ಹಿರಿಯರ ಮೇಲೆ ಕಿರುಕುಳ: ಬೆಂಗಳೂರಿನಲ್ಲೇ ಹೆಚ್ಚು ಪ್ರಕರಣ
ಬೆಂಗಳೂರು, ಜೂನ್14: ರಾಷ್ಟ್ರೀಯ ಸಹಾಯವಾಣಿಯಾಗಿರುವ ಹಿರಿಯರವಾಣಿಗೆ ಬೆಂಗಳೂರು ನಗರದಿಂದ ಹೆಚ್ಚಿನ ದೂರುಗಳು ದಾಖಲಾಗಿವೆ. ಹಿರಿಯರಿಗೆ ನೆರವಾಗಲು ಕೇಂದ್ರ ಸರ್ಕಾರ 2021ರ ಜೂನ್‌ನಲ್ಲಿ ಹಿರಿಯರವಾಣಿ (14567) ಪ್ರಾರಂಭಿಸಿತ್ತು. ಅಂದಿನಿಂದ ಹಿರಿಯರು ಕರೆ ಮಾಡಿ ದೂರು ದಾಖಲಿಸುತ್ತಿದ್ದಾರೆ.
ಜೂನ್ 2021 ಮತ್ತು ಮೇ 2022ರ ನಡುವೆ ಹಿರಿಯರವಾಣಿ ಸ್ವೀಕರಿಸಿದ ಕರೆಗಳ ಪಟ್ಟಿಯಲ್ಲಿ ಬೆಂಗಳೂರು ನಗರ ಅಗ್ರಸ್ಥಾನದಲ್ಲಿದೆ. ಕಳೆದ ಒಂದು ವರ್ಷದಲ್ಲಿ 104 ಕರೆಗಳು ಬೆಂಗಳೂರಿನಿಂದ ದಾಖಲಾಗಿದೆ. ಬೆಳಗಾವಿ 24, ಮೈಸೂರು 20, ಶಿವಮೊಗ್ಗ 17, ಹಾವೇರಿ 13, ಮತ್ತು ವಿಜಯಪುರ ಮತ್ತು ಮಂಡ್ಯ ಜಿಲ್ಲೆಯಿಂದ 11 ಕರೆಗಳನ್ನು ಸ್ವೀಕರಿಸಲಾಗಿದೆ.
ಕಳೆದ ಒಂದು ವರ್ಷದಲ್ಲಿ ಹಿರಿಯರವಾಣಿಗೆ 341 ಕರೆಗಳು ಹಿರಿಯರ ನಿಂದನೆ ಬಗ್ಗೆ ಸಂಬಂಧಿಸಿದ್ದಾಗಿವೆ. ಬೆಂಗಳೂರಿನಲ್ಲಿ ಹಿರಿಯರ ಸಹಾಯವಾಣಿ (1090) ಅಸ್ತಿತ್ವದಲ್ಲಿದೆ. ಕಳೆದ ಮೂರು ವರ್ಷಗಳಲ್ಲಿ ಹಿರಿಯರಿಂದ ದಾಖಲಾಗಿರುವ ಸಂಖ್ಯೆಗಳನ್ನು ನೋಡುವುದಾದರೆ, 2019-20ರಲ್ಲಿ 80 ಇದ್ದ ದೂರುಗಳ ಸಂಖ್ಯೆ 2020-21 ರಲ್ಲಿ 86 ಕ್ಕೆ ಏರಿಕೆಯಾಗಿದೆ. ಏಪ್ರಿಲ್ 2021 ರಿಂದ ಮೇ 2022ರ ನಡುವೆ, ಸಹಾಯವಾಣಿಗೆ 99 ಕರೆಗಳು ಬಂದಿವೆ.

ನಿಂದನೆ ಬಗ್ಗೆ ಹೆಚ್ಚಿನ ದೂರು
ಜೂನ್ 2021 ರಲ್ಲಿ ಪ್ರಾರಂಭವಾದ ಹಿರಿಯರವಾಣಿ (14567), ಕೇವಲ ಒಂದು ವರ್ಷದಲ್ಲಿ 341 ಕರೆಗಳನ್ನು ಸ್ವೀಕರಿಸಿದೆ ಮತ್ತು ಹೆಚ್ಚಿನವು ಹಿರಿಯ ನಾಗರಿಕರ ನಿಂದನೆಗೆ ಸಂಬಂಧಿಸಿದೆ.
ಕೋವಿಡ್ ಸಾಂಕ್ರಾಮಿಕದ ನಂತರ ಹಿರಿಯರಿಗೆ ಕಿರುಕುಳ ಪ್ರಕರಣದಲ್ಲಿ ಹೆಚ್ಚಳವಾಗಿದೆ. ಲಾಕ್‌ಡೌನ್ ಪರಿಣಾಮ ಅನಿವಾರ್ಯವಾಗಿ ಕುಟುಂಬ ಒಂದೇ ಕಡೆ ಉಳಿಯಬೇಕಾದ ಪರಿಸ್ಥಿತಿ ನಿರ್ಮಾಣವಾಗಿತ್ತು. ಈ ಸಂದರ್ಭದಲ್ಲಿ ಮಕ್ಕಳು ಪೋಷಕರಿಗೆ ನಿಂದಿಸಿದ, ಮಾನಸಿಕ ಕಿರುಕುಳ ನೀಡಿದ ಬಗ್ಗೆ ಹೆಚ್ಚಿನ ಕರೆಗಳು ಬಂದಿವೆ ಎನ್ನುತ್ತಾರೆ.

ಆಸ್ತಿ ಆಸೆಗೆ ಪೋಷಕರಿಗೆ ಕಿರುಕುಳ
"ಪತಿಯ ಮರಣದ ನಂತರ ಆಸ್ತಿಯನ್ನು ಪತ್ನಿಯ ಹೆಸರಿನಲ್ಲಿ ನೋಂದಾಯಿಸಲಾಗಿದೆ. ಆದರೆ ಮಕ್ಕಳು ಆಸ್ತಿಯನ್ನು ಆಕ್ರಮಿಸಿಕೊಂಡಿದ್ದಾರೆ ಮತ್ತು ಅವರು ಮನೆ ನಿರ್ಮಾಣಕ್ಕೆ ಹಣ ಬೇಕು ಎಂದು ತಂದೆ ತಾಯಿ ಆಸ್ತಿಯನ್ನು ಕಬಳಿಸಲು ಯತ್ನಿಸುತ್ತಿದ್ದಾರೆ" ಎಂದು ದೂರೊಂದು ದಾಖಲಾದ ಬಗ್ಗೆ ಹಿರಿಯರ ಸಹಾಯವಾಣಿಯ ಅಧಿಕಾರಿಯೊಬ್ಬರು ಹೇಳುತ್ತಾರೆ.
ಪೋಷಕರ ವಸತಿ ಆಸ್ತಿಯನ್ನು ಮಕ್ಕಳು ಆಕ್ರಮಿಸಿಕೊಂಡು, ಪೋಷಕರನ್ನು ಹೊರಹಾಕಿದ್ದಾರೆ. ತಮ್ಮ ಆಸ್ತಿಯನ್ನು ಮರಳಿ ಪಡೆಯಲು ಪೋಷಕರು ನೆರವಿಗಾಗಿ ಯಾಚಿಸಿದ್ದಾರೆ ಎಂದು ಹೇಳಿದ್ದಾರೆ.
ಹಿರಿಯ ನಾಗರಿಕರು ಆಸ್ತಿಗೆ (ಫ್ಲಾಟ್) ಹಣ ಪಾವತಿಸಿದ ನಿದರ್ಶನಗಳಿವೆ. ಪೋಷಕರ ಮಗ ಅಥವಾ ಮಗಳ ಹೆಸರಿನಲ್ಲಿ ಸಾಲ ಪಾವತಿ ಮಾಡುತ್ತಾರೆ. ಏಕೆಂದರೆ 55 ವರ್ಷ ವಯಸ್ಸಿನ ನಂತರ ಬ್ಯಾಂಕುಗಳು ಸಾಲ ನೀಡುವುದಿಲ್ಲ. ಪರಿಣಾಮವಾಗಿ, ಸಾಲ ತೀರಿದ ನಂತರ ಆಸ್ತಿ ಮಗ, ಮಗಳಿಗೆ ಸೇರುತ್ತದೆ. ಹಣ ಕೊಟ್ಟ ಪೋಷಕರನ್ನು ಹೊರಗೆ ಹೋಗಲು ಒತ್ತಾಯಿಸಲಾಗುತ್ತದೆ ಎಂದು ಅಧಿಕಾರಿ ಹೇಳಿದ್ದಾರೆ.

ಕೊರೊನಾ ನಂತರ ಹೆಚ್ಚಾದ ದೂರುಗಳು
"ನಿಂದನೆ ದೈಹಿಕ, ಮಾನಸಿಕ ಮತ್ತು ಭಾವನಾತ್ಮಕವಾಗಿರಬಹುದು. ಬೆಂಗಳೂರು ನಗರದಿಂದ ಹೆಚ್ಚಿನ ಪ್ರಕರಣಗಳನ್ನು ದಾಖಲಾಗಿವೆ. ಸಾಂಕ್ರಾಮಿಕ ಮತ್ತು ನಂತರದ ಸಮಯದಲ್ಲಿ ದೂರುಗಳ ಸಂಖ್ಯೆ ಹೆಚ್ಚಳವಾಗಿದೆ. ಅನೇಕರು ತಮ್ಮ ಉದ್ಯೋಗಗಳನ್ನು ಕಳೆದುಕೊಂಡಿದ್ದಾರೆ ಅಥವಾ ನಗರಗಳನ್ನು ಬದಲಾಯಿಸಿದ್ದಾರೆ ಮತ್ತು ಹೊಸದಾಗಿ ಜೀವನ ಪ್ರಾರಂಭಿಸಲು ಹಣದ ಅಗತ್ಯವಿದೆ. ನಾವು ದಿನಕ್ಕೆ ಕನಿಷ್ಠ 200 ಕರೆಗಳನ್ನು ಸ್ವೀಕರಿಸಿದ ಉದಾಹರಣೆಗಳಿವೆ" ಎಂದು ಹಿರಿಯರವಾಣಿ ಅಧಿಕಾರಿಯೊಬ್ಬರು ಹೇಳಿದರು.

ಲಿಖಿತ ದೂರು ದಾಖಲಿಸಿದ ಪೋಷಕರು
ಹೆತ್ತವರಿಗೆ ಹೆಗ್ಗಣ ಮುದ್ದು ಎನ್ನುವ ಗಾದೆಯಂತೆ ಮಕ್ಕಳೂ ಏನೇ ಮಾಡಿದರು ಅವರನ್ನು ಸಮರ್ಥಿಸಿಕೊಳ್ಳುವ ಪೋಷಕರಿಗೇನು ಕೊರತೆಯಿಲ್ಲ. ಹಿರಿಯರವಾಣಿಗೆ ಕರೆ ಮಾಡಿ ದೂರು ನೀಡುವ ಪೋಷಕರು, ಮಕ್ಕಳ ಭವಿಷ್ಯದ ದೃಷ್ಟಿಯಿಂದ ಲಿಖಿತ ದೂರು ದಾಖಲಿಸುವ ಪ್ರಯತ್ನ ಮಾಡುವುದಿಲ್ಲ.
ಮಕ್ಕಳ ಭವಿಷ್ಯ ಹಾಳಾಗುತ್ತದೆ. ಮರ್ಯಾದೆ ಹೋಗುತ್ತದೆ ಎಂದು ಹೆದರಿ ಮಕ್ಕಳು ನೀಡುವ ಕಿರುಕುಳವನ್ನು ಸಹಿಸಿಕೊಳ್ಳುವ ಪೋಷಕರಿಗೇನೂ ಕಡಿಮೆ ಇಲ್ಲ.
ವಾರ್ಷಿಕ 3 ಲಕ್ಷಕ್ಕಿಂತ ಕಡಿಮೆ ಆದಾಯ ಹೊಂದಿರುವ ಹಿರಿಯ ನಾಗರಿಕರಿಗೆ ತಮ್ಮ ಹಕ್ಕುಗಳನ್ನು ಮರುಪಡೆಯಲು ಮತ್ತು ಅವರಿಗೆ ಸೇರಿರುವ ಆಸ್ತಿಗಾಗಿ ಹೋರಾಡಲು ಸಹಾಯ ಮಾಡುವ ವಕೀಲರ ಸಮಿತಿಯನ್ನು ಸಹಾಯವಾಣಿ (14567) ಹೊಂದಿದೆ. ಅನ್ಯಾಯಕ್ಕೆ ಒಳಗಾದ ಹಿರಿಯ ನಾಗರೀಕರು ಇದರ ಉಪಯೋಗ ಪಡೆಯಬಹುದು.












Click it and Unblock the Notifications