Namma Metro: ಹಳದಿ ಮಾರ್ಗದ ಬಿಗ್ ಅಪ್ಡೇಟ್: ಕೊಲ್ಕತ್ತಾದಿಂದ 3 ಬೋಗಿಗಳು ಬೆಂಗಳೂರಿಗೆ ರವಾನೆ..
ಬೆಂಗಳೂರು, ಮೇ 01: ಬೆಂಗಳೂರು ನಮ್ಮ ಮೆಟ್ರೋ ಬಹುನಿರೀಕ್ಷೆಯ 'ಹಳದಿ ಮಾರ್ಗ'ದ (Namma Metro Yellow Line) 3ನೇ ಡ್ರೈವರ್‌ಲೆಸ್ ರೈಲನ್ನು ರವಾನಿಸಲಾಗಿದ್ದು, ಇದೇ ಮೇ ತಿಂಗಳಾಂತ್ಯಕ್ಕೆ ಬೆಂಗಳೂರಿಗೆ ಆಗಮಿಸಲಿದೆ. ವಿಪರ್ಯಾಸವೆಂದರೆ ಆರು ಬೋಗಿಗಳ ಡ್ರೈವರ್‌ಲೆಸ್ ರೈಲಿನ ಮೂರು ಬೋಗಿಗಳ ಪೂರೈಕೆಗೆ ಮಾತ್ರವೇ ಬುಧವಾರ ಕೊಲ್ಕತ್ತಾದ ಮೆಟ್ರೋ ರೈಲು ಉತ್ಪಾದನಾ ಕಂಪನಿ ಟಿಟಾಗರ್ ನಿಂದ ಚಾಲನೆ ನೀಡಲಾಗಿದೆ. ಮೂರು ಬೋಗಿಗಳನ್ನು ಹೊತ್ತ ಲಾರಿಗಳು ಬೆಂಗಳೂರಿನತ್ತ ಪ್ರಯಾಣ ಬೆಳೆಸಿವೆ ಎಂದು ಬೆಂಗಳೂರು ಮೆಟ್ರೋ ರೈಲು ನಿಗಮ ನಿಯಮಿತ (BMRCL) ತಿಳಿಸಿದೆ.
ಬೆಂಗಳೂರು ಮೆಟ್ರೋ ರೈಲು ನಿಗಮ ನಿಯಮಿತ (BMRCL) ಬಹು ನಿರೀಕ್ಷಿತ ಹಳದಿ ಮಾರ್ಗವನ್ನು ಚಾಲನೆಗೊಳಿಸುವತ್ತ ಮತ್ತೊಂದು ಹೆಜ್ಜೆ ಮುಂದಿಟ್ಟಿದೆ. ಮೂರನೇ 6- ಕೋಚ್ ರೈಲಿನ ಮೂರು ಕೋಚ್‌ಗಳನ್ನು ಯಶಸ್ವಿಯಾಗಿ ಟಿಟಾಗಡ ಫ್ಯಾಕ್ಟರಿಯಿಂದ ಏಪ್ರಿಲ್ 29ರಂದು ಶಿಪ್ ಮಾಡಲಾಗಿದೆ. ಉಳಿದ ಮೂರು ಕೋಚ್‌ಗಳನ್ನು ಮೇ 2 ರಂದು ಶಿಪ್ ಮಾಡಲಾಗುತ್ತದೆ ಎಂದು ನಮ್ಮ ಮೆಟ್ರೋ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

ಮೇ 2ನೇ ವಾರ ಬೆಂಗಳೂರಿಗೆ ಆಗಮನ..
ಕೊಲ್ಕತ್ತಾದಿಂದ ಹೊರಟಿರುವ ಮೆಟ್ರೋ ಕೋಚ್‌ಗಳು 2025ರ ಮೇ 10ರಿಂದ ಮೇ 15ರೊಳಗೆ ಬೆಂಗಳೂರಿಗೆ ಆಗಮಿಸುವ ನಿರೀಕ್ಷೆಯಿದೆ. ಮೂರನೇ ರೈಲಿನ ಕಾರ್ಯಾರಂಭನೊಂದಿಗೆ, ಬಿಎಂಆರ್ ಸಿಎಲ್ ಹಳದಿ ಮಾರ್ಗವನ್ನು ಸಾಧ್ಯವಾದಷ್ಟು ಬೇಗ ಸೇವೆಗೆ ತರಲು ತೀವ್ರ ಪ್ರಯತ್ನಗಳನ್ನು ಮುಂದುವರೆಸಿದೆ. ಹಳದಿ ಮಾರ್ಗ ಅಂದುಕೊಂಡಂತೆ ತೆರೆದರೆ ಬೆಂಗಳೂರಿನ ಸಂಚಾರ ವ್ಯವಸ್ಥೆಯನ್ನು ಸುಧಾರಿಸಲಿದೆ ಮತ್ತು ಪ್ರಯಾಣಿಕರಿಗೆ ಉತ್ತಮ ಸಂಪರ್ಕವನ್ನು ಒದಗಿಸಲಿದೆ ಎನ್ನಬಹುದು.
ಈ ಮೆಟ್ರೋ ಕೋಚ್‌ಗಳ ಆಗಮನವು ಜಾಗತಿಕ ಮಟ್ಟದ ಮೂಲಸೌಕರ್ಯ ಒದಗಿಸಲು ಬಿಎಂಆರ್‌ಸಿಎಲ್ ನಿಂದ ನೀಡಲಾಗುತ್ತಿರುವ ಬದ್ಧತೆಯ ಪ್ರತೀಕವಾಗಿದೆ ಎಂದು ಅಧಿಕಾರಿಗಳು ಹೇಳಿಕೊಂಡಿದ್ದಾರೆ. ಬೆಂಗಳೂರಿನ ಮೇಟ್ರೋ ಜಾಲವನ್ನು ವಿಸ್ತರಿಸಿ ನಿರಂತರವಾಗಿ ಹೆಚ್ಚುತ್ತಿರುವ ಸಾರಿಗೆ ಅಗತ್ಯಗಳನ್ನು ಪೂರೈಸುವತ್ತ BMRCL ಶ್ರಮಿಸುತ್ತಿದೆ. ಈ ನಿಟ್ಟಿನಲ್ಲಿ ಮೂರನೇ ರೈಲಿನ ಆಗಮನದ ನಿರೀಕ್ಷೆಯಲ್ಲಿದೆ.
ಮೇ ಅಂತ್ಯಕ್ಕೆ 6 ಬೋಗಿ ರೈಲು ಲಭ್ಯ, ಜೂನ್‌ಗೆ ಓಪನ್..
ಸದ್ಯ ಮೂರನೇ ರೈಲಿನ ಒಟ್ಟು 06 ಬೋಗಿಗಳು ಮೇ ಅಂತ್ಯಕ್ಕೆ BMRCL ಕೈಗೆ ಸಿಗಲಿವೆ. ಅವುಗಳನ್ನು ಜೋಡಿಸಿ, ಹಳಿಗೆ ಇಳಿಸಿ, ಸಂವಹನ ಆಧಾರಿತ ರೈಲು ನಿಯಂತ್ರಣ (CBTC) ವ್ಯವಸ್ಥೆ, ಸಿಗ್ನಲ್ ತಪಾಸಣೆ, ಬಾರ ಸಾಮರ್ಥ್ಯ ಹೀಗೆ ಎಲ್ಲವನ್ನು ಅಧಿಕಾರಿಗಳು ಪರಿಶೀಲಿಸಲಿದ್ದಾರೆ. ಬಳಿಕ ಮೆಟ್ರೋ ಹಳದಿ ಮಾರ್ಗಕ್ಕೆ ಚಾಲನೆ ನೀಡಬಹುದು. ಮೂಲಗಳ ಪ್ರಕಾರ, ಇದೇ ವರ್ಷ ಜೂನ್ ತಿಂಗಳಲ್ಲಿ ಪ್ರತಿ 15 ನಿಮಿಷ ಅಥವಾ 30 ನಿಮಿಷಗಳಿಗೆ ರೈಲಿನ ಆವರ್ತನ ಮೂಲಕ ಹಳದಿ ಮಾರ್ಗ ಆರಂಭಿಸುವ ಸಾಧ್ಯತೆ ಇದೆ.

2ನೇ ರೈಲಿಗೆ ಅನುಮೋದನೆ ಬಾಕಿ..
ಈ ಹಿಂದೆ ಜನವರಿ 06ರಂದು ಇದೇ ಹಳದಿ ಮಾರ್ಗದ ಎರಡನೇ ಡ್ರೈವರ್‌ಲೆಸ್ ರೈಲಿನ ಆರು ಬೋಗಿಗಳ ಪೂರೈಕೆಗೆ ಚಾಲನೆ ನೀಡಲಾಗಿತ್ತು. ಅಂದುಕೊಂಡಂತೆ ಅದೇ ತಿಂಗಳಾಂತ್ಯಕ್ಕೆ ಬೆಂಗಳೂರಿನ ವೈಟ್‌ಫಿಲ್ಡ್ ಮೆಟ್ರೋ ಡಿಪೋಗೆ ಬೋಗಿಗಳು ಆಗಮಿಸಿದ್ದವು. ಬಳಿಕ ಅವುಗಳ ತಪಾಸಣೆ ನಡೆಸಿ ಮೆಟ್ರೋ ರೈಲು ಸುರಕ್ಷತಾ ಆಯುಕ್ತರು (CMRS) ರೈಲ್ವೆ ಹಳಿ, ಸಂಪೂರ್ಣ ಮಾರ್ಗ ತಪಾಸಣೆ ಮಾಡಿದ್ದಾರೆ. ಕೇಂದ್ರ ಸಚಿವಾಲಯದಿಂದ ಅನುಮೋದನೆ ದೊರೆಯುವುದು ಬಾಕಿ ಇದೆ.












Click it and Unblock the Notifications