ಒನ್ ವೇಯಲ್ಲಿ 2.64 ಲಕ್ಷ ದಂಡ ಸಂಗ್ರಹಿಸಿದ ಬೆಂಗಳೂರು ಪೊಲೀಸರು!
ಬೆಂಗಳೂರು, ಜನವರಿ 23: ಬೆಂಗಳೂರು ನಗರದಲ್ಲಿ ಸಂಚಾರಿ ಪೊಲೀಸರು ವಿಶೇಷ ಕಾರ್ಯಾಚರಣೆ ನಡೆಸಿ ವಾಹನ ಸವಾರರಿಗೆ ಬಿಸಿ ಮುಟ್ಟಿಸಿದ್ದಾರೆ. ಒನ್ ವೇಯಲ್ಲಿ ನುಗ್ಗುವ ವಾಹನಗಳನ್ನು ಹಿಡಿದು ಒಂದೇ ದಿನ 2,64,000 ರೂ. ದಂಡವನ್ನು ಸಂಗ್ರಹ ಮಾಡಿದ್ದಾರೆ.
ಜನವರಿ 22ರ ಸೋಮವಾರ ಬೆಳಗ್ಗೆ 6 ರಿಂದ ಸಂಜೆ 7.30ರ ತನಕ ಬೆಂಗಳೂರು ಸಂಚಾರಿ ಪೊಲೀಸರು ಒನ್ ವೇಯಲ್ಲಿ ಸಂಚಾರ ನಡೆಸುವ ವಾಹನ ಸವಾರರ ವಿರುದ್ಧ ವಿಶೇಷ ಕಾರ್ಯಾಚರಣೆ ನಡೆಸಿದರು.

ಈ ವಿಶೇಷ ಕಾರ್ಯಾಚರಣೆಯಲ್ಲಿ ವಿವಿಧ ಮಾದರಿಯ 525 ವಾಹನಗಳನ್ನು ಹಿಡಿದು, 2,64,000 ರೂ. ದಂಡವನ್ನು ಸಂಗ್ರಹ ಮಾಡಿದ್ದಾರೆ. ಈ ಮೂಲಕ ನಗರದಲ್ಲಿ ವಾಹನ ಸವಾರರು ಸಂಚಾರಿ ನಿಯಮಗಳನ್ನು ಪಾಲನೆ ಮಾಡಿ ಎಂದು ಕರೆ ನೀಡಿದ್ದಾರೆ.
ಯಾವ-ಯಾವ ವಾಹನ?; ಬೆಂಗಳೂರು ನಗರದಲ್ಲಿ ರಸ್ತೆ ಅಪಘಾತಗಳಿಗೆ ಪ್ರಮುಖ ಕಾರಣ ಒನ್ ವೇಯಲ್ಲಿ ವಾಹನ ಓಡಿಸುವುದು ಎಂದು ಸಂಚಾರಿ ಪೊಲೀಸರು ಹೇಳಿದ್ದಾರೆ. ಇದಕ್ಕಾಗಿಯೇ ಸೋಮವಾರ ವಿಶೇಷ ಕಾರ್ಯಾಚರಣೆ ನಡೆಸಲಾಗಿದೆ ಎಂದು ತಿಳಿಸಿದ್ದಾರೆ.
ಜನವರಿ 22ರಂದು ಬೆಳಗ್ಗೆ 6 ರಿಂದ ಸಂಜೆ 7.30ರ ತನಕ ಒನ್ ವೇಯಲ್ಲಿ ವಾಹನ ಓಡಿಸುವವರ ವಿರುದ್ಧ ವಿಶೇಷ ಕಾರ್ಯಾಚರಣೆಯನ್ನು ನಡೆಸಲಾಗಿದೆ ಎಂದು ಪೊಲೀಸರು ಹೇಳಿದ್ದು, ದಂಡ ಮೊತ್ತದ ವಿವರಗಳನ್ನು ನೀಡಿದ್ದಾರೆ.
40 ಕಾರು ಹಿಡಿದು 20,000 ರೂ., ಗೂಡ್ಸ್ ಆಟೋ ಎರಡು 1 ಸಾವಿರ ರೂ., ಹೆಚ್‌ಜಿವಿ 1 500 ರೂ., ಎಲ್‌ಜಿವಿ 25 13,500 ರೂ., ಲಾರಿ/ ಗೂಡ್ಸ್ ವೆಹಿಕಲ್ 4 ಎರಡು ಸಾವಿರ, ಮ್ಯಾಕ್ಸಿ ಕ್ಯಾಬ್ 1 500 ರೂ. ಹಾಗೂ 11 ಮೊಪೆಡ್ ಹಿಡಿದು 5,500 ರೂ. ದಂಡ ಸಂಗ್ರಹ ಮಾಡಿದ್ದಾರೆ.
196 ಮೋಟರ್ ಸೈಕಲ್ 98,500, 16 ಪ್ಯಾಸೆಂಜರ್ ಆಟೋ 8000 ರೂ., ಸ್ಕೂಟರ್ 227 1,13,500 ರೂ. ಮತ್ತು ವ್ಯಾನ್ 2 ಹಿಡಿದು 1000 ರೂ. ದಂಡ ಸೇರಿ ಒಟ್ಟು 525 ವಾಹನಗಳಿಂದ 2,64,000 ರೂ. ದಂಡವನ್ನು ಸಂಗ್ರಹಿಸಿದ್ದಾರೆ.
ಬೆಂಗಳೂರು ನಗರದಲ್ಲಿ ಸಂಚಾರಿ ನಿಯಮಗಳನ್ನು ಪಾಲನೆ ಮಾಡುವ ಕುರಿತು ಅರಿವು ಮೂಡಿಸಲು ಸಂಚಾರಿ ಪೊಲೀಸರು ವಿಶೇಷ ಅಭಿಯಾನ ನಡೆಸುತ್ತಿದ್ದಾರೆ. ಆಗಾಗ ವಾಹನ ಸವಾರರಿಗೆ ಬಿಸಿಮುಟ್ಟಿಸಲು ವಿಶೇಷ ಕಾರ್ಯಾಚರಣೆಯನ್ನು ನಡೆಸುತ್ತಾರೆ.
ನಗರದಲ್ಲಿ ಸಂಚಾರ ನಿಯಮ ಉಲ್ಲಂಘನೆ ಮೇಲೆ ನಿಗಾ ಇಡಲು ಸಿಸಿಟಿವಿ ಆಳವಡಿಕೆ ಮಾಡಲಾಗುತ್ತಿದೆ. ಸಿಗ್ನಲ್‌ಗಳಲ್ಲಿ ಪೊಲೀಸರು ಬದಲು ಕ್ಯಾಮರಾಗಳು ಕಣ್ಣಿಡಲಿವೆ. ನಗರದಲ್ಲಿ ಸದ್ಯ 160 ಸಿಗ್ನಲ್‌ಗಳು ಪೊಲೀಸ್ ಮುಕ್ತವಾಗಿವೆ. ಇನ್ನು 8 ತಿಂಗಳಿನಲ್ಲಿ ಎಲ್ಲಾ 300 ಸಿಗ್ನಲ್‌ಗಳಲ್ಲಿ ಕ್ಯಾಮರಾ ಅಳವಡಿಕೆ ಮಾಡಲಾಗುತ್ತದೆ.
ಬೆಂಗಳೂರು ಸೇಫ್ ಸಿಟಿ ಯೋಜನೆಯಡಿ ತೆರೆದಿರುವ ಬೆಂಗಳೂರು ಕಮಾಂಡ್ ಸೆಂಟರ್‌ನಲ್ಲಿ ಇದರ ನಿರ್ವಹಣೆ ಮಾಡಲಾಗುತ್ತದೆ. ಸಿಗ್ನಲ್‌ಗಳಲ್ಲಿ ಸಂಚಾರಿ ನಿಯಮ ಉಲ್ಲಂಘನೆ ಮಾಡುವ ವಾಹನ ಸವಾರರಿಗೆ ಸಾಕ್ಷ್ಯವನ್ನು ಒದಗಿಸಲಾಗುತ್ತದೆ. ಇದು ಏಪ್ರಿಲ್‌ನಿಂದ ಜಾರಿಗೆ ಬರಲಿದೆ.
ನಗರದಲ್ಲಿ 300 ಸ್ಥಳಗಳಲ್ಲಿ 7500 ಕ್ಯಾಮರಾಗಳು ವಾಹನ ಸವಾರರ ಮೇಲೆ ಕಣ್ಣಿಡಲಿವೆ. 1376 ಕ್ಯಾಮರಾ ಅಳವಡಿಕೆ ಮಾಡುವ ಪ್ರಕ್ರಿಯೆ ಚಾಲ್ತಿಯಲ್ಲಿದೆ. ಸುಮಾರು ಒಂದೂವರೆ ಕೋಟಿ ಜನಸಂಖ್ಯೆಯ ನಗರದಲ್ಲಿ 1.2 ಕೋಟಿ ವಾಹನಗಳಿವೆ. ದೆಹಲಿ ಹೊರತುಪಡಿಸಿದರೆ ಅತಿ ಹೆಚ್ಚು ವಾಹನವನ್ನು ಹೊಂದಿರುವ ನಗರ ಬೆಂಗಳೂರು. ನಗರದಲ್ಲಿ ಸಂಚಾರ ದಟ್ಟಣೆಯನ್ನು ನಿಯಂತ್ರಿಸಲು ಐಎ, ಡ್ರೋನ್ ತಂತ್ರಜ್ಞಾನವನ್ನು ಸಹ ಬಳಕೆ ಮಾಡಲಾಗುತ್ತದೆ.












Click it and Unblock the Notifications