ. ಸದ್ಯ ಈ ಚಾಲಕ-ಪಾಲುದಾರರು ಶೇಕಡಾ 14.5 ತೆರಿಗೆಯನ್ನು ವ್ಯಾಟ್ ರೂಪದಲ್ಲಿ ಕಟ್ಟುತ್ತಿದ್ದಾರೆ. ಇದೀಗ ಜಿಎಸ್ಟಿಯಲ್ಲಿ ಈಗಾಗಲೇ ಲೀಸಿಗೆ ಪಡೆದಿರುವ ಕಾರುಗಳ ಮೇಲೆ ಅವರು ಶೇಕಡಾ 29-43ರವರೆಗೆ ತೆರಿಗೆ ಪಾವತಿಸಬೇಕಾಗುತ್ತದೆ. ಕಾರಣ ಹಾಲಿ ಲೀಸ್ ಗಳ ಮೇಲೆ ಡಬಲ್ ಟ್ಯಾಕ್ಸ್ ಹಾಕಿದ್ದಾರೆ," ಎನ್ನುತ್ತಾರೆ ಓಲಾದ ಸಿಇಒ ಶಲಬ್ ಸೇಥ್.
ಇದರಿಂದ ಕಂಪೆನಿಗಳು ಭಯದಲ್ಲಿದ್ದು ಲೀಸ್ ಅವಧಿ ಮುಗಿಯುವ ವೇಳೆಗೆ ಚಾಲಕ ಮತ್ತು ಪಾಲುದಾರರ ಒಂದು ಲಕ್ಷ ರೂಪಾಯಿವರೆಗೆ ಕಳೆದುಕೊಳ್ಳಬೇಕಾಗಬಹುದು ಎಂದು ಅಂದಾಜಿಸಲಾಗಿದೆ. ಇದು ಚಾಲಕರ ದಿನ ನಿತ್ಯದ ಸಂಪಾದನೆಗೆ ಹೊಡೆತ ನೀಡುವುದರ ಜತೆಗೆ ಉದ್ಯಮಕ್ಕೂ ಹೊಡೆತ ನೀಡಲಿದೆ.












Click it and Unblock the Notifications