ಬಿಜೆಪಿ ಶಾಲು ಹಾಕಿಕೊಂಡು ಬಂದಿದ್ದರೆ ಭದ್ರತಾ ವೈಫಲ್ಯ ಗೊತ್ತಾಗುತ್ತಿತ್ತು: ಜಿ.ಪರಮೇಶ್ವರ
ಬೆಂಗಳೂರು, ಏಪ್ರಿಲ್ 29: ಕರ್ನಾಟಕ ರಾಜ್ಯ ಕಾಂಗ್ರೆಸ್ ಸರ್ಕಾರದ ವತಿಯಿಂದ ನೆನ್ನೆ ಬೆಳಗಾವಿಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಎಎಸ್‌ಪಿ ಮೇಲೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಕೈ ಮಾಡಲು ಹೋಗಿದ್ದ ಬಗ್ಗೆ ಪೂರ್ಣ ಮಾಹಿತಿ ಇಲ್ಲ. ಕಾರ್ಯಕ್ರಮದಲ್ಲಿ ಅವರು ಮಾತನಾಡುವಾಗಿ ಕಪ್ಪು ಬಾವುಟ ಪ್ರದರ್ಶನ ಮಾಡಲಾಗಿದೆ ಎಂದು ಗೃಹ ಸಚಿವ ಜಿ.ಪರಮೇಶ್ವರ ಅವರು ಭದ್ರತಾ ವೈಪಲ್ಯ ಆಗಿದೆ ಎಂಬುದನ್ನು ಒಪ್ಪಿಲ್ಲ.
ಮಂಗಳವಾರ ನಗರದಲ್ಲಿ ಮಾತನಾಡಿದ ಅವರು, ಎಎಸ್‌ಪಿ ಮೇಲೆ ಮುಖ್ಯಮಂತ್ರಿಗಳು ಕೈ ಮಾಡಲು ಹೋಗಿರುವುದು ಸಾರ್ವಜನಿಕವಾಗಿ ಟೀಕೆ ವ್ಯಕ್ತವಾಗುತ್ತಿರುವ ಬಗೆಗಿನ ಪ್ರಶ್ನೆಗೆ ಅವರು ಉತ್ತರಿಸಿದರು. ಬೆಳಗಾವಿಯಲ್ಲಿ ಸೋಮವಾರ ನಡೆದ ಘಟನೆ ಬಗ್ಗೆ ಪೂರ್ಣ ಮಾಹಿತಿ ತೆಗೆದುಕೊಂಡು ಪ್ರತಿಕ್ರಿಯಿಸುತ್ತೇನೆ. ನನಗೆ ಸಂಪೂರ್ಣವಾದಂತ ಮಾಹಿತಿ ಇಲ್ಲ. ನಡೆದಿರುವ ಘಟನೆ ಏನು? ಯಾತಕ್ಕೆ ಕೋಪಗೊಂಡರು ಎಂಬುದು ಸರಿಯಾದ ಮಾಹಿತಿ ತೆಗೆದುಕೊಂಡಿಲ್ಲ ಎಂದು ಹೇಳಿದರು.

ಬಿಜೆಪಿ ಮಹಿಳಾ ಮೋರ್ಚಾದ 5-6 ಜನ ಕಾಂಗ್ರೆಸ್ ಶಾಲುಗಳನ್ನು ಹಾಕಿಕೊಂಡು ಕಾರ್ಯಕ್ರಮಕ್ಕೆ ಒಳಗೆ ಹೋಗಿದ್ದರು. ನಂತರ ಅವರು ಎಲ್ಲರು ಮಾತಾಡುವಾಗ ಏನು ಮಾಡಿಲ್ಲ. ಮುಖ್ಯಮಂತ್ರಿಯವರು ಮಾತಾಡುವಾಗ ಕಪ್ಪು ಭಾವುಟ ಪ್ರದರ್ಶಿಸಿದ್ದಾರೆ. ಈ ವೇಳೆ ಲೋಪ ಇಲಾಖೆಯಿಂದ ಆಗಿದೆಯಾ ಎಂಬುದರ ಬಗ್ಗೆ ಮಾಹಿತಿ ನೀಡುವಂತೆ ಕಾನೂನು ಸುವ್ಯವಸ್ಥೆ ಎಡಿಜಿಪಿಯವರಿಗೆ ಸೂಚಿಸಿದ್ದೇನೆ.
ಘಟನೆಗೆ ಭದ್ರತಾ ವೈಫಲ್ಯ ಎನ್ನುವುದಾದರೆ ಬಿಜೆಪಿಯವರು ಕಾಂಗ್ರೆಸ್ ಶಾಲು ಯಾಕೆ ಹಾಕಿಕೊಂಡು ಬಂದರು. ಬಿಜೆಪಿ ಶಾಲು ಹಾಕಿಕೊಂಡು ಬರಬಹುದಿತ್ತಲ್ಲವೇ? ಬಿಜೆಪಿ ಶಾಲು ಹಾಕಿಕೊಂಡು ಬಂದಿದ್ದರೆ ಭದ್ರತಾ ವೈಫಲ್ಯವೇ ಅಥವಾ ಏನು ಎಂಬುದು ಗೊತ್ತಾಗುತ್ತಿತ್ತು. ಕಾಂಗ್ರೆಸ್ ಪಕ್ಷದ ಶಾಲು ಹಾಕಿಕೊಂಡು ಬರುವುದಕ್ಕೆ ಇವರಿಗೆ ಏನು ನೈತಿಕತೆ ಇತ್ತೋ ಗೊತ್ತಿಲ್ಲ ಎಂದು ಅವರು ತಿರುಗೇಟು ನೀಡಿದರು.

ಮುಖ್ಯಮಂತ್ರಿ ಕ್ಷಮೆಯಾಚಿಸಬೇಕು..
ಉಗ್ರರ ದಾಳಿ ಬಳಿಕ ಪಾಕಿಸ್ತಾನ ಜೊತೆಗೆ ಅನಗತ್ಯ ಯುದ್ಧ ಬೇಡ ಎಂದು ಹೇಳಿದ್ದ ಸಿಎಂ ಸಿದ್ದರಾಮಯ್ಯ ಅವರು ಕ್ಷಮೆಯಾಚಿಸಬೇಕು ಎಂದು ಬಿಜೆಪಿಯವರ ಒತ್ತಾಯ ಪ್ರಶ್ನೆಗೆ ಅವರು, ಯಾವ ಉದ್ದೇಶಕ್ಕಾಗಿ ಆ ರೀತಿ ಹೇಳಿದ್ದೇನೆ ಎಂಬುದರ ಕುರಿತು ಮುಖ್ಯಮಂತ್ರಿಯವರು ಪ್ರತಿಕ್ರಿಯಿಸಿದ್ದಾರೆ. ಅಗತ್ಯ ಬಿದ್ದಾಗ ಯುದ್ಧ ಮಾಡಲು ಹಿಂದೆ ನೋಡಬಾರದು ಎಂಬುದನ್ನು ಹೇಳಿದ್ದಾರೆ ಎಂದು ಅವರು ಸ್ಪಷ್ಟನೆ ನೀಡಿದರು.
ದೇಶದ ಭದ್ರತೆ ವಿಚಾರದಲ್ಲಿ ಕಾಂಗ್ರೆಸ್ ಪಕ್ಷ ಮಾಡಿರುವಂತ ತ್ಯಾಗವನ್ನು ಇನ್ನ್ಯಾರು ಕೂಡ ಮಾಡಲು ಸಾಧ್ಯವಿಲ್ಲ. ಅಷ್ಟು ತ್ಯಾಗ, ಬಲಿದಾನ ದೇಶದ ಭದ್ರತೆಗೆ ಕಾಂಗ್ರೆಸ್ ಪಕ್ಷ ಮಾಡಿದೆ. ಈ ವಿಚಾರದಲ್ಲಿ ನಾವು ಯಾರ ಹತ್ತಿರನು ಪಾಠ ಹೇಳಿಸಿಕೊಳ್ಳುವ ಅಗತ್ಯವಿಲ್ಲ. ಮೃದುದೋರಣೆ ತೋರಿಸ್ತಾರೆ ಎಂದರೆ, ದೇಶದಲ್ಲಿ ಅಭದ್ರತೆ ಇರಲಿ ಎಂದು ಬಿಟ್ಟುಬಿಡುತ್ತೇವೆಯೇ? ಎಂದು ಸುದ್ದಿಗಾರರ ಪ್ರಶ್ನೆಯೊಂದಕ್ಕೆ ಅವರು ಉತ್ತರಿಸಿದರು.
ದೇಶದ ಭದ್ರತೆ ಕಾಪಾಡುವುದು ನಮ್ಮೆಲ್ಲರ ಜವಾಬ್ದಾರಿ ಆಗಿದೆ. ಹೆಚ್ಚಿನಂಶ ಯಾರು ಅಧಿಕಾರದಲ್ಲಿರುತ್ತಾರೆ, ಅವರು ತೀರ್ಮಾನಗಳನ್ನು ತೆಗೆದುಕೊಳ್ಳಲು ಅವರಿಗೆ ಅವಕಾಶ ಇರುತ್ತದೆ. ನಮಗೆಲ್ಲರಿಗೂ ಸಹ ಜವಾಬಾರಿ ಇರಬೇಕಾಗುತ್ತದೆ. ದೆಹಲಿಯಲ್ಲಿ ನಡೆದ ಸರ್ವ ಪಕ್ಷದ ಸಭೆಯಲ್ಲಿ ಭಾಗವಹಿಸಿದ್ದ ಎಐಸಿಸಿ ಅಧ್ಯಕ್ಷರು, ನಮ್ಮ ಪಕ್ಷದ ಪ್ರತಿನಿಧಿಗಳು ಕೂಡ ಘಟನೆಯನ್ನು ಸಹಿಸುವುದಿಲ್ಲ ಎಂದು ಸ್ಪಷ್ಟವಾಗಿ ತಿಳಿಸಿದ್ದಾರೆ ಎಂದು ಕಾಂಗ್ರೆಸ್ ದಾಳಿ ಬಳಿಕ ಯಾವ ರೀತಿ ನಡೆದುಕೊಂಡಿದೆ ಎಂಬುದನ್ನು ವಿವರಿಸಿದರು.
ಪಹಲ್ಗಾಮ್ ಘಟನೆಯ ಬಗ್ಗೆ ಹೆಚ್ಚು ವ್ಯಾಖ್ಯಾನ ಮಾಡುವುದು ಸರಿಯಲ್ಲ. ನಾನೊಂದು ಹೇಳುವುದು, ಇನ್ನೊಬ್ಬರೊಂದು ಹೇಳುವುದು ಬಾಯಿಗೆ ಬಂದಂತೆ ಹೇಳುತ್ತ ಹೋದರೆ ಮಹತ್ವ ಹೋಗುತ್ತದೆ. ನಾವು ಯಾರು ಕೂಡ ಹೆಚ್ಚು ಪ್ರತಿಕ್ರಿಯೆ ಮಾಡುವುದು ಸೂಕ್ತವಲ್ಲ ಎಂದು ಅಭಿಪ್ರಾಯಪಟ್ಟರು.
ಪೆಹಲ್ಗಾಮ್ ದಾಳಿ ವಿಚಾರವಾಗಿ ಕಾಂಗ್ರೆಸ್ ಹೈಕಮಾಂಡ್ ಎಚ್ಚರಿಕೆ ನೀಡಿರುವ ವಿಚಾರ ಬಗ್ಗೆ ನನಗೆ ಗೊತ್ತಿಲ್ಲ. ಇದು ದೇಶದ ಭದ್ರತೆ ವಿಚಾರ. ಪಕ್ಷಾತೀತವಾಗಿ ಈ ಘಟನೆಯನ್ನು ನೋಡಬೇಕು. ಪಕ್ಷಾತೀತವಾಗಿ ತೀರ್ಮಾನ ತೆಗೆದುಕೊಳ್ಳಬೇಕು ಎಂದು ಹಿಂದೆಯೇ ಹೇಳಿದ್ದೇನೆ. ದೇಶದ ಭದ್ರತೆಗೆ ಕೇಂದ್ರ ಸರ್ಕಾರ ಏನೇ ತೀರ್ಮಾನ ತೆಗೆದುಕೊಂಡರು ನಮ್ಮ ಸಹಕಾರ ಇದೆ. ಭದ್ರತೆ ವಿಚಾರದಲ್ಲಿ ಕಾಂಗ್ರೆಸ್ ಪಕ್ಷ ನಿಮ್ಮ ಜೊತೆ ಇರಲಿದೆ ಎಂಬುದನ್ನು ಎಐಸಿಸಿ ಅಧಿಕೃತವಾಗಿ ಹೇಳಿದೆ ಎಂದು ಹೇಳಿದರು.












Click it and Unblock the Notifications