ಶೀಘ್ರದಲ್ಲೇ ನಮ್ಮ ಮೆಟ್ರೋ ಪ್ರಯಾಣ ದರ ಏರಿಕೆ
ಬೆಂಗಳೂರು, ಆಗಸ್ಟ್ 29 : ನಮ್ಮ ಮೆಟ್ರೋ ಪ್ರಯಾಣ ದರ ಏರಿಕೆಯಾಗಲಿದೆ. ಮೆಟ್ರೋ ಮೊದಲ ಹಂತದ ಕಾಮಗಾರಿ 2016ರ ನವೆಂಬರ್‌ನಲ್ಲಿ ಪೂರ್ಣಗೊಳ್ಳುವ ಸಾಧ್ಯತೆ ಇದ್ದು, ನಂತರ ದರವನ್ನು ಹೆಚ್ಚಿಸಲು ಬಿಎಂಆರ್‌ಸಿಎಲ್ ನಿರ್ಧರಿಸಿದೆ.
ಬಿಎಂಆರ್‌ಸಿಎಲ್ ವ್ಯವಸ್ಥಾಪಕ ನಿರ್ದೇಶಕ ಪ್ರದೀಪ್ ಸಿಂಗ್ ಖರೋಲಾ ಅವರು ಈ ಬಗ್ಗೆ ಮಾತನಾಡಿದ್ದು, 'ನಗರದಲ್ಲಿ ಮೆಟ್ರೋ ಸಂಚಾರ ಆರಂಭವಾದಾಗಿನಿಂದ ದರ ಹೆಚ್ಚಳ ಮಾಡಿಲ್ಲ. ಈಗ ವಿದ್ಯುತ್ ಇತರ ಸೇವೆಗಳು ಮತ್ತು ವಿದ್ಯುತ್ ದರಗಳು ಹೆಚ್ಚಳವಾಗಿವೆ. ಆದ್ದರಿಂದ, ದರ ಹೆಚ್ಚಳಕ್ಕೆ ತೀರ್ಮಾನ ಕೈಗೊಳ್ಳಲಾಗಿದೆ' ಎಂದು ಹೇಳಿದ್ದಾರೆ. [ಮಹಿಳೆಯರು, ಹಿರಿಯ ನಾಗರಿಕರ ನೆರವಿಗೆ ನಿಂತ ನಮ್ಮ ಮೆಟ್ರೋ]

'2016ರ ನವೆಂಬರ್‌ನಲ್ಲಿ ನಮ್ಮ ಮೆಟ್ರೋ ಮೊದಲ ಹಂತದ ಕಾಮಗಾರಿ ಪೂರ್ಣಗೊಳ್ಳುವ ನಿರೀಕ್ಷೆ ಇದೆ. ನಂತರ ಮೆಟ್ರೋ ರೈಲಿಗೆ ಹೆಚ್ಚುವರಿ ಬೋಗಿ ಅಳವಡಿಸಲಾಗುತ್ತದೆ. ರೈಲು ಸಂಚಾರದ ಅವಧಿಯನ್ನು ಹೆಚ್ಚಿಸಲಾಗುತ್ತದೆ. ಆಗ ದರ ಹೆಚ್ಚಳ ಅನಿವಾರ್ಯ' ಎಂದರು. [ನಮ್ಮ ಮೆಟ್ರೋ ದರಪಟ್ಟಿ ನೋಡಿ]
ಸದ್ಯ ಬೈಯಪ್ಪನಹಳ್ಳಿ-ಮೈಸೂರು ರಸ್ತೆ ಮತ್ತು ಸಂಪಿಗೆ ರಸ್ತೆ-ನಾಗಸಂದ್ರ ನಡುವೆ ನಮ್ಮ ಮೆಟ್ರೋ ರೈಲು ಸಂಚಾರ ನಡೆಸುತ್ತಿದೆ. ಬೈಯಪ್ಪನಹಳ್ಳಿ-ಮೈಸೂರು ರಸ್ತೆ ನೇರಳೆ ಮಾರ್ಗದಲ್ಲಿ ಪ್ರತಿನಿತ್ಯ 1.35 ಲಕ್ಷ ಪ್ರಯಾಣಿಕರು ಮತ್ತು ಸಂಪಿಗೆ ರಸ್ತೆ-ನಾಗಸಂದ್ರ ಮಾರ್ಗದಲ್ಲಿ 45 ಸಾವಿರ ಪ್ರಮಾಣಿಕರು ದಿನನಿತ್ಯ ಪ್ರಯಾಣಿಸುತ್ತಿದ್ದಾರೆ.[ಮೆಟ್ರೋ ನಿಲ್ದಾಣದಲ್ಲಿ ಪಾರ್ಕಿಂಗ್ ಶುಲ್ಕ ಕಟ್ಟಬೇಕು]
ನಮ್ಮ ಮೆಟ್ರೋ ವೆಬ್ ಸೈಟ್‌ನಲ್ಲಿರುವಂತೆ ಕನಿಷ್ಠ ಪ್ರಯಾಣ ದರ 10 ರೂ., ಬೈಯಪ್ಪನಹಳ್ಳಿ-ಮೈಸೂರು ರಸ್ತೆ ಮಾರ್ಗದಲ್ಲಿ ಗರಿಷ್ಠ ಪ್ರಯಾಣ ದರ 40 ಮತ್ತು ಸಂಪಿಗೆ ರಸ್ತೆ- ನಾಗಸಂದ್ರ ಮಾರ್ಗದಲ್ಲಿ 32 ರೂ. ಗಳಾಗಿವೆ.












Click it and Unblock the Notifications