ಬೆಂಗಳೂರಿನಾದ್ಯಂತ 100 ರೂಪಾಯಿಗೆ ಫಿಶ್ ಪುಲ್ ಮೀಲ್ಸ್, ಇಲ್ಲಿದೆ ಮಾಹಿತಿ
ಈ ಕ್ಯಾಂಟೀನ್‌ಗಳಲ್ಲಿ ಸಂಪೂರ್ಣ ಮೀನಿನ ಊಟಕ್ಕೆ ಸುಮಾರು 100 ರೂಪಾಯಿ ವಿಧಿಸಲಾಗುತ್ತದೆ. ಇದಲ್ಲದೆ ಸೂಪ್, ಫಿಶ್ ಕರಿ, ಅನ್ನ ಮತ್ತು ಉಪ್ಪಿನಕಾಯಿ ಸ್ಟಾರ್ಟರ್‌ಗಳು ಲಭ್ಯವಿರುತ್ತವೆ.
ಬೆಂಗಳೂರು, ಫೆಬ್ರವರಿ 1: ಮೀನು ಪ್ರಿಯರಿಗೆ ಮೀನುಗಾರಿಕೆ ಇಲಾಖೆ ಸಿಹಿ ಸುದ್ದಿ ನೀಡಿದೆ. ಬೆಂಗಳೂರಿನಾದ್ಯಂತ ಸುಮಾರು 100 ಸ್ಥಳಗಳಲ್ಲಿ ಮೀನು ಕ್ಯಾಂಟೀನ್ ಆರಂಭಿಸಲು ಮೀನುಗಾರಿಕೆ ಇಲಾಖೆ ಮುಂದಾಗಿದೆ.
ಈ ಕ್ಯಾಂಟೀನ್‌ಗಳಲ್ಲಿ ಸಂಪೂರ್ಣ ಮೀನಿನ ಊಟಕ್ಕೆ ಸುಮಾರು 100 ರೂಪಾಯಿ ವಿಧಿಸಲಾಗುತ್ತದೆ. ಇದಲ್ಲದೆ ಸೂಪ್, ಫಿಶ್ ಕರಿ, ಅನ್ನ ಮತ್ತು ಉಪ್ಪಿನಕಾಯಿ ಸ್ಟಾರ್ಟರ್‌ಗಳು ಸೇರಿದಂತೆ 24 ಬಗೆಯ ಮೀನು ಭಕ್ಷ್ಯಗಳನ್ನು ಆಯ್ಕೆ ಮಾಡಲು ಗ್ರಾಹಕರಿಗೆ ಅವಕಾಶವಿದೆ ಎಂದು ಟಿಎನ್‌ಐಇ ವರದಿ ಮಾಡಿದೆ.
ಈ ಬಗ್ಗೆ ಮೀನುಗಾರಿಕಾ ಸಚಿವ ಎಸ್ ಅಂಗಾರ ಮಾಹಿತಿ ನೀಡಿ, "ನಾವು ಬೆಂಗಳೂರಿನ ಪ್ರತಿ ವಾರ್ಡ್‌ನಲ್ಲಿ ಕ್ಯಾಂಟೀನ್ ಪ್ರಾರಂಭಿಸಲು ಬಯಸಿದ್ದೇವೆ. ಮೊದಲಿಗೆ ನಗರದ 100 ಕಡೆ ಕ್ಯಾಂಟೀನ್ ಆರಂಭಿಸುತ್ತಿದ್ದೇವೆ. ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ (ಬಿಬಿಎಂಪಿ) ಸಹಯೋಗದಲ್ಲಿ ನಾವು ಮೀನುಗಳನ್ನು ಮಾರಾಟ ಮಾಡುವುದರ ಜೊತೆಗೆ ಊಟವನ್ನು ಒದಗಿಸುವ ಮಳಿಗೆಗಳನ್ನು ಆರಂಭಿಸುತ್ತೇವೆ ಎಂದು ಅವರು ಹೇಳಿದರು.
ಮೀನುಗಾರಿಕಾ ಇಲಾಖೆಯು ಈಗಾಗಲೇ ಬೆಂಗಳೂರಿನ ಕಬ್ಬನ್ ಪಾರ್ಕ್ ಮತ್ತು ಬಳ್ಳಾರಿ, ಶಿವಮೊಗ್ಗ ಮತ್ತು ಮಂಗಳೂರು ಸೇರಿದಂತೆ ಕೆಲವು ಸ್ಥಳಗಳಲ್ಲಿ ಮತ್ಯ್ಸ ದರ್ಶಿನಿ ರೆಸ್ಟೋರೆಂಟ್‌ಗಳನ್ನು ನಡೆಸುತ್ತಿದೆ. ಕಬ್ಬನ್ ಪಾರ್ಕ್‌ನಲ್ಲಿರುವ ಕ್ಯಾಂಟೀನ್‌ನಲ್ಲಿ ಒಂದು ಪೂರ್ಣ ಮೀನಿನ ಊಟಕ್ಕೆ 130 ರೂಪಾಯಿ ವಿಧಿಸಿದೆ. ಈ ಊಟದ ರುಚಿ ಮತ್ತು ಬೆಲೆಯನ್ನು ಎಲ್ಲಾ ಸ್ಥಳಗಳಲ್ಲಿ ಏಕರೂಪವಾಗಿಡಲು ಕೇಂದ್ರೀಕೃತ ಅಡುಗೆ ಕೋಣೆಯನ್ನು ಸ್ಥಾಪಿಸಿ ಅಲ್ಲಿಂದ ಈ ಕ್ಯಾಂಟೀನ್‌ಗಳಿಗೆ ಆಹಾರವನ್ನು ಸರಬರಾಜು ಮಾಡಲಾಗುವುದು ಎಂದು ಅಂಗಾರ ಹೇಳಿದ್ದಾರೆ.
ಈ ಯೋಜನೆಯ ಮೂಲಕ ಇಲಾಖೆಯು ಯುವಕರಿಗೆ ಉದ್ಯೋಗ ಸೃಷ್ಟಿಸುವತ್ತ ಗಮನಹರಿಸುತ್ತಿದೆ. ಇದನ್ನು ಖಾಸಗಿ ಸಾರ್ವಜನಿಕ ಸಹಭಾಗಿತ್ವದ (ಪಿಪಿಪಿ) ಮಾದರಿಯಲ್ಲಿ ನಡೆಸಬೇಕೆ ಅಥವಾ ಸರ್ಕಾರದ ಅನುದಾನದ ಮೂಲಕ ನಡೆಸಬೇಕೆ ಎಂದು ನಾವು ಇನ್ನೂ ಅಂತಿಮಗೊಳಿಸಬೇಕಾಗಿದೆ ಎಂದು ಅವರು ಹೇಳಿದರು.

ಸಮುದ್ರಾಹಾರ ಸೇವಿಸುವವರ ಸಂಖ್ಯೆ ಹೆಚ್ಚಳ
ಆದರೆ ರಾಜ್ಯ ಸರ್ಕಾರವೂ ಮೀನಿನ ಊಟದ ಬೆಲೆಯನ್ನು ಇನ್ನೂ ನಿಗದಿ ಮಾಡಿಲ್ಲ. ಈ ಕ್ಯಾಂಟೀನ್‌ಗಳನ್ನು ಸ್ಥಾಪಿಸುವ ಸ್ಥಳಗಳನ್ನು ನಾವು ಅಂತಿಮಗೊಳಿಸುತ್ತಿದ್ದೇವೆ. ಈ ಯೋಜನೆಯು ಮೀನುಗಾರರಿಗೆ ಉತ್ತೇಜನವನ್ನು ನೀಡುತ್ತದೆ. ಏಕೆಂದರೆ ಜನರು ಇದನ್ನು ಹೆಚ್ಚು ಸೇವಿಸಲು ಪ್ರಾರಂಭಿಸಿದರೆ ಮೀನಿನ ಬೇಡಿಕೆ ಹೆಚ್ಚಾಗುತ್ತದೆ. ಸಮುದ್ರಾಹಾರ ಸೇವಿಸುವವರ ಸಂಖ್ಯೆ ಹೆಚ್ಚಿರುವುದರಿಂದ ಬೆಂಗಳೂರಿನಂತಹ ನಗರವನ್ನು ಆಯ್ಕೆ ಮಾಡಲಾಗಿದೆ ಎಂದು ಸಚಿವರು ಹೇಳಿದರು.

ಇತರ ನಗರ ಪ್ರದೇಶಗಳಲ್ಲಿ ಕ್ಯಾಂಟೀನ್
ರಾಜ್ಯ ಸರ್ಕಾರವು ಇತರ ಜಿಲ್ಲೆಗಳಲ್ಲಿಯೂ ಇಂತಹ ಕ್ಯಾಂಟೀನ್‌ಗಳನ್ನು ಸ್ಥಾಪಿಸುವ ಯೋಜನೆಯನ್ನು ಹೊಂದಿದೆ. ನಾವು ಬೆಂಗಳೂರಿನಲ್ಲಿ ಪೂರ್ಣ ಪ್ರಮಾಣದ ಕ್ಯಾಂಟೀನ್ ಆರಂಭಿಸಿದ ನಂತರ, ನಾವು ಇತರ ನಗರ ಪ್ರದೇಶಗಳಲ್ಲಿ (ಕಾರ್ಪೊರೇಷನ್ ಮಿತಿಗಳು) ಇದೇ ರೀತಿಯ ಕ್ಯಾಂಟೀನ್‌ಗಳನ್ನು ಸ್ಥಾಪಿಸುತ್ತೇವೆ ಎಂದು ಅವರು ಹೇಳಿದರು.

ಇಂದಿರಾ ಕ್ಯಾಂಟೀನ್ ಮಾದರಿ
ರಾಜ್ಯದ ಹಲವು ಕಡೆ ಕೆರೆ, ನದಿ ಮೀನುಗಳ ಮಾರಾಟ ಹಾಗೂ ಮೀನಿನ ಖಾದ್ಯಗಳನ್ನು ಅಲ್ಲೇ ಮೀನು ಹಿಡಿದು ತಾಜಾ ಮೀನಿನ ಮಾಂಸ ಹಾಗೂ ಕಬಾಬ್‌ನಂತಹ ಪಧಾರ್ಥಗಳನ್ನು ಮಾರಾಟ ಮಾಡಲಾಗುತ್ತಿದೆ. ಇದು ಹಲವು ವರ್ಷಗಳಿಂದ ಯಶಸ್ವಿಯಾಗಿ ನಡೆದುಕೊಂಡು ಬರುತ್ತಿದೆ. ಈಗ ಮೀನಿಗಾರಿಕಾ ಇಲಾಖೆ ಈಗಿರುವ ಇಂದಿರಾ ಕ್ಯಾಂಟೀನ್ ಮಾದರಿಯಲ್ಲೇ ಮೀನುಗಾರಿಕಾ ಕ್ಯಾಂಟೀನ್ ಆರಂಭಿಸಲು ಮುಂದಾಗಿದೆ.

15 ಕೋಟಿ ರೂಪಾಯಿ ಹೂಡಿಕೆ
ಹಿಂದೆ ಮೀನಿನಿಂದ ತಯಾರಿಸಿದ ತಿನಿಸುಗಳು ಮತ್ತು ಭಕ್ಷ್ಯಗಳನ್ನು ಜನಪ್ರಿಯಗೊಳಿಸಲು ಮತ್ತು ವಿವಿಧ ಮೀನು ಉತ್ಪನ್ನಗಳನ್ನು ವ್ಯಾಪಕವಾಗಿ ಲಭ್ಯವಾಗುವಂತೆ ಮಾಡಲು ಕರ್ನಾಟಕ ಮೀನುಗಾರಿಕೆ ಅಭಿವೃದ್ಧಿ ನಿಗಮ ನಿಯಮಿತವು ಕರ್ನಾಟಕದ 12 ಸ್ಥಳಗಳಲ್ಲಿ 12 'ಮತ್ಸ್ಯ ದರ್ಶಿನಿ' ಸಮುದ್ರಾಹಾರ ರೆಸ್ಟೋರೆಂಟ್‌ಗಳನ್ನು ಸ್ಥಾಪಿಸಲು ನಿರ್ಧರಿಸಿತ್ತು. ಒಟ್ಟು 15 ಕೋಟಿ ರೂಪಾಯಿ ಹೂಡಿಕೆಯಲ್ಲಿ ಮೀನುಗಾರಿಕೆ ಕ್ಷೇತ್ರದ ಅಭಿವೃದ್ಧಿಗೆ ಬೆಂಬಲ ನೀಡುವ ಉದ್ದೇಶದಿಂದ ನಿಗಮದ ಪ್ರಯತ್ನ ಇದಾಗಿತ್ತು.












Click it and Unblock the Notifications