Republic Day at Idgah Maidan : ಚಾಮರಾಜಪೇಟೆ ಈದ್ಗಾ ಮೈದಾನ, ಗಣರಾಜ್ಯೋತ್ಸವಕ್ಕೆ ಒಪ್ಪಿಗೆ
ಬೆಂಗಳೂರು, ಜನವರಿ 22; ಬೆಂಗಳೂರು ನಗರದ ಚಾಮರಾಜಪೇಟೆಯಲ್ಲಿನ ಈದ್ಗಾ ಮೈದಾನದಲ್ಲಿ ಗಣರಾಜ್ಯೋತ್ಸವ ಆಚರಣೆ ಮಾಡಲು ಒಪ್ಪಿಗೆ ನೀಡಲಾಗಿದೆ. ಸ್ವಾತಂತ್ರ್ಯ ದಿನಾಚರಣೆಯಂದು ಸಹ ಮೈದಾನದಲ್ಲಿ ಧ್ವಜಾರೋಹಣ ಮಾಡಲಾಗಿತ್ತು.
ಬೆಂಗಳೂರು ಸೆಂಟ್ರಲ್ ಕ್ಷೇತ್ರದ ಬಿಜೆಪಿ ಸಂಸದ ಪಿ. ಸಿ. ಮೋಹನ್ ಈ ಕುರಿತು ಮಾಹಿತಿ ನೀಡಿದ್ದಾರೆ. "ಕರ್ನಾಟಕ ಸರ್ಕಾರ ಈದ್ಗಾ ಮೈದಾನದಲ್ಲಿ ಗಣರಾಜ್ಯೋತ್ಸವ 2023 ಆಚರಣೆಗೆ ಅವಕಾಶ ನೀಡಿದೆ" ಎಂದು ಹೇಳಿದ್ದಾರೆ.

ಭಾನುವಾರ ಮಾಧ್ಯಮಗಳ ಜೊತೆ ಮತಾನಾಡಿದ ಅವರು, "ಕಂದಾಯ ಸಚಿವ ಆರ್. ಅಶೋಕ ಜೊತೆ ಮಾತನಾಡಿದ್ದೇನೆ. ಜನವರಿ 26ರಂದು ಸರ್ಕಾರದ ವತಿಯಿಂದಲೇ ಅದ್ದೂರಿಯಾಗಿ ಗಣರಾಜ್ಯೋತ್ಸವ ಮಾಡುತ್ತೇವೆ" ಎಂದರು.
"ಗಣರಾಜ್ಯೋತ್ಸವ ಆಚರಣೆಗೆ ಸರ್ಕಾರ ಒಪ್ಪಿಗೆ ನೀಡಿದ್ದು, ಮಕ್ಕಳು, ಪೊಲೀಸ್ ಭದ್ರತೆ ದೃಷ್ಟಿಯಿಂದ ಚೆನ್ನಾಗಿ ಯೋಜನೆ ರೂಪಿಸಲಿದ್ದೇವೆ" ಎಂದು ಸಂಸದರು ವಿವರಣೆ ನೀಡಿದರು.
ಸರ್ಕಾರ ಬೆಂಗಳೂರು ನಗರ ಜಿಲ್ಲಾಧಿಕಾರಿಗಳಿಗೆ ಸಹ ಸರ್ಕಾರ ಗಣರಾಜ್ಯೋತ್ಸವದ ಸಿದ್ಧತೆಗಳನ್ನು ಮಾಡಿಕೊಳ್ಳಲು ಹೇಳಿದೆ. ಕಳೆದ ಬಾರಿ ಧ್ವಜಾರೋಹಣ ಮಾಡಿದವರೇ ಈ ಬಾರಿಯೂ ಧ್ವಜಾರೋಹಣ ಮಾಡಲಿದ್ದಾರೆ.
ಜನಪ್ರತಿನಿಧಿಗಳಿಗೆ ಸಹ ಸರ್ಕಾರದಿಂದಲೇ ಆಹ್ವಾನ ನೀಡಲಾಗುತ್ತದೆ. ಸ್ವಾತಂತ್ರ್ಯ ದಿನಾಚರಣೆ ಸಂದರ್ಭದಲ್ಲಿ ಈದ್ಗಾ ಮೈದಾನದಲ್ಲಿ ಕೆಲವು ನಿರ್ಬಂಧ ಹೇರಲಾಗಿತ್ತು. ಈ ಬಾರಿ ಯಾವುದೇ ನಿರ್ಬಂಧವಿಲ್ಲದೇ ಸಂಭ್ರಮದಿಂದ ಗಣರಾಜ್ಯೋತ್ಸವ ಆಚರಣೆ ಮಾಡಲಾಗುತ್ತದೆ.
ಚಾಮರಾಜಪೇಟೆ ಈದ್ಗಾ ಮೈದಾನದ ಮಾಲೀಕತ್ವದ ಬಗ್ಗೆ ಭಾರೀ ಚರ್ಚೆ ನಡೆದಿತ್ತು. ಅಂತಿಮವಾಗಿ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ಮೈದಾನ ಕಂದಾಯ ಇಲಾಖೆಗೆ ಸೇರಿದ್ದು ಎಂದು ಹೇಳಿತ್ತು.
ಈ ಹಿಂದೆ ಹಿಂದೂ ಜಾನಜಾಗೃತಿ ಸಂಘಟನೆ ಸರ್ಕಾರಕ್ಕೆ ಪತ್ರ ಬರೆದಿತ್ತು. ಈದ್ಗಾ ಮೈದಾನದಲ್ಲಿ ಗಣರಾಜ್ಯೋತ್ಸವ ಆಚರಣೆ ಮಾಡಲು ಅನುಮತಿ ನೀಡಬೇಕು ಎಂದು ಮನವಿ ಮಾಡಿತ್ತು. ಹಿಂದೆ ಈದ್ಗಾ ಮೈದಾನದಲ್ಲಿ ಸಾರ್ವಜನಿಕ ಗಣಪತಿ ಪ್ರತಿಷ್ಠಾಪನೆ ಮಾಡಿ, ಗಣೇಶ ಚತುರ್ಥಿ ಆಚರಣೆ ಮಾಡಲು ಅವಕಾಶ ಕೇಳಲಾಗಿತ್ತು.
ಈದ್ಗಾ ಮೈದಾನದಲ್ಲಿ ಗಣರಾಜ್ಯೋತ್ಸವ ಆಚರಣೆ ಮಾಡುವ ಕುರಿತು ಭಾನುವಾರ ವಿವಿಧ ಸಂಘಟನೆಗಳ ಸಭೆ ನಡೆಯಿತು. ಸ್ವಾತಂತ್ರ್ಯ ದಿನಾಚರಣೆಯಂತೆ ಗಣರಾಜ್ಯೋತ್ಸವದ ಸಂದರ್ಭದಲ್ಲಿಯೂ ಚಾಮರಾಜಪೇಟೆ ಈದ್ಗಾ ಮೈದಾನ ಸುದ್ದಿಯಲ್ಲಿದೆ.












Click it and Unblock the Notifications