ಡಿಜೆ ಹಳ್ಳಿ ಗಲಭೆ: ಆರೋಪಿಗಳ ಮೇಲೆ SC-ST ಕಾಯ್ದೆಯಡಿ ಎಫ್ಐಆರ್
ಬೆಂಗಳೂರು, ಆ. 16: ದೇವರಜೀವನಹಳ್ಳಿ(ಡಿಜೆ ಹಳ್ಳಿ) ಮತ್ತು ಕಾಡುಗೊಂಡನಹಳ್ಳಿ(ಕೆಜಿ ಹಳ್ಳಿ) ಹಾಗೂ ಕಾವಲ್ ಬೈರಸಂದ್ರ ಗಲಭೆ ಪ್ರಕರಣದ ಆರೋಪಿಗಳ ವಿರುದ್ಧ ಎಸ್ ಸಿ/ ಎಸ್ಟಿ ಕಾಯ್ದೆಯಡಿಯಲ್ಲಿ ಪ್ರಕರಣ ದಾಖಲಿಸಿಕೊಳ್ಳಲಾಗಿದ್ದು, ಎಫ್ಐಆರ್ ಹಾಕಲಾಗಿದೆ. ಹಿಂದುಳಿದ ಸಮುದಾಯದ ಡಿಜೆ ಹಳ್ಳಿ ನಿವಾಸಿ ದೂರು ಹಿನ್ನೆಲೆ SC-ST ಕಾಯ್ದೆ ಅಡಿ ಎಫ್ಐಆರ್ ಹಾಕಲಾಗಿದೆ ಎಂದು ಡಿಜೆ ಹಳ್ಳಿ ಠಾಣಾಧಿಕಾರಿ ಹೇಳಿದ್ದಾರೆ.
Recommended Video
ಗಲಭೆ ನಡೆದ ದಿನ 500ರಿಂದ 600ಮಂದಿ ಅವಾಚ್ಯ ಶಬ್ಧಗಳಿಂದ ಬೈಯುತ್ತಾ, ರಾಡ್ ಗಳಿಂದ ಮನೆಯ ಕಿಟಕಿ ಗಾಜುಗಳನ್ನ ಒಡೆದು ಹಾಕಿದ್ದಾರೆ. ಸುಮಾರು 200 ರಿಂದ 300 ಮಂದಿ ಮನೆ ಒಳಗೆ ನುಗ್ಗಿ ಟಿವಿ, ಸೋಫಾ ಸೇರಿದಂತೆ ಇತರೆ ವಸ್ತುಗಳಿಗೆ ಪೆಟ್ರೋಲ್ ಸುರಿದು ಬೆಂಕಿ ಹಚ್ಚಿದ್ದಾರೆ. 5 ಲಕ್ಷ ನಗದು ಸೇರಿದಂತೆ ಚಿನ್ನಾಭರಣಗಳನ್ನ ದೋಚಿದ್ದಾರೆ.
ಮನೆ ಒಳಗಡೆ ಗ್ಯಾಸ್ ಹಚ್ಚಿದ್ದರಿಂದ ಮನೆಯ ಗೋಡೆ ಕ್ರ್ಯಾಕ್ ಬಿಟ್ಟಿವೆ, ಮನೆ ಮುಂದೆ ನಿಲ್ಲಿಸಿದ್ದ ಸ್ಯಾಂಟ್ರೋ ಕಾರಿಗೂ ಬೆಂಕಿ ಹಚ್ಚಿದ್ದಾರೆ. ನಮಗೆ ಈಗ ವಾಸಿಸಲು ಬೇರೆ ಮನೆ ಇಲ್ಲ, ನಾವೆಲ್ಲ ಪರಿಶಿಷ್ಟ ಜಾತಿ ಭೋವಿ ಸಮುದಾಯಕ್ಕೆ ಸೇರಿದ್ದೇವೆ. ಒಟ್ಟಾರೆ 50ರಿಂದ 60 ಲಕ್ಷ ರೂ. ನಷ್ಟು ಆಸ್ತಿ ಹಾನಿಯಾಗಿದೆ ಎಂದು ಡಿಜೆ ಹಳ್ಳಿ ನಿವಾಸಿ ಪವನ್ ಕುಮಾರ್ ದೂರು ನೀಡಿದ್ದರು. ದೂರಿನನ್ವಯ ಡಿಜೆ ಹಳ್ಳಿ ಠಾಣೆಯಲ್ಲಿ ಎಫ್ಐಆರ್ ದಾಖಲಿಸಿಕೊಂಡಿದ್ದಾರೆ.

ಕರ್ನಾಟಕ ರಾಜ್ಯದ ಇತಿಹಾಸದಲ್ಲೇ ಮೊದಲ ಬಾರಿಗೆ ಪರಿಶಿಷ್ಟ ಜಾತಿಗೆ ಸೇರಿದ ಪುಲಕೇಶಿನಗರ ಮೀಸಲು ಕ್ಷೇತ್ರದ ಶಾಸಕ ಹಾಗೂ ಅವರ ಕುಟುಂಬದವರ ಮನೆಯ ಮೇಲೆ ದಾಳಿ ಮಾಡಲಾಗಿದೆ. ಅಪಾರ ಆಸ್ತಿ-ಪಾಸ್ತಿ ನಷ್ಟವುಂಟು ಮಾಡಿ ನಗ-ನಾಣ್ಯ ದೋಚಿ, ನಂತರ ಮನೆಗೆ ಬೆಂಕಿ ಹಾಕಿ ಕೋಟ್ಯಾಂತರ ರೂ. ಹಾನಿ ಮಾಡಿರುವ ಹಾಗೂ ಪತ್ರಕರ್ತರ ಮೇಲೆ ದಾಳಿ ನಡೆಸಿರುವ ರಾಷ್ಟ್ರದ್ರೋಹಿ ಆರೋಪಿಗಳ ವಿರುದ್ಧ ಪರಿಶಿಷ್ಟ ಜಾತಿ ಹಾಗೂ ಪರಿಶಿಷ್ಟ ಪಂಗಡ ದೌರ್ಜನ್ಯ ತಡೆ ಕಾಯ್ದೆ ಅಡಿಯಲ್ಲಿ ಪ್ರಕರಣ ದಾಖಲಿಸುವಂತೆ ಆಗ್ರಹಿಸಿ ಇಂದು ಕರ್ನಾಟಕ ದಲಿತ ಸಂಘರ್ಷ ಸಮಿತಿಯ ರಾಜ್ಯಾಧ್ಯಕ್ಷ ಡಾ ಸಿ ಎಸ್ ರಘು ಅವರ ನೇತೃತ್ವದಲ್ಲಿ ಪ್ರತಿಭಟನೆ ನಡೆಸಿದ್ದನ್ನು ಇಲ್ಲಿ ಸ್ಮರಿಸಬಹುದು.












Click it and Unblock the Notifications