ಮೂರು ಗುಂಡುಗಳು ಗೌರಿ ಲಂಕೇಶ್ ದೇಹ ಹೊಕ್ಕಿವೆ
Recommended Video

ಬೆಂಗಳೂರು, ಸೆಪ್ಟೆಂಬರ್ 07 : ಪತ್ರಕರ್ತೆ ಗೌರಿ ಲಂಕೇಶ್ ಅವರ ದೇಹಕ್ಕೆ ಮೂರು ಗುಂಡುಗಳು ಹೊಕ್ಕಿವೆ ಎಂದು ಮರಣೋತ್ತರ ಪರೀಕ್ಷೆಯಲ್ಲಿ ಖಚಿತವಾಗಿದೆ. ಮಂಗಳವಾರ ರಾತ್ರಿ ರಾಜರಾಜೇಶ್ವರಿ ನಗರದ ನಿವಾಸದಲ್ಲಿ ಗೌರಿ ಲಂಕೇಶ್ ಹತ್ಯೆ ನಡೆದಿತ್ತು.
ವಿಕ್ಟೋರಿಯಾ ಆಸ್ಪತ್ರೆಯಲ್ಲಿ ನಡೆದ ಮರಣೋತ್ತರ ಪರೀಕ್ಷೆಯಲ್ಲಿ ಮೂರು ಗುಂಡುಗಳು ಗೌರಿ ಲಂಕೇಶ್ ದೇಹಕ್ಕೆ ಬಿದ್ದು, ಹೊರಹೋಗಿವೆ ಎಂದು ಖಚಿತವಾಗಿದೆ. ಭುಜ ಮತ್ತು ಎದೆಯ ಕೆಳಭಾಗದಲ್ಲಿ ಗುಂಡುಗಳು ಹಾದು ಹೋಗಿವೆ ಎನ್ನುತ್ತದೆ ವರದಿ.

ಮಂಗಳವಾರ ರಾತ್ರಿ ಗೌರಿ ಲಂಕೇಶ್ ಮೃತದೇಹವನ್ನು ಆಸ್ಪತ್ರೆಗೆ ತರಲಾಗಿತ್ತು. ಬುಧವಾರ ಬೆಳಗ್ಗೆ 9.30ಕ್ಕೆ ವಿಧಿವಿಜ್ಞಾನ ಪ್ರಯೋಗಾಲಯದ ಡಾ.ಎಸ್.ವೆಂಕಟರಾಘವ ಅವರು ಮರಣೋತ್ತರ ಪರೀಕ್ಷೆ ಆರಂಭಿಸಿದರು. ಮರಣೋತ್ತರ ಪರೀಕ್ಷೆಯ ಪ್ರಾಥಮಿಕ ವರದಿಯನ್ನು ಆಸ್ಪತ್ರೆ ಈಗಾಗಲೇ ಸಲ್ಲಿಸಿದ್ದು, ಒಂದು ದಿನದಲ್ಲಿ ವಿವರವಾದ ವರದಿಯನ್ನು ನೀಡಲಿದೆ.
ಗೌರಿ ಲಂಕೇಶ್ ಹತ್ಯೆ ಪ್ರಕರಣದ ತನಿಖೆಗೆ ಎಸ್‌ಐಟಿ ರಚನೆ ಮಾಡಲಾಗಿದೆ. ಗುಂಡಿನ ದಾಳಿ ನಡೆದ ಸ್ಥಳದಲ್ಲಿ 4 ಗುಂಡುಗಳು ಪತ್ತೆಯಾಗಿವೆ. ಒಂದು ಗುಂಡು ಮನೆಯ ಗೋಡೆಗೆ ತಗುಲಿದ್ದು, ದುಷ್ಕರ್ಮಿಗಳು ಗುರಿ ತಪ್ಪಿರಬಹುದು ಎಂದು ಶಂಕಿಸಲಾಗಿದೆ.
ಎಸ್‌ಐಟಿ ಗೌರಿ ಲಂಕೇಶ್ ಅವರ ಮೊಬೈಲ್ ಕರೆಗಳ ಮಾಹಿತಿ, ಅವರ ನಿವಾಸ ಮತ್ತು ಸುತ್ತಮುತ್ತಲಿನ ಪ್ರದೇಶಗಳ ಸಿಸಿಟಿವಿ ದೃಶ್ಯಾವಳಿಗಳನ್ನು ವಶಕ್ಕೆ ಪಡೆದುಕೊಂಡು ಪರಿಶೀಲನೆ ನಡೆಸುತ್ತಿದ್ದಾರೆ.












Click it and Unblock the Notifications