Bengaluru Traffic: ಔಟರ್ ರಿಂಗ್ ರೋಡ್ ವಾಹನ ಸವಾರರಿಗೆ ಸಿಹಿ ಸುದ್ದಿ
ಬೆಂಗಳೂರು, ಫೆಬ್ರವರಿ 13: ಉದ್ಯಾನ ನಗರಿ ಬೆಂಗಳೂರಿನ ಹೊರ ವರ್ತುಲ ರಸ್ತೆ (ಒಆರ್‌ಆರ್) ವಾಹನ ಸವಾರರಿಗೆ ಸಂಚಾರಿ ಪೊಲೀಸರು ಸಿಹಿ ಸುದ್ದಿ ನೀಡಿದ್ದಾರೆ. ಬುಧವಾರ ಹೊರ ವರ್ತುಲ ರಸ್ತೆಯಲ್ಲಿ ಭಾರೀ ಸಂಚಾರ ದಟ್ಟಣೆ ಉಂಟಾಗಿತ್ತು. ಬೆಳಗ್ಗೆ ಮತ್ತು ಸಂಜೆ ಉಂಟಾದ ಟ್ರಾಫಿಕ್ ಜಾಮ್ ಕುರಿತು ಸಾಮಾಜಿಕ ಜಾಲತಾಣಗಳಲ್ಲಿ ಪೋಸ್ಟ್‌ಗಳನ್ನು ಹಾಕಲಾಗಿತ್ತು. ಬೆಂಗಳೂರು ಸಂಚಾರ ವ್ಯವಸ್ಥೆಯ ಕುರಿತು ಆಕ್ರೋಶ ವ್ಯಕ್ತಪಡಿಸಲಾಗಿತ್ತು.
ಗುರುವಾರ ಬೆಳಗ್ಗೆ ನಗರ ಸಂಚಾರಿ ಪೊಲೀಸರು ಗುಡ್ ನ್ಯೂಸ್ ನೀಡಿದ್ದಾರೆ. ಹೊರ ವರ್ತುಲ ರಸ್ತೆಯಲ್ಲಿ ಇಂದು ಟ್ರಾಫಿಕ್ ಜಾಮ್ ಉಂಟಾಗುವುದಿಲ್ಲ. ಬಿಎಂಆರ್‌ಸಿಎಲ್ ಕಾಮಗಾರಿ ಕಾರಣ ಮುಚ್ಚಲಾಗಿದ್ದ ಸೇತುವೆಯನ್ನು ಮತ್ತೆ ತೆರೆಯಲಾಗಿದೆ.

ಪೊಲೀಸರು ತಮ್ಮ ಪೋಸ್ಟ್‌ನಲ್ಲಿ, 'ಸಂಚಾರ ಮಾಹಿತಿ. ಓಆರ್‌ಆರ್ ಮಾರ್ಗದ ಪ್ರಯಾಣಿಕರಿಗೆ ಶುಭ ಸುದ್ದಿ! ಬಿಎಂಆರ್‌ಸಿಎಲ್ ಕಾಮಗಾರಿಗಾಗಿ ಮುಚ್ಚಲಾಗಿದ್ದ 19ನೇ ಮುಖ್ಯ ರಸ್ತೆ ಮತ್ತು 14ನೇ ಮುಖ್ಯ ರಸ್ತೆಯ ನಡುವಿನ ಮೇಲುಸೇತುವೆಯನ್ನು ಈಗ ಮರುತೆರೆಯಲಾಗಿದೆ' ಎಂದು ಹೇಳಿದ್ದಾರೆ.
'ಸಿಲ್ಕ್‌ಬೋರ್ಡ್/ ಹೊಸೂರು ಕಡೆಗಿನ ಸಂಚಾರ ಈಗ ಸುಗಮವಾಗಿದೆ. ನಿಮ್ಮ ತಾಳ್ಮೆಗೆ ಧನ್ಯವಾದಗಳು! ಸುರಕ್ಷಿತವಾಗಿ ವಾಹನ ಚಾಲನೆ ಮಾಡಿ' ಎಂದು ಪೋಸ್ಟ್‌ನಲ್ಲಿ ಸಂಚಾರಿ ಪೊಲೀಸರು ತಿಳಿಸಿದ್ದಾರೆ.
ಬುಧವಾರ ಔಟರ್ ರಿಂಗ್ ರೋಡ್‌ನಲ್ಲಿ ಭಾರೀ ಸಂಚಾರ ಸಮಸ್ಯೆ ಉಂಟಾಗಿತ್ತು. ಸಾಮಾಜಿಕ ಜಾಲತಾಣದ ಮೂಲಕ ಈ ಕುರಿತು ಪೊಲೀಸರು ಅಪ್‌ಡೇಟ್ ನೀಡುತ್ತಲೇ ಇದ್ದರು. ಬುಧವಾರ ಬೆಳಗ್ಗೆ ಬಿಎಂಆರ್‌ಸಿಎಲ್ ಲಾಂಚಿಂಗ್ ಗಿರ್ಡರ್‌ನಲ್ಲಿನ ತಾಂತ್ರಿಕ ಸಮಸ್ಯೆಯಿಂದಾಗಿ, ಹೊರ ವರ್ತುಲ ರಸ್ತೆಯ ಮೇಲ್ಸೇತುವೆಯ ಹೆಚ್.ಎಸ್.ಆರ್ 14 ನೇ ಮುಖ್ಯ ರಸ್ತೆಯಿಂದ 19ನೇ ಮುಖ್ಯ ರಸ್ತೆಯನ್ನು ಎರಡೂ ದಿಕ್ಕುಗಳಲ್ಲಿ ಸಂಚಾರಕ್ಕೆ ಮುಚ್ಚಲಾಗಿತ್ತು. ಅದು ದುರಸ್ತಿಯಾಗುವವರೆಗೆ ಎರಡೂ ದಿಕ್ಕಿನ ಸರ್ವೀಸ್ ರಸ್ತೆಯಲ್ಲಿ ಮಾತ್ರ ವಾಹನಗಳನ್ನು ಬಿಡಲಾಗುತ್ತದೆ ಎಂದು ಪೊಲೀಸರು ಹೇಳಿದ್ದರು. ಇದರಿಂದಾಗಿ ವಾಹನ ಸವಾರರು ಪರದಾಡಿದ್ದರು.
ಬಳಿಕ ಬುಧವಾರ ಬೆಳಗ್ಗೆ 11 ಗಂಟೆ ಸುಮಾರಿ ಪೊಲೀಸರು ಹೆಚ್.ಎಸ್.ಆರ್ 14 ನೇ ಮುಖ್ಯ ರಸ್ತೆಯಲ್ಲಿ ಬಿ.ಎಂ.ಆರ್.ಸಿ. ಎಲ್. ನ ಲಾಂಚಿಂಗ್ ಗಿರ್ಡರ್‌ನಲ್ಲಿನ ತಾಂತ್ರಿಕ ಸಮಸ್ಯೆಯಿಂದಾಗಿ ರಾಗಿಗುಡ್ಡ ಡಬಲ್ ಡೆಕ್ಕರ್ ರಸ್ತೆಯನ್ನು ಮುಚ್ಚಲಾಗಿದ್ದು, ದಯವಿಟ್ಟು ಸಹಕರಿಸಿ ಎಂದು ನಗರದ ವಾಹನ ಸವಾರರಿಗೆ ಮನವಿ ಮಾಡಿದ್ದರು.
ಸಂಜೆ ಮತ್ತೆ ಔಟರ್ ರಿಂಗ್ ರೋಡ್‌ನಲ್ಲಿ ಟ್ರಾಫಿಕ್ ಜಾಮ್ ಉಂಟಾಗಿತ್ತು. ಔಟರ್ ರಿಂಗ್ ರಸ್ತೆ ಮಾರತಹಳ್ಳಿಯಿಂದ ಇಬ್ಲೂರು ಕಡೆಗೆ ಮತ್ತು ಸಿಲ್ಕ್‌ಬೋರ್ಡ್ ಪ್ರಯಾಣಿಸುವ ಎಲ್ಲಾ ಪ್ರಯಾಣಿಕರಿಗೆ ಪ್ರಮುಖ ಸೂಚನೆ ಎಂದು ಮತ್ತೊಂದು ಪೋಸ್ಟ್ ಹಾಕಿ ಪೊಲೀಸರು ವಾಹನ ಸವಾರರಿಗೆ ಮಾಹಿತಿ ನೀಡಿದ್ದರು.
ಬಿಎಂಆರ್‌ಎಲ್ ಕಾಮಗಾರಿಯಿಂದಾಗಿ 19ನೇ ಮುಖ್ಯ ರಸ್ತೆ ಮತ್ತು 14ನೇ ಮುಖ್ಯ ರಸ್ತೆ ಮಾರ್ಗದ ನಡುವಿನ ಮೇಲ್ಸೇತುವೆಯನ್ನು ಮುಚ್ಚಲಾಗಿದೆ. ಆದ ಕಾರಣ ಸಂಚಾರ ದಟ್ಟಣೆ ಉಂಟಾಗುವುದರಿಂದ ಇಬ್ಲೂರಿನಿಂದ ಸಿಲ್ಕ್‌ಬೋರ್ಡ್/ ಹೊಸೂರು ಕಡೆಗೆ ಪ್ರಯಾಣಿಸುವವರಿಗೆ ಪರ್ಯಾಯ ಮಾರ್ಗಗಳನ್ನು ಬಳಸಲು ಸೂಚನೆ ನೀಡಿದ್ದರು.
19ನೇ ಮುಖ್ಯ ರಸ್ತೆಯಲ್ಲಿ ಎಡಕ್ಕೆ ತಿರುಗಿ 17ನೇ ಅಡ್ಡರಸ್ತೆ, ಹೆಚ್.ಎಸ್.ಆರ್. ಕಡೆಗೆ ಪ್ರಯಾಣಿಸಿ ನಂತರ 5ನೇ ಮುಖ್ಯ ರಸ್ತೆ ಮುಖಾಂತರ ಪ್ರಯಾಣಿಸಿ ಸಿಲ್ಕ್‌ಬೋರ್ಡ್ ತಲುಪಬಹುದು. 6ನೇ ಮುಖ್ಯ ರಸ್ತೆಯಲ್ಲಿ ಎಡಕ್ಕೆ ತಿರುಗಿ ಎಂ.ಸಿ.ಹೆಚ್.ಎಸ್ ಕಾಲೋನಿ ಕಡೆಗೆ ಪ್ರಯಾಣಿಸಿ ಹೊಸೂರು ರಸ್ತೆಯನ್ನು ತಲುಪಬಹುದು ಎಂದು ಹೇಳಿದ್ದರು.












Click it and Unblock the Notifications