ಉದ್ಯಾನನಗರಿಯಲ್ಲಿ ಚಿಗುರಲಿವೆ 10 ಲಕ್ಷ ಸಸಿಗಳು!
ಬೆಂಗಳೂರು, ಜೂನ್ 22: ಉದ್ಯಾನ ನಗರಿ ಬೆಂಗಳೂರಿನಲ್ಲಿ ಇನ್ನು ಕೆಲವೇ ದಿನಗಳಲ್ಲಿ 10 ಲಕ್ಷ ಸಸಿಗಳು ಚಿಗುರಲಿವೆ! ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ (ಬಿಬಿಎಂಪಿ) ಹೈಕೋರ್ಟಿನ ಆಣತಿಯಂತೆ ಈ ಕೆಲಸಕ್ಕೆ ಮುಂದಾಗಿದೆ.
ಬೆಂಗಳೂರಿನಲ್ಲಿ ರಸ್ತೆ ಅಗಲೀಕರಣಕ್ಕಾಗಿ ಮರಗಳನ್ನು ಕಡಿಯುತ್ತಿರುವ ಕುರಿತು ಆತಂಕ ವ್ಯಕ್ತಪಡಿಸಿ, ಸಲ್ಲಿಸಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು ವಿಚಾರಣೆ ನಡೆಸಿದ ಕರ್ನಾಟಕ ಉಚ್ಚ ನ್ಯಾಯಾಲಯ, ಬಿಬಿಎಂಪಿ ಕಡ್ಡಾಯವಾಗಿ 10 ಲಕ್ಷ ಸಸಿಗಳನ್ನು ನೆಡಬೇಕು ಎಂದು ಆದೇಶಿಸಿದೆ.
ಈ ಹಿನ್ನೆಲೆಯಲ್ಲಿ ಇನ್ನು ಕೆಲವೇ ದಿನಗಳಲ್ಲಿ ಬೆಂಗಳೂರಿನ ರಸ್ತೆ ರಸ್ತೆಗಳ ಇಕ್ಕೆಲಗಳಲ್ಲಿ ಪುಟ್ಟ ಪುಟ್ಟ ಹಸಿರು ಸಸಿಗಳು ರಾರಾಜಿಸಲಿವೆ. ಆದರೆ ಈ ಸಸಿಗಳು ಮರವಾಗುತ್ತವೋ, ಅಥವಾ ಆರೈಕೆ ಇಲ್ಲದೆ ಸೊರಗುತ್ತವೋ ಎಂಬುದು ಈಗ ಯೋಚಿಸಬೇಕಾದ ವಿಷಯ.
ಬೆಂಗಳೂರಿನಲ್ಲಿ ಅಭಿವೃದ್ಧಿಯ ಹೆಸರಿನಲ್ಲಿ ಈಗಾಗಲೇ ಸಾಕಷ್ಟು ಪರಿಸರ ನಾಶವಾಗಿದೆ. ಮರಗಿಡಗಳ ಮಾರಣಹೋಮವಾಗಿದೆ. ರಸ್ತೆ ಅಗಲೀಕರಣ, ಕಟ್ಟಡ ನಿರ್ಮಾಣ, ಫ್ಲೈ ಓವರ್ ನಿರ್ಮಾಣ ಎನ್ನುತ್ತ ಬೆಂಗಳೂರಿನ ಹಸಿರ ಸಿರಿಯನ್ನು ಬರಿದುಮಾಡಲಾಗುತ್ತಿದೆ. ಈ ನಿಟ್ಟಿನಲ್ಲಿ ಉಚ್ಚ ಬಿಬಿಎಂಪಿಯ ಸಸಿ ನೆಡುವ ಕಾರ್ಯ ಸ್ವಾಗತಾರ್ಹ.

ಹಸಿರಿಗಾಗಿ ಸಮಿತಿ ರಚನೆ
ಬೆಂಗಳೂರಿನಲ್ಲಿ ನಾಶವಾಗುತ್ತಿರುವ ಮರಗಿಡಗಳ ಕುರಿತು ಆತಂಕ ವ್ಯಕ್ತಪಡಿಸಿ ಸಲ್ಲಿಸಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿ ವಿಚಾರಣೆ ನಡೆಸಿದ್ದ ಹೈಕೋರ್ಟ್ ಹಸಿರು ಬೆಳೆಸುವುದಕ್ಕೆ ಬಿಬಿಎಂಪಿ ಗೆ ಆದಶಿಸಿತ್ತು. ಆಗ, ಹಸಿರು ಉಳಿಸುವ, ಬೆಳೆಸುವ, ಮತ್ತು ಆ ಕೆಲಸಗಳಿಗೆ ಮಾರ್ಗದರ್ಶನ ಮಾಡಲು ಸಮಿತಿ ರಚಿಸುವಂತೆ ಬಿಬಿಎಂಪಿ, ನ್ಯಾಯಾಲಯವನ್ನು ಕೋರಿತ್ತು. ಆ ಸಂದರ್ಭದಲ್ಲಿ ಬಿಬಿಎಂಪಿ ಮನವಿಗೆ ಸ್ಪಂದಿಸಿದ್ದ ನ್ಯಾಯಾಲಯ ಎರಡು ಸಮಿತಿಯನ್ನು ರಚಿಸಿತ್ತು.

ಸಮಿತಿಯ ಕೆಲಸವೇನು?
ಈ ಸಮಿತಿಗಳು ಯಾವೆಲ್ಲ ಪ್ರಭೇದದ ಗಿಡಗಳನ್ನು ಬೆಳೆಸಬೇಕು, ಎಲ್ಲೆಲ್ಲಿ ಬೆಳೆಸಬೇಕು, ಅವುಗಳ ಆರೈಕೆ ಹೇಗೆ ಎಂಬುದನ್ನೆಲ್ಲ ಅಭ್ಯಸಿಸುತ್ತದೆ, ಮಾರ್ಗದರ್ಶನ ನೀಡುತ್ತದೆ.

ಶುಭಾರಂಭ ಯಾವಾಗ?
ಬೆಂಗಳೂರನ್ನು ಹಸಿರಿನ ತಾಣವನ್ನಾಗಿಸುವ ಉದ್ದೇಶದಿಂದ ನ್ಯಾಯಾಲಯ ನೀಡಿದ ತೀರ್ಪು ಮತ್ತು ರಚಿಸಿದ ಸಮಿತಿಯ ಕೆಲಸ ಮಾತ್ರ ಈಗಿನ್ನೂ ಶುರುವಾಗುತ್ತಿದೆ. ಇದೀಗ ನ್ಯಾಯಾಲಯದ ಆಣತಿಯಂತೆ 10 ಲಕ್ಷ ಸಸಿಗಳಲ್ಲಿ 1 ಲಕ್ಷ ಸಸಿಗಳನ್ನು ಪಾಲಿಕೆ ವತಿಯಿಂದ ಮತ್ತು 9 ಲಕ್ಷ ಸಸಿಗಳನ್ನು ಸಾರ್ವಜನಿಕರಿಗೇ ನೀಡಿ, ಅವರೇ ಬೆಳೆಸಿ, ಪೋಷಿಸುವಂತೆ ಮಾಡುವ ಯೋಜನೆಯನ್ನು ಹಮ್ಮಿಕೊಳ್ಳಲಾಗಿದೆ.

ಆರು ನರ್ಸರಿಗಳಲ್ಲಿವೆ 4.5 ಲಕ್ಷ ಸಸಿ
ಈ ಉದ್ದೇಶದಿಂದಾಗಿ ಈಗಾಗಲೇ ಆರು ನರ್ಸರಿಗಳಲ್ಲಿ ಒಟ್ಟು 4.5 ಲಕ್ಷ ಸಸಿಗಳನ್ನು ಬೆಳುಯಲಾಗಿದ್ದು ಹಂಚುವುದೊಂದೇ ಬಾಕಿಯಿದೆ. ಒಟ್ಟಿನಲ್ಲಿ ಹಸಿರು ಬೆಂಗಳೂರಿನತ್ತ ಬಿಬಿಎಂಪಿ ಇಡುತ್ತಿರುವ ಹೆಜ್ಜೆ ನಿಜ್ಕಕೂ ಶ್ಲಾಘನೀಯ. ಆದರೆ ಸಸಿ ನೆಡುವುದಷ್ಟೇ ಉದ್ದೇಶವಲ್ಲ, ಅದನ್ನು ಪೋಷಿಸಿ, ಬೆಳೆಸುವ ಕಾರ್ಯವೂ ಅಷ್ಟೇ ಆಸ್ಥೆಯಿಂದ ಆಗಬೇಕಿದೆ.












Click it and Unblock the Notifications