ಬೆಂಗಳೂರಿಗರೆ, ದಾನಧರ್ಮ ಮಾಡಲು ಸಜ್ಜಾಗಿರಿ
ಬೆಂಗಳೂರು, ಸೆ. 30 : ತೆಗೆದುಕೊಳ್ಳುವುದಕ್ಕಿಂತ ಕೊಡುವುದರಲ್ಲೇ ಹೆಚ್ಚಿನ ಸುಖವಿದೆ. ದಾನಶೂರರಲ್ಲದಿದ್ದರೂ, ನಮ್ಮ ಬೆಂಗಳೂರಿನ ಪರಿಸರಕ್ಕಾಗಿ, ಶಿಕ್ಷಣಕ್ಕಾಗಿ, ಆರೋಗ್ಯಕ್ಕಾಗಿ ಮತ್ತು ದೈನಂದಿನ ಜೀವನಕ್ಕಾಗಿ ಒಂದಿಷ್ಟಾದರೂ ದಾನ ನೀಡಲು ನೀವು ಸಿದ್ಧರಿದ್ದೀರಾ? ಹಾಗಿದ್ದರೆ ಅ.5ರಂದು ಶನಿವಾರ ಬೆಂಗಳೂರಿನಲ್ಲಿ ನಡೆಯಲಿರುವ 'GeneroCity - Bangalore 2013' ಕಾರ್ಯಕ್ರಮದಲ್ಲಿ ನಿಮ್ಮ ಉಪಸ್ಥಿತಿ ಇರಲಿ.
ಈ ಕಾರ್ಯಕ್ರಮಕ್ಕೆ ನೀವು ಮಾತ್ರ ಬರದೆ, ಹೆಂಡತಿ ಮಕ್ಕಳು, ಬಂಧು ಬಳಗ, ಸ್ನೇಹಿತರನ್ನು ಕೂಡ ಕರೆತನ್ನಿರಿ. ಏಕೆಂದರೆ, ಬೆಳಗ್ಗೆ 10.30ರಿಂದ ರಾತ್ರಿ 10 ಗಂಟೆಯವರೆಗೆ, ಸಂಗೀತ, ಮಕ್ಕಳಿಗಾಗಿ ಚಿತ್ರಕಲಾ ಸ್ಪರ್ಧೆ, ಎಲ್ಲ ವಯೋವರ್ಗದವರಿಗಾಗಿ ಪ್ರತಿಭಾ ಪ್ರದರ್ಶನ, ಪಡ್ಡೆಗಳಿಗಾಗಿ ಗಲ್ಲಿ ಕ್ರಿಕೆಟ್, ಅದೃಶ್ಯ ವಾಲಿಬಾಲ್, ನೆಲದ ಮೇಲಾಡುವ ಬಾಸ್ಟೆಟ್ ಬಾಲ್ ಮುಂತಾದ ಹಲವು ಆಕರ್ಷಕ ಕಾರ್ಯಕ್ರಮಗಳು ರಂಜಿಸಲು ತಯಾರಾಗಿ ನಿಂತಿವೆ. ಮನರಂಜನೆಯ ಜೊತೆ ಹಿಹ್ವಾ ಚಾಪಲ್ಯವನ್ನು ತಣಿಸುವಂಥ ಖಾದ್ಯಗಳೂ ಕಾದಿರುತ್ತವೆ.

126 ವರ್ಷದಷ್ಟು ಹಳೆಯದಾದ 'ಯುನೈಟೆಡ್ ವೇ ವರ್ಲ್ಡ್‌ವೈಡ್ ನೆಟ್ವರ್ಕ್' ಖಾಸಗಿ ಚಾರಿಟಿ ಸಂಸ್ಥೆಯ ಬೆಂಗಳೂರು ಘಟಕ 'ಯುನೈಟೆಡ್ ವೇ ಆಫ್ ಬೆಂಗಳೂರು' ಸಂಸ್ಥೆ GeneroCity ಕಾರ್ಯಕ್ರಮವನ್ನು ಆಯೋಜಿಸಿದೆ. ಈ ಸಮ್ಮೇಳನದಲ್ಲಿ ಬೆಂಗಳೂರಿನ 45ಕ್ಕೂ ಹೆಚ್ಚು ಸರಕಾರೇತರ ಸಂಸ್ಥೆಗಳು ಭಾಗವಹಿಸುತ್ತಿದ್ದು, ಬೆಂಗಳೂರಿನ ಜನತೆಯನ್ನು ಚಾರಿಟಿ ಕಾರ್ಯಕ್ರಮಗಳಲ್ಲಿ ಪಾಲ್ಗೊಳ್ಳುವಂತೆ ಮಾಡಲು ಅನೇಕ ಕಾರ್ಯಕ್ರಮಗಳನ್ನು ಹಮ್ಮಿಕೊಂಡಿವೆ.
ಕಾರ್ಯಕ್ರಮದ ವಿವರ
ದಿನಾಂಕ : ಅಕ್ಟೋಬರ್ 5, 2013
ಸ್ಥಳ : ಸೇ.ಜೋಸೆಫ್ ಇಂಡಿಯನ್ ಹೈಸ್ಕೂಲ್ ಗ್ರೌಂಡ್ಸ್, ವಿಠಲ್ ಮಲ್ಯ ರಸ್ತೆ.
ಸಮಯ : ಬೆಳಿಗ್ಗೆ 10.30ರಿಂದ ರಾತ್ರಿ 10ರವರೆಗೆ
ಪ್ರಮುಖ ಆಕರ್ಷಣೆಗಳು
* ಸಂಜೆ 8 ಗಂಟೆಗೆ 'Aurko' ತಂಡದಿಂದ ಮ್ಯೂಸಿಕ್ ಬ್ಯಾಂಡ್. 'Aurko' ಸಂಸ್ಥೆ ಹಿಮೋಫಿಲಿಯಾ ರೋಗದಿಂದದ ಬಳಲುತ್ತಿರುವ ರೋಗಿಗಳಿಗಾಗಿ, ಖ್ಯಾತ ಹಿನ್ನೆಲೆ ಗಾಯಕ ಶಾನ್ ಅವರ ಜೊತೆ ಕೈಜೋಡಿಸಿ ನಿಧಿ ಸಂಗ್ರಹಿಸಿದೆ ಮತ್ತು ಭೂ ತಾಪಮಾನ ಏರಿಕೆ ಬಗ್ಗೆ ಜಾಗೃತಿ ಮೂಡಿಸುತ್ತಿದೆ.
* ಸಂಜೆ 6 ಗಂಟೆಗೆ 'ಲಗೋರಿ' ತಂಡದಿಂದ ಸಂಗೀತ ಕಾರ್ಯಕ್ರಮ.
* ಮಕ್ಕಳಿಗಾಗಿ ಚಿತ್ರಕಲಾ ಸ್ಪರ್ಧೆ
* ಎಲ್ಲ ವಯೋವರ್ಗದವರಿಗೆ ಪ್ರತಿಭಾ ಪ್ರದರ್ಶನ
* ಗಲ್ಲಿ ಕ್ರಿಕೆಟ್
* ಅದೃಶ್ಯ ವಾಲಿಬಾಲ್
* ನೆಲದ ಮೇಲಾಡುವ ಬಾಸ್ಕೆಟ್ ಬಾಲ್
ಈ ಕ್ರೀಡೆ ಮತ್ತು ಸಾಂಸ್ಕೃತಿಕ ಕಾರ್ಯಕ್ರಮದಳಲ್ಲಿ ಹೇಗೆ ಭಾಗವಹಿಸಬಹುದು?
1) ಮ್ಯೂಸಿಕ್ ಬ್ಯಾಂಡ್ : ನಿಮ್ಮದೇ ಮ್ಯೂಸಿಕ್ ಬ್ಯಾಂಡ್ ಇದ್ದರೆ 7,500 ರು. ಭರ್ತಿ ಮಾಡಿ ನೋಂದಾಯಿಸಿಕೊಳ್ಳಿ. ಈ ಹಣವನ್ನು ದತ್ತಿನಿಧಿಗಾಗಿ ಬಳಸಲಾಗುವುದು ಮತ್ತು ನಿಮಗೆ ಸಂಗೀತ ಕಾರ್ಯಕ್ರಮ ನೀಡಲು ಅವಕಾಶ ಮಾಡಿಕೊಡಲಾಗುವುದು.
2) ಮಕ್ಕಳಿಗಾಗಿ ಚಿತ್ರಕಲಾ ಸ್ಪರ್ಧೆ : ಇದಕ್ಕಾಗಿ 200 ರು. ತುಂಬಬೇಕು. ಮಕ್ಕಳಿಗೆ ಎಲ್ಲ ಪರಿಕರಗಳನ್ನು ಆಯೋಜಕರೇ ನೀಡುತ್ತಾರೆ. ಮಕ್ಕಳು ಕೂಡ ತಮ್ಮ ಪರಿಕರಗಳನ್ನು ತರಬಹುದು.
3) ಪ್ರತಿಭಾ ಪ್ರದರ್ಶನ (ಎಲ್ಲ ವಯೋಮಾನದವರಿಗೆ) : 100 ರು. ಭರ್ತಿ ಮಾಡಿ ನೋಂದಾಯಿಸಿಕೊಳ್ಳಿ. ನಂತರ ನಿಗದಿತ ಸಮಯದಲ್ಲಿ ನಿಮ್ಮ ಯಾವುದೇ ರೀತಿಯಾದ ಪ್ರತಿಭೆಯನ್ನು ಪ್ರದರ್ಶಿಸಬಹುದು.
4) ಗಲ್ಲಿ ಕ್ರಿಕೆಟ್ : 5000 ರು. ಕಟ್ಟಿ ನಿಮ್ಮ ತಂಡದ ಸಮೇತ ಈ ಸ್ಪರ್ಧೆಯಲ್ಲಿ ಭಾಗವಹಿಸಬಹುದು.
5) ಇನ್ ವಿಸಿಬಲ್ ವಾಲಿಬಾಲ್ : 3,000 ರು. ಕಟ್ಟಿ ನಿಮ್ಮ ತಂಡವನ್ನು ಈ ಸ್ಪರ್ಧೆಯಲ್ಲಿ ನೋಂದಾಯಿಸಿಕೊಳ್ಳಬಹುದು. ಈ ಹಣ ಕೂಡ ಸಹಾಯ ನಿಧಿಗೆ ವಿನಿಯೋಗವಾಗುತ್ತದೆ.
6) ನೆಲದ ಮೇಲೆ ಬಾಸ್ಕೆಟ್ ಬಾಲ್ : 3,000 ರು. ಕಟ್ಟಿ ನಿಮ್ಮ ತಂಡವನ್ನು ಈ ಸ್ಪರ್ಧೆಯಲ್ಲಿ ನೋಂದಾಯಿಸಿಕೊಳ್ಳಬಹುದು. ಈ ಹಣ ಕೂಡ ಸಹಾಯ ನಿಧಿಗೆ ವಿನಿಯೋಗವಾಗುತ್ತದೆ.
http://bit.ly/generocity ಲಿಂಕ್ ಬಳಸಿ ಆಸಕ್ತರು ನೋಂದಾಯಿಸಿಕೊಳ್ಳಬಹುದು. ಫೇಸ್ ಬುಕ್ ಬಳಕೆದಾರರು ಈ ಪುಟವನ್ನು Like ಮಾಡಬಹುದು. ಈ ಕಾರ್ಯಕ್ರಮದಲ್ಲಿ ಭಾಗವಹಿಸಲು ಇಚ್ಛಿಸಿದ್ದರೆ ಈ ಕೊಂಡಿ ಕ್ಲಿಕ್ಕಿಸಿ ದೃಢಪಡಿಸಿ.












Click it and Unblock the Notifications