Namma Metro: ಬೆಂಗಳೂರಿಗೆ ಬಂತು ಚಾಲಕ ರಹಿತ ಮೆಟ್ರೋ ಬೋಗಿ
ಬೆಂಗಳೂರು, ಫೆಬ್ರವರಿ 14: ಉದ್ಯಾನ ನಗರಿ ಬೆಂಗಳೂರಿನ ನಮ್ಮ ಮೆಟ್ರೋ ಪ್ರಯಾಣಿಕರಿಗೆ ಸಿಹಿಸುದ್ದಿ. ಬೆಂಗಳೂರು ನಗರದ ಮೊದಲ ಚಾಲಕ ರಹಿತ ಮೆಟ್ರೋ ರೈಲು ಬೋಗಿ ಚೀನಾದಿಂದ ಬೆಂಗಳೂರಿಗೆ ಆಗಮಿಸಿದೆ. ಬಿಎಂಆರ್‌ಸಿಎಲ್ ನಮ್ಮ ಮೆಟ್ರೋ ಹಳದಿ ಮಾರ್ಗವಾದ ಆರ್. ವಿ. ರಸ್ತೆ-ಬೊಮ್ಮಸಂದ್ರ ನಡುವೆ ಈ ರೈಲು ಓಡಿಸಲು ಯೋಜನೆ ರೂಪಿಸಿದೆ.
ನಮ್ಮ ಮೆಟ್ರೋದ ಮೊದಲ ಚಾಲಕ ರಹಿತ ರೈಲು ಬೋಗಿ ಚೀನಾದಿಂದ ಕಳೆದ ವಾರ ಚೆನ್ನೈ ಬಂದರಿಗೆ ಬಂದು ತಲುಪಿತ್ತು. ಕಸ್ಟಮ್ಸ್ ಸೇರಿದಂತೆ ವಿವಿಧ ಪ್ರಕ್ರಿಯೆ ಪೂರ್ಣಗೊಳಿಸಿಕೊಂಡು ರಸ್ತೆ ಮಾರ್ಗವಾಗಿ ರೈಲು ಬೋಗಿಗಳನ್ನು ಬೆಂಗಳೂರಿಗೆ ತರುವ ಪ್ರಕ್ರಿಯೆ ಆರಂಭವಾಗಿತ್ತು.

ಒಟ್ಟು ಮೂರು ಲಾರಿಗಳಲ್ಲಿ 6 ಚಾಲಕ ರಹಿತ ನಮ್ಮ ಮೆಟ್ರೋ ಬೋಗಿಗಳು ಬುಧವಾರ ಮುಂಜಾನೆ 3.30ಕ್ಕೆ ಬೆಂಗಳೂರಿನ ಹೆಬ್ಬಗೋಡಿ ಡಿಪೋಗೆ ಬಂದು ತಲುಪಿವೆ. ಈ ಕುರಿತು ಸಾಮಾಜಿಕ ಜಾಲತಾಣದಲ್ಲಿ ನಮ್ಮ ಮೆಟ್ರೋ ಮಾಹಿತಿ ನೀಡಿದೆ, ಚಿತ್ರಗಳಲ್ಲಿ ಸಹ ಪೋಸ್ಟ್ ಮಾಡಿದೆ.
ಚಾಲಕ ರಹಿತ ನಮ್ಮ ಮೆಟ್ರೋ ಬೋಗಿಗಳನ್ನು ತಯಾರು ಮಾಡಲು ಚೀನಾ ಮೂಲದ CRRC Nanjing Puzhen Co Ltd. T ಟೆಂಡರ್ ಪಡೆದಿತ್ತು. ಈ ಬೋಗಿಗಳು ತಯಾರಾದ ಬಳಿಕ ಬಿಎಂಆರ್‌ಸಿಎಲ್ ಅಧಿಕಾರಿಗಳು ಚೀನಾಕ್ಕೆ ತೆರಳಿ, ಅವುಗಳನ್ನು ಪರಿಶೀಲಿಸಿದ್ದರು. ಬಳಿಕ ಭಾರತಕ್ಕೆ ತರುವ ಪ್ರಕ್ರಿಯೆ ಆರಂಭವಾಯಿತು.
6 ಬೋಗಿಯ ಮೆಟ್ರೋ ರೈಲು ಜನವರಿ 24ರಂದು ಶಾಂಘೈ ಬಂದರಿನಿಂದ ಹೊರಟಿದ್ದವು. ಸಮುದ್ರ ಮಾರ್ಗವಾಗಿ ಫೆಬ್ರವರಿ 6 ರಂದು ಚೆನ್ನೈ ಬಂದರಿಗೆ ಆಗಮಿಸಿದ್ದವು. ಅಲ್ಲಿನ ಪ್ರಕ್ರಿಯೆ ಪೂರ್ಣಗೊಳಿಸಿಕೊಂಡು ಬೃಹತ್ ಲಾರಿಗಳ ಮೂಲಕ ಅವುಗಳನ್ನು ಬೆಂಗಳೂರಿ ತರಲಾಗಿದೆ. ಈ ಮೂಲಕ ಬೆಂಗಳೂರು ನಗರಕ್ಕೆ ಚಾಲಕ ರಹಿತ ನಮ್ಮ ಮೆಟ್ರೋ ರೈಲಿನ ಆಗಮನವಾಗಿದೆ.
ಯಾವ ಮಾರ್ಗದಲ್ಲಿ ಸಂಚಾರ?; ಬಿಎಂಆರ್‌ಸಿಎಲ್ ಚಾಲಕ ರಹಿತ ನಮ್ಮ ಮೆಟ್ರೋ ರೈಲನ್ನು ಹಳದಿ ಮಾರ್ಗವಾದ ಆರ್. ವಿ. ರಸ್ತೆ-ಬೊಮ್ಮಸಂದ್ರ ನಡುವೆ ಓಡಿಸಲು ನಿರ್ಧರಿಸಿದೆ. ಈ ಮಾರ್ಗದ ಕಾಮಗಾರಿ ಈಗಾಗಲೇ ಪೂರ್ಣಗೊಳ್ಳುವ ಹಂತದಲ್ಲಿದೆ. ಸುಮಾರು 19 ಕಿ. ಮೀ. ಮಾರ್ಗವಾದ ಇದು ಜಯದೇವ ಆಸ್ಪತ್ರೆ, ಸಿಲ್ಕ್ ಬೋರ್ಡ್ ಜಂಕ್ಷನ್ ಮತ್ತು ಎಲೆಕ್ಟ್ರಾನಿಕ್ ಸಿಟಿ ಸಂಪರ್ಕಿಸುತ್ತದೆ.
ನಗರದ ಟೆಕ್ಕಿಗಳ ಸಂಚಾರಕ್ಕೆ ಅನುಕೂಲವಾಗುವ ಈ ಮಾರ್ಗದಲ್ಲಿ ಸುಮಾರು 2 ತಿಂಗಳ ಕಾಲ ಚಾಲರ ರಹಿತ ನಮ್ಮ ಮೆಟ್ರೋ ಬೋಗಿಗಳ ಪ್ರಾಯೋಗಿಕ ಸಂಚಾರ ನಡೆಯಲಿದೆ. ಬಳಿಕ ರೈಲ್ವೆ ಸುರಕ್ಷತಾ ಆಯುಕ್ತರ ಒಪ್ಪಿಗೆಯನ್ನು ಪಡೆದು ವಾಣಿಜ್ಯ ಸಂಚಾರಕ್ಕೆ ಮುಕ್ತಗೊಳಿಸಲಾಗುತ್ತದೆ.
ಎಲ್ಲವೂ ಅಂದುಕೊಂಡಂತೆ ನಡೆದರೆ ಜೂನ್ ಅಂತ್ಯ ಅಥವ ಜುಲೈನಲ್ಲಿ ಹಳದಿ ಮಾರ್ಗದಲ್ಲಿ ಚಾಲಕ ರಹಿತ ನಮ್ಮ ಮೆಟ್ರೋ ರೈಲುಗಳು ಸಂಚಾರ ನಡೆಸಲಿವೆ. ಆರ್. ವಿ. ರಸ್ತೆ-ಬೊಮ್ಮಸಂದ್ರ ಮಾರ್ಗ ನಗರದ ಬಹುನಿರೀಕ್ಷಿತ ನಮ್ಮ ಮೆಟ್ರೋ ಮಾರ್ಗಗಳಲ್ಲಿ ಒಂದಾಗಿದೆ.
ಈಗ ನಗರಕ್ಕೆ ಬಂದಿರುವ ರೈಲು ಬೋಗಿಯನ್ನು ಹೆಬ್ಬಗೋಡಿ ಡಿಪೋದಲ್ಲಿ ಚೀನಾದಿಂದ ಬಂದಿರುವ ತಜ್ಞರ ಸಮ್ಮುಖದಲ್ಲಿ ಜೋಡಿಸಲಾಗುತ್ತದೆ. 8 ರಿಂದ 10 ಸ್ಥಿರ ಪರೀಕ್ಷೆ, 15 ಮುಖ್ಯ ಪರಿಶೀಲನೆ, ಸೇರಿದಂತೆ 32 ವಿವಿಧ ಪರಿಶೀಲನೆಗಳ ಬಳಿಕ ರೈಲುಗಳನ್ನು ಪ್ರಾಯೋಗಿಕ ಸಂಚಾರಕ್ಕೆ ಮುಕ್ತಗೊಳಿಸಲಾಗುತ್ತದೆ.
2019ರಲ್ಲಿ ಚೀನಾ ಮೂಲದ CRRC Nanjing Puzhen Co Ltd. 216 ಬೋಗಿ ಪೂರೈಸುವ ಒಪ್ಪಂದವನ್ನು ಬಿಎಂಆರ್‌ಸಿಎಲ್‌ನಿಂದ ಪಡೆದುಕೊಂಡಿತ್ತು. ಟೆಂಡರ್ ನಿಯಮದ ಅನ್ವಯ 2021ರಲ್ಲಿಯೇ ಬೋಗಿಗಳು ಬೆಂಗಳೂರಿಗೆ ಪೂರೈಕೆಯಾಗಬೇಕಿತ್ತು. ಕೋವಿಡ್ ಸೇರಿದಂತೆ ವಿವಿಧ ಕಾರಣದಿಂದ ಬೋಗಿಗಳು ತಡವಾಗಿ ಆಗಮಿಸಿವೆ. ಇವುಗಳಲ್ಲಿ 126 ರೈಲು ಹಳದಿ ಮಾರ್ಗದಲ್ಲಿ ಓಡಲಿವೆ. 21 ಮೀಟರ್ ಉದ್ದದ ಈ ಬೋಗಿಗಳು 37 ಟನ್ ತೂಕವಿದೆ.












Click it and Unblock the Notifications