ಚುನಾವಣೆಗೆ ದಿನಗಣನೆ ಆರಂಭಿಸಿದ ಕರ್ನಾಟಕ ಕಾಂಗ್ರೆಸ್!
2018ರಲ್ಲಿ ನಡೆಯಲಿರುವ ವಿಧಾನಸಭೆ ಚುನಾವಣೆಗೆ ದಿನಗಣನೆಯನ್ನು ಕರ್ನಾಟಕ ಕಾಂಗ್ರೆಸ್ ಆರಂಭಿಸಿದೆ. ಮುಂದಿನ ವರ್ಷ ಅಲ್ಲ ಇದೇ ವರ್ಷ ಚುನಾವಣೆ ನಡೆಯಲಿದೆ ಎಂದು ಎಚ್ಡಿಕೆ ಎಚ್ಚರಿಸಿದ್ದಾರೆ. ಏನಾಗುತ್ತೋ ಏನೋ?
ಬೆಂಗಳೂರು, ಫೆಬ್ರವರಿ 2 : ನಗರದ ಕಾಂಗ್ರೆಸ್ ಕಚೇರಿಯಲ್ಲಿ 2018ರಲ್ಲಿ ನಡೆಯಲಿರುವ ಕರ್ನಾಟಕ ವಿಧಾನಸಭೆಯ ಚುನಾವಣಾ ಕ್ಯಾಲೆಂಡರ್ ಅನ್ನು ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿ (ಕೆಪಿಸಿಸಿ) ಅಧ್ಯಕ್ಷ ಹಾಗೂ ರಾಜ್ಯ ಗೃಹ ಸಚಿವ ಜಿ. ಪರಮೇಶ್ವರ್ ಅವರು, ಗುರುವಾರ ಈ ಕ್ಯಾಲೆಂಡರ್ ಅನ್ನು ಅನಾವರಣಗೊಳಿಸಿದರು. ಈ ಸಂದರ್ಭದಲ್ಲಿ ಕಾಂಗ್ರೆಸ್ ಕಾರ್ಯಾಧ್ಯಕ್ಷ ದಿನೇಶ್ ಗುಂಡೂರಾವ್ ಕೂಡ ಹಾಜರಿದ್ದರು.
ಚುನಾವಣೆಯು ಮುಂದಿನ ವರ್ಷವಿದೆ ಎಂದು ಮೈಮರೆಯದೇ ದಿನಗಳ ಲೆಕ್ಕಾಚಾರದಲ್ಲಿ ಕಾರ್ಯೋನ್ಮುಖವಾಗುವತ್ತ ಪಕ್ಷದ ಎಲ್ಲಾ ಪದಾಧಿಕಾರಿಗಳು ಹಾಗೂ ಕಾರ್ಯಕರ್ತರು ಎಚ್ಚರದಿಂದಿರಲು ಇದು ನೆರವಾಗಲಿದೆ.

ಗುರುವಾರದ ಪ್ರಕಾರ, ಚುನಾವಣೆಗೆ ಇನ್ನು 427 ದಿನಗಳು ಬಾಕಿಯಿರುವುದನ್ನು ಸೂಚಿಸಿದ ಕ್ಯಾಲೆಂಡರ್, ಪಕ್ಷದ ಕಾರ್ಯಕರ್ತರನ್ನು ಎಚ್ಚರಿಸುವುದಷ್ಟೇ ಅಲ್ಲದೆ, ಹುರುಪು, ಉತ್ಸಾಹ ತುಂಬಿಲಿ ಎಂಬುದು ಕೆಪಿಸಿಸಿ ಆಶಯವಾಗಿದೆ.
ನೀವಿನ್ನೂ ಯಾವ್ದೋ ಕಾಲದಲ್ಲಿ ಇದ್ದೀರಾ ಸ್ವಾಮೀ, ಚುನಾವಣೆ 2018ರಲ್ಲಿ ಅಲ್ಲ ಇದೇ ವರ್ಷ 2017ರಲ್ಲೇ ನಡೆಯಲಿದೆ ಎಂದು ಭವಿಷ್ಯ ನುಡಿದಿದ್ದಾರೆ ಜೆಡಿಎಸ್ ರಾಜ್ಯಾಧ್ಯಕ್ಷ ಎಚ್ ಡಿ ಕುಮಾರಸ್ವಾಮಿ. ಕುಮಾರಸ್ವಾಮಿ ಅವರ ಸವಾಲಿಗೆ ಕಾಂಗ್ರೆಸ್ ಏನು ಉತ್ತರ ಕೊಡುತ್ತದೆ? ಬಿಜೆಪಿ ಇನ್ನೂ ಯಾಕೋ ಎಚ್ಚತ್ತುಕೊಂಡಂತಿಲ್ಲ!












Click it and Unblock the Notifications