Gruha Lakshmi: ಫೆಬ್ರವರಿ ಮತ್ತು ಮಾರ್ಚ್ ತಿಂಗಳ ಗೃಹಲಕ್ಷ್ಮಿ ಹಣ ಬಾಕಿ: ಸರ್ಕಾರಕ್ಕೆ 4 ಪ್ರಮುಖ ಪ್ರಶ್ನೆ
ಬೆಂಗಳೂರು: ಕರ್ನಾಟಕ ಸರ್ಕಾರದ ಪ್ರಮುಖ ಗ್ಯಾರಂಟಿ ಯೋಜನೆಗಳಲ್ಲಿ ಒಂದಾಗಿರುವ ಗೃಹಲಕ್ಷ್ಮಿ ಯೋಜನೆಗೆ ಸಂಬಂಧಿಸಿದಂತೆ ಪ್ರಮುಖ ಚರ್ಚೆ ನಡೆದಿದೆ. ಈ ಯೋಜನೆಯಲ್ಲಿ ಭಾರೀ ಅವ್ಯವಹಾರ ನಡೆದಿದೆ ಎನ್ನುವ ಆರೋಪ ಕೇಳಿ ಬಂದಿದ್ದು. ಫೆಬ್ರವರಿ ಮತ್ತು ಮಾರ್ಚ್ ತಿಂಗಳ ಗೃಹಲಕ್ಷ್ಮಿ ಹಣ ಮತ್ತೆ ಜನರ ಖಾತೆಗೆ ಜಮೆ ಆಗುವುದು ಅನುಮಾನ ಎಂದೇ ಹೇಳಲಾಗುತ್ತಿದೆ. ಈ ಬಗ್ಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಆರ್ಥಿಕ ಇಲಾಖೆಯ ಪ್ರಧಾನ ಕಾರ್ಯದರ್ಶಿಗೆ ನಾಲ್ಕು ಪ್ರಶ್ನೆಗಳನ್ನು ಕೇಳಲಾಗಿದೆ. ಅದರ ವಿವರ ಇಲ್ಲಿದೆ.
ಕರ್ನಾಟಕ ಸರ್ಕಾರದ ಪ್ರಮುಖ ಯೋಜನೆಗಳಲ್ಲಿ ಒಂದಾಗಿರುವ ಗೃಹಲಕ್ಷ್ಮಿ ಯೋಜನೆಯ ಎರಡು ತಿಂಗಳ ಹಣ ಜನರ ಖಾತೆಗೆ ಜಮೆ ಆಗದೆ ಇರುವುದು ಭಾರೀ ಚರ್ಚೆಗೆ ಕಾರಣವಾಗಿದೆ. ಇತ್ತೀಚಿಗೆ ಬೆಳಗಾವಿಯಲ್ಲಿ ನಡೆದ ಚಳಿಗಾಲದ ಅಧಿವೇಶನದಲ್ಲಿ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವರು 2024-25ನೇ ಸಾಲಿನ ಫೆಬ್ರವರಿ ಮತ್ತು ಮಾರ್ಚ್ ಮಾಹಗಳ ಗೃಹಲಕ್ಷ್ಮೀ ಯೋಜನೆಯ ಹಣವನ್ನು ಫಲಾನುಭವಿಗಳಿಗೆ ಬಿಡುಗಡೆ ಮಾಡದಿರುವ ಬಗ್ಗೆ ಸದನದಲ್ಲಿ ಹೇಳಿಕೆ ನೀಡಿರುತ್ತಾರೆ. ಅದರಂತೆ, ಈ ಕೆಳಕಂಡ ಅಂಶಗಳಿಗೆ ಮಾಹಿತಿ ಒದಗಿಸಲು ಕೋರಿದೆ ಎಂದು ಪ್ರಮುಖ ಹಾಗೂ ಗಂಭೀರವಾದ ನಾಲ್ಕು ಪ್ರಶ್ನೆಗಳನ್ನು ವಿರೋಧ ಪಕ್ಷದ ನಾಯಕ ಆರ್. ಅಶೋಕ್ ಅವರು ಸರ್ಕಾರಕ್ಕೆ ಕೇಳಿದ್ದಾರೆ.

1. ಗೃಹಲಕ್ಷ್ಮೀ ಯೋಜನೆಗೆ 2024 - 25 ಬಜೆಟ್‌ನಲ್ಲಿ ಅನುದಾನ ಹಂಚಿಕೆಯಾಗಿದ್ದು, 2024-25ನೇ ಸಾಲಿನ ಫೆಬ್ರವರಿ ಮತ್ತು ಮಾರ್ಚ್ ತಿಂಗಳ ಹಣವನ್ನು ಫಲಾನುಭವಿಗಳಿಗೆ ಪಾವತಿಸದಿರಲು ಕಾರಣಗಳೇನು ?
2. 2024-25ನೇ ಸಾಲಿನ ಬಜೆಟ್‌ನಲ್ಲಿ ಗೃಹಲಕ್ಷ್ಮೀ ಯೋಜನೆಗೆ ಮೀಸಲಿರಿಸಿದ್ದ ಫೆಬ್ರವರಿ ಮತ್ತು ಮಾರ್ಚ್ ಕಂತಿನ ಅನುದಾನ ಏನಾಯಿತು ? ಎಂಬುದರ ಸಂಪೂರ್ಣ ಮಾಹಿತಿ / ವಿವರಗಳನ್ನು ನೀಡುವುದು.
3. 2024-25ನೇ ಸಾಲಿನ ಫೆಬ್ರವರಿ ಮತ್ತು ಮಾರ್ಚ್ ತಿಂಗಳ ಗೃಹಲಕ್ಷ್ಮೀ ಯೋಜನೆಯ ಅನುದಾನವನ್ನು 2025-26ನೇ ಸಾಲಿನ ಆಯವ್ಯಯದಲ್ಲಿ ಹಂಚಿಕೆ ಮಾಡದೇ ಇರುವುದಕ್ಕೆ ಕಾರಣ ಮತ್ತು 2025-26ನೇ ಸಾಲಿನ ಪೂರಕ ಅಂದಾಜುಗಳಲ್ಲಿಯೂ ಸಹ ಅನುದಾನ ಹಂಚಿಕೆ ಮಾಡದೇ ಇರುವುದಕ್ಕೆ ಕಾರಣಗಳೇನು ?
4. ಈ ಗೃಹಲಕ್ಷ್ಮೀ ಯೋಜನೆಯು ಪ್ರಾರಂಭಗೊಂಡಾಗಿನಿಂದ ಇದುವರೆವಿಗೂ ಫಲಾನುಭವಿಗಳಿಗೆ ಪಾವತಿಸಿರುವ ಕಂತುಗಳ ವಿವರಗಳನ್ನು ಒದಗಿಸುವುದು ಎಂದು ವಿರೋಧ ಪಕ್ಷದ ನಾಯಕ ಆರ್. ಅಶೋಕ್ ಅವರು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಪತ್ರ ಬರೆದಿದ್ದಾರೆ.
ಗೃಹಲಕ್ಷ್ಮಿ ಯೋಜನೆ ಹಣ: ಉತ್ತರ ಕೊಡಿ
ಇನ್ನು ಗೃಹಲಕ್ಷ್ಮಿ ಯೋಜನೆಗೆ ಸಂಬಂಧಿಸಿದಂತೆ ಎರಡು ತಿಂಗಳ ಹಣ ಬಾಕಿ ಉಳಿಸಿಕೊಂಡಿದ್ದು ಯಾಕೆ ಎಂದು ಪ್ರಶ್ನೆ ಮಾಡಿರುವ ವಿರೋಧ ಪಕ್ಷದ ನಾಯಕ ಆರ್. ಅಶೋಕ್ ಅವರು, ಬೆಳಗಾವಿಯ ವಿಧಾನಮಂಡಲ ಅಧಿವೇಶನದಲ್ಲಿ ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ ಅವರು ಫೆಬ್ರವರಿ ಮತ್ತು ಮಾರ್ಚ್ ತಿಂಗಳ ಗೃಹಲಕ್ಷ್ಮಿ ಹಣ ಪಾವತಿ ಬಗ್ಗೆ ಸುಳ್ಳು ಮಾಹಿತಿ ನೀಡಿದಾಗಿನಿಂದಲೂ ಗ್ಯಾರಂಟಿ ಯೋಜನೆಯ ಹಣದಲ್ಲಿ ಭಾರಿ ಪ್ರಮಾಣದ ಭ್ರಷ್ಟಾಚಾರ, ಅವ್ಯವಹಾರ, ಅಕ್ರಮ ನಡೆಯುತ್ತಿರುವ ಅನುಮಾನವಿದೆ.
ಈ ನಿಟ್ಟಿನಲ್ಲಿ ಗೃಹಲಕ್ಷ್ಮಿ ಯೋಜನೆಯ ಬಜೆಟ್ ಅನುದಾನ ಹಂಚಿಕೆ ಸೇರಿದಂತೆ ಸಂಬಂಧಪಟ್ಟ ಅಂಕಿ-ಅಂಶಗಳ ಬಗ್ಗೆ ಅಧಿಕೃತ ಮಾಹಿತಿ ನೀಡುವಂತೆ ಕೋರಿ ಆರ್ಥಿಕ ಇಲಾಖೆಯ ಪ್ರಧಾನ ಕಾರ್ಯದರ್ಶಿಗಳಿಗೆ ಪತ್ರ ಬರೆದಿದ್ದೇನೆ. ಸತ್ಯದ ಮೇಲೆ ಪ್ರಮಾಣ ವಚನ ಸ್ವೀಕರಿಸಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ನನ್ನ ಪ್ರಶ್ನೆಗಳಿಗೆ ಪ್ರಾಮಾಣಿಕ ಉತ್ತರ ಕೊಡಿಸುವ ಮೂಲಕ ಕರ್ನಾಟಕದ ಜನತೆಗೆ ಸತ್ಯ ದರ್ಶನ ಮಾಡಿಸುತ್ತಾರೆ ಎಂದು ನಂಬಿದ್ದೇನೆ ಎಂದು ಆರ್. ಅಶೋಕ್ ಅವರು ಹೇಳಿದ್ದಾರೆ.












Click it and Unblock the Notifications