ಶೆಲ್ ಬಂಕ್‌ನಲ್ಲಿ ಪೆಟ್ರೋಲ್ ದರ ಏರಿಕೆ: ಬೆಂಗಳೂರಿನಲ್ಲಿ 10 ದಿನಗಳಲ್ಲಿ 4.50 ರೂಪಾಯಿ ಹೆಚ್ಚಳ; ಇಲ್ಲಿದೆ ದರಪಟ್ಟಿ
Petrol, Diesel Price: ಜಾಗತಿಕ ರಾಜಕೀಯ ವಿದ್ಯಮಾನಗಳು ಭಾರತದ ಇಂಧನ ಮಾರುಕಟ್ಟೆಯ ಮೇಲೆ ಪ್ರಭಾವ ಬೀರಲಾರಂಭಿಸಿವೆ. ಇರಾನ್ ಯುದ್ಧದ ಹಿನ್ನೆಲೆಯಲ್ಲಿ ಅಂತಾರಾಷ್ಟ್ರೀಯ ಮಟ್ಟದಲ್ಲಿ ಕಚ್ಚಾ ತೈಲದ ಬೆಲೆ ಏರಿಕೆ ಆಗುತ್ತಿದ್ದು, ಇದರ ನೇರ ಪರಿಣಾಮವಾಗಿ ಖಾಸಗಿ ತೈಲ ಕಂಪನಿಯಾದ ಶೆಲ್ ಭಾರತದಲ್ಲಿ ಪೆಟ್ರೋಲ್ ಮತ್ತು ಡೀಸೆಲ್ ದರವನ್ನು ಸತತವಾಗಿ ಏರಿಕೆ ಮಾಡುತ್ತಿದೆ ಎಂದು ವರದಿಯಾಗಿದೆ.
ಕಳೆದ ಮೂರು ದಿನಗಳ ಹಿಂದೆಯಷ್ಟೇ ದರ ಪರಿಷ್ಕರಣೆ ಮಾಡಿದ್ದ ಶೆಲ್, ಪ್ರತಿ ಲೀಟರ್‌ಗೆ 2 ರೂಪಾಯಿ ಹೆಚ್ಚಳ ಮಾಡಿದೆ. ಈ ಮೂಲಕ ಕಳೆದ ಕೇವಲ 10 ದಿನಗಳಲ್ಲಿ ಶೆಲ್ ಪೆಟ್ರೋಲ್ ದರದಲ್ಲಿ ಒಟ್ಟು 4.50 ರೂಪಾಯಿ ಏರಿಕೆ ಆದಂತಾಗಿದೆ.

ಖಾಸಗಿ ಸಂಸ್ಥೆಯಾದ ಶೆಲ್ ಬೆಲೆ ಏರಿಕೆ ಮಾಡಿದ್ದರೂ, ಸರ್ಕಾರಿ ಸ್ವಾಮ್ಯದ ಕಂಪನಿಗಳಾದ ಇಂಡಿಯನ್ ಆಯಿಲ್ (IOCL), ಭಾರತ್ ಪೆಟ್ರೋಲಿಯಂ (BPCL) ಮತ್ತು ಹಿಂದೂಸ್ತಾನ್ ಪೆಟ್ರೋಲಿಯಂ (HPCL) ಸಂಸ್ಥೆಗಳು ಸದ್ಯಕ್ಕೆ ಯಾವುದೇ ದರ ಹೆಚ್ಚಳ ಮಾಡಿಲ್ಲ. ಪೆಟ್ರೋಲ್ ಮತ್ತು ಡೀಸೆಲ್ ಬೆಲೆ ಏರಿಕೆ ಮಾಡುವುದಿಲ್ಲ ಎಂದು ಕೇಂದ್ರ ಸರ್ಕಾರ ಈ ಹಿಂದೆಯೇ ಸ್ಪಷ್ಟಪಡಿಸಿತ್ತು.
ಜಾಗತಿಕ ಮಾರುಕಟ್ಟೆಯ ಮೇಲೆ ಯುದ್ಧದ ನೆರಳು
ಶೆಲ್ ಸಂಸ್ಥೆಯು ಕೇವಲ ಭಾರತದಲ್ಲಿ ಮಾತ್ರವಲ್ಲದೆ, ಜಾಗತಿಕವಾಗಿಯೂ ಬೆಲೆ ಏರಿಕೆ ಮಾಡಿದೆ. ಪ್ರಮುಖವಾಗಿ ಸಿಂಗಾಪುರದಲ್ಲಿ ಪೆಟ್ರೋಲ್ ಬೆಲೆ ಸಾರ್ವಕಾಲಿಕ ಗರಿಷ್ಠ ಮಟ್ಟ ತಲುಪಿದೆ. 2022ರ ಉಕ್ರೇನ್-ರಷ್ಯಾ ಯುದ್ಧದ ಸಮಯದಲ್ಲಿ ಕಂಡಿದ್ದ ಬೆಲೆಯನ್ನು ಈಗಿನ ಇರಾನ್ ಸಂಘರ್ಷದ ಪರಿಸ್ಥಿತಿ ಮರುಕಳಿಸುವಂತೆ ಮಾಡಿದೆ.
ಬೆಂಗಳೂರಿನಲ್ಲಿ 'ಶೆಲ್' ಬಂಕ್‌ನಲ್ಲಿ ಇಂಧನ ದರಗಳು (ಮಾರ್ಚ್ 14ರ ಅನ್ವಯ)
* ಸಾಮಾನ್ಯ ಪೆಟ್ರೋಲ್: 108.41 ರೂಪಾಯಿ
* ಸಾಮಾನ್ಯ ಡೀಸೆಲ್: 93.49 ರೂಪಾಯಿ
* ವಿ-ಪವರ್ ಪೆಟ್ರೋಲ್ (V-Power): 118.41 ರೂಪಾಯಿ
* ವಿ-ಪವರ್ ಡೀಸೆಲ್ (V-Power): 104.64 ರೂಪಾಯಿ
ಪೆಟ್ರೋಲ್, ಡೀಸೆಲ್ ದರ ಹೆಚ್ಚಳಕ್ಕೆ ಪ್ರಮುಖ ಕಾರಣಗಳು
ಇನ್ನೂ ಭಾರತವು ಸುಮಾರು ಶೇ.85 ರಷ್ಟು ತೈಲವನ್ನು ವಿದೇಶಗಳಿಂದ ಆಮದು ಮಾಡಿಕೊಳ್ಳುತ್ತದೆ. ಹಾಗಾಗಿ, ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಕಚ್ಚಾ ತೈಲದ ಬೆಲೆ ಏರಿಕೆಯಾದಾಗ, ಭಾರತದಲ್ಲೂ ಪೆಟ್ರೋಲ್-ಡೀಸೆಲ್ ದರಗಳು ಸಹಜವಾಗಿ ಹೆಚ್ಚಾಗುತ್ತವೆ.
ತೈಲ ಉತ್ಪಾದಿಸುವ ರಾಷ್ಟ್ರಗಳಲ್ಲಿ (ವಿಶೇಷವಾಗಿ ಮಧ್ಯಪ್ರಾಚ್ಯದಲ್ಲಿ) ಯುದ್ಧ ಅಥವಾ ರಾಜಕೀಯ ಅಸ್ಥಿರತೆ ಉಂಟಾದಾಗ ಪೂರೈಕೆಯಲ್ಲಿ ವ್ಯತ್ಯಯ ಉಂಟಾಗುತ್ತದೆ. ಉದಾಹರಣೆಗೆ, ಇತ್ತೀಚಿನ ಇರಾನ್-ಇಸ್ರೇಲ್ ಸಂಘರ್ಷ ಮತ್ತು ಹಾರ್ಮುಜ್ ಜಲಸಂಧಿಯಂತಹ ಪ್ರಮುಖ ಸಾಗಣೆ ಮಾರ್ಗಗಳ ಮೇಲಿನ ನಿರ್ಬಂಧಗಳು ಬೆಲೆ ಏರಿಕೆಗೆ ಕಾರಣವಾಗುತ್ತವೆ.
ನಾವು ತೈಲವನ್ನು ಡಾಲರ್ ಮೂಲಕ ಖರೀದಿಸುತ್ತೇವೆ. ಅಮೆರಿಕನ್ ಡಾಲರ್ ಎದುರು ಭಾರತೀಯ ರೂಪಾಯಿಯ ಮೌಲ್ಯ ಕಡಿಮೆಯಾದಷ್ಟೂ, ತೈಲ ಆಮದು ಮಾಡಿಕೊಳ್ಳಲು ನಾವು ಹೆಚ್ಚು ಹಣ ಪಾವತಿಸಬೇಕಾಗುತ್ತದೆ. ಪೆಟ್ರೋಲ್ ಬೆಲೆಯ ಅರ್ಧದಷ್ಟು ಭಾಗ ಕೇಂದ್ರ ಸರ್ಕಾರದ ಅಬಕಾರಿ ಸುಂಕ ಮತ್ತು ರಾಜ್ಯ ಸರ್ಕಾರಗಳ ವ್ಯಾಟ್ ತೆರಿಗೆಯಿಂದ ಕೂಡಿರುತ್ತದೆ. ಸರ್ಕಾರಗಳು ಈ ತೆರಿಗೆಯನ್ನು ಹೆಚ್ಚಿಸಿದಾಗ ಬೆಲೆ ಏರಿಕೆಯಾಗುತ್ತದೆ. ತೈಲ ಸಂಸ್ಕರಣಾಗಾರಗಳಿಂದ ಬಂಕ್‌ಗಳಿಗೆ ತಲುಪಿಸುವ ಸಾರಿಗೆ ವೆಚ್ಚ ಮತ್ತು ಪೆಟ್ರೋಲ್ ಬಂಕ್ ಮಾಲೀಕರ ಕಮಿಷನ್ ಕೂಡ ಅಂತಿಮ ದರದ ಮೇಲೆ ಪ್ರಭಾವ ಬೀರುತ್ತವೆ.












Click it and Unblock the Notifications