ಬೆಂಗಳೂರಿನಲ್ಲಿ 8 ವರ್ಷಗಳಿಂದ ನಡೆಯುತ್ತಿರುವ ಕಾಮಗಾರಿ ಇದೇ ಅಕ್ಟೋಬರ್‌ಗೆ ಮುಕ್ತಾಯ!
ಬೆಂಗಳೂರು: ಬೆಂಗಳೂರಿನಲ್ಲಿ ಸುದೀರ್ಘ ಎಂಟು ವರ್ಷಗಳಿಂದ ನಡೆಯುತ್ತಿರುವ ಈಜೀಪುರ ಮೇಲ್ಸೇತುವೆ ಕಾಮಗಾರಿಗೆ ಕೊನೆಗೂ ಹೊಸ ಹಾಗೂ ಅಂತಿಮ ಡೆಡ್‌ಲೈನ್ ನಿಗದಿಯಾಗಿದೆ. ಈಜೀಪುರ ಮೇಲ್ಸೇತುವೆ (Ejipura Flyover) ಕಾಮಗಾರಿಯನ್ನು 2017ರಲ್ಲಿ ಪ್ರಾರಂಭಿಸಲಾಗಿತ್ತು. ಕೇವಲ 2.38 ಕಿ.ಮೀ ಉದ್ದದ ಈ ಮೇಲ್ಸೇತುವೆ ಕಾಮಗಾರಿಯು ವರ್ಷಗಳಿಂದ ನಡೆಯುತ್ತಲ್ಲೇ ಇದೆ.
ಇದೀಗ ಈಜೀಪುರ ಮೇಲ್ಸೇತುವೆ ಕಾಮಗಾರಿಗೆ ವೇಗ - ಸೆಂಟ್ ಜಾನ್ಸ್ ಅಡ್ಡಿ ನಿವಾರಣೆ, ಈ ವರ್ಷವೇ ಸಂಚಾರಕ್ಕೆ ಮುಕ್ತ ಎಂದು ಗ್ರೇಟರ್ ಬೆಂಗಳೂರು ಪ್ರಾಧಿಕಾರ ಹೇಳಿದೆ. ಗ್ರೇಟರ್ ಬೆಂಗಳೂರು ಪ್ರಾಧಿಕಾರ ವ್ಯಾಪ್ತಿಯ ಬೆಂಗಳೂರು ದಕ್ಷಿಣ ನಗರ ಪಾಲಿಕೆ ವ್ಯಾಪ್ತಿಯಲ್ಲಿ ಕೈಗೆತ್ತಿಕೊಂಡಿರುವ ಈಜೀಪುರ ಮೇಲ್ಸೇತುವೆ ಕಾಮಗಾರಿಗೆ ಹೆಚ್ಚಿನ ವೇಗ ನೀಡಲಾಗಿದ್ದು, ಪ್ರಮುಖ ಮೇಲ್ಸೇತುವೆ ಕಾಮಗಾರಿ ಅಕ್ಟೋಬರ್ ಅಂತ್ಯದೊಳಗಾಗಿ ಮುಕ್ತವಾಗಲಿದೆ ಎಂದು ಈಜೀಪುರ ಯೋಜನೆಯ ಮುಖ್ಯ ಎಂಜಿನಿಯರ್ ಡಾ. ರಾಘವೇಂದ್ರ ಪ್ರಸಾದ್ ಅವರು ತಿಳಿಸಿದ್ದಾರೆ.

'ಈಜೀಪುರ-ಕೇಂದ್ರೀಯ ಸದನ ಮೇಲ್ಸೇತುವೆ' ಕಾಮಗಾರಿ ಅಂತಿಮ ಹಂತದಲ್ಲಿದ್ದು, ಕಳೆದ ಫೆಬ್ರವರಿ (2026)ಯಲ್ಲಿ ಸೆಂಟ್ ಜಾನ್ಸ್ ಆಸ್ಪತ್ರೆ ಸಮೀಪದಲ್ಲಿದ್ದ ಅತ್ಯಂತ ಜಟಿಲವಾದ 'ಪೋರ್ಟಲ್ ಫ್ರೇಮ್' ನಿರ್ಮಾಣದ ಅಡ್ಡಿಯನ್ನು ಯಶಸ್ವಿಯಾಗಿ ನಿವಾರಿಸಲಾಗಿದೆ. ಪ್ರಸ್ತುತ ಕಾಮಗಾರಿಗೆ ಮತ್ತಷ್ಟು ವೇಗ ನೀಡಲಾಗಿದ್ದು, ಯುದ್ಧೋಪಾದಿಯಲ್ಲಿ ಕೆಲಸ ಸಾಗುತ್ತಿದೆ.
ಪ್ರಮುಖ ಮೇಲ್ಸೇತುವೆ ಕಾಮಗಾರಿಯನ್ನು ಅಕ್ಟೋಬರ್ ಅಂತ್ಯದೊಳಗಾಗಿ ಪೂರ್ಣಗೊಳಿಸಿದ ಬಳಿಕ ರ್ಯಾಂಪ್‌ಗಳು ಹಾಗೂ ಇನ್ನಿತರೆ ಕಾಮಗಾರಿಗಳನ್ನು ನಿಗದಿತ ಅವಧಿಯೊಳಗಾಗಿ ಮುಗಿಸಿ, ಈ ವರ್ಷವೇ ಸಾರ್ವಜನಿಕ ಸಂಚಾರಕ್ಕೆ ಮುಕ್ತಗೊಳಿಸಲಾಗುವುದು ಎಂದು ಹೇಳಿದ್ದಾರೆ.
ಈಜೀಪುರ ಮೇಲ್ಸೇತುವೆ ಕಾಮಗಾರಿಯ ಪ್ರಗತಿಯ ವಿವರ:
1. ಮೇಲ್ಸೇತುವೆ ಯೋಜನೆಯನ್ನು 04.05.2017 ರಂದು 203.20 ಕೋಟಿ ರೂ. ಮೊತ್ತದಲ್ಲಿ 2.38 ಕಿ.ಮೀ ಉದ್ದದ ಮೇಲ್ಸೇತುವೆಗೆ ಮೆ. ಸಿಂಪ್ಲೆಕ್ಸ್ ಇನ್‌ಫ್ರಾಸ್ಟ್ರಕ್ಚರ್ ಲಿಮಿಟೆಡ್‌ಗೆ ವಹಿಸಲಾಗಿತ್ತು. ಆದರೆ, 4 ವರ್ಷ 6 ತಿಂಗಳು ಕಳೆದರೂ ಸಂಸ್ಥೆಯು ಕೇವಲ ಶೇ. 42.80 ರಷ್ಟು ಭೌತಿಕ ಪ್ರಗತಿ ಮಾತ್ರ ಸಾಧಿಸಿತ್ತು.
ಒಟ್ಟು 762 ಸೆಗ್ಮೆಂಟ್‌ಗಳಲ್ಲಿ ಕೇವಲ 191 (ಶೇ. 25.07) ಸೆಗ್ಮೆಂಟ್‌ಗಳು ಮಾತ್ರ ನಿರ್ಮಾಣವಾಗಿದ್ದವು. 4 ಕ್ರೇನ್ ಮತ್ತು 2 ಲಾಂಚಿಂಗ್ ಗರ್ಡರ್‌ಗಳ ಬದಲು, ಕೇವಲ 2 ಕ್ರೇನ್ ಮತ್ತು 1 ಲಾಂಚಿಂಗ್ ಗರ್ಡರ್ ಬಳಸಿ ಕಾಮಗಾರಿಯನ್ನು ನಿಧಾನಗೊಳಿಸಲಾಗಿತ್ತು. ಉಪಗುತ್ತಿಗೆದಾರರಿಗೆ ಹಣ ಪಾವತಿಸದ ಪರಿಣಾಮ ಕಾಮಗಾರಿ ಸ್ಥಗಿತಗೊಂಡಿತ್ತು. ಅಂತಿಮವಾಗಿ, ಹೈಕೋರ್ಟ್ ಆದೇಶದ ಮೇರೆಗೆ 09.03.2022 ರಂದು "ರಿಸ್ಕ್ ಅಂಡ್ ಕಾಸ್ಟ್" ಅಡಿಯಲ್ಲಿ ಗುತ್ತಿಗೆಯನ್ನು ರದ್ದುಪಡಿಸಲಾಯಿತು.
2. ಗುತ್ತಿಗೆ ರದ್ದಾದ ಬಳಿಕ ಯೋಜನೆಗೆ ಆದ್ಯತೆ ನೀಡಲಾಗಿದ್ದು, ಬಾಕಿ ಕಾಮಗಾರಿಗಾಗಿ ಮೆ: ಬಿ.ಎಸ್.ಸಿ.ಪಿ.ಎಲ್ ಇನ್‌ಫ್ರಾಸ್ಟ್ರಕ್ಚರ್ಸ್ ಲಿಮಿಟೆಡ್‌ಗೆ 15-11-2023 ರಂದು ಕಾರ್ಯಾದೇಶ ನೀಡಲಾಯಿತು. ಹೊಸ ಗುತ್ತಿಗೆದಾರರು ಸ್ಥಳದ ವಾಸ್ತವ ಸ್ಥಿತಿಯನ್ನು ಪರಿಶೀಲಿಸಿ, ಸ್ಥಳೀಯ ಸಮಸ್ಯೆಗಳನ್ನು ಪರಿಹರಿಸಿಕೊಂಡು ಕಾಮಗಾರಿಯನ್ನು ಪೂರ್ಣಗೊಳಿಸಲು ಅಗತ್ಯ ಕ್ರಮಗಳನ್ನು ಕೈಗೊಂಡಿದ್ದಾರೆ.
3. ಯೋಜನೆಯ ಮುಖ್ಯ ಮಾರ್ಗದ ಕಾಮಗಾರಿಗೆ ಸೆಂಟ್ ಜಾನ್ಸ್ ಆಸ್ಪತ್ರೆ ಸಮೀಪ 'ಪೋರ್ಟಲ್ ಫ್ರೇಮ್' ನಿರ್ಮಾಣಕ್ಕಾಗಿ ಭೂಸ್ವಾಧೀನ ಸಮಸ್ಯೆ ಎದುರಾಗಿತ್ತು. ಹಲವು ವರ್ಷಗಳಿಂದ ಬಾಕಿ ಉಳಿದಿದ್ದ ಈ ಸಮಸ್ಯೆಗೆ ಫೆಬ್ರವರಿ (2026)ಯಲ್ಲಿ ಪರಿಹಾರ ದೊರೆಯಿತು.
4. ಉಪ ಮುಖ್ಯಮಂತ್ರಿಗಳು, ಸಾರಿಗೆ ಮತ್ತು ಮುಜರಾಯಿ ಸಚಿವರು (ಸ್ಥಳೀಯ ಶಾಸಕರು), ಮುಖ್ಯ ಆಯುಕ್ತರ ಸಮನ್ವಯ ಮತ್ತು ನಿರಂತರ ಮೇಲ್ವಿಚಾರಣೆಯಿಂದಾಗಿ, ಸೆಂಟ್ ಜಾನ್ಸ್ ಆಡಳಿತ ಮಂಡಳಿಯು ತಮ್ಮ ಜಮೀನಿನಲ್ಲಿ ಪೋರ್ಟಲ್ ಫ್ರೇಮ್ ಕಾಮಗಾರಿ ನಡೆಸಲು ಅನುಮತಿ ನೀಡಿದೆ.
5. ಪ್ರಸ್ತುತ ಪ್ರಗತಿ (ಮೇ 2026) ಸೆಂಟ್ ಜಾನ್ಸ್ ಅನುಮತಿ ದೊರೆತ ಬಳಿಕ ಕಾಮಗಾರಿಗೆ ಮತ್ತಷ್ಟು ವೇಗ ಸಿಕ್ಕಿದ್ದು, ಅದರ ವಿವರ ಕೆಳಕಂಡಂತಿದೆ.
* ಅಡಿಪಾಯ ಕಾಮಗಾರಿಗಳು: ಎಲ್ಲಾ ಪೈಲ್ಸ್, ಪೈಲ್ ಕ್ಯಾಪ್‌ಗಳು ಹಾಗೂ ಪಿಯರ್ಸ್ ನಿರ್ಮಾಣ ಪೂರ್ಣಗೊಂಡಿವೆ.
* ಪೋರ್ಟಲ್ ಬೀಮ್: ಮುಖ್ಯ ಮಾರ್ಗಕ್ಕೆ ಅಗತ್ಯವಿರುವ ಪೋರ್ಟಲ್ ಬೀಮ್‌ಗಳ ಸ್ಟೇಜಿಂಗ್ ಕಾಮಗಾರಿ ಪ್ರಗತಿಯಲ್ಲಿದೆ.
* ಸೆಗ್ಮೆಂಟ್‌ಗಳ ವಿವರ: ಒಟ್ಟು 762 ಸೆಗ್ಮೆಂಟ್‌ಗಳಲ್ಲಿ 728 ಸೆಗ್ಮೆಂಟ್‌ಗಳು ಈಗಾಗಲೇ ಕಾಸ್ಟ್ ಆಗಿದ್ದು, ಕೇವಲ 15 ಸ್ಪಾನ್‌ಗಳ ಅಳವಡಿಕೆ ಮಾತ್ರ ಬಾಕಿ ಇದೆ.
* ಭೂಸ್ವಾಧೀನ ಮತ್ತು ರಸ್ತೆ ಅಗಲೀಕರಣ: ಗ್ರೇಡ್ ಮಟ್ಟದ ರಸ್ತೆಯಲ್ಲಿ ಏಕರೂಪ ಪಾದಚಾರಿ ಮಾರ್ಗ ಹಾಗೂ ರಸ್ತೆ ಅಗಲೀಕರಣಕ್ಕಾಗಿ ಸೆಂಟ್ ಜಾನ್ಸ್ ಸೇರಿದಂತೆ ಒಟ್ಟು 5998.6 ಚ.ಮೀ ಖಾಸಗಿ/ಸರ್ಕಾರಿ ಜಮೀನು ಹಸ್ತಾಂತರ ಪ್ರಕ್ರಿಯೆಗೆ ಭೂಸ್ವಾಧೀನ ಹಾಗೂ ಸಂಬಂಧಿತ ವಿಭಾಗದಿಂದ ಕ್ರಮ ಕೈಗೊಳ್ಳಲಾಗುತ್ತಿದೆ ಎಂದು ಗ್ರೇಟರ್ ಬೆಂಗಳೂರು ಪ್ರಾಧಿಕಾರದ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.












Click it and Unblock the Notifications