E-Khata: ಇ-ಖಾತಾ ಕುರಿತ ಗೊಂದಲ ನಿವಾರಣೆಗೆ ಜ.9ಕ್ಕೆ ಸಭೆ, ಜನರು ಪಾಲ್ಗೊಳ್ಳಿ
ಬೆಂಗಳೂರು, ಜನವರಿ 08: ಇ-ಖಾತೆ ಕುರಿತು ಎಷ್ಟು ಸ್ಪಷ್ಟನೆಗಳನ್ನು ನೀಡಿದರೂ, ವಿವಿಧ ರೀತಿಯಲ್ಲಿ ಜನರಿಗೆ ಅರಿವು ಮೂಡಿಸಿದರೂ ಸಹ ಇನ್ನೂ ಹಲವು ಗೊಂದಲವಿದೆ. ಅಲ್ಲದೇ ಇ-ಖಾತಾ ಗೊಂದಲದ ಕಾರಣಕ್ಕೆ ಬೆಂಗಳೂರು ನಗರದಲ್ಲಿ ಆಸ್ತಿಗಳ ಮಾರಾಟ, ಖರೀದಿಯಲ್ಲಿ ಇಳಿಕೆಯಾಗಿದೆ. ಇದರಿಂದಾಗಿ ಸರ್ಕಾರದ ಆದಾಯಕ್ಕೆ ಸಹ ಕೊರತೆ ಉಂಟಾಗಿದೆ. ಆದ್ದರಿಂದ ಜನವರಿ 9ರಂದು ಬೆಂಗಳೂರಿನಲ್ಲಿ ಮಹತ್ವದ ಸಭೆಯನ್ನು ಕರೆಯಲಾಗಿದೆ.
ಈ ಕುರಿತು ಬೆಂಗಳೂರು ನಗರ ಜಿಲ್ಲಾಧಿಕಾರಿ ಜಿ. ಜಗದೀಶ ಮಾಹಿತಿ ನೀಡಿದ್ದಾರೆ. ಇತ್ತೀಚಿಗೆ ಕಡ್ಡಾಯಗೊಳಿಸಲಾಗಿರುವ ಇ-ಖಾತೆ ಕುರಿತು ಜನವರಲ್ಲಿ ಇರುವ ಗೊಂದಲಗಳು ಹಾಗೂ ಸಂದೇಹಗಳನ್ನು ಪರಿಹರಿಸಲು ಜನವರಿ 9ರಂದು ಸಭೆ ಕರೆಯಲಾಗಿದೆ ಎಂದು ಹೇಳಿದ್ದಾರೆ.

ಈ ಕುರಿತು ಪ್ರಕಟಣೆ ಮೂಲಕ ಮಾಹಿತಿ ನೀಡಿರುವ ಅವರು, ಗುರುವಾರ ಬೆಳಗ್ಗೆ 11 ಗಂಟೆಯಿಂದ ಮಧ್ಯಾಹ್ನ 1ಗಂಟೆಯವರೆಗೆ ಬೆಂಗಳೂರು ನಗರ ಜಿಲ್ಲಾ ಪಂಚಾಯಿತಿ ಸಭಾಂಗಣ, ಕರಿಯಪ್ಪ ರಸ್ತೆ, ಬನಶಂಕರಿ ಇಲ್ಲಿ ಸಭೆ ನಡೆಯಲಿದೆ ಎಂದು ತಿಳಿಸಿದ್ದಾರೆ.
ಸಭೆಯಲ್ಲಿ ಪಾಲ್ಗೊಂಡು ಗೊಂದಲ ಬಗೆಹರಿಸಿಕೊಳ್ಳಿ: ಈ ಸಭೆಯಲ್ಲಿ ಜನರು, ಬಿಲ್ಡರ್‌ಗಳು ಹಾಗೂ ಡೆವಲಪರ್‌ಗಳು ಪಾಲ್ಗೊಳ್ಳಲಿದ್ದಾರೆ. ಆಸ್ತಿ ನೋಂದಣಿಯಲ್ಲಿ ಲೋಪಗಳನ್ನು ತಡೆಯಲು ಹಾಗೂ ಅಕ್ರಮವಾಗಿ ಆಸ್ತಿಯನ್ನು ಒಬ್ಬರಿಗಿಂತ ಹೆಚ್ಚು ಜನರಿಗೆ ಮಾರಾಟ ಮಾಡುವುದನ್ನು ತಡೆಯುವ ಉದ್ದೇಶದಿಂದ ರಾಜ್ಯ ಸರ್ಕಾರದ ಆಸ್ತಿಗಳ ನೋಂದಣಿ ಸಂದರ್ಭದಲ್ಲಿ ಇ-ಖಾತೆಯನ್ನು ಕಡ್ಡಾಯಗೊಳಿಸಿದೆ.
ಇ-ಖಾತೆ ಇಲ್ಲದ ನೋಂದಣಿ ಪ್ರಕ್ರಿಯೆ ಸಾಧ್ಯವಿಲ್ಲ, ಆಸ್ತಿಗಳ ನೋಂದಣಿಗೆ ಇ-ಖಾತೆ ಇಲ್ಲದೇ ಅಡ್ಡಿ ಆಗುತ್ತಿದೆ ಎಂದು ದೂರುಗಳು ಬರುತ್ತಿವೆ. ಆದ್ದರಿಂದ ಇ-ಖಾತೆಗೆ ಸಂಬಂಧಿಸಿದಂತೆ ಇರುವ ಅನುಮಾನ/ ತೊಡಕುಗಳನ್ನು ನಿವಾರಣೆ ಮಾಡಲು ಜಿಲ್ಲಾ ಮಟ್ಟದಲ್ಲಿ ಅಧಿಕಾರಿಗಳ ಸಮ್ಮುಖದಲ್ಲಿ ಸಭೆ ನಡೆಸಿ ಜನರು, ಬಿಲ್ಡರ್‌ಗಳು ಹಾಗೂ ಡೆವಲಪರ್‌ಗಳ ಗೊಂದಲ ಬಗೆಹರಿಸಲಾಗುತ್ತದೆ.
ಈ ಸಭೆಯಲ್ಲಿ ಜನರು, ಬಿಲ್ಡರ್ಸ್‌ಗಳು, ಡೆವಲಪರ್ಸ್‌ಗಳು ಭಾಗವಹಿಸಿ ತಮ್ಮ ಸಲಹೆ ಅಥವಾ ಅಹವಾಲುಗಳನ್ನು ಸಲ್ಲಿಸಬಹುದು. ಇ-ಖಾತಾ ಕುರಿತು ಇರುವ ಗೊಂದಲಗಳನ್ನು ಬಗೆಹರಿಸಿಕೊಳ್ಳಬಹುದು ಎಂದು ಜಿಲ್ಲಾಧಿಕಾರಿಗಳು ಹೇಳಿದ್ದಾರೆ.
ಬಿಬಿಎಂಪಿ ಮಾಹಿತಿ: ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ (ಬಿಬಿಎಂಪಿ) ವ್ಯಾಪ್ತಿಯ ಇ-ಖಾತಾಗಳ ಕುರಿತು ಈಗಾಗಲೇ ಜನರಿಗೆ ಬಿಬಿಎಂಪಿ ಮಾಹಿತಿ ನೀಡಿದೆ. ಬಿಬಿಎಂಪಿ ವ್ಯಾಪ್ತಿಯ 22 ಲಕ್ಷ ಆಸ್ತಿಗಳ ಇ-ಖಾತಾ ಲಭ್ಯವಿದೆ. ಉಪ ಮುಖ್ಯಮಂತ್ರಿ ಡಿ. ಕೆ. ಶಿವಕುಮಾರ್ ಅವರ ದೂರದೃಷ್ಟಿ ಮತ್ತು ನಾಯಕತ್ವದಲ್ಲಿ ಬಿಬಿಎಂಪಿಯು ಎಲ್ಲಾ ಬೆಂಗಳೂರಿಗರಿಗೆ ತಮ್ಮ ಸ್ವತ್ತುಗಳ ಬಿಬಿಎಂಪಿ ಇ-ಖಾತಾಗಳನ್ನು ನೀಡಲು ಸುಮಾರು 22 ಲಕ್ಷ ಕರಡು ಇ-ಖಾತಾಗಳನ್ನು ಆನ್‌ಲೈನ್‌ನಲ್ಲಿ ಲಭ್ಯವಾಗುವಂತೆ ಮಾಡಿದೆ. ಎಲ್ಲಾ ನಾಗರಿಕರು ತಮ್ಮ ಬಿಬಿಎಂಪಿ ಇ-ಖಾತಾ ಪಡೆಯಲು ಮನವಿ ಮಾಡಿದೆ.
ಬಿಬಿಎಂಪಿಯ ಇ-ಖಾತಾ ಈಗ ಜನರಿಗೆ ಲಭ್ಯವಿದೆ. ಪ್ರತಿಯೊಬ್ಬರೂ ಸಹ ಇ-ಖಾತಾವನ್ನು ಪಾಲಿಕೆಯ ವೆಬ್‌ಸೈಟ್ https://bbmpeaasthi.karnataka.gov.in ರಲ್ಲಿ ಪಡೆಯಲು ಸಂಪರ್ಕ ರಹಿತ, ಫೇಸ್‌ಲೆಸ್, ಆನ್‌ಲೈನ್ ವ್ಯವಸ್ಥೆ ಕಲ್ಪಿಸಲಾಗಿದೆ. ನಿಮ್ಮ ಆಸ್ತಿ ಇ-ಖಾತಾ ಆನ್‌ಲೈನ್‌ನಲ್ಲಿದೆ ಮತ್ತು ಅದನ್ನು ಸರಳವಾಗಿ ಪಡೆಯಲು ಹೀಗೆ ಮಾಡಿ ಎಂದು ವಿವರ ನೀಡಿದೆ.
* ನಿಮ್ಮ ಕರಡು ಇ-ಖಾತಾವನ್ನು ವಾರ್ಡ್‌ವಾರು ಪಟ್ಟಿಯಲ್ಲಿ ಹುಡುಕಿ (ನಿಮ್ಮ ವಾರ್ಡ್‌ನ್ನು ನಿಮ್ಮ ಆಸ್ತಿ ತೆರಿಗೆ ರಶೀದಿಯಿಂದ ತಿಳಿದುಕೊಳ್ಳಿ)
* ಈ ಮಾಹಿತಿಗಳನ್ನು ಆನ್‌ಲೈನ್‌ನಲ್ಲಿ ನಮೂದಿಸಿ ಅಂತಿಮ ಇ-ಖಾತಾವನ್ನು ಮುದ್ರಿಸಿಕೊಳ್ಳಿ. ಆಧಾರ್,
ಕ್ರಯ/ ನೋಂದಾಯಿತ ಪತ್ರ ಸಂಖ್ಯೆ, ಆಸ್ತಿ ತೆರಿಗೆ ID, ಬೆಸ್ಕಾಂ ID (ಖಾಲಿ ನಿವೇಶನ ಆಯ್ಕೆ)
* ಅಪೂರ್ಣ ಮಾಹಿತಿ ಅಥವಾ ಬಿಬಿಎಂಪಿ ದಾಖಲೆಗಳೊಂದಿಗೆ ಹೊಂದಾಣಿಕೆಯಾಗದಿದ್ದಲ್ಲಿ ಮಾತ್ರ ಪ್ರಕರಣಗಳು ನಿರ್ಧಾರಕ್ಕಾಗಿ ಎಆರ್‌ಒಗಳಿಗೆ ರವಾನೆಯಾಗುತ್ತದೆ.
ಜನರು ಇ-ಖಾತಾ ಡೌನ್‌ಲೋಡ್ ಮಾಡಿಕೊಳ್ಳಲು ವೀಡಿಯೊಗಳನ್ನು ಸಹ ವೀಕ್ಷಣೆ ಮಾಡಬಹುದು. https://youtu.be/GL8CWsdn3wo, https://youtu.be/JR3BxET46po
ಇ-ಖಾತಾ ಸಹಾಯ ವಾಣಿ ಸಂಖ್ಯೆ 9480683695












Click it and Unblock the Notifications