ಯಡಿಯೂರಪ್ಪಗೆ ಮತ್ತೆ ಕೋರ್ಟ್ ಪೀಕಲಾಟ ಶುರುವಾಯ್ತು

ಈ ಮಧ್ಯೆ ಗಮನಾರ್ಹ ರಾಜಕೀಯ ಬೆಳವಣಿಗೆಯಲ್ಲಿ, ಮುಂದಿನ ತಿಂಗಳು ಮೊದಲ ವಾರದ ನಂತರ ಅಂದರೆ, ಪ್ರಸಕ್ತ ವಿಧಾನಮಂಡಲದ ಅಧಿವೇಶನ ಹಾಗೂ ಉತ್ತರ ಭಾರತದ ಐದು ರಾಜ್ಯಗಳ ಚುನಾವಣಾ ಪ್ರಕ್ರಿಯೆ ಮುಗಿದ ನಂತರ ಯಡಿಯೂರಪ್ಪ ಅವರನ್ನು ಪಕ್ಷಕ್ಕೆ ಮತ್ತೆ ಸೇರಿಸಿಕೊಳ್ಳುವ ಸಂಬಂಧ ಬಿಜೆಪಿ ವರಿಷ್ಠರು ಮಾತುಕತೆಗಾಗಿ ಆಹ್ವಾನಿಸಿದ್ದಾರೆ ಎಂಬ ಮಾತು ಕೇಳಿಬಂದಿದೆ.
ಡಿನೋಟಿಫಿಕೇಷನ್ ಪ್ರಕರಣ ಸಂಬಂಧ ಸಿರಾಜಿನ್ ಬಾಷ ಎಂಬುವವರು ನನ್ನ ವಿರುದ್ಧ ಖಾಸಗಿ ದೂರನ್ನು ಸಲ್ಲಿಸಿದ್ದಾರೆ. ಅದನ್ನು ರದ್ದುಗೊಳಿಸಲು ಎಂದು ಯಡಿಯೂರಪ್ಪ ಹೈಕೋರ್ಟ್ ಮೆಟ್ಟಿಲೇರಿದ್ದರು. ಆದರೆ ಕೋರ್ಟ್ 'ಅದೆಲ್ಲಾ ನಡೆಯೋಲ್ಲ. ಲೋಕಾಯುಕ್ತ ಕೋರ್ಟಿನಲ್ಲಿ ಕೇಸು ಎದುರಿಸಿ' ಎಂದು ಅವರ ಕಿವಿ ಹಿಂಡಿದೆ. ಇದರಿಂದ ಯಡಿಯೂರಪ್ಪ ನಿಜಕ್ಕೂ ಕಷ್ಟಕ್ಕೆ ಸಿಲುಕಿದ್ದು, ಮತ್ತೆ ಕೋರ್ಟು-ಖಟ್ಲೆ ಅಂತ ಅಲೆದಾಡಬೇಕಿದೆ.
ವಕೀಲ ಸಿರಾಜಿನ್ ಸಲ್ಲಿಸಿರುವ ನಾಲ್ಕು ಮತ್ತು ಐದನೆ ಖಾಸಗಿ ದೂರುಗಳನ್ನು ರದ್ದು ಮಾಡಲು ಸಾಧ್ಯವಿಲ್ಲ. ಹಾಗಾಗಿ, ಖಾಸಗಿ ದೂರಿನ ವಿಚಾರಣೆ ಮುಂದುವರಿಯಲಿ ಎಂದು ಮುಖ್ಯ ನ್ಯಾ. ಡಿಎಚ್ ವಘೇಲ ಹಾಗೂ ನ್ಯಾ. ಎಸ್ಎನ್ ಸತ್ಯನಾರಾಯಣ ಅವರ ವಿಭಾಗೀಯ ಪೀಠವೇ ಹೇಳಿದೆ.
ಯಡಿಯೂರಪ್ಪ ಅವರು ತಮ್ಮ ಅಧಿಕಾರಾವಧಿಯಲ್ಲಿ ತಮ್ಮ ಪುತ್ರ ಹಾಗೂ ಅಳಿಯನ ಮಾಲೀಕತ್ವದ ದವಳಗಿರಿ ಪ್ರಾಪರ್ಟೀಸ್ ಹಾಗೂ ಭಗತ್ ಹೋಂ ಪ್ರೈ ಲಿ ಸಂಸ್ಥೆಯ ಮೂಲಕ ನಗರದಲ್ಲಿನ ಸರ್ಕಾರಿ ಭೂಮಿಯನ್ನು (ಕೆಂಪಾಪುರ ಗ್ರಾಮದ 1 ಎಕರೆ 33 ಗುಂಟೆ ಜಾಗ) ಕಾನೂನುಬಾಹಿರವಾಗಿ ಡಿನೋಟಿಫೈ ಮಾಡಿದ್ದಾರೆ.
ನಂತರ ಅದನ್ನು ಖಾಸಗಿಯವರಿಗೆ ಮಾರಾಟ ಮಾಡಿದ್ದಾರೆ. ಇದರಿಂದ ಸರ್ಕಾರದ ಬೊಕ್ಕಸಕ್ಕೆ ಕೋಟ್ಯಂತರ ರುಪಾಯಿ ನಷ್ಟ ಉಂಟಾಗಿದೆ. ಅದೇ ರೀತಿ ಬೆಸ್ಟೋ ಐಸ್ ಕ್ರೀಂ ಪೈ ಲಿ ಸಂಸ್ಥೆಗೆ ಶ್ರೀರಾಮಪುರದಲ್ಲಿ 11 ಎಕರೆ 25 ಗುಂಟೆ ಜಾಗ ಮಾರಾಟ ಮಾಡಿ 3.50 ಕೋಟಿ ರೂ. ಪಡೆದುಕೊಳ್ಳಲಾಗಿತ್ತು ಎಂಬುದು ಸಿರಾಜಿನ್ ಬಾಷ ಅವರ ಆರೋಪವಾಗಿದ್ದು, ಈ ಸಂಬಂಧ ನಗರದ ಲೋಕಾಯುಕ್ತ ನ್ಯಾಯಾಲಯದಲ್ಲಿ ಈಗಾಗಲೇ ದೂರು ದಾಖಲಿಸಿದ್ದಾರೆ.












Click it and Unblock the Notifications