ನಮ್ಮ ಮೆಟ್ರೋ ಮಹಿಳಾ ಪ್ರಯಾಣಿಕರ ಖಾಸಗಿ ಫೋಟೋ, ವಿಡಿಯೋ ತೆಗೆದು ಅಪ್‌ಲೋಡ್!
ದೇಶದಲ್ಲೇ ಅತ್ಯುತ್ತಮ ಮೆಟ್ರೋ ಎಂದು ಹೆಸರುವಾಸಿಯಾಗಿರುವ ಬೆಂಗಳೂರಿನ ನಮ್ಮ ಮೆಟ್ರೋ ಬಗ್ಗೆ ಇದೀಗ ಗಂಭೀರ ಆರೋಪ ಕೇಳಿಬಂದಿದೆ. ಮಹಿಳೆಯರ ಸುರಕ್ಷತೆಗಾಗಿ ನಮ್ಮ ಮೆಟ್ರೋದಲ್ಲಿ ಪ್ರತ್ಯೇಕ ಬೋಗಿಗಳನ್ನು ಮೀಸಲಿರಿಸಲಾಗಿದೆ. ಆದರೂ ಹೆಣ್ಣುಮಕ್ಕಳಿಗೆ ಮೆಟ್ರೋದಲ್ಲಿ ಸೂಕ್ತ ರಕ್ಷಣೆ ಇಲ್ಲವಾ ಎಂಬ ಚರ್ಚೆ ಜೋರಾಗಿ ನಡೆಯುತ್ತಿದೆ. ಮೆಟ್ರೋದಲ್ಲಿ ಪ್ರಯಾಣಿಸುವ ಯುವತಿಯರು ಹಾಗೂ ಮಹಿಳೆಯರ ಖಾಸಗಿ ಫೋಟೋ ಹಾಗೂ ವಿಡಿಯೋಗಳನ್ನು ರಹಸ್ಯವಾಗಿ ರೆಕಾರ್ಡ್ ಮಾಡಿ, ಅದನ್ನು ಸೋಶಿಯಲ್ ಮೀಡಿಯಾದಲ್ಲಿ ಅಪ್‌ಲೋಡ್ ಮಾಡಿರುವ ಆತಂಕಕಾರಿ ವಿಚಾರ ಬೆಳಕಿಗೆ ಬಂದಿದೆ.
ಬೀದಿ ಕಾಮಣ್ಣರು ಈ ರೀತಿ ನಮ್ಮ ಮೆಟ್ರೋದಲ್ಲಿ ಪ್ರಯಾಣಿಸುವ ಮಹಿಳೆಯರು ಹಾಗೂ ಯುವತಿಯರಿಗೆ ಗೊತ್ತಿಲ್ಲದಂತೆ ಅವರ ಖಾಸಗಿ ಫೋಟೋ, ವಿಡಿಯೋಗಳನ್ನು ತೆಗೆದು ಇನ್‌ಸ್ಟಾಗ್ರಾಂ ಪೇಜ್‌ನಲ್ಲಿ ಅಪ್‌ಲೋಡ್ ಮಾಡುವ ಮೂಲಕ ವಿಕೃತಿ ಮೆರೆದಿರುವುದು ಬಯಲಿಗೆ ಬಂದಿದೆ. ಈ ಪೇಜ್‌ಗೆ ನಮ್ಮ ಮೆಟ್ರೋ ಲೋಗೋವನ್ನೇ ಪ್ರೊಫಲ್ ಫೋಟೊಗೆ ಹಾಕಿ ಈ ರೀತಿ ನೀಚ ಕೃತ್ಯ ಎಸಗಿರುವುದು ಬೆಳಕಿಗೆ ಬಂದಿದೆ. ಮಹಿಳಾ ಪ್ರಯಾಣಿಕರ ಅನುಚಿತ ವೀಡಿಯೊಗಳನ್ನು ನಿರಂತರವಾಗಿ ರೆಕಾರ್ಡ್ ಮಾಡಿ ಇನ್‌ಸ್ಟಾಗ್ರಾಂ ಮತ್ತು ಟೆಲಿಗ್ರಾಮ್‌ನಲ್ಲಿ ಕಿಡಿಗೇಡಿಗಳು ಪೋಸ್ಟ್ ಮಾಡುತ್ತಿದ್ದು, ಕೂಡಲೇ ಇದರ ಬಗ್ಗೆ ಕ್ರಮ ತೆಗೆದುಕೊಳ್ಳುವಂತೆ ಬೆಂಗಳೂರಿನ ಜನ ಆಗ್ರಹಿಸಿದ್ದಾರೆ.

ಬೆಂಗಳೂರು ಮೆಟ್ರೋ ಕ್ಲಿಕ್ಸ್ ಹಾಗೂ ಮೆಟ್ರೋ ಚಿಕ್ಸ್ ಎಂದು ಇನ್‌ಸ್ಟಾಗ್ರಾಂ ಪೇಜ್‌ಗೆ ಹೆಸರಿಡಲಾಗಿದೆ. ಈವರೆಗೆ 13ಕ್ಕೂ ಹೆಚ್ಚು ಫೋಟೋ, ವಿಡಿಯೋಗಳು ಈ ಪೇಜ್‌ನಲ್ಲಿದ್ದು, 5300ಕ್ಕೂ ಹೆಚ್ಚು ಮಂದಿ ಈ ಪೇಜ್ ಫಾಲೋ ಆಗಿದ್ದಾರೆ. ಇದರಲ್ಲಿ ಯುವತಿಯರು ಹಾಗೂ ಮಹಿಳೆಯರು ಮೆಟ್ರೋದಲ್ಲಿ ಪ್ರಯಾಣಿಸುವಾಗ ಅವರಿಗೆ ಗೊತ್ತಿಲ್ಲದಂತೆ ಖಾಸಗಿ ಭಾಗಗಳು, ಅಶ್ಲೀಲವಾಗಿ ಫೋಟೋ ಹಾಗೂ ವಿಡಿಯೋಗಳನ್ನು ರೆಕಾರ್ಡ್ ಮಾಡಿಕೊಂಡು ಪೋಸ್ಟ್ ಮಾಡಿದ್ದಾರೆ.
ಈ ಬಗ್ಗೆ ಕಾಂಗ್ರೆಸ್ ನಾಯಕಿ ಭವ್ಯಾ ನರಸಿಂಹಮೂರ್ತಿ ಅವರು ಕೂಡ ಪ್ರತಿಕ್ರಿಯಿಸಿದ್ದಾರೆ. ಮರುಟ್ವೀಟ್ ಮಾಡುವ ಮೊದಲು ಈ ಮಾಹಿತಿಯನ್ನು ಪರಿಶೀಲಿಸಲು ನಾನು ಆ ಪೇಜ್‌ಗೆ ಭೇಟಿ ನೀಡಿದೆ. ಇದು ಅಸಹ್ಯಕರವಾಗಿದ್ದು, ಕೂಡಲೇ ಇದರ ವಿರುದ್ಧ ಕ್ರಮ ಕೈಗೊಳ್ಳುವಂತೆ ಬೆಂಗಳೂರು ಪೊಲೀಸರಿಗೆ ಆಗ್ರಹಿಸಿದ್ದಾರೆ. ಬಿಜೆಪಿ ಸಂಸದ ಪಿಸಿ ಮೋಹನ್ ಕೂಡ ಇದನ್ನು ಖಂಡಿಸಿದ್ದಾರೆ. ನಮ್ಮ ಮೆಟ್ರೋದಲ್ಲಿ ಮಹಿಳೆಯರನ್ನು ಇನ್‌ಸ್ಟಾಗ್ರಾಮ್ ಖಾತೆಯೊಂದು ರಹಸ್ಯವಾಗಿ ಚಿತ್ರೀಕರಿಸುತ್ತಿದ್ದು, ಆಘಾತಕಾರಿ ಸಂಗತಿಯೆಂದರೆ, 5000 ಜನರು ಅದನ್ನು ಫಾಲೋ ಮಾಡುತ್ತಿದ್ದಾರೆ. ಇದು ಗೌಪ್ಯತೆ ಮತ್ತು ಘನತೆಯ ಸ್ಪಷ್ಟ ಉಲ್ಲಂಘನೆಯಾಗಿದೆ, ಇದು ಭಯಾನಕ ಅಪರಾಧ ಮಾತ್ರವಲ್ಲ, ಗಂಭೀರ ಅಪರಾಧವೂ ಆಗಿದೆ ಎಂದು ಕಳವಳ ವ್ಯಕ್ತಪಡಿಸಿದ್ದಾರೆ.

ಎಫ್‌ಐಆರ್ ಬೆನ್ನಲ್ಲೇ ಎಲ್ಲ ವಿಡಿಯೋ ಡಿಲೀಟ್
ಈ ಪ್ರಕರಣ ಸಂಬಂಧ ಬನಶಂಕರಿ ಪೊಲೀಸರು ಎಫ್‌ಐಆರ್ ದಾಖಲಿಸಿಕೊಂಡಿದ್ದಾರೆ. ನಮ್ಮ ಮೆಟ್ರೋ ರೈಲುಗಳಲ್ಲಿ ಮಹಿಳಾ ಪ್ರಯಾಣಿಕರ ಫೋಟೋಗಳನ್ನು ರಹಸ್ಯವಾಗಿ ಕ್ಲಿಕ್ಕಿಸಿ ಆನ್‌ಲೈನ್‌ನಲ್ಲಿ ಪೋಸ್ಟ್ ಮಾಡಿದ ವಿಕೃತ ವ್ಯಕ್ತಿಗಾಗಿ ಹುಡುಕಾಟ ಶುರು ಮಾಡಿದ್ದಾರೆ. ಇನ್‌ಸ್ಟಾಗ್ರಾಮ್ ಖಾತೆಯು ನಮ್ಮ ಮೆಟ್ರೋದಲ್ಲಿ ಮಹಿಳೆಯರು ಪ್ರಯಾಣಿಸುತ್ತಿರುವ ರಹಸ್ಯವಾಗಿ ರೆಕಾರ್ಡ್ ಮಾಡಿದ ಕ್ಲಿಪ್‌ಗಳನ್ನು ಪೋಸ್ಟ್ ಮಾಡಿತ್ತು. ಸಾರ್ವಜನಿಕರು ಕೂಡ ಸಾಮೂಹಿಕವಾಗಿ ಈ ಅಕೌಂಟ್ ರಿಪೋರ್ಟ್ ಮಾಡಲು ಶುರು ಮಾಡಿದ್ದಾರೆ. ಎಫ್‌ಐಆರ್ ದಾಖಲಿಸಿಕೊಂಡಿರುವ ಬೆನ್ನಲ್ಲೇ ಆ ಪೇಜ್‌ನಲ್ಲಿದ್ದ ಎಲ್ಲ ಫೋಟೋ ವೀಡಿಯೊಗಳನ್ನು ಡಿಲೀಟ್ ಮಾಡಲಾಗಿದೆ. ಟೆಲಿಗ್ರಾಮ್ ಚಾನೆಲ್ ಅನ್ನು ಸಹ ತೆಗೆದುಹಾಕಿದ್ದಾನೆ ಎನ್ನಲಾಗಿದೆ.












Click it and Unblock the Notifications