ಬೆಂಗಳೂರು; ಮೆಟ್ರೋ ಸ್ಟೇಷನ್ ಲಿಫ್ಟ್‌ನಲ್ಲಿ ಸಿಲುಕಿದ 17 ಮಹಿಳೆಯರು
ಬೆಂಗಳೂರು, ಆಗಸ್ಟ್ 30: ಸಿಲಿಕಾನ್ ಸಿಟಿಯಲ್ಲಿ ಮಂದಿಗೆ ರೂಲ್ಸ್ ಬ್ರೇಕ್ ಮಾಡುವುದರಲ್ಲಿ ಅದೇನು ಮಜಾ ಸಿಗುತ್ತಾ ಆ ದೇವರೇ ಬಲ್ಲ. ಅಂಥದ್ದೇ ವರ್ತನೆ ತೋರಿದ ಮಹಿಳೆಯರು ನಮ್ಮ ಮೆಟ್ರೋ ನಿಲ್ದಾಣದ ಲಿಫ್ಟ್‌ನಲ್ಲಿ ಲಾಕ್ ಆಗಿರುವ ಘಟನೆಯೊಂದು ನಡೆದಿದೆ.
ಬೆಂಗಳೂರಿನ ಮೆಟ್ರೋ ನಿಲ್ದಾಣದಲ್ಲಿ ಇರುವ ಲಿಫ್ಟ್‌ನಲ್ಲಿ ಸಾಮಾನ್ಯವಾಗಿ ಒಂದು ಬಾರಿಗೆ ಎಂಟು ಮಂದಿ ಹೋಗುವುದಕ್ಕೆ ಅವಕಾಶ ಇರುತ್ತದೆ. ಆದರೆ ನಮ್ಮ ಜನರು ಕೇಳಬೇಕಲ್ಲ. ಕುರಿಗಳ ಹಾಗೆ ಲಿಫ್ಟ್ ಏರಿದ್ದಾರೆ. ಅಲ್ಲಿಂದ ಮುಂದೆ ಆಗಿದ್ದೇ ರಣರೋಚಕ ಘಟನೆ.
ಬೆಂಗಳೂರಿನ ಟ್ರಿನಿಟಿ ಮೆಟ್ರೋ ರೈಲ್ವೆ ನಿಲ್ದಾಣದಲ್ಲಿರುವ ಲಿಫ್ಟ್‌ನಲ್ಲಿ ಬರೋಬ್ಬರಿ 17 ಮಂದಿ ತುಂಬಿಕೊಂಡು ಹೋಗಿದ್ದಾರೆ. ಅಲ್ಲಿಗೆ ಮುಗೀತು ಕಥೆ. ಸರಿಯಾಗಿ ಲಿಫ್ಟ್ ಅರ್ಥದಲ್ಲೇ ಜಾಮ್ ಆಗಿದೆ. 17 ಪ್ರಯಾಣಿಕರು ಲಿಫ್ಟ್‌ನಲ್ಲೇ ಲಾಕ್ ಆಗಿದ್ದಾರೆ.

ಲಿಫ್ಟ್‌ನಲ್ಲಿ ಸಿಲುಕಿಕೊಂಡ ಮಹಿಳೆಯರು
ಟ್ರಿನಿಟಿ ಮೆಟ್ರೋ ನಿಲ್ದಾಣದ ಲಿಫ್ಟ್‌ನಲ್ಲಿ ಏಕಕಾಲಕ್ಕೆ 17 ಮಂದಿ ಸೇರಿಕೊಂಡಿದ್ದಾರೆ. ಎಲ್ಲ 20 ರಿಂದ 25 ವರ್ಷದವರೇ ಆಗಿದ್ದು, ಲಿಫ್ಟ್‌ನ ಬಾಗಿಲು ಹಾಕಿಕೊಳ್ಳುತ್ತಿದ್ದಂತೆ ಮೇಲೆ ಹೋಗಿ ಮಧ್ಯದಲ್ಲಿಯೇ ಸಿಲುಕಿಕೊಂಡಿತು. 30 ನಿಮಿಷಗಳವರೆಗೂ ಲಿಫ್ಟ್‌ನಲ್ಲಿಯೇ ಪ್ರಯಾಣಿಕರು ಲಾಕ್ ಆಗಿದ್ದರು ಎಂದು ನಮ್ಮ ಮೆಟ್ರೋ ಮೂಲಗಳು ತಿಳಿಸಿವೆ.

ಅಗ್ನಿಶಾಮಕ ಸಿಬ್ಬಂದಿ ಕರೆಯಿಸಿ ಮಹಿಳೆಯರ ರಕ್ಷಣೆ
ಮೆಟ್ರೋ ನಿಲ್ದಾಣದ ಲಿಫ್ಟ್‌ನಲ್ಲಿ ಸಿಲುಕಿಕೊಂಡಿದ್ದ ಮಹಿಳೆಯರನ್ನು ರಕ್ಷಿಸುವುದಕ್ಕಾಗಿ ಮತ್ತೆ ಅಗ್ನಿಶಾಮಕ ದಳ ಸಿಬ್ಬಂದಿ ಮಾಹಿತಿ ನೀಡಲಾಯಿತು. ಸ್ಥಳಕ್ಕೆ ದೌಡಾಯಿಸಿದ ಸಿಬ್ಬಂದಿಯು ತಕ್ಷಣ ಕಾರ್ಯಾಚರಣೆ ನಡೆಸಿದರು, ಲಿಫ್ಟ್‌ನಲ್ಲಿ ಸಿಲುಕಿದ್ದ ಮಹಿಳೆಯರನ್ನು ರಕ್ಷಿಸಲಾಯಿತು ಎಂದು ಘಟನೆಯ ಕುರಿತು ಮೆಟ್ರೋ ನಿಲ್ದಾಣದ ಮೂಲಗಳು ಹೇಳಿವೆ.

ಲಿಫ್ಟಿನಲ್ಲಿ ಲಾಕ್ ಆದವರ ರಕ್ಷಣಾ ಕಾರ್ಯ ನಡೆದಿದ್ದು ಹೇಗೆ?
ಬೆಂಗಳೂರಿನ ಟ್ರಿನಿಟಿ ಮೆಟ್ರೋ ರೈಲ್ವೆ ನಿಲ್ದಾಣದಲ್ಲಿ ಈ ಘಟನೆ ನಡೆದಿತ್ತು. ನಿಲ್ದಾಣದಲ್ಲಿರುವ "ಲಿಫ್ಟ್‌ನ ಮೇಲಿನ ತುರ್ತು ಬಾಗಿಲು ತೆರೆಯುವ ಮೂಲಕ ಲಿಫ್ಟಿನಲ್ಲಿ ಸಿಲುಕಿಕೊಂಡಿದ್ದ ಮಹಿಳೆಯರನ್ನು ರಕ್ಷಿಸಲಾಗಿದೆ. ಅವರಲ್ಲಿ ಯಾರಿಗೂ ಗಾಯಗಳಾಗಿಲ್ಲ. ಓವರ್‌ಲೋಡ್‌ನಿಂದ ಲಿಫ್ಟ್ ಸಿಲುಕಿಕೊಂಡಿದೆ," ಎಂದು ಮೆಟ್ರೋ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

ಹಿರಿಯ ಬದಲು ಬೇರೆಯವರೇ ಲಿಫ್ಟ್ ಬಳಸುವರು
ಹಿರಿಯ ನಾಗರಿಕರು ಮತ್ತು ರೋಗಿಗಳು ಮತ್ತು ವೈದ್ಯಕೀಯ ಸಮಸ್ಯೆಯನ್ನು ಹೊಂದಿರುವ ರೋಗಿಗಳ ಅನುಕೂಲಕ್ಕಾಗಿ ಮೆಟ್ರೋ ರೈಲ್ವೆ ನಿಲ್ದಾಣದಲ್ಲಿ ಲಿಫ್ಟ್ ವ್ಯವಸ್ಥೆಯನ್ನು ಕಲ್ಪಿಸಲಾಗಿರುತ್ತದೆ. ಆದರೆ ಈ ಲಿಫ್ಟ್ ಅನ್ನು ಅಗತ್ಯವಿರುವ ಪ್ರಯಾಣಿಕರ ಹೊರತಾಗಿ ಎಲ್ಲರೂ ಬಳಸುವಂತಾಗಿದೆ. ಮೆಟ್ರೋದಲ್ಲಿ ಸಂಚರಿಸುವ ಬಹುಪಾಲು ಪ್ರಯಾಣಿಕರು ವಿದ್ಯಾವಂತರು, ಪ್ರಜ್ಞಾವಂತರೇ ಆಗಿರುತ್ತಾರೆ. ಹೀಗಿರುವಾಗ ಅವರಲ್ಲಿ ಹೆಚ್ಚಿನವರಿಗೆ ಏನನ್ನೂ ವಿವರಿಸಿ ಹೇಳುವ ಅಗತ್ಯ ಇರುವುದಿಲ್ಲ. ಪ್ರಯಾಣಿಕರೇ ಅದನ್ನು ಅರ್ಥ ಮಾಡಿಕೊಳ್ಳುವುದು ಸೂಕ್ತ ಎಂದು ಮೆಟ್ರೋ ನಿಲ್ದಾಣದ ಸಿಬ್ಬಂದಿಯೊಬ್ಬರು ತಿಳಿಸಿದ್ದಾರೆ.












Click it and Unblock the Notifications