ವಿಧಾನಸೌಧದಲ್ಲಿ 3D ಲೇಸರ್ ಶೋ: ಮೈಸೂರು ಅರಮನೆಯಂತೆ ವಾರಾಂತ್ಯದಲ್ಲಿ ಧ್ವನಿ-ಬೆಳಕಿನ ಪ್ರದರ್ಶನಕ್ಕೆ ಜಿಬಿಎ ಯೋಜನೆ
ಬೆಂಗಳೂರು: ಕರ್ನಾಟಕದ ಆಡಳಿತದ ಕೇಂದ್ರ ಬಿಂದು ಹಾಗೂ ಕರುನಾಡಿನ ಹೆಮ್ಮೆಯ ಪ್ರತೀಕವಾಗಿರುವ ವಿಧಾನಸೌಧವು ಶೀಘ್ರದಲ್ಲೇ ಹೊಸ ಮೆರಗಿನೊಂದಿಗೆ ಕಂಗೊಳಿಸಲಿದೆ. ಹಗಲಿನಲ್ಲಿ ತನ್ನ ಭವ್ಯ ವಾಸ್ತುಶಿಲ್ಪದಿಂದಲೇ ಪ್ರವಾಸಿಗರನ್ನ ಸೆಳೆಯುವ ವಿಧಾನಸೌಧದ ಸೌಂದರ್ಯವನ್ನ ರಾತ್ರಿ ವೇಳೆಯಲ್ಲೂ ಕಣ್ತುಂಬಿಕೊಳ್ಳಲು ಇದೀಗ ಬೃಹತ್ ಬೆಂಗಳೂರು ಪ್ರಾಧಿಕಾರವು (GBA) ವಿನೂತನ ಯೋಜನೆಯೊಂದನ್ನ ರೂಪಿಸಿದೆ.
ಹೌದು, 15 ರಿಂದ 20 ಕೋಟಿ ರೂಪಾಯಿಗಳ ಭಾರಿ ವೆಚ್ಚದಲ್ಲಿ ವಿಧಾನಸೌಧದ ಮೇಲೆ ಅತ್ಯಾಧುನಿಕ 3ಡಿ ಪ್ರೊಜೆಕ್ಷನ್ ಮ್ಯಾಪಿಂಗ್ ಹಾಗೂ ವಿಧಾನಸೌಧ 3D ಲೇಸರ್ ಶೋ ವ್ಯವಸ್ಥೆಯನ್ನ ಅಳವಡಿಸಲು ಮುಂದಾಗಿದೆ.

ಮೈಸೂರು ಅರಮನೆ ಮಾದರಿಯಲ್ಲಿ ಧ್ವನಿ-ಬೆಳಕಿನ ಪ್ರದರ್ಶನ
ಈಗಾಗಲೇ ರಾಜ್ಯದ ಸಾಂಸ್ಕೃತಿಕ ನಗರಿ ಮೈಸೂರಿನ ಅರಮನೆಯಲ್ಲಿ ರಾತ್ರಿ ವೇಳೆ ಆಯೋಜಿಸಲಾಗುವ ಧ್ವನಿ-ಬೆಳಕಿನ ಪ್ರದರ್ಶನವು ಅಪಾರ ಸಂಖ್ಯೆಯ ಪ್ರವಾಸಿಗರನ್ನ ಸೆಳೆಯುತ್ತಿದೆ. ಇದೇ ಮಾದರಿಯಲ್ಲಿ ವಿಧಾನಸೌಧದ ವಾಸ್ತುಶಿಲ್ಪ, ಅದರ ಐತಿಹಾಸಿಕ ಹಿನ್ನೆಲೆ, ನಿರ್ಮಾಣದ ರೋಚಕ ಕಥೆ ಹಾಗೂ ಕರ್ನಾಟಕದ ಶ್ರೀಮಂತ ಸಾಂಸ್ಕೃತಿಕ ವೈಶಿಷ್ಟ್ಯಗಳನ್ನು 3ಡಿ ತಂತ್ರಜ್ಞಾನ ಮತ್ತು ಧ್ವನಿ-ಬೆಳಕಿನ ಸಂಯೋಜನೆಯೊಂದಿಗೆ ಪ್ರದರ್ಶಿಸುವುದು ಜಿಬಿಎ ಯೋಜನೆಯ ಪ್ರಮುಖ ಉದ್ದೇಶವಾಗಿದೆ.
ಈ ಮಹತ್ವಾಕಾಂಕ್ಷಿ ಯೋಜನೆಗೆ ಮುಖ್ಯಮಂತ್ರಿಗಳು ಈಗಾಗಲೇ ಹಸಿರು ನಿಶಾನೆ ತೋರಿದ್ದು, ಅಗತ್ಯವಿರುವ ಸಂಪೂರ್ಣ ಅನುದಾನವನ್ನ ಒದಗಿಸಲು ಸಮ್ಮತಿ ಸೂಚಿಸಿದ್ದಾರೆ ಎಂದು ತಿಳಿದುಬಂದಿದೆ.
ವಾರಾಂತ್ಯ ಹಾಗೂ ರಜಾದಿನಗಳಲ್ಲಿ ಲೇಸರ್ ಮ್ಯಾಪಿಂಗ್
ಯೋಜನೆಯ ರೂಪುರೇಷೆಗಳ ಪ್ರಕಾರ, ವಿಧಾನಸೌಧದ ಕಟ್ಟಡದ ಮೇಲೆ ಶಾಶ್ವತವಾದ ಲೇಸರ್ ಮ್ಯಾಪಿಂಗ್ ವ್ಯವಸ್ಥೆಯನ್ನ ಅಳವಡಿಸಲಾಗುತ್ತದೆ. ಇದಕ್ಕಾಗಿ ಹೈಡ್ರಾಲಿಕ್ ಉಪಕರಣಗಳು ಸೇರಿದಂತೆ ವಿದೇಶಗಳಿಂದ ಅತ್ಯಾಧುನಿಕ ತಾಂತ್ರಿಕ ಸಾಧನಗಳನ್ನ ತರಿಸಿ ಅಳವಡಿಸಬೇಕಾಗಿದೆ.
ಈ ತಾಂತ್ರಿಕ ವ್ಯವಸ್ಥೆ ಸಂಪೂರ್ಣವಾಗಿ ಅನುಷ್ಠಾನಗೊಂಡ ಬಳಿಕ, ಪ್ರತಿ ಶನಿವಾರ, ಭಾನುವಾರ ಹಾಗೂ ಎಲ್ಲಾ ಸರ್ಕಾರಿ ರಜಾದಿನಗಳಲ್ಲಿ ಸಂಜೆಯ ವೇಳೆ ಈ ನಯನಮನೋಹರವಾದ ಧ್ವನಿಸಹಿತ ಲೇಸರ್ ಪ್ರದರ್ಶನವನ್ನ ನಿಯಮಿತವಾಗಿ ಆಯೋಜಿಸಲು ಉದ್ದೇಶಿಸಲಾಗಿದೆ. ಕಟ್ಟಡದ ಕಂಬಗಳು ಹಾಗೂ ಗುಮ್ಮಟಗಳ ಮೇಲೆ ಮೂಡುವ ಬೆಳಕಿನ ಚಿತ್ರಗಳು ನಾಡಿನ ಪರಂಪರೆಯನ್ನು ಅದ್ಭುತವಾಗಿ ಅನಾವರಣಗೊಳಿಸಲಿವೆ.
ಸಾರ್ವಜನಿಕರಿಗೆ ಉಚಿತ ವೀಕ್ಷಣೆಗೆ ಅವಕಾಶ
ಇನ್ನು, ಈ ಲೇಸರ್ ಲೈಟ್ ಶೋ ವೀಕ್ಷಣೆಗೆ ಸಾರ್ವಜನಿಕರಿಂದ ಹಾಗೂ ಪ್ರವಾಸಿಗರಿಂದ ಯಾವುದೇ ರೀತಿಯ ಪ್ರವೇಶ ಶುಲ್ಕವನ್ನ ಪಡೆಯದೆ, ಸಂಪೂರ್ಣ ಉಚಿತವಾಗಿ ವೀಕ್ಷಿಸಲು ಅವಕಾಶ ಕಲ್ಪಿಸುವ ಚಿಂತನೆಯಿದೆ. ಇದು ಕೇವಲ ಕಣ್ಮನ ಸೆಳೆಯುವ ಪ್ರದರ್ಶನವಾಗಿರದೆ, ಬೆಂಗಳೂರು ಪ್ರವಾಸೋದ್ಯಮದ ಅಭಿವೃದ್ಧಿಗೂ ಬಹುದೊಡ್ಡ ಕೊಡುಗೆ ನೀಡಲಿದೆ.
ರಾತ್ರಿ ವೇಳೆಯಲ್ಲಿ ನಡೆಯುವ ಈ 3ಡಿ ಲೇಸರ್ ಶೋ ದೇಶ-ವಿದೇಶಗಳ ಪ್ರವಾಸಿಗರನ್ನು ವಿಧಾನಸೌಧದತ್ತ ಆಕರ್ಷಿಸಲಿದ್ದು, ಐಟಿ ಸಿಟಿಯ ಪ್ರವಾಸೋದ್ಯಮಕ್ಕೆ ಹೊಸ ಆಯಾಮವನ್ನು ಒದಗಿಸಲಿದೆ.


Click it and Unblock the Notifications
