ಸಿಹಿ ಸುದ್ದಿ: 'ನಮ್ಮ ಮೆಟ್ರೋ'ನಿಲ್ದಾಣದ 5ಕಿ.ಮೀ. ಸುತ್ತಮುತ್ತ ಫೀಡರ್ ಬಸ್ ಸೇವೆ: BMRCL
ನಗರದ ವೈಟ್‌ಫೀಲ್ಡ್ - ಕೆಆರ್ ಪುರಂ ನಮ್ಮ ಮೆಟ್ರೋ ವಿಸ್ತರಣೆಯ ಮಾರ್ಗವು ಮುಂದಿನ ತಿಂಗಳು ಮಾರ್ಚ್‌ನಲ್ಲಿ ಆರಂಭವಾಗಲಿದೆ. ಈ ಮಾರ್ಗದಲ್ಲಿ ಪ್ರತಿ ಮೆಟ್ರೋ ನಿಲ್ದಾಣದ ಸುತ್ತುಮುತ್ತಲು ಫೀಡರ್ ಬಸ್ ಸೇವೆ ಲಭ್ಯವಾಗಲಿದೆ.
ಬೆಂಗಳೂರು, ಫೆಬ್ರವರಿ 26: ನಗರದ ವೈಟ್‌ಫೀಲ್ಡ್ - ಕೆಆರ್ ಪುರಂ ನಮ್ಮ ಮೆಟ್ರೋ ವಿಸ್ತರಣೆಯ ಮಾರ್ಗವು ಮುಂದಿನ ತಿಂಗಳು ಮಾರ್ಚ್‌ನಲ್ಲಿ ಆರಂಭವಾಗಲಿದೆ. ಈ ಮಾರ್ಗದಲ್ಲಿ ಪ್ರತಿ ಮೆಟ್ರೋ ನಿಲ್ದಾಣದ ಸುತ್ತುಮುತ್ತಲು ಫೀಡರ್ ಬಸ್ ಸೇವೆ ಲಭ್ಯವಾಗಲಿದೆ.
ವೈಟ್‌ಫೀಲ್ಡ್ - ಕೆಆರ್ ಪುರಂ ನಮ್ಮ ಮೆಟ್ರೋ ವಿಸ್ತರಣೆಯ ಮಾರ್ಗದಲ್ಲಿ ಬರುವ ಎಲ್ಲ 12 ನಿಲ್ದಾಣಗಳ ಸುತ್ತಲೂ ಕನಿಷ್ಠ 5 ಕಿಲೋ ಮೀಟರ್‌ವರೆಗೆ ಫೀಡರ್ ಬಸ್ ಸೇವೆಗಳನ್ನು ಒದಗಿಸಲಿದ್ದೇವೆ. ಈ ಸಂಬಂಧ ನಾವು ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆ (BMTC) ಜೊತೆಗೆ ಕೆಲಸ ಮಾಡಲಿದ್ದೇವೆ. ಸಾರ್ವಜನಿಕರ ಬೇಡಿಕೆಗೆ ಮಣಿದು, ಈ ಮಾರ್ಗದಲ್ಲಿರುವ ಕೆಲವು ನಿಲ್ದಾಣಗಳನ್ನು ಮರು ನಾಮಕರಣ ಮಾಡಲು ಸಹ ಯೋಜಿಸುತ್ತಿದ್ದೇವೆ ಎಂದು ಬೆಂಗಳೂರು ಮೆಟ್ರೋ ರೈಲ್ ಕಾರ್ಪೋರೇಷನ್ ಲಿಮಿಟೆಡ್ (BMRCL) ವ್ಯವಸ್ಥಾಪಕ ನಿರ್ದೇಶಕ ಅಂಜುಮ್ ಪರ್ವೇಜ್ ತಿಳಿಸಿದ್ದಾರೆ.

ಮೆಟ್ರೋ ಹೊಸ ಮಾರ್ಗದಲ್ಲಿ ಫೀಡರ್ ಸಂಪರ್ಕಕ್ಕೆ ಆದ್ಯತೆ ನೀಡಲಾಗಿದೆ. ವಿಸ್ತರಣೆಯ ಈ ರ್ಮಾಗದ ಪ್ರತಿ ಮೆಟ್ರೊ ನಿಲ್ದಾಣದ ಬಳಿ 5 ಕಿಲೋಮೀಟರ್‌ಗೆ ಫೀಡರ್ ಬಸ್‌ಗಳನ್ನು ಪ್ರಯಾಣಿಕರಿಗೆ ಲಭ್ಯವಾಗುವಂತೆ ಮಾಡಲಾಗುವುದು. ಈ ಕುರಿತು ಇದೇ ಫೆಬ್ರುವರಿ 27 ಅಥವಾ 28 ರಂದು ಬಿಎಂಟಿಸಿಗೆ ಪತ್ರ ಕಳುಹಿಸುವ ಸಾಧ್ಯತೆ ಇದೆ. ನಿಗಮ ಈಗಾಗಲೇ ಚರ್ಚೆ ನಡೆಸಿದೆ. ಔಪಚಾರಿಕ ಪ್ರಕ್ರಿಯೆಯು ಪ್ರಾರಂಭವಾಗುತ್ತದೆ'ಎಂದು ಮೆಟ್ರೋ ಅಧಿಕಾರಿಯೊಬ್ಬರು ಹೇಳಿದರು.
ಮೆಟ್ರೋ ನಿಲ್ದಾಣಗಳಿಗೆ ಮರುನಾಮಕರಣ
ಪ್ರಕ್ರಿಯೆಗೂ ಮೊದಲು ಸಾರ್ವಜನಿಕರ ಬೇಡಿಕೆಯಿಂದ ಕೆಲವು ನಿಲ್ದಾಣಗಳ ಹೆಸರನ್ನು ಬದಲಾಯಿಸಲು ನಿರ್ಧರಿಸಲಾಗಿದೆ. ಆದರೆ ಯಾವ ಹೆಸರು ಇಡಲಾಗುವುದು ಎಂಬುದರ ಬಗ್ಗೆ ಅವರು ಹೇಳಲು ನಿರಾಕರಿಸಿದರು. ನಿಲ್ದಾಣಗಳ ಹೆಸರು ಬದಲಾವಣೆಯ ಒಪ್ಪಿಗೆಗಾಗಿ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಿದ್ದೇವೆ ಎಂದರು.
ವೈಟ್‌ಫೀಲ್ಡ್ ರೈಸಿಂಗ್‌ನ ಸದಸ್ಯ ಪ್ರವೀರ್ ಬಗ್ರೋಡಿಯಾ ಎಂಬುವವರು, ಕಳೆದ ಮೂರು ವರ್ಷಗಳ ಹಿಂದೆ ಮೆಟ್ರೋ ನಿಗಮಕ್ಕೆ ಮನವಿ ಸಲ್ಲಿಸಿದ್ದಾರೆ. ಈ ಸಂಬಂಧ ಟಿಎನ್ಐಇ ಜೊತೆಗೆ ಮಾತನಾಡಿದ ಅವರು, 'ಬಿಎಂಆರ್‌ಸಿಎಲ್ ವೈಟ್‌ಫೀಲ್ಡ್ ಮೆಟ್ರೋ ನಿಲ್ದಾಣ ಮತ್ತು ಡಿಪೋ ಅನ್ನು ಕಾಡುಗೋಡಿ ಎಂದು ಮರು ಹೆಸರಿಡಬೇಕು. ಕಾಡುಗೋಡಿಯನ್ನು ಹೋಪ್ ಫಾರ್ಮ್ ಅಥವಾ ಟ್ರೀ ಪಾರ್ಕ್ ಎಂದು ಮರುನಾಮಕರಣ ಮಾಡಬೇಕು. ಏಕೆಂದರೆ ಈಗಾಗಲೇ ಪಕ್ಕದ ರೈಲು ನಿಲ್ದಾಣ ಕೂಡ ವೈಟ್‌ಫೀಲ್ಡ್ ಎಂಬ ಹೆಸರಿದೆ ಎಂದು ಆಗ್ರಹಿಸಿದರು.

ವೈಟ್‌ಫೀಲ್ಡ್ ಪೊಲೀಸ್ ಠಾಣೆ ಮತ್ತು ವೈಟ್‌ಫೀಲ್ಡ್ ಪೋಸ್ಟ್ ಆಫೀಸ್‌ನಿಂದ 3.5 ಕಿಲೋ ಮೀಟರ್ ದೂರದಲ್ಲಿದೆ. ವೈಟ್‌ಫೀಲ್ಡ್ ಮೆಟ್ರೋ ನಿಲ್ದಾಣವನ್ನು ತಲುಪಲು ಬಸ್ ಮೂಲಕ ಹೋಗಬೇಕಿದೆ. ವೈಟ್‌ಫೀಲ್ಡ್‌ನ ಪ್ರಮುಖ ಪ್ರದೇಶಗಳಿಗೆ ಮೆಟ್ರೋ ಸೇವೆ ನೀಡದ ಕಾರಣ ಗಾಂಧಿಪುರ, ಇಮ್ಮಡಿಹಳ್ಳಿ, ಹಗದೂರು, ರಾಮಗೊಂಡನಹಳ್ಳಿ, ಸಿದಾಪುರ, ಬೋರ್‌ವೆಲ್ ರಸ್ತೆ ಮತ್ತಿತರ ಕಡೆಗಳಿಗೆ ಫೀಡರ್ ಬಸ್ ಓಡಿಸುವುದು ಬಿಎಂಟಿಸಿಗೆ ಮುಖ್ಯವಾಗಿದೆ ಎಂದು ಬಗ್ರೋಡಿಯಾ ವಿವರಿಸಿದರು.












Click it and Unblock the Notifications