Coconut Water Price: ಸ್ಟ್ರಾದಲ್ಲಿ ಸೋರ್... ಅಂತ ಎಳಿನೀರು ಕುಡಿಯೋ ಮುನ್ನ ಬೆಲೆ ಕೇಳಿ......
ಬೇಸಿಗೆ ಆರಂಭವಾದರೆ ಸಾಕು ಮಾರುಕಟ್ಟೆಯಲ್ಲಿ, ಬೀದಿಗಳಲ್ಲಿ, ಅಂಗಡಿಗಳಲ್ಲಿ, ತರಕಾರಿ ಮಂಡಿಗಳಲ್ಲಿ ಎಳನೀರು ಮಾರಾಟ ಜೋರಾಗಿರುತ್ತದೆ. ಅಷ್ಟೇ ಯಾಕೆ ತಳ್ಳೋ ಬಂಡಿ, ಬೈಸಿಕಲ್, ಆಟೋದಲ್ಲೂ ಜನ ಇರುವ ಕಡೆಗೆ ಬಂದು ಎಳನೀರು ಮಾರಾಟ ಮಾಡುತ್ತಾರೆ ಮಾರಾಟಗಾರರು. ದೇಹಕ್ಕೆ ತಂಪು ಹಾಗೂ ಶಕ್ತಿ ನೀಡುವ ಈ ಎಳನೀರು ಮಾರಾಟ ಬೇಸಿಗೆ ಬಿಸಿಲಿನಲ್ಲಿ ಹೆಚ್ಚಾಗಿರುತ್ತದೆ. ಸದ್ಯ ಎಳನೀರಿನ ಬೇಡಿಕೆ ಹೆಚ್ಚಾದಂತೆ ಅದರ ಬೆಲೆ ಕೂಡ ಗಗನಕ್ಕೇರಲು ಶುರುವಾಗಿದೆ.
ಹೌದು... ಉದ್ಯಾನ ನಗರಿ ಬೆಂಗಳೂರಿನಲ್ಲಿ ಎಳನೀರಿಗೆ ಭಾರೀ ಡಿಮ್ಯಾಂಡ್ ಶುರುವಾಗಿದೆ. ಬೆಳಿಗ್ಗೆ ಮಾರಾಟದ ಸ್ಥಳದಲ್ಲಿ ಇದ್ದ ನೂರಾರು ಕಾಯಿಗಳು ಸಂಜೆ ಹೊತ್ತಿಗೆ ಖಾಲಿಯಾಗಿರುತ್ತಿವೆ. ಬೆಳಗಾದರೆ ನೂರಾರು ಕಾಯಿಗಳು ಮಾರಾಟದ ಸ್ಥಳದಲ್ಲಿ ಡಂಪ್ ಮಾಡಲಾಗಿರುತ್ತದೆ. ಆದರೆ ಅವು ಸಂಜೆ ಹೊತ್ತಿಗೆ ಇರುವುದಿಲ್ಲ. ವಾರದಲ್ಲಿ 1-2 ಬಾರಿ ಎಳನೀರು ಕಾಯಿಗಳನ್ನು ತರಿಸಿಕೊಳ್ಳುತ್ತಿದ್ದ ಮಾರಾಟಗಾರರು ಸದ್ಯ ನಿತ್ಯ ತರಿಸಿಕೊಳ್ಳುತ್ತಿದ್ದಾರೆ. ಕೆಲವೆಡೆ ಸಂಜೆ 4-5ಗಂಟೆ ಹೊತ್ತಿಗೆ ನೂರಾರು ಕಾಯಿ ಖಾಲಿಯಾಗುತ್ತವೆ. ಹೀಗೆ ಬೇಡಿಕೆ ಹೆಚ್ಚಾದಂತೆ ಮಾರಾಟಗಾರರು ಎಳನೀರಿನ ಬೆಲೆಯನ್ನೂ ಏರಿಕೆ ಮಾಡುತ್ತಿದ್ದಾರೆ.

ಬೇಸಿಗೆಯ ಬಿಸಿಲು ನೆತ್ತಿ ಸುಡಲು ಆರಂಭಿಸಿರುವ ಈ ಹೊತ್ತಿನಲ್ಲಿ ಒಂದು ಎಳನೀರಿನ ಬೆಲೆ ಕನಿಷ್ಠ 40 ರಿಂದ 50 ರೂಪಾಯಿ ಇದೆ. ಇದು ಮಾರ್ಚ್ ತಿಂಗಳ ಆರಂಭವಷ್ಟೇ. ಇದಕ್ಕೂ ಹಿಂದೆ ಅಂದರೆ ಫೆಬ್ರವರಿ ತಿಂಗಳಲ್ಲಿ ಒಂದು ಎಳನೀರಿನ ಬೆಲೆ 30 ರಿಂದ 35 ರೂಪಾಯಿ ಇತ್ತು. ಇದೇ ಎಳಿನೀರಿನ ಕಾಯಿ ಕೊಂಚ ಚಿಕ್ಕದಾಗಿದ್ದರೆ ಅಥವಾ ಕಪ್ಪಾಗಿದ್ದರೆ ಅದಕ್ಕೆ 20 ರಿಂದ 25 ರೂಪಾಯಿ ಇತ್ತು.
ಆದರೀಗ ಒಂದು ಉತ್ತಮ ಗಾತ್ರದ ಎಳನೀರು 40 ರಿಂದ 50 ರೂಪಾಯಿಗೆ ಮಾರಾಟ ಮಾಡಲಾಗುತ್ತಿದೆ. ಅಂದರೆ 10 ರಿಂದ 15ರೂಪಾಯಿ ಮಾರ್ಚ್ ಮೊದಲ ವಾರದಲ್ಲಿ ಹೆಚ್ಚಳವಾಗಿದೆ. ಇದೇ ಎಳಿನೀರಿನ ಕಾಯಿ ಕೊಂಚ ಚಿಕ್ಕದಾಗಿದ್ದರೆ ಅಥವಾ ಕಪ್ಪಾಗಿದ್ದರೆ ಅದಕ್ಕೆ 25 ರಿಂದ 30 ರೂಪಾಯಿ ಸದ್ಯಕ್ಕೆ ಮಾರಾಟ ಮಾಡಲಾಗುತ್ತಿದೆ.

ಮಾರ್ಚ್ ಆರಂಭದಲ್ಲಿ ಎಳಿನೀರಿನ ಬೆಲೆ 50 ರೂಪಾಯಿ ದಾಟಿದರೆ, ಏಪ್ರಿಲ್ ತಿಂಗಳಿನಲ್ಲಿ ಒಂದು ಉತ್ತಮ ಎಳನೀರಿಗೆ 60 ರಿಂದ 70 ರೂಪಾಯಿ ಅಷ್ಟಾದರೂ ಮೇನಲ್ಲಿ 80 ರಿಂದ 100 ರೂಪಾಯಿವರೆಗೂ ಬೆಲೆ ಮುಟ್ಟುವ ಸಾಧ್ಯತೆ ಇದೆ. ಹೀಗಾಗಿ ಏಪ್ರಿಲ್ ಮೇ ತಿಂಗಳಿನಲ್ಲಿ ಎಳನೀರು ತುಂಬಾ ದುಬಾರಿಯಾಗುವ ಸಾಧ್ಯತೆ ಇದೆ. ಅಂದಹಾಗೆ ಬೆಂಗಳೂರಿನಲ್ಲಿ ಪ್ರತಿಷ್ಠಿತ ನಗರಗಳ ಆಧಾರದ ಮೇಲೆ ಎಳನೀರಿನ ಬೆಲೆ ಕೂಡ ಹೆಚ್ಚಾಗಬಹುದು. ಪ್ರತಿಷ್ಠಿತ ನಗರಗಳಲ್ಲಿ ಎಳನೀರಿನ ಬೆಲೆ ಇನ್ನಷ್ಟು ದುಬಾರಿಯಾದರೂ ಆಶ್ಚರ್ಯಪಡುವಂತಿಲ್ಲ.
ಇನ್ನೂ ಗ್ರಾಮೀಣ ಭಾಗದಲ್ಲಿ ಎಳನೀರು ಬೆಳೆಯುವ ರೈತರು ಕಡಿಮೆ ಬೆಲೆಗೇ ಕಾಯಿಗಳನ್ನು ಮಾರಾಟ ಮಾಡಿದರೂ ಅದನ್ನು ಒಂದು ಸ್ಥಳದಿಂದ ಮತ್ತೊಂದು ಸ್ಥಳಕ್ಕೆ ಸಾಗಿಸುವ ವೆಚ್ಚ, ಅದನ್ನು ಮರದಿಂದ ಕೆಳಗಿಳಿಸುವ ಕೂಲಿ, ಕೆಳಗೆ ಇಳಿಸಿದ ಬಳಿಕ ಅದನ್ನು ವಾಹನಕ್ಕೆ ತುಂಬಿಸುವ ಕೂಲಿ, ವಾಹನದಿಂದ ಕೆಳಗೆ ಇಳಿಸಲು ಕೂಲಿ ಸೇರಿ ಒಟ್ಟು ಎಳನೀರಿನ ಬೆಲೆ ದುಪ್ಪಟ್ಟಾಗುತ್ತದೆ.

ಹೇಳಿ ಕೇಳಿ ಈಗ ಬೇಸಿಗೆ ಶುರುವಾಗಿದೆ. ಇದೇ ನೆಪ ಮಾಡಿಕೊಂಡು ಮಧ್ಯವರ್ತಿಗಳು ರೈತರಿಂದ ಕಾಯಿ ಪಡೆದು ಸ್ಥಳೀಯ ಮಾರಾಟಗಾರರಿಗೆ ಮಾರುವ ಮಧ್ಯದಲ್ಲೇ ಹೆಚ್ಚು ಹಣ ಪೀಕುವ ಸಾಧ್ಯತೆ ಕೂಡ ಇದೆ. ಹೀಗಾಗಿ ಎಳನೀರಿನ ಬೆಲೆ ಹೆಚ್ಚಾದರೆ ಅದರ ಲಾಭ ಕಷ್ಟಪಟ್ಟು ಬೆಳೆದ ರೈತರಿಗಿಂತ ಮಧ್ಯವರ್ತಿಗಳ ಕೈಸೇರುವುದೇ ಹೆಚ್ಚು. ಹೀಗಾಗಿ ಗ್ರಾಹಕರಿಗೆ ಎಳನೀರು ಬೆಲೆ ಏರಿಕೆ ಬಿಸಿ ತಟ್ಟುವ ಸಾಧ್ಯತೆ ದಟ್ಟವಾಗಿದೆ. ಯಾವುದಕ್ಕೂ ಸ್ಟ್ರಾದಲ್ಲಿ ಸೋರ್... ಅಂತ ಎಳಿನೀರು ಕುಡಿಯೋ ಮುನ್ನ ಬೆಲೆ ಕೇಳಿ ಕುಡಿಯಿರಿ.












Click it and Unblock the Notifications