ಕರೆಂಟ್ ಕಳ್ಳ ಖ್ಯಾತಿಯ ಹೆಚ್‌ಡಿಕೆ ನಿರ್ಮಾಣದ ಚಿತ್ರ ಎಂಬ ಪೋಸ್ಟರ್ ಅಂಟಿಸಿದ ಕಿಡಿಗೇಡಿಗಳು
ಬೆಂಗಳೂರು, ನವೆಂಬರ್ 21: ಮಾಜಿ ಸಿಎಂ ಹೆಚ್ ಡಿ ಕುಮಾರಸ್ವಾಮಿಯವರು ಹಾಗೂ ಡಿಕೆ ಶಿವಕುಮಾರ್ ನಡುವೆ ಆರೋಪ ಪ್ರತ್ಯಾರೋಪಗಳು ಜೋರಾಗಿದ್ದು, ರೊಚ್ಚಿಗೆದ್ದ ಅಭಿಮಾನಿಗಳು ಹಾಗೂ ಕಿಡಿಗೇಡಿಗಳು ಹೆಚ್ ಡಿ ಕುಮಾರಸ್ವಾಮಿ ವಿರುದ್ಧ ಮತ್ತೊಂದು ಪೋಸ್ಟರ್ ವಾರ್ ಶುರು ಮಾಡಿದ್ದಾರೆ.
ಹೌದು, ಮಾಜಿ ಮುಖ್ಯಮಂತ್ರಿ ಹೆಚ್ ಡಿ ಕುಮಾರಸ್ವಾಮಿ ವಿರುದ್ಧದ ವ್ಯಂಗ್ಯವಾಡಿದ ಪೋಸ್ಟರ್ಗಳೂ ಜೆ ಪಿ ಭವನದ ಗೋಡೆಗಳ ಮೇಲೆ ರಾರಾಜಿಸುತ್ತಿವೆ. ಜೆ.ಪಿ.ನಗರದ ನಿವಾಸದಲ್ಲಿ ಅಕ್ರಮವಾಗಿ ವಿದ್ಯುತ್ ಬಳಕೆ ಮಾಡಿದ ಆರೋಪದ ಮೇಲೆ ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಬೆಂಗಳೂರು ವಿದ್ಯುತ್ ಸರಬರಾಜು ಕಂಪನಿಗೆ (ಬೆಸ್ಕಾಂ) 68,000 ರೂಪಾಯಿ ದಂಡ ಪಾವತಿಸಿದ ಬೆನ್ನಲ್ಲೇ ಕಿಡಿಗೇಡಿಗಳು ನಗರದ ವಿವಿಧ ಪ್ರದೇಶಗಳಲ್ಲಿ ಪೋಸ್ಟರ್‌ಗಳನ್ನು ಹಾಕಿದ್ದಾರೆ.

ಕಳೆದ ವಾರ ನಗರದ ಜೆಡಿಎಸ್ ಕಚೇರಿಯ ಕಾಂಪೌಂಡ್ ಗೋಡೆಗೆ ಇದೇ ರೀತಿಯ ಪೋಸ್ಟರ್ ಗಳನ್ನು ಅಂಟಿಸಲಾಗಿದ್ದು, ಪ್ರಕರಣಕ್ಕೆ ಸಂಬಂಧಿಸಿದಂತೆ ಎಫ್ ಐಆರ್ ದಾಖಲಾಗಿತ್ತು. ರಾಜಾಜಿನಗರ, ಶೇಷಾದ್ರಿಪುರಂ ಮತ್ತಿತರ ಪ್ರದೇಶಗಳಲ್ಲಿ ಹೆಚ್.ಡಿ.ಕುಮಾರಸ್ವಾಮಿ ವಿರುದ್ಧ ಭಿತ್ತಿಪತ್ರಗಳನ್ನು ಅಂಟಿಸಿ ವಿದ್ಯುತ್ ಕಳ್ಳತನದ ಆರೋಪದ ಮೇಲೆ ಕಿಡಿಗೇಡಿಗಳು ಕಿಡಿಕಾರಿದ್ದಾರೆ. ಇನ್ನೂ ಸೋಮವಾರ ಸಂಜೆಯೇ ಹಲವು ಪ್ರದೇಶಗಳಲ್ಲಿ ಪೋಸ್ಟರ್‌ಗಳನ್ನು ಹಾಕಲಾಗಿದ್ದು, ಜೆಡಿಎಸ್ ಕಾರ್ಯಕರ್ತರು ಇದರ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಪೋಸ್ಟರ್‌ಗಳಲ್ಲಿ ಆರೋಪಿಗಳು 'ನಿರ್ದೇಶಕ: ಅಮಾಯಕ ಖ್ಯಾತಿಯ ವಿದ್ಯುತ್ ಕಳ್ಳ', 'ವಿದ್ಯುತ್ ಕಳ್ಳ ಖ್ಯಾತಿಯ ಹೆಚ್‌ಡಿಕೆ ನಿರ್ಮಾಣದ ಚಿತ್ರ', '68,000 ರೂಪಾಯಿ ವೆಚ್ಚದಲ್ಲಿ ನಿರ್ಮಿಸಿದ ಚಿತ್ರ' ಮತ್ತು 'ಪೆನ್ ಡ್ರೈವ್ ಸಹೋದರ' ಎಂದು ಬರೆದಿದ್ದಾರೆ. 'ಟೀಸರ್ ನೋಡಿ ಟೆನ್ಶನ್ ಯಾಕೆ, ಚಿತ್ರ ಇನ್ನೂ ರಿಲೀಸ್ ಆಗಿಲ್ಲ' ಎಂದೂ ಫೋಸ್ಟರ್ ನಲ್ಲಿ ಕಿಡಿಗೇಡಿಗಳು ಬರೆದಿದ್ದಾರೆ.

ನವೆಂಬರ್ 14 ರಂದು, ಕಾಂಗ್ರೆಸ್ ವೀಡಿಯೋವನ್ನು ಪೋಸ್ಟ್ ಮಾಡಿದ್ದು, ಅದರಲ್ಲಿ ವಿದ್ಯುತ್ ಕಂಬದಿಂದ ವಿದ್ಯುತ್ ಎಳೆದು ಕುಮಾರಸ್ವಾಮಿ ಅವರ ನಿವಾಸದ ಲೈಟಿಂಗ್ ಸಂಪರ್ಕ ಕಲ್ಪಿಸಲಾಗಿದೆ. ವಿದ್ಯುತ್ ಕಳ್ಳತನವಾಗಿದೆ ಎಂದು ಕಾಂಗ್ರೆಸ್ ಆರೋಪಿಸಿದ್ದು, ಕ್ರಮ ಕೈಗೊಳ್ಳುವಂತೆ ಆಗ್ರಹಿಸಿದೆ.
ಇನ್ನೂ ಈ ಕುರಿತು ಕುಮಾರಸ್ವಾಮಿ ಅವರು ವಿಷಾದ ವ್ಯಕ್ತಪಡಿಸಿದ್ದು, ಖಾಸಗಿ ಡೆಕೋರೇಟರ್ ತಪ್ಪಿಗೆ ದೂಷಿಸಿದ್ದಾರೆ. ನಂತರ ಬೆಸ್ಕಾಂ ಅಧಿಕಾರಿಗಳ ತಂಡ ಕುಮಾರಸ್ವಾಮಿ ಅವರ ನಿವಾಸಕ್ಕೆ ಭೇಟಿ ನೀಡಿ ಎಫ್‌ಐಆರ್ ದಾಖಲಿಸಿ 68 ಸಾವಿರ ರೂ. ದಂಡ ಪಾವತಿಸಿದ್ದಾರೆ. ಅಲ್ಲದೇ ನವೆಂಬರ್ 15 ರಂದು ಶೇಷಾದ್ರಿಪುರಂನಲ್ಲಿರುವ ಜೆಡಿಎಸ್ ಕಚೇರಿಯಲ್ಲಿ ಹಲವಾರು ಕಿಡಿಗೇಡಿಗಳು ಇದೇ ರೀತಿಯ ಪೋಸ್ಟರ್‌ಗಳನ್ನು ಹಾಕಿದ್ದರು. ದೂರಿನ ಆಧಾರದ ಮೇಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಎಫ್‌ಐಆರ್ ದಾಖಲಾಗಿದೆ. ವಿದ್ಯುತ್ ಕಳ್ಳತನದ ವಿಚಾರ ಉಭಯ ಪಕ್ಷಗಳ ನಡುವೆ ಜಟಾಪಟಿಗೆ ಕಾರಣವಾಗಿತ್ತು.












Click it and Unblock the Notifications